ಪ್ರತಿ ವರ್ಷ ಭಾರತದಾದ್ಯಂತ ನವೆಂಬರ್ 14 ರಿಂದ 20 ರವರೆಗೆ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆ ನಡೆದು ಬಂದಿದೆ. ಏಳು ದಿನಗಳ ಕಾಲ ಸಹಕಾರ ಕ್ಷೇತ್ರದಲ್ಲಿ ಇರುವವರೆಲ್ಲರೂ ಒಂದೆಡೆ ಸೇರಿ ಚಳವಳಿಯ ಸಾಧನೆ, ಪ್ರಗತಿಯ ಅವಲೋಕನ ನಡೆಸುತ್ತಾರೆ. ಸಾಧನೆ ಬಗ್ಗೆ ಹೆಮ್ಮೆ ಪಟ್ಟುಕೊಂಡು ಮುಂದಿನ ಬೆಳವಣಿಗೆ ಬಗ್ಗೆ ಚಿಂತನೆ ನಡೆಸುತ್ತಾರೆ. ಹಾಗೆಯೇ, ವೈಫಲ್ಯಗಳು ಇದ್ದಲ್ಲಿ ಅದನ್ನು ಸರಿಪಡಿಸುವ ಬಗ್ಗೆ ಪರಸ್ಪರ ಆಪ್ತ ಸಮಾಲೋಚನೆಗಳು ನಡೆಯುತ್ತವೆ. ಭಾರತದಲ್ಲಿ ಸಹಕಾರ ಚಳವಳಿ ಆರಂಭವಾಗಿ 118 ವರ್ಷಗಳು ಸಂದಿವೆ.
ಭಾರತದ ಸಹಕಾರ ಚಳವಳಿಯ ಆರೋಗ್ಯಕರ ಬೆಳವಣಿಗೆಗೆ ಹಲವಾರು ನಾಯಕರು ಶ್ರಮಿಸಿದ್ದಾರೆ. ತಮ್ಮ ತನು, ಮನವನ್ನು ಸಮರ್ಪಿಸಿದ್ದಾರೆ. ಅಂತಹವರಲ್ಲಿ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಪಂಡಿತ ಜವಹರಲಾಲ್ ನೆಹರೂ ಅವರು ಅಗ್ರಗಣ್ಯರೆನಿಸಿಕೊಂಡಿದ್ದಾರೆ. ಸಹಕಾರ ತತ್ವ, ಆಚರಣೆಯಲ್ಲಿ ನೆಹರೂ ಅವರಿಗೆ ಅಪಾರವಾದ ನಂಬಿಕೆ ಮತ್ತು ನಿಷ್ಠೆಯಿತ್ತು. ಭಾರತವನ್ನು ಆರ್ಥಿಕವಾಗಿ ಸದೃಢಗೊಳಿಸಲು ನೆಹರೂ ಅವರು ಸಹಕಾರ ತತ್ವದ ಮೊರೆ ಹೋದರು. ರಾಷ್ಟ್ರದಲ್ಲಿ ಸಹಕಾರ ಚಳವಳಿ ಪ್ರಗತಿಪಥದಲ್ಲಿ ಸಾಗಲು ಕ್ರಮಗಳನ್ನು ಕೈಗೊಂಡರು. ಅವರ ದೂರದೃಷ್ಟಿಯ ಫಲದಿಂದ ಇಂದು ಸಹಕಾರ ಆಂದೋಲನವು ಬಹು ವೈಶಿಷ್ಟ್ಯವಾಗಿಯೂ, ವಿಭಿನ್ನವಾಗಿಯೂ ಬೆಳೆದು ನಿಂತಿದೆ.
1952ರಲ್ಲಿ ಎಂ.ವಿ. ಕೃಷ್ಣಪ್ಪನವರು ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ, ಲೋಕಸಭೆಯಲ್ಲಿ ಸಹಕಾರ ಕ್ಷೇತ್ರದ ಮಹತ್ವ, ದೇಶದ ರೈತರ ಸಮಸ್ಯೆಗಳು, ಅವರ ಮೇಲಿನ ಶೋಷಣೆಗಳ ಕುರಿತು ಹಾಗೂ ಸಹಕಾರ ಕ್ಷೇತ್ರದ ಮಹತ್ವ, ದೇಶದ ರೈತರ ಸಮಸ್ಯೆಗಳು, ಅವರ ಮೇಲಿನ ಶೋಷಣೆಗಳ ಕುರಿತು ಹಾಗೂ ಸಹಕಾರ ಕ್ಷೇತ್ರದ ಮೂಲಕ ಗ್ರಾಮೀಣ ಪ್ರದೇಶದ ರೈತರ, ಮಹಿಳೆಯರ ಹಾಗೂ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿ ಸಾಧ್ಯವೆಂದು ತಮ್ಮ ಭಾಷಣದಲ್ಲಿ ತಿಳಿಸುತ್ತಾರೆ. ಕೃಷ್ಣಪ್ಪನವರ ಭಾಷಣವನ್ನು ಆಲಿಸಿದ ನೆಹರೂರವರು ಸಭೆ ಮುಗಿದ ತಕ್ಷಣ ಕೃಷ್ಣಪ್ಪರವರನ್ನು ತಮ್ಮ ಕಚೇರಿಗೆ ಕರೆಸಿ, ಸಹಕಾರ ಕ್ಷೇತ್ರದ ಬಗ್ಗೆ ಅವರಿಗಿರುವ ಜ್ಞಾನ, ಕಳಕಳಿ ತಿಳಿದು ಮರುದಿನವೇ ಅವರನ್ನು ಕೃಷಿ ಖಾತೆ ಸಚಿವರನ್ನಾಗಿ ನೇಮಕ ಮಾಡುತ್ತಾರೆ. ಅನಂತರ ಎಂ.ವಿ. ಕೃಷ್ಣಪ್ಪನವರು ಹಾಲೆಂಡ್ ಮತ್ತು ನೆದರ್‌ಲ್ಯಾಂಡ್ಸ್ ದೇಶಗಳಿಗೆ ಅಧ್ಯಯನ ಪ್ರವಾಸ ಮಾಡಿ, ಅಲ್ಲಿರುವ ಹಸುಗಳನ್ನು ಭಾರತಕ್ಕೆ ತಂದು, ಭಾರತದಲ್ಲಿ ಹೈನುಗಾರಿಕೆಗೆ ಹೊಸ ಆಯಾಮವನ್ನು ದೊರಕಿಸಿಕೊಡುತ್ತಾರೆ. ಅದರ ಫಲವಾಗಿ ಕೆ.