ಸದಾಕಾಲ ತುಂಬಿ ಹರಿಯುವ ನದಿಯನ್ನು ಜೀವನದಿ ಎಂದು ಕರೆಯುವುದು ವಾಡಿಕೆ. ಗೀರ್ವಾಣ ಭಾರತಿ ಎಂದು ಪ್ರಸಿದ್ಧವಾಗಿರುವ ಸಂಸ್ಕೃತ ಭಾಷೆಯು ಜೀವನದಿಗೆ ತುಲ್ಯವಾದುದು. ಪ್ರಪಂಚದ ಹಲವಾರು ಭಾಷೆಗಳನ್ನು ನೋಡಿದರೆ ಅವುಗಳು ಒಂದು ಕಾಲದಲ್ಲಿ ಇದ್ದು ಇನ್ನೊಂದು ಕಾಲದಲ್ಲಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತವೆ. ಇಲ್ಲದಿದ್ದರೆ ಹಲವಾರು ಭಾಷೆಗಳು ಮಾರ್ಪಾಡು ಹೊಂದಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತವೆ. ಇನ್ನಷ್ಟು ಭಾಷೆಗಳು ತನ್ನ ಗ್ರಾಂಥಿಕ ಸ್ವರೂಪ ಹಾಗೂ ಜನರಾಡುವ ಸ್ವರೂಪದಲ್ಲಿ ಹಲವಾರು ವ್ಯತ್ಯಾಸಗಳನ್ನು ಹೊಂದಿರುತ್ತವೆ.
ನಾವು ಚರಿತ್ರೆಯ ಪುಟಗಳನ್ನು ಗಮನಿಸಿದಾಗ ಕೆಲವಾರು ಭಾಷೆಗಳು ಇಂದು ಹೆಸರೇ ಇಲ್ಲದಂತಾಗಿದೆ. ಆದರೆ ಇದೆಲ್ಲದಕ್ಕೂ ವ್ಯತಿರಿಕ್ತವಾಗಿ ನಿಂತಿರುವುದು ಭಾರತದ ಅತ್ಯಂತ ಶಕ್ತಿಶಾಲಿ, ಸಂಸ್ಕೃತ ಭಾಷೆ.
ಸಂಸ್ಕೃತ ಭಾಷೆಯ ಸಮಕಾಲಿನ ಭಾಷೆಗಳೆಂದೇ ಕರೆಯಲ್ಪಟ್ಟವುಗಳು ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳು. ಆದರೆ ಈ ಭಾಷೆಗಳು ಜಗತ್ತಿನಲ್ಲಿ ಎಲ್ಲಿಯೂ ಇಂದು ಬಳಕೆಯಲ್ಲಿಲ್ಲ. ಹಿಬ್ರೂ ಭಾಷೆ, ಭಾರತದಲ್ಲಿದ್ದ ಪ್ರಾಕೃತ ಭಾಷೆಗಳು (ಪೈಸಾಚಿ, ಮಾಗಧಿ, ಪಾಳಿ ಇತ್ಯಾದಿ) ಇಂದು ಅಪರಿಮಿತ ಮಾರ್ಪಾಡನ್ನು ಹೊಂದಿ ಹಲವಾರು ರಾಜ್ಯ ಭಾಷೆಗಳು ಉಗಮವಾಗಿ ತನ್ನ ಮೂಲ ಸ್ವರೂಪವನ್ನು ಸಂಪೂರ್ಣವಾಗಿ ಮರೆತು ಬಿಟ್ಟಿವೆ. ಆದರೆ ಸಂಸ್ಕೃತ ಭಾಷೆಯು ಇಂದಿಗೂ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡು ಜೀವಂತವಾಗಿ ನಿಂತಿದೆ. ಪ್ರಾಕೃತ ಭಾಷೆಗಳನ್ನು 'ಸಮ್ಯಕ್' ಕರಿಸಿ ಅಂದರೆ ಸರಿ ಗೊಳಿಸಿ ಅಥವಾ ಶುದ್ಧಗೊಳಿಸಿ ಸಂಸ್ಕೃತ ಭಾಷೆಯನ್ನು ಅತಿ ವೈಜ್ಞಾನಿಕವಾಗಿ ತಯಾರಿಸಲಾಯಿತು ಎಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಇನ್ನು ಕೆಲವರು ಪ್ರಾಕೃತ ಭಾಷೆಗಳ ಮಾತೃ ಸ್ಥಾನದಲ್ಲಿ ಸಂಸ್ಕೃತ ಭಾಷೆ ಇತ್ತೆಂದು ತಿಳಿಸುತ್ತಾರೆ. ಏನೇ ಆದರೂ ಜಗತ್ತಿನ ಅತಿ ಪ್ರಾಚೀನ ಭಾಷೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು ಇಂದಿಗೂ ಜೀವಂತವಾಗಿರುವ ಪ್ರಪಂಚದ ಏಕ ಮಾತ್ರ ಭಾಷೆ ಎಂದರೆ ಅದು ಸಂಸ್ಕೃತ ಭಾಷೆ. ಇದರ ಶಬ್ದ ನಿರ್ಮಾಣ ಸಾಮರ್ಥ್ಯವು ಪ್ರತಿಯೊಂದು ಭಾಷೆಗಳಿಗೂ ಅತ್ಯಗತ್ಯವಾದ ಸಂಗತಿ ಆಗಿದೆ. ಆದ್ದರಿಂದ ಇಂದಿಗೂ ಕೇವಲ ಭಾರತೀಯ ಭಾಷೆಗಳಿಗಲ್ಲದೆ ಪ್ರಪಂಚದ ಬಹುತೇಕ ಭಾಷೆಗಳಿಗೆ ಮಾತೃಸ್ಥಾನದಲ್ಲಿ ಇರುವ ಭಾಷೆ ಇದಾಗಿದೆ.
