ಪ್ರಭು ಶ್ರೀ ವಿರಕ್ತಮಠದ ಪರಿಸರ ಕುಟೀರದಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ
ಧಾರವಾಡ: 'ರಕ್ತ ಸಂಬಂಧಗಳಿಗಿಂತಲೂ ಮಿಗಿಲಾದದ್ದು ಸ್ನೇಹ ಸಂಬಂಧ. ಇಂದು ಸಾಂದರ್ಭಿಕವಾಗಿ ದೂರವಾಗಿರುವ ಆತ್ಮೀಯ ಸಂಬಂಧಗಳನ್ನು ಸ್ನೇಹ ಸಂಬಂಧಗಳಂತಹ ಕಾರ್ಯಕ್ರಮಗಳು ಬೆಸೆಯಲು ಸೇತುವೆಯಾಗಿವೆ' ಎಂದು ಚಿಮ್ಮಡ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.
ಚಿಮ್ಮಡ ಗ್ರಾಮದ ವಿರಕ್ತಮಠದ ಪರಿಸರ ಕುಟೀರ ಆಶ್ರಮದಲ್ಲಿ ಮಹಾಲಿಂಗಪುರದ ಎಸ್‌ಸಿಪಿ ಪ್ರೌಢಶಾಲೆಯ 1986- 87ನೇ ಸಾಲಿನ ವಿದ್ಯಾರ್ಥಿಗಳು ನ.17ರಂದು ಭಾನುವಾರ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 'ಇಂದಿನ ಯಾಂತ್ರೀಕೃತ ಬದುಕಿನಲ್ಲಿ ಹೆಚ್ಚಿನ ಸಮಯವನ್ನು ಮೊಬೈಲ್‌ನೊಂದಿಗೆ ಕಳೆಯುತ್ತಿರುವುದು ವಿಪರ್ಯಾಸ. ಕುಟುಂಬ ಹಾಗೂ ಸಂಬಂಧಗಳಿಗೆ ಕೆಲವು ಸಮಯವನ್ನಾದರೂ ಮೀಸಲಿಡಬೇಕು' ಎಂದರು.
ಜಿಲ್ಲಾ ಪಂಚಾಯ್ತಿಯ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ದಾಸಸಾಹಿತ್ಯ ಚಿಂತಕರು, ಸಾಹಿತಿಗಳಾದ ಶ್ರೀಮತಿ ವೀಣಾ ಬರಗಿ (ಶುಭಾಂಗಿ ಇಂಡೀಕರ) ಮಹಾನಂದಾ ಗೊಂಬಿ, ಹನುಮಂತ ಶಿರೋಳ, ಪ್ರಭು ನೇಸೂರ, ಶಿವಲಿಂಗ ಟರಕಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಶ್ರೀ ಪ್ರಭು ಮಹಾಸ್ವಾಮಿಗಳು ಶ್ರೀಮಠದ ಪರವಾಗಿ ಮಹಿಳಾ ಸಹಪಾಠಿಗಳಿಗೆ ತವರಿನ ಕಾಣಿಕೆಯಾಗಿ ಹಸಿರು ಸೀರೆ ಅರಿಶಿಣ ಕುಂಕುಮ ಬಾಗಿನ ನೀಡಿ ಗೌರವಿಸಿದರು.
ಮನೋಹರ ಶಿರೋಳ, ಶಿವಾನಂದ ಬಾಗೇವಾಡಿ, ಪಾರ್ವತಿ ಸೋರಗಾಂವಿ, ಶಂಕರ ಹೊಸಕೋಟಿ, ವಿವೇಕಾನಂದ ಕಡಪಟ್ಟಿ ಮುಂತಾದವರು ಉಪಸ್ಥಿತರಿದ್ದ ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಕಾಂತ ಮಾಳಿ ಮಾಡಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