ಎಂ.ಎಫ್. ಅನ್ನು 1965ರಲ್ಲಿ ಸ್ಥಾಪನೆ ಮಾಡುತ್ತಾರೆ. ಎಂ.ವಿ. ಕೃಷ್ಣಪ್ಪನವರ ಸಹಕಾರ ಕ್ಷೇತ್ರದ ಪ್ರೇರಣೆಯಿಂದಾಗಿ ಜವಾಹರಲಾಲ್ ನೆಹರೂ ಪಂಚವಾರ್ಷಿಕ ಯೋಜನೆಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನವನ್ನು ನೀಡುತ್ತಾರೆ. ನವೆಂಬರ್ ೧೪ರಂದು ಪಂಡಿತ್ ನೆಹರೂ ಅವರ ಹುಟ್ಟು ಹಬ್ಬವಾಗಿದ್ದು, ನೆಹರೂ ಅವರು ಸಹಕಾರ ಚಳವಳಿಯ ಬೆಳವಣಿಗೆಗೆ ನೀಡಿದ ಕೊಡುಗೆಯಿಂದ ಅವರ ಹುಟ್ಟುಹಬ್ಬದಂದೇ ಸಹಕಾರ ಸಪ್ತಾಹವನ್ನು ಆಚರಣೆ ಮಾಡಲಾಗುತ್ತಿದೆ.
1953 ರಿಂದ ಪ್ರತಿವರ್ಷ ನವೆಂಬರ್ 14 ರಿಂದ 20 ರವರೆಗೆ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಮೊದಲ ಸಪ್ತಾಹವನ್ನು ಮಾನ್ಯ ಎಚ್.ಡಿ. ದೇವೇಗೌಡರು ಬೆಂಗಳೂರು ಜಿಲ್ಲೆ ರಾಮನಗರ ಸಮೀಪದ ಅಂಕನಹಳ್ಳಿಯಲ್ಲಿ ಆಯೋಜಿಸಿದ್ದರು ಎಂಬುದನ್ನು ಸ್ಮರಿಸಲೇಬೇಕು. ಈ ಸಪ್ತಾಹದ ಆಯೋಜನೆಗೆ ಮಹತ್ವದ ಬದಲಾವಣೆಯನ್ನು ತಂದವರು ಮಾನ್ಯ ಜಿ.ಟಿ. ದೇವೇಗೌಡರು ಈ ಬಾರಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯುತ್ತಿದ್ದು ಸಪ್ತಾಹದ ಧ್ಯೇಯ ‘ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಎಂಬುದಾಗಿದೆ. ಏಳು ದಿನಗಳಲ್ಲಿ ಪ್ರತಿ ದಿವಸ, ಒಂದೊಂದು ವಿಷಯದ ಬಗ್ಗೆ ಚರ್ಚೆ ಹಾಗೂ ಸಪ್ತಾಹದ ದಿನಾಚರಣೆಯನ್ನು ಆಚರಿಸಲಾಗುತ್ತದೆ. ನವೆಂಬರ್ 14ರಂದು ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳವಳಿಯನ್ನು ಬಲಪಡಿಸುವುದು ಎಂಬ ದಿನದ ವಿಷಯದ ಬಗ್ಗೆ ಚರ್ಚಿಸಲಾಗುತ್ತಿದೆ. ನವೆಂಬರ್ 15ರಂದು ‘ಸಹಕಾರ ಸಂಸ್ಥೆಗಳಲ್ಲಿ ಅನ್ವೇಷಣೆ, ತಾಂತ್ರಿಕತೆ ಮತ್ತು ಉತ್ತಮ ಆಡಳಿತ’, ನವೆಂಬರ್ 16ರಂದು ‘ಉದ್ಯಮ ಶೀಲತೆ, ಉದ್ಯೋಗ ಮತ್ತು ಕೌಶಲ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’, ನವೆಂಬರ್ 17ರಂದು ‘ಸಹಕಾರಿ ಉದ್ಯಮಗಳಲ್ಲಿ ಪರಿವರ್ತನೆ’, ನವೆಂಬರ್ 18ರಂದು ‘ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವುದು’, ನವೆಂಬರ್ 19ರಂದು ‘ಮಹಿಳೆಯರು, ಯುವಕರು ಮತ್ತು ಅಬಲವರ್ಗಗಳಿಗಾಗಿ ಸಹಕಾರ ಸಂಸ್ಥೆಗಳು’, ನವೆಂಬರ್ 20ರಂದು ‘ಉತ್ತಮ ವಿಶ್ವ ನಿರ್ಮಾಣ ಹಾದಿಗಾಗಿಹಾಗೂ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಎಂಬ ವಿಷಯಗಳ ಬಗ್ಗೆ ಚರ್ಚೆ ಹಾಗೂ ದಿನದ ಸಪ್ತಾಹದ ಆಚರಣೆಯನ್ನು ಆಚರಿಸಲಾಗುತ್ತದೆ.
ಇದರ 71 ನೇ ಆವೃತ್ತಿಯನ್ನು ಕರ್ನಾಟಕದ ಬಾಗಲಕೋಟದಲ್ಲಿ ಆಯೋಜಿಸಲಾಗುತ್ತಿದೆ. ಪ್ರತಿವರ್ಷವೂ ಒಂದೊಂದು ಪ್ರಧಾನ ಶೀರ್ಷಿಕೆಯ ಥೀಮ್ ಅಡಿಯಲ್ಲಿ ಆಚರಿಸಲಾಗುತ್ತಿದೆ. ಈ ವರ್ಷ ವಿಕಸಿತ್ ಭಾರತ್ ನಿರ್ಮಾಣದಲ್ಲಿ ಸಹಕಾರಿಗಳ ಪಾತ್ರ (ಆತ್ಮನಿರ್ಭರ ಭಾರತ ಮತ್ತು ಉತ್ತಮ ಜಗತ್ತನ್ನು ನಿರ್ಮಿಸುವ ಸಹಕಾರಿಗಳು- ಎಂಬ ಧ್ಯೇಯವಾಕ್ಯದೊಂದಿಗೆ ಕಳೆದ ವರ್ಷ ಜುಲೈ 4 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತ ಸರ್ಕಾರದ ಸಹಕಾರ ಸಚಿವಾಲಯ ಮತ್ತು ಭಾರತದ ರಾಷ್ಟ್ರೀಯ ಸಹಕಾರಿ ಒಕ್ಕೂಟ (NCUI) ಜಂಟಿಯಾಗಿ 100ನೆಯ ಅಂತಾರಾಷ್ಟ್ರೀಯ ಸಹಕಾರಿ ದಿನವನ್ನು ಆಚರಿಸಿತ್ತು) ಎಂಬುದು ಈ ಬಾರಿಯ ಥೀಮ್ ಆಗಿದೆ. ಪ್ರಜಾಪ್ರಭುತ್ವದ ನಿಜವಾದ ಅಸ್ತಿತ್ವ ಮತ್ತು ಅಸ್ಮಿತೆ ಯಾವಾಗಲೂ ಪ್ರಜೇಗಳೇ ಆಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಸಹಕಾರಿ ಸಂಘವು ಜನರ ಒಡೆತನದ ಮತ್ತು ಜನರೇ ನಡೆಸುವ ಸಂಸ್ಥೆಯಾಗಿದೆ. ಸಹಕಾರಿ ಸಂಘಗಳ ಸರಕು ಮತ್ತು ಸೇವೆಗಳು ಜನರ ಬಳಕೆಗಾಗಿ ಕೆಲಸ ಮಾಡುತ್ತವೆ. ಹೆಸರೇ ಸೂಚಿಸುವಂತೆ, ಜನರು ಅಥವಾ ಸಂಸ್ಥೆಯ ಸದಸ್ಯರು ತಮ್ಮ ಸಾಮಾನ್ಯ ಪ್ರಯೋಜನ ಮತ್ತು ಪ್ರಗತಿಗಾಗಿ ಸಂಪನ್ಮೂಲಗಳನ್ನು ಸಂಗ್ರಹಿಸಲು ಸಹಕಾರದಿಂದ ಕೆಲಸ ಮಾಡುತ್ತಾರೆ. ಸಹಕಾರಿ ಚಳವಳಿಯ ಅತ್ಯುನ್ನತ ಸಂಸ್ಥೆಯಾದ ನ್ಯಾಷನಲ್ ಕೋ- ಆಪರೇಟಿವ್ ಯೂನಿಯನ್ ಆಫ್ ಇಂಡಿಯಾ ಈ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಲಿದೆ.
ಯೂರೋಪಿನಲ್ಲಿ ಜನಾಂದೋಲನವಾಗಿ ಬೆಳೆದುಬಂದ ಸಹಕಾರಿ ಚಳವಳಿ ಸಾಲದ ಅಗತ್ಯವಿದ್ದ ಜನರಿಗೆ ಸಾಲ ನೀಡಲು ಸ್ವಾವಲಂಬಿ, ಸ್ವಯಂ-ನಿರ್ವಹಣೆಯಿಂದ ಸೇವೆ ಸಲ್ಲಿಸಲು ಸಹಕಾರಿ ಸಂಘಗಳನ್ನು ಮೊದಲ ಬಾರಿಗೆ ಪ್ರಾರಂಭಿಸಲಾಯಿತು. ಬಡತನದಲ್ಲಿರುವ ರೈತರ ಸಂಕಷ್ಟಗಳನ್ನು, ವಿಶೇಷವಾಗಿ ಲೇವಾದೇವಿಗಾರರ ಕಿರುಕುಳವನ್ನು ತಗ್ಗಿಸಲು ಬ್ರಿಟಿಷ್ ಭಾರತದಲ್ಲಿ ರೈಫೆಸೆನ್ ಮಾದರಿಯ ಸಹಕಾರಿ ಚಳವಳಿ ಆರಂಭವಾಯಿತು. ಬಂಗಾಳ ಸರ್ಕಾರದ ಬೆಂಬಲದೊಂದಿಗೆ ೧೯೦೩ರಲ್ಲಿ ಬ್ಯಾಂಕಿಂಗ್ ವಲಯದ ಮೊದಲ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ರಚಿಸಲಾಯಿತು. ಬ್ರಿಟಿಷ್ ಸರ್ಕಾರದ ಸ್ನೇಹಪರ ಸಂಘಗಳ ಕಾಯ್ದೆಯಡಿ ಇದನ್ನು ನೋಂದಾಯಿಸಲಾಯಿತು. ಭಾರತದ ಸಹಕಾರಿ ಕ್ರೆಡಿಟ್ ಸೊಸೈಟಿಗಳ ಕಾಯ್ದೆಯನ್ನು 25ನೆಯ ಮಾರ್ಚ್ 1904 ರಂದು ಜಾರಿಗೆ ತರಲಾಯಿತು. 1919ರಲ್ಲಿ ಸಹಕಾರವು ರಾಜ್ಯ ವಿಷಯವಾಯಿತು. 1951ರಲ್ಲಿ, 501 ಕೇಂದ್ರ ಸಹಕಾರಿ ಒಕ್ಕೂಟಗಳನ್ನು ಕೇಂದ್ರ ಸಹಕಾರಿ ಬ್ಯಾಂಕುಗಳು ಎಂದು ಮರುನಾಮಕರಣ ಮಾಡಲಾಯಿತು. ಆರಂಭದಲ್ಲಿ ಸಾಲ ಪರಿಹಾರ ಮತ್ತು ಭೂ ಸುಧಾರಣೆಗಾಗಿ ಸಾಲಗಳನ್ನು ಒದಗಿಸಲು ಭೂ ಅಡಮಾನ ಸಹಕಾರಿ ಬ್ಯಾಂಕುಗಳನ್ನು 1938 ರಲ್ಲಿ ಸ್ಥಾಪಿಸಲಾಯಿತು.
ನಮ್ಮ ದೇಶದ ಬಡತನ ವಿಮೋಚನೆ ಮತ್ತು ಅಭಿವೃದ್ಧಿಯಲ್ಲಿ ಸಹಕಾರಿ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿವೆ. ಸಹಕಾರಿ ಎಂಬ ಪದವು ಗ್ರಾಮೀಣ ಸಾಲ ವ್ಯವಸ್ಥೆಯ ಸಮರ್ಪಕ ಮತ್ತು ಪರಿಣಾಮಕಾರಿ ನಿರ್ವಹಣೆಗೆ ಸಮಾನ ಅರ್ಥವನ್ನು ಪಡೆದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 1939ರಲ್ಲಿ ಕಾಲೋಚಿತ ಕೃಷಿ ಕಾರ್ಯಾಚರಣೆಗಳಿಗಾಗಿ ಸಹಕಾರಿ ಸಂಸ್ಥೆಗಳಿಗೆ ಮರುಹಣಕಾಸು ನೀಡಲು ಪ್ರಾರಂಭಿಸಿತು. 1948 ರಲ್ಲಿ ಕೇಂದ್ರ ಸಹಕಾರಿ ಬ್ಯಾಂಕುಗಳ ಸಾಲದ ಅಗತ್ಯಗಳನ್ನು ಪೂರೈಸಲು ರಾಜ್ಯ ಸಹಕಾರಿ ಬ್ಯಾಂಕುಗಳಿಗೆ ಮತ್ತು ಅವುಗಳ ಮೂಲಕ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಗೆ ಮರುಹಣಕಾಸು ನೀಡಲು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಾರಂಭಿಸಿತು. 1951ರಲ್ಲಿ ಕೇವಲ 3% ಗ್ರಾಮೀಣ ಕುಟುಂಬಗಳು ಕೃಷಿ ಸಾಲ ಪಡೆದವು. 1954ರಲ್ಲಿ, ಅಖಿಲ ಭಾರತ ಗ್ರಾಮೀಣ ಸಾಲ ಸಮೀಕ್ಷೆ ಸಮಿತಿಯು ರೈತರ ಸಮಸ್ಯೆಗಳನ್ನು ಪರಿಹರಿಸಲು ಡಿಸಿಸಿ ಬ್ಯಾಂಕುಗಳು ಮತ್ತು ಪಿಎಸಿಎಸ್ ಅನ್ನು ಸರ್ಕಾರದ ಸಹಭಾಗಿತ್ವ ಮತ್ತು ಪೋಷಣೆಯೊಂದಿಗೆ ಬಲಪಡಿಸಲು ಶಿಫಾರಸು ಮಾಡಿತು. ಸಹಕಾರ ಸಂಘಗಳ ರಿಜಿಸ್ಟ್ರಾರ್ 1962ರಿಂದ ಆಯಾ ರಾಜ್ಯ ಕಾಯ್ದೆಗಳನ್ನು ಜಾರಿಗೆ ತಂದ ಅನಂತರದಲ್ಲಿ ಸಹಕಾರಿ ಸಂಘಗಳ ರಕ್ಷಕರಾದರು. ರಿಸರ್ವ್ ಬ್ಯಾಂಕ್ ಬೆಳೆ ಸಾಲಗಳಿಗೆ ಕಾಲೋಚಿತತೆ ಮತ್ತು ಹಣಕಾಸು ಪ್ರಮಾಣವನ್ನು ಪರಿಚಯಿಸಿತು. ವಿಪತ್ತುಗಳಿಂದ ಉಂಟಾಗುವ ಬೆಳೆ ನಷ್ಟವನ್ನು ಸರಿದೂಗಿಸಲು ಪರಿವರ್ತನೆ, ಬದಲಿ ಮತ್ತು ಮರು ಹೊಂದಿಕೆಯನ್ನು ಒದಗಿಸಿತು.
1964ರಲ್ಲಿ ಆರ್ ಬಿಐನ ಕ್ರಿಯಾ ಕಾರ್ಯಕ್ರಮದ ಅಡಿಯಲ್ಲಿ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ವಿವಿಧೋದ್ದೇಶಗಳಾದವು. ಪಿಎಸಿಎಸ್ ಅನ್ನು ಕಾರ್ಯ ಸಾಧ್ಯವಾದ ಘಟಕಗಳು, ಎಫ್ಎಸ್ ಸಿಎಸ್ ಮತ್ತು ಲ್ಯಾಂಪ್ ಗಳಾಗಿ ಮರು ಸಂಘಟಿಸುವುದು ಪ್ರಾರಂಭವಾಯಿತು. ಅಖಿಲ ಭಾರತ ಗ್ರಾಮೀಣ ಸಾಲ ಪರಿಶೀಲನಾ ಸಮಿತಿಯು ಸಹಕಾರಿ ಸಂಸ್ಥೆಗಳ ವ್ಯಾಪ್ತಿಯು ಕೇವಲ 30% ರೈತರಿಗೆ ಸೀಮಿತವಾಗಿದೆ ಎಂದು ಕಂಡುಕೊಂಡಿದ್ದು ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಕಾರಣವಾಯಿತು. ಆದಾಗ್ಯೂ, ಸಹಕಾರಿ ಸಂಸ್ಥೆಗಳು ದುರ್ಬಲ ವರ್ಗದ ರೈತರ ಸಾಲದ ಅಗತ್ಯಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತ ಬಂದಿವೆ. 1975ರಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಸ್ಥಾಪನೆಯು ಗ್ರಾಮೀಣ ಸಾಲದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ. ಅವು ಕೇವಲ 6% ರೈತರನ್ನು ತಲುಪಿರುವುದು ಇದಕ್ಕೆ ಕಾರಣ. 20 ಅಂಶಗಳ ಕಾರ್ಯಕ್ರಮ ಮತ್ತು ಸಮಗ್ರ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮದ ಅನುಷ್ಠಾನದಲ್ಲಿ ಸಹಕಾರಿ ಸಂಸ್ಥೆಗಳು ತಮ್ಮ ಕೊಡುಗೆ ನೀಡಿವೆ. ಸಹಕಾರಿ ಸಂಘಗಳು 1991ರವರೆಗೆ ಗ್ರಾಮೀಣ ಸಾಲದಲ್ಲಿ ಹಿಂದುಳಿದಿದ್ದರೂ, 1991 ಮತ್ತು ೨೦೦೧ರ ನಡುವೆ ಗ್ರಾಮೀಣ ಬೆಳೆ ಸಾಲಗಳಲ್ಲಿ 62% ಪಾಲನ್ನು ಪಡೆಯುವ ಮೂಲಕ ತಮ್ಮ ಪ್ರಧಾನ ಸ್ಥಾನವನ್ನು ಮರಳಿ ಪಡೆದವು. ಸಹಕಾರಿ ವಲಯ ಮತ್ತು ಗ್ರಾಮೀಣಾಭಿವೃದ್ಧಿ: ಭಾರತದ ಗ್ರಾಮೀಣ ಆರ್ಥಿಕತೆಯು ಇನ್ನೂ ಹೆಚ್ಚಾಗಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಮೇಲೆ ಅವಲಂಬಿತವಾಗಿದೆ. ಈ ವಲಯಗಳ ಮೇಲೆ ಸಹಕಾರ ಸಂಘಗಳು ಪರಿವರ್ತಕ ಪರಿಣಾಮವನ್ನು ಬೀರುತ್ತವೆ. ಉದಾಹರಣೆಗೆ, ಕೃಷಿ ಸಹಕಾರಿ ಸಂಸ್ಥೆಗಳು ದೇಶದ ಒಟ್ಟು ಕೃಷಿ ಸಾಲ ವಿತರಣೆಯ ಸರಿಸುಮಾರು 36% ಅನ್ನು ನಿರ್ವಹಿಸುತ್ತವೆ ಮತ್ತು ಅಗತ್ಯ ವಸ್ತುಗಳ ಸಂಗ್ರಹಣೆ ಮತ್ತು ವಿತರಣೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ.
ಸಕ್ಕರೆ ಸಹಕಾರಿ ಸಂಘಗಳು ಭಾರತದ ಒಟ್ಟು ಕಬ್ಬಿನ ಸುಮಾರು ಶೇ 40ರಷ್ಟು ಸಂಗ್ರಹಿಸುವ ಜವಾಬ್ದಾರಿಯನ್ನು ಹೊಂದಿವೆ. ಸಕ್ಕರೆ ಸಹಕಾರಿ ಸಂಘಗಳು ದೇಶದ ಸಕ್ಕರೆ ಉತ್ಪಾದನೆಗೆ ಸುಮಾರು ಶೇ.45ರಷ್ಟು ಕೊಡುಗೆ ನೀಡುತ್ತವೆ. ಹೈನುಗಾರಿಕೆ ಕ್ಷೇತ್ರವು ಗ್ರಾಮೀಣ ಭಾರತದ ಸಹಕಾರಿ ಸಂಸ್ಥೆಗಳ ಮತ್ತೊಂದು ಗಮನಾರ್ಹ ಯಶೋಗಾಥೆಯಾಗಿದೆ. ಈ ಸಹಕಾರಿ ಸಂಸ್ಥೆಗಳು ಗ್ರಾಮೀಣ ಕುಟುಂಬಗಳನ್ನು, ವಿಶೇಷವಾಗಿ ಮಹಿಳೆಯರನ್ನು ಸ್ಥಿರವಾದ ಆದಾಯದ ಮೂಲವನ್ನು ಒದಗಿಸುವ ಮೂಲಕ ಸಬಲೀಕರಣಗೊಳಿಸುತ್ತವೆ. ಡೈರಿ ಸಹಕಾರಿ ಸಂಘಗಳ ಯಶಸ್ಸು ಜೀವನೋಪಾಯವನ್ನು ಸುಧಾರಿಸಿದೆ ಮಾತ್ರವಲ್ಲದೆ ವಾರ್ಷಿಕ 220 ಮಿಲಿಯನ್ ಮೆಟ್ರಿಕ್ ಟನ್ ಉತ್ಪಾದನೆಯೊಂದಿಗೆ ಭಾರತವು ಜಾಗತಿಕವಾಗಿ ಅತಿದೊಡ್ಡ ಹಾಲು ಉತ್ಪಾದಕನಾಗಲು ಕೊಡುಗೆ ನೀಡಿದೆ. ಕೃಷಿ ಮತ್ತು ಹೈನುಗಾರಿಕೆಯ ಜೊತೆಗೆ, ಸಹಕಾರಿ ಸಂಸ್ಥೆಗಳು ಮೀನುಗಾರಿಕೆ, ಗ್ರಾಮೀಣ ಸಾಲ, ವಸತಿ ಮತ್ತು ಜವಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇದು ನಿರ್ಣಾಯಕ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.
ಭಾರತದಲ್ಲಿ ಸಹಕಾರಿ ಸಂಸ್ಥೆಗಳ ಅಸ್ತಿತ್ವ ಮತ್ತು ಯಶಸ್ಸು:
ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಆಪರೇಟಿವ್ ಲಿಮಿಟೆಡ್ (IFFCO):
ಇಂಡಿಯನ್ ಫಾರ್ಮರ್ ಫರ್ಟಿಲೈಸರ್ ಕೋ-ಆಪರೇಟಿವ್ ಲಿಮಿಟೆಡ್ (ಇಫ್ಕೊ) ವಿಶ್ವದ ಅತಿದೊಡ್ಡ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿದೆ ಮತ್ತು ವಿಶ್ವದ ಅತಿದೊಡ್ಡ ರಸಗೊಬ್ಬರ ಸಹಕಾರಿಯಾಗಿದೆ. ಇದರ ವಿಶಾಲ ಜಾಲವು ಭಾರತ ಮತ್ತು ವಿಶ್ವದ ಎಲ್ಲಾ ಮೂಲೆಗಳಲ್ಲಿ ೫.೫ ಕೋಟಿ ರೈತರನ್ನು ತಲುಪಿದೆ. ಅಮುಲ್: ಮಧ್ಯವರ್ತಿಗಳು ಮತ್ತು ಅವರ ಶೋಷಣೆಯನ್ನು ತೊಡೆದುಹಾಕಲು ಅಮುಲ್ ಅನ್ನು 1946ರಲ್ಲಿ ಕೈರಾ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ (ಕೆಡಿಸಿಎಂಪಿಯುಎಲ್) ಆಗಿ ಆನಂದ್ ಎಂಬ ಹಳ್ಳಿಯಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ, ಅಮುಲ್ ಭಾರತದ ಅತಿದೊಡ್ಡ ಆಹಾರ ಉತ್ಪನ್ನ ಮಾರುಕಟ್ಟೆ ಸಂಸ್ಥೆಯಾಗಿದ್ದು, ವಾರ್ಷಿಕ 38542 ಕೋಟಿ ರೂ. (ಯುಎಸ್ $ 5.1 ಬಿಲಿಯನ್) ವಹಿವಾಟು ಹೊಂದಿದೆ.
ಅಮುಲ್: ಡೈರಿ ಸಹಕಾರಿ ಕ್ರಾಂತಿ:
೧೯೪೬ರಲ್ಲಿ ಗುಜರಾತ್‌ನ ಆನಂದ್‌ನಲ್ಲಿ ಸ್ಥಾಪನೆಯಾದ ಅಮುಲ್ ಭಾರತದ ಅತಿದೊಡ್ಡ ಡೈರಿ ಸಹಕಾರಿ ಸಂಸ್ಥೆಯಾಗಿ ಬೆಳೆದಿದೆ . ಮೂಲತಃ ಶೋಷಣೆಯ ಮಧ್ಯವರ್ತಿಗಳನ್ನು ತೊಡೆದುಹಾಕಲು ಸ್ಥಾಪಿಸಲಾದ ಅಮುಲ್ ಈಗ ಭಾರತದಾದ್ಯಂತ ಲಕ್ಷಾಂತರ ಡೈರಿ ರೈತರಿಗೆ ಸೇವೆ ಸಲ್ಲಿಸುತ್ತಿದೆ. ವಾರ್ಷಿಕ ₹೩೮,೫೪೨ ಕೋಟಿ (USD ೫.೧ ಶತಕೋಟಿ) ವಹಿವಾಟು ಹೊಂದಿರುವ AMUL ಸಹಕಾರಿ ಸಂಸ್ಥೆಗಳು ಗ್ರಾಮೀಣ ಸಮುದಾಯಗಳನ್ನು ಹೇಗೆ ಸಬಲಗೊಳಿಸಬಹುದು ಮತ್ತು ನ್ಯಾಯಯುತ ವ್ಯಾಪಾರವನ್ನು ಖಚಿತಪಡಿಸಿಕೊಳ್ಳಬಹುದು ಎಂಬುದಕ್ಕೆ ಒಂದು ಉಜ್ವಲ ಉದಾಹರಣೆಯಾಗಿದೆ.
ಸಿಟ್ಟಿಲಿಂಗಿ ಸಾವಯವ ರೈತರ ಸಂಘ (ಸೋಫಾ):
೨೦೦೪ರಲ್ಲಿ ನಾಲ್ಕು ಬುಡಕಟ್ಟು ರೈತರೊಂದಿಗೆ ಸಿಟ್ಟಿಲಿಂಗಿ ಸಾವಯವ ರೈತರ ಸಂಘ (ಸೋಫಾ) ರೂಪುಗೊಂಡಿತು. ಈ ಸಂಖ್ಯೆ ೨೦೦೮ರಲ್ಲಿ ೫೭ಕ್ಕೆ ಏರಿತು. ಬುಡಕಟ್ಟು ರೈತರಿಗೆ ಸಾವಯವ ಕೃಷಿಯಲ್ಲಿ ತರಬೇತಿ ನೀಡುವ ಮತ್ತು ಅವರ ಬೆಳೆಗಳನ್ನು ಮಾರಾಟ ಮಾಡಲು ಸಹಾಯ ಮಾಡುವ ಉದ್ದೇಶದಿಂದ ಸೋಫಾ ೨೦೦೮ರಲ್ಲಿ ಸಹಕಾರಿ ಸೊಸೈಟಿಯಾಗಿ ನೋಂದಾಯಿಸಲ್ಪಟ್ಟಿತು.
