"ಅಪ್ಪೆ ಒಂಜಿ ಕಥೆ ಪನ್ಲೆ" ಎಂದರೆ ಸಾಕು, ಕಥೆ ಹೇಳುವಳು ನನ್ನಜ್ಜಿ

Upayuktha
0


ಜ್ಜಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ಈಗಿನ ಸಮಾಜದಲ್ಲಿ ಮಕ್ಕಳು ದೊಡ್ಡವರಾದಂತೆ ಅಜ್ಜಿಯಂದಿರು ತಮ್ಮ ಮನೆಯನ್ನು ಬಿಟ್ಟು ವೃದ್ಧಾಶ್ರಮ ಸೇರುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಈ ವಿಷಯದಲ್ಲಿ ನನ್ನ ಅಜ್ಜಿ ತುಂಬಾ ಪುಣ್ಯವಂತಳು. ಇವಳನ್ನು ಅಜ್ಜಿಯಾಗಿ ಪಡೆದ ನಾನು ಭಾಗ್ಯವಂತಳು. ನನ್ನ ಬಾಲ್ಯದಿಂದಲೂ ನನಗೆ ನನ್ನ ಅಜ್ಜಿ ಎಂದರೆ ಬಹಳ ಇಷ್ಟ. ಕಾರಣ ಇಂದಿಗೂ ತಿಳಿದಿಲ್ಲ. ಬಾಲ್ಯದಲ್ಲಿ ನನ್ನ ಅಜ್ಜಿ ಹೋಗುವ ಕಡೆ ಎಲ್ಲಾ ನಾನು ಅವಳ ಸೀರೆಯ ಸೆರಗನ್ನು ಹಿಡಿದುಕೊಂಡು ಅವಳ ಹಿಂದೆಯೆ ಹೋಗುತ್ತಿದ್ದೆ. ಅದೆಷ್ಟೋ ಬಾರಿ ನನ್ನ ಅಮ್ಮನ ಕೈಯಿಂದ ಸಿಗುವ ಪೆಟ್ಟುಗಳಿಂದ ನನ್ನನ್ನು ಪಾರು ಮಾಡಿದ್ದಾಳೆ.


ಬಾಲ್ಯದಿಂದಲೂ ಅವಳ ಜೊತೆ ಮಲಗಿದ್ದೆ ಹೆಚ್ಚು. ರಾತ್ರಿ ನಿದ್ರಿಸುವ ಸಮಯದಲ್ಲಿ ದಿನಾಲು "ಅಪ್ಪೆ ಒಂಜಿ ಕಥೆ ಪನ್ಲೆ" ಎಂದರೆ ಸಾಕು ಹೇಳಲು ಶುರುಮಾಡುತ್ತಿದ್ದಳು. ಅವಳು ಹೇಳುವ ಕಥೆಯನ್ನು ಕೇಳಿಕೊಂಡು ನಾನು ನಿದ್ರೆಗೆ ಜಾರುತ್ತಿದ್ದೆ. ಕೆಲವೊಮ್ಮೆ ನಮ್ಮ ತುಂಟ ತನವನ್ನು ನಮಗೆಯೇ ಕಥೆಯ ರೂಪದಲ್ಲಿ ಹೇಳುತ್ತಾ ತಮಾಷೆ ಮಾಡುತ್ತಾಳೆ.


ಅದೆಷ್ಟೋ ಬಾರಿ ಅಮ್ಮನ ಕಣ್ಣು ತಪ್ಪಿಸಿ ಅವಳ ಜೊತೆ ಕುಳಿತು ಎಲೆ ಅಡಿಕೆ ತಿನ್ನುತ್ತಿದ್ದ ದಿನವಂತೂ ಅತ್ಯದ್ಭುತ. ಅವಳು ತನ್ನ ಎಲ್ಲಾ ಮೊಮ್ಮಕ್ಕಳ್ಳನ್ನು ಸಮಾನವಾದ ದೃಷ್ಟಿಯಿಂದ ಕಾಣುವಳು. ಈಗಲೂ ಸಹ ತನ್ನ ಮಕ್ಕಳು ತನಗೆ ನೀಡಿದ ಹಣವನ್ನು ಸಂಗ್ರಹಿಸಿ ತನ್ನ ಎಲ್ಲಾ ಮೊಮ್ಮಕ್ಕಳಿಗೆ ಆ ಹಣವನ್ನು ಹಂಚುವಳು. ಮತ್ತು ಅಂಗಡಿಯಿಂದ ಮಿಠಾಯಿ ತಂದು ಎಲ್ಲರಿಗೂ ನೀಡುವಳು. ಅದೆಷ್ಟೋ ಸಲ ನನ್ನ ಅಮ್ಮ ನನಗೆ ಬೈಯ್ಯುವಾಗ ಅವಳನ್ನು ಗದರಿಸಿ ನನ್ನ ಪರವಾಗಿ ನಿಂತು ಮಾತನಾಡುವಳು.