ನಮಗೆ ಚೆನ್ನಾಗಿ ಗೊತ್ತಿದೆ, "ಗೆದ್ದ ಎತ್ತು ತನ್ನದು" ಎನ್ನುವ ಗಾದೆಯ ಬಗ್ಗೆ. ಇದು ಸಂಸ್ಕೃತ ಭಾಷೆಯ ವಿಚಾರದಲ್ಲಿಯೂ ಭಿನ್ನವಾಗಲಿಲ್ಲ! ಭಾರತವನ್ನು ಕಬಳಿಸಿದ ಐರೋಪ್ಯರು ಎಂದಿಗೂ ತಮ್ಮನ್ನು ತಾವು ಶ್ರೇಷ್ಠರೆಂದು ಪರಿಗಣಿಸಿಕೊಳ್ಳಬೇಕಿತ್ತು. ಅಂದರೆ ಅವರು ಎಂದಿಗೂ ತಾವು ಭಾರತೀಯರಿಗಿಂತ ಕಡಿಮೆ ಎಂದು ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ಹೀಗಿರುವಾಗ ಅವರಿಗೆ ಭಾರತದ ಸಂಸ್ಕೃತ ಭಾಷೆಯ ಕುರಿತು ಹಾಗೂ ಅದರೊಂದಿಗೆ ಅಂತರ್ಗತವಾಗಿರುವ ಶ್ರೇಷ್ಠ ಸಂಸ್ಕೃತಿಯ ಕುರಿತು ತಿಳಿದು ಬಂತು. ಕೆಲವರು ಅದನ್ನು ತಿರಸ್ಕರಿಸಿದರೆ ಇನ್ನು ಕೆಲವರಿಗೆ ಅದರ ಬಗ್ಗೆ ಅರಿಯುವ ಇನ್ನಷ್ಟು ಕುತೂಹಲ ಬೆಳೆಯತೊಡಗಿತು. ಆದರೆ ಅವರು ತಾವು ಹೆಚ್ಚು ನಾಗರಿಕರೆಂದು ತೋರಿಸಿಕೊಳ್ಳಲು ಹಾಗೂ ತಮ್ಮಿಂದಲೇ ಈ ಶ್ರೇಷ್ಠ ಸಂಸ್ಕೃತಿ ಬೆಳೆದಿದೆ ಎಂದು ಪರಿಚಯಿಸಿಕೊಳ್ಳಲು ಇಷ್ಟಪಡುತ್ತಿದ್ದರು.
ಇದನ್ನು ಸಮರ್ಥಿಸಿಕೊಳ್ಳಲು ಅವರು ಹೊಸದೊಂದು ಸಿದ್ಧಾಂತವನ್ನೇ ಹುಟ್ಟು ಹಾಕಿದರು. ಆ ಸಿದ್ಧಾಂತವು ಅವರ ಒಡೆದು ಆಳುವ ನೀತಿಗೆ ಇನ್ನಷ್ಟು ಇಂಬು ಕೊಟ್ಟಿತು. ಅದೇ ಆರ್ಯರ ಆಕ್ರಮಣ ಸಿದ್ಧಾಂತ. ಸಂಸ್ಕೃತ ಭಾಷೆಯ ಹುಟ್ಟು ಯುರೋಪಿನಲ್ಲಾಯಿತು ಎನ್ನುವ ಸಿದ್ಧಾಂತ. ಭಾರತೀಯರು ಮೂಲತಃ ದ್ರಾವಿಡ ಸಂಸ್ಕೃತಿಯವರು ಎನ್ನುವ ಸಿದ್ಧಾಂತ. ಅಲ್ಲದೆ ಆರ್ಯರ ಸಾಂಸ್ಕೃತಿಕ ಆಕ್ರಮಣದ ಸಿದ್ಧಾಂತ. ಇತ್ಯಾದಿ. ಈ ಸಿದ್ಧಾಂತವನ್ನು ಪ್ರತಿಪಾದಿಸಲು ಮ್ಯಾಕ್ಸ್ ಮುಲ್ಲರ್ ನಂತಹ ವಿದ್ವಾಂಸರು ಕೆಲವಾರು ಶಬ್ದಗಳನ್ನು ಬಳಸಿದರು. ಮುಖ್ಯವಾಗಿ ಇಂಗ್ಲೀಷ್ ನ ಫಾದರ್ ಎಂಬ ಶಬ್ದದ ಮೂಲ ಸಂಸ್ಕೃತದ ಪಿತೃ. ಮಾತೃ ಎಂಬ ಶಬ್ದವು ಮದರ್ ಆಯಿತು. ಬ್ರದರ್ ಎಂಬ ಶಬ್ದವು ಭ್ರಾತೃ ಎಂಬ ಶಬ್ದದಿಂದಾಯಿತು. ಹೀಗೆ ಹಲವಾರು ಉದಾಹರಣೆಗಳನ್ನು ಕೊಡುತ್ತಾ ಹೋಗುತ್ತಾರೆ.
ಈ ಉದಾಹರಣೆಗಳನ್ನು ಸಾರಾಸಗಟಾಗಿ ತಿರಸ್ಕರಿಸಲಾಗದು. ಆದರೆ ಈ ಉದಾಹರಣೆಗಳು ಇದ್ದ ಮಾತ್ರಕ್ಕೆ ಭಾರತೀಯ ಭಾಷೆಗಳೊಂದಿಗೆ ಸಂಸ್ಕೃತ ಭಾಷೆಯ ಅಂತರ್ಗತತ್ವವನ್ನು ಅಲ್ಲಗಳೆಯಲಾಗದು. ದ್ರಾವಿಡ ಭಾಷೆಗಳು ಎಂದು ಪರಿಗಣಿಸುವ ಭಾಷೆಗಳು ಸಂಸ್ಕೃತದೊಂದಿಗೆ ಹೊಂದಿರುವ ಸಂಬಂಧವು ಐರೋಪ್ಯ ಭಾಷೆಗಳು ಸಂಸ್ಕೃತದೊಂದಿಗೆ ಹೊಂದಿರುವ ಸಂಬಂಧಕ್ಕಿಂತ ಬಹಳ ಅಧಿಕವಾಗಿದೆ. ಇದರ ಮೂಲ ಸಾಹಿತ್ಯವಾದ ಸಂಗಮ ಸಾಹಿತ್ಯವು ತನ್ನ ಹೆಸರಿನಲ್ಲಿಯೇ ಸಂಸ್ಕೃತವನ್ನು ಹೊಂದಿದೆ. ದ್ರಾವಿಡ ಭಾಷೆ ಎಂದು ಕರೆಸಿಕೊಳ್ಳುವ ಭಾಷೆಗಳ ಬಹುತೇಕ ಶಬ್ದಗಳು ಸಂಸ್ಕೃತದ್ದಾಗಿದೆ ಅಥವಾ ಸಂಸ್ಕೃತ ಮೂಲದಿಂದ ಹುಟ್ಟಿದ್ದಾಗಿದೆ. ದ್ರಾವಿಡ ಭಾಷೆಗಳಲ್ಲದೆ ಭಾರತದ ಬಹುತೇಕ ಭಾಷೆಗಳ ವ್ಯಾಕರಣದ ಬಹುಭಾಗ ಸಂಸ್ಕೃತ ವ್ಯಾಕರಣವೇ ಆಗಿದೆ. ಸಂಸ್ಕೃತವು ಜಗತ್ತಿನ ಭಾಷೆಗಳ ತಾಯಿ ಎಂದು ಹೆಮ್ಮೆಯಿಂದ ಒಪ್ಪಿಕೊಳ್ಳೋಣ. ಆದರೆ ಇದನ್ನು ಭಾರತೀಯರಿಂದ ಬೇರ್ಪಡಿಸುವ ಹುನ್ನಾರವನ್ನು ಹೇಗೆ ತಾನೇ ಒಪ್ಪಿಕೊಳ್ಳಲು ಸಾಧ್ಯ? ಹೀಗಿರುವಾಗ ದ್ರಾವಿಡ ಭಾಷೆಗಳನ್ನು ಸಂಸ್ಕೃತದಿಂದ ಹೊರತೆಂದು ಪರಿಗಣಿಸುವುದು ಒಡೆದು ಆಳುವ ನೀತಿಯ ಹಾಗೂ ಐರೋಪ್ಯರು ಭಾರತೀಯರಿಗಿಂತ ಮೇಲು ಎಂದು ತೋರಿಸುಕೊಳ್ಳುವ ಸಿದ್ಧಾಂತದ ಭಾಗವಲ್ಲದೆ ಇನ್ನೇನು?
-ಅಭಿಜ್ಞಾ ಉಪಾಧ್ಯಾಯ
ಇತಿಹಾಸ ಪ್ರಾಧ್ಯಾಪಕಿ
SDM ಕಾಲೇಜು, ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