ಕೇರಳ ದಿನೇಶ್ ಬೀಡಿ ಕಾರ್ಮಿಕರ ಕೇಂದ್ರ ಸಹಕಾರಿ ಸೊಸೈಟಿ:
1969ರಲ್ಲಿ ಕೇರಳದ ಕಣ್ಣೂರಿನಲ್ಲಿ ಸ್ಥಾಪಿತವಾದ ಈ ಸಹಕಾರಿ ಸಂಘವು ಶೋಷಣೆಯನ್ನು ಎದುರಿಸಿದ ಖಾಸಗಿ ವಲಯದ ಸಹವರ್ತಿಗಳಿಗಿಂತ ಭಿನ್ನವಾಗಿ ಕಾರ್ಮಿಕರಿಗೆ ಉತ್ತಮ ವೇತನ, ಕೆಲಸದ ಪರಿಸ್ಥಿತಿಗಳು ಮತ್ತು ಸಾಮಾಜಿಕ ಭದ್ರತೆಯನ್ನು ನೀಡುವ ಮೂಲಕ ಬೀಡಿ ಉದ್ಯಮವನ್ನು ಪರಿವರ್ತಿಸಿತು. 1969 ರಿಂದ 1990ರವರೆಗಿನ ಅವಧಿಯು ಕೆಡಿಬಿಯ ಸುವರ್ಣ ಯುಗವಾಗಿತ್ತು. ಈ ಅವಧಿಯಲ್ಲಿ, ಇದು ಸುಮಾರು 42000 ಕಾರ್ಮಿಕರಿಗೆ ಉದ್ಯೋಗ ನೀಡುವ ಮೂಲಕ ಪ್ರಮುಖ ಮತ್ತು ಮಾದರಿ ಸಹಕಾರಿ ಉದ್ಯಮವಾಗಿ ಬೆಳೆಯಿತು. ಕೇರಳದ ದಿನೇಶ್ ಬೀಡಿ ಕಾರ್ಮಿಕರ ಸಹಕಾರ ಸಂಘವು ಭಾರತದಲ್ಲಿ ಕಾರ್ಮಿಕರ ಕಲ್ಯಾಣಕ್ಕೆ ಮಾದರಿಯಾಯಿತು.
ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್):
ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ದಕ್ಷಿಣ ಭಾರತದ ಅತಿದೊಡ್ಡ ಸಹಕಾರಿ ಡೈರಿ ಒಕ್ಕೂಟವಾಗಿದ್ದು, ಕರ್ನಾಟಕದ ಹಾಲು ಉತ್ಪಾದಕರ ಒಡೆತನದಲ್ಲಿದೆ ಮತ್ತು ನಿರ್ವಹಿಸಲ್ಪಡುತ್ತದೆ. ಕರ್ನಾಟಕದ 13 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಮಟ್ಟದಲ್ಲಿ 12334 ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳಲ್ಲಿ ಕೆಎಂಎಫ್ 2.25 ಮಿಲಿಯನ್ ಹಾಲು ಉತ್ಪಾದಕರನ್ನು ಹೊಂದಿದೆ. ಹೈನುಗಾರಿಕೆ ಅಭಿವೃದ್ಧಿಯ ಮೂಲಕ ಗ್ರಾಮೀಣ ಸಮೃದ್ಧಿಯನ್ನು ತರುವುದು ಒಕ್ಕೂಟದ ಧ್ಯೇಯವಾಗಿದೆ.
ನಬಾರ್ಡ್ (ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್):
ನಬಾರ್ಡ್ ರಾಜ್ಯ ಸಹಕಾರಿ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಇತರ ಗ್ರಾಮೀಣ ಹಣಕಾಸು ಸಂಸ್ಥೆಗಳಿಗೆ ಮರು ಹಣಕಾಸು ಒದಗಿಸುತ್ತದೆ. ಇದು ಕೃಷಿ ಹಣಕಾಸು ಕೇಂದ್ರದಿಂದ ಅನುಮೋದಿಸಲ್ಪಟ್ಟ ಯಾವುದೇ ಸಂಸ್ಥೆಗಳಿಗೆ ದೀರ್ಘಾವಧಿ ಸಾಲಗಳನ್ನು ಸಹ ಒದಗಿಸುತ್ತದೆ. ನಬಾರ್ಡ್ ಅಂದಾಜಿನ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ವಿತರಿಸಲಾಗುವ ಒಟ್ಟು ಸಾಲದಲ್ಲಿ ಗ್ರಾಮೀಣ ಸಹಕಾರಿ ಸಂಸ್ಥೆಗಳು ಸುಮಾರು ೨೦% ನಷ್ಟು ಪಾಲನ್ನು ಹೊಂದಿವೆ, ಇದು ಆರ್ಥಿಕ ಸೇರ್ಪಡೆ ಮತ್ತು ಉದ್ಯಮಶೀಲತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ಭಾರತದಲ್ಲಿ ಸಹಕಾರಿ ಸಂಸ್ಥೆಗಳ ಭವಿಷ್ಯ
ಸಹಕಾರ ಆಂದೋಲನವು ವಿಕಸನಗೊಳ್ಳಲು ಮತ್ತು ವಿಸ್ತರಿಸಲು ಮುಂದುವರೆಯುತ್ತದೆ, ಇದು ಭಾರತದ ಗ್ರಾಮೀಣ ಆರ್ಥಿಕತೆಯ ಮೂಲಾಧಾರವಾಗಿದೆ. ಆದಾಗ್ಯೂ, ಸಹಕಾರಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ತಲುಪಲು ಹಣಕಾಸಿನ ಸೇರ್ಪಡೆ, ಸಾಲದ ಪ್ರವೇಶ ಮತ್ತು ತಾಂತ್ರಿಕ ಪ್ರಗತಿಗಳಂತಹ ಸವಾಲುಗಳನ್ನು ಪರಿಹರಿಸಬೇಕಾಗಿದೆ.