ನನ್ನ ಅಜ್ಜಿ ಮಾಡುವ ಬದನೆಕಾಯಿ ಗೊಜ್ಜು ಅಂತೂ ಆಹಾ ಸವಿಯಲು ಬಹಳ ರುಚಿಯಾಗಿರುತ್ತಿತ್ತು. ಈಗಲೂ ತಿಂಡಿ ತಿನ್ನುವಾಗ, ಊಟ ಮಾಡುವಾಗ ಕೊನೆಗೆ ಅವಳು ಒಂದು ತುತ್ತನ್ನು ನನಗಾಗಿ ಮೀಸಲಿರಿಸುವಳು. ಅದೆಷ್ಟೋ ಸಲ ತಾನು ಕೂಡಿಟ್ಟುಕೊಂಡ ಹಣವನ್ನು ಯಾರಿಗೂ ತಿಳಿಯದ ಹಾಗೆ ನನಗೆ ನೀಡುವಳು. ಅವಳ ಬಾಲ್ಯದ ಜೀವನದ ಸುಖ- ದುಃಖಗಳನ್ನು ನಮ್ಮಲ್ಲಿ ಹಂಚಿಕೊಂಡು ಮಕ್ಕಳ ಜೊತೆ ಮಕ್ಕಳಾಗಿ ಬೆರೆಯುವಳು. ನನಗೆ ಏನಾದರು ನೋವಾದರೆ ಅವಳು ಕಣ್ಣೀರಿಡುವಳು.


ಕೆಲವೊಮ್ಮೆ ಸಿಟ್ಟು ಬಂದರೆ ಬೈಯುತ್ತಿರುತ್ತಾಳೆ. ಅವಳ ಆ ಬೈಗುಳವನ್ನು ಕೇಳಲು ನನಗಂತೂ ಬಹಳ ಇಷ್ಟ. ಹೀಗಾಗಿ ನಾವು ಬೇಕಂತಲೇ ಚೇಷ್ಟೆಗಳನ್ನು ಮಾಡುತ್ತಿರುತ್ತೇವೆ. ಆದರೆ ನನ್ನ ಅಜ್ಜಿ ಯಾವ ಮಕ್ಕಳಿಗೂ ಒಂದೇಟು ಹೊಡೆದವಳಲ್ಲ. ಎಲ್ಲಾ ಸೌಲಭ್ಯಗಳಿದ್ದು ಒಂದಕ್ಷರ ಓದಲು ಬಾರದ ಇಂದಿನ ಯುವಜನತೆಗೆ ಶಾಲೆಯ ಮೆಟ್ಟಿಲೇರದೆ ಇದ್ದರೂ ಸಹ, ವಯಸ್ಸು 89 ಆಗಿದ್ದರು ಸಹ ಸ್ಪಷ್ಟವಾಗಿ ಓದುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾಳೆ. ಇವಳ ಪ್ರೀತಿ ಕೇವಲ ನಮಗೆ ಮಾತ್ರ ಸೀಮಿತವಾಗಿಲ್ಲ. ಮೂಕಜೀವಿಗಳಾದ ಪ್ರಾಣಿ ಪಕ್ಷಿಗಳನ್ನು ತನ್ನ ಮಕ್ಕಳಂತೆ ಪ್ರೀತಿಸುವಳು. ಅವಳು ಮನೆಗೆ ಬಂದಾಕ್ಷಣ ನಮ್ಮ ಮನೆಯ ಬೆಕ್ಕು, ನಾಯಿಗಳು ಅವಳನ್ನು ಸುತ್ತುವರೆದು ಅವುಗಳ ಸಂತೋಷವನ್ನು ಅವಳಲ್ಲಿ ವ್ಯಕ್ತಪಡಿಸುತ್ತದೆ.


ಅವಳೊಂದಿಗಿನ ನಮ್ಮ ಬಾಂಧವ್ಯ ಹೇಗೆಂದರೆ ನಮ್ಮ ಮನೆಯಲ್ಲಿ ಅವಳು ನಾಲ್ಕೈದು ದಿನ ಇರಬೇಕೆಂದು ಅವಳ ಮೊಮ್ಮಕ್ಕಳಾದ ನಾವುಗಳು ಒಬ್ಬರಿಗೊಬ್ಬರು ಚರ್ಚೆ ಮಾಡಿಕೊಳ್ಳುತ್ತೇವೆ. ಅವಳ ಆ ಮುಗ್ಧ ಪ್ರೀತಿಗೆ ನಾವು ತಲೆಬಾಗಲೇಬೇಕು. ವೃದ್ಧರಿಗಾಗಿ ವೃದ್ಧಾಶ್ರಮವಿರುವ ಈ ಕಾಲದಲ್ಲಿ ನನ್ನ ಅಜ್ಜಿಯು ತನ್ನ ಮಕ್ಕಳು, ಮರಿ ಮೊಮ್ಮಕ್ಕಳೊಂದಿಗೆ ಸುಖಿ ಜೀವನವನ್ನು ನಡೆಸುತ್ತಿದ್ದು ಈಗಿನ ಸಮಾಜಕ್ಕೆ ಉತ್ತಮ ಉದಾಹರಣೆಯಾಗಿದ್ದಾಳೆ.

 

- ಕೃತಿಕಾ ಕಣಿಯಾರು

ಪ್ರಥಮ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top