ಸುಧಾರಣೆಯಾಗಬೇಕಾದ ಪ್ರಮುಖ ಕ್ಷೇತ್ರಗಳು:
ತಾಂತ್ರಿಕ ಏಕೀಕರಣ: ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ತಂತ್ರಜ್ಞಾನದೊಂದಿಗೆ ಸಹಕಾರಿ ವ್ಯವಸ್ಥೆಗಳನ್ನು ಆಧುನೀಕರಿಸುವುದರಿಂದ ದಕ್ಷತೆ, ಪಾರದರ್ಶಕತೆ, ವೇಗ, ಕಾರ್ಯಕ್ಷಮತೆ ಮತ್ತು ಸೇವಾ ವಿತರಣೆಯನ್ನು ಸುಧಾರಿಸುತ್ತದೆ.
ಹಣಕಾಸಿನ ಬೆಂಬಲ: ಸಹಕಾರಿ ಸಂಘಗಳ ಬೆಳವಣಿಗೆ ಮತ್ತು ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ನಬಾರ್ಡ್ ಮತ್ತು ಆರ್ ಬಿಐ ಅಂತಹ ಹಣಕಾಸು ಸಂಸ್ಥೆಗಳ ನಿರಂತರ ಬೆಂಬಲವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ತರಬೇತಿ ಮತ್ತು ಜಾಗೃತಿ: ಸಹಕಾರಿ ಮಾದರಿಗಳು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಗ್ರಾಮೀಣ ಜನರಿಗೆ ಶಿಕ್ಷಣ ನೀಡುವುದು ಹೆಚ್ಚು ಸಕ್ರಿಯ ಭಾಗವಹಿಸುವಿಕೆ ಮತ್ತು ಅಭಿವೃದ್ಧಿಗೆ ಕಾರಣವಾಗಬಹುದು. ಈ ಪ್ರಯತ್ನಗಳೊಂದಿಗೆ, ಸಹಕಾರಿ ಸಂಸ್ಥೆಗಳು ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ವಿಶೇಷವಾಗಿ ಕೃಷಿ, ಗ್ರಾಮೀಣ ಕೈಗಾರಿಕೆಗಳು ಮತ್ತು ಬಡತನ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದನ್ನು ಮುಂದುವರಿಸುತ್ತವೆ.
ಹನಿ ಹನಿ ಕೂಡಿ ಹಳ್ಳ; ತೆನೆ ತೆನೆ ಕೂಡಿ ರಾಶಿ ಎಂಬ ಮಾತಿದೆ. ಉಳಿವಿಗಾಗಿ ಚಿಂತಿಸಬೇಕಿದೆ. ಕೊರೊನಾ ಅದನ್ನು ಕಲಿಸಿದೆ ಎಂಬುದು ನಿಸ್ಸಂದೇಹ. ಸಹಕಾರ ಸಂಘಗಳ ಅಸ್ಮಿತೆಯಿರುವುದು ಇಂಥ ಉಳಿವಿನ ಚಿಂತನೆಯಲ್ಲಿ! ಭಾರತೀಯ ಪರಂಪರೆಯಲ್ಲಿ ಜಾತಿಮತಗಳ ಬೇಧವಿಲ್ಲದೆ ಗ್ರಾಮ ಗ್ರಾಮಗಳಲ್ಲೂ ಸಹಕಾರದ ಬದುಕು ಅವ್ಯಾಹತವಾಗಿ ಇದ್ದೇ ಇತ್ತು, ಈಗಲೂ ಇದೆ. ಸಹಕಾರ ತತ್ವ ಮತ್ತು ಧ್ಯೇಯವೂ ಇಂಥ ಪರಂಪರೆಯ ಬದುಕೇ ಆಗಿರುವುದರಿಂದ ಗ್ರಾಮೀಣ ಆರ್ಥಿಕತೆಗೆ ಸದೃಢವಾಗಿ ಪೂರಕವಾಗಿ ನಿಲ್ಲಬಲ್ಲ ಸಹಕಾರ ಸಂಘಗಳು ಭಾರತದಂಥ ರಾಷ್ಟ್ರಕ್ಕೆ ಯಾವತ್ತೂ ಅನಿವಾರ್ಯವೂ, ಅತ್ಯಗತ್ಯವೂ ಎಂಬುದನ್ನು ಮನಗಂಡ ಕೇಂದ್ರ ಮತ್ತು ಪ್ರತಿ ರಾಜ್ಯ ಸರ್ಕಾರಗಳು ಇದರ ಶ್ರೇಯೋಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದೆ. ಸಹಕಾರಿ ಸಂಸ್ಥೆಗಳು ತಮ್ಮ ಸದಸ್ಯರು, ಪೂರೈಕೆದಾರರು, ಗ್ರಾಹಕರು ಮತ್ತು ಕಾರ್ಮಿಕರಂತಹ ತಮ್ಮ ಪಾಲುದಾರರಿಗೆ ಸಹಾಯ ಮಾಡಲು ಹೆಸರುವಾಸಿಯಾಗಿವೆ. ಇದಲ್ಲದೆ, ಗ್ರಾಮೀಣ ಭಾರತದಲ್ಲಿ ಸಹಕಾರಿ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುವುದರಿಂದ, ಅವುಗಳ ಯಶಸ್ಸು ಅನೇಕ ಗ್ರಾಮಸ್ಥರ ಜೀವನಮಟ್ಟದಲ್ಲಿ ಸುಧಾರಣೆಗೆ ಕಾರಣವಾಗಿದೆ. ಹೀಗಾಗಿ, ಭಾರತದಲ್ಲಿ ಸಹಕಾರಿ ಸಂಸ್ಥೆಗಳ ಯಶಸ್ಸು ಭಾರತೀಯ ಆರ್ಥಿಕತೆಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ ಎಂಬುದಂತೂ ಅಪ್ಪಟ ಸತ್ಯ!
(ಆಧಾರ: ಅಂತರ್ಜಾಲ)
- ಟಿ. ದೇವಿದಾಸ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