ಉದ್ಯಮ ನೇತಾರರ ಮನವಿಗೆ ಸ್ಪಂದಿಸಿದ ಕರ್ನಾಟಕ ಸರ್ಕಾರ
ವರದಿ: ರಾಮಚಂದ್ರ ಮುಳಿಯಾಲ
ಬೆಂಗಳೂರು: ಸಾಮಾಜಿಕ ಹಾಗೂ ಹಣಕಾಸು ಕ್ಷೇತ್ರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮುಂದಿನ ವರ್ಷವೇ ಡೇಟಾ ಸಾರ್ವತ್ರೀಕರಣ ನೀತಿ ಪ್ರಕಟಿಸುವುದಾಗಿ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಟೆಕ್ ಶೃಂಗಸಭೆಯ ಮೊದಲ ದಿನ ನಡೆದ ‘ಭಾರತ 2030ಕ್ಕೆ ಎಐ’ ಕುರಿತ ಸಂವಾದಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು ಉದ್ಯಮ ನೇತಾರರ ಮನವಿಗೆ ಸ್ಪಂದಿಸಿ ಈ ವಾಗ್ದಾನ ನೀಡಿದ್ದಾರೆ.
ಡೇಟಾ ವಿನಿಮಯವನ್ನು ಹೇಗೆ ನಡೆಸಬೇಕು ಎಂಬುದನ್ನು ಸರ್ಕಾರದ ಮಟ್ಟದಲ್ಲಿ ಯೋಜಿಸಿ ಕಾರ್ಯರೂಪಕ್ಕಿಳಿಸಬೇಕಿದೆ. ಸ್ಟಾರ್ಟಪ್‌ಗಳು ಹಾಗೂ ಕಂಪನಿಗಳೊಂದಿಗೆ ಡೇಟಾ ವಿನಿಮಯ ನಡೆಸುವುದರಿಂದ ಕೃಷಿ, ಸರ್ಕಾರಿ ಯೋಜನೆಗಳು, ಫಿನ್‌ಟೆಕ್, ಸೈಬರ್ ಭದ್ರತೆ ಹಾಗೂ ನಾಗರಿಕ ಸೇವೆಗಳಿಗೆ ನೆರವಾಗಲಿದೆ. ಇದರಿಂದ ಇ-ಆಡಳಿತವನ್ನು ಪ್ರಶಸ್ತವಾಗಿ ಜಾರಿಗೊಳಿಸಲು ಸಾಧ್ಯವಾಗಲಿದೆ. ಉದ್ಯಮದೊಂದಿಗೆ ಸೌಹಾರ್ದ ಮಾತುಕತೆಗೆ ಅವಕಾಶ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸಚಿವರು ಹೇಳಿದರು.
ತಂತ್ರಜ್ಞಾನ ಬೆಳೆಯುತ್ತಾ ಹೋದಂತೆ ನೈತಿಕತೆ-ಅನೈತಿಕತೆಯ ನಡುವೆ ಗೆರೆ ಎಳೆಯುವುದು ಸರ್ಕಾರಕ್ಕೆ ಸವಾಲಾಗುತ್ತಿದೆ. ಈ ಕುರಿತು ಸ್ಪಷ್ಟ ನೀತಿ ರೂಪಿಸಲು ತಜ್ಞರು, ಉದ್ಯಮ ತಜ್ಞರು ಹಾಗೂ ಸರ್ಕಾರದ ನಡುವೆ ಚರ್ಚೆ ನಡೆಯಬೇಕು. ಉದ್ಯಮವು ಎಚ್ಚರಿಕೆಯ ಹೆಜ್ಜೆಯಿಡಬೇಕು. ನೈತಿಕತೆ ಪ್ರಶ್ನೆ ಬಂದಾಗ ನಾವು ಒಂದಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಉದ್ಯಮ ನೇತಾರರಿಗೆ ಸಚಿವರು ಕಿವಿಮಾತು ಹೇಳಿದರು.
ಐಟಿ ಕಂಪನಿಗಳು ರೂಪಿಸುವ ನವೀನ ತಂತ್ರಜ್ಞಾನಗಳಿಗೆ ಸರ್ಕಾರವೇ ಮೊದಲ ಗ್ರಾಹಕನಾಗಿದೆ. ಪೈಲಟ್ ಪ್ರೊಜೆಕ್ಟ್‌ಗಳನ್ನು ಉದ್ಯಮಗಳಿಗೆ ಸರ್ಕಾರವೇ ನೀಡುತ್ತಿದೆ. ಜತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗೂ ಅವಕಾಶ ಕಲ್ಪಿಸುತ್ತಿದೆ. ಬೇರೆ ಯಾವ ರಾಜ್ಯವೂ ಮಾಡದ ಸಾಧನೆಯನ್ನು ಕರ್ನಾಟಕ ಮಾಡುತ್ತಿದೆ ಎಂದು ಸಚಿವ ಖರ್ಗೆ ಹೇಳಿದರು.
ಡೇಟಾ ಹಂಚಿಕೆಗೆ ಉದ್ಯಮಿಗಳ ಮನವಿ:
ಇದಕ್ಕೂ ಮುನ್ನ ಸಂವಾದದಲ್ಲಿ ಮಾತನಾಡಿದ ರಝೋರ್‌ಪೇ ಸಂಸ್ಥಾಪಕ ಹರ್ಷಿಲ್ ಮಾಥುರ್ ಹಾಗೂ ಸಿಸ್ಕೋ ಅಧ್ಯಕ್ಷೆ ಡೈಸಿ ಚಿತ್ತಿಪಲ್ಲಿ ಅವರು, ಶ್ರೀಸಾಮಾನ್ಯರಿಗೆ ಎಐಯ ಸಂಪೂರ್ಣ ಲಾಭವನ್ನು ಒದಗಿಸುವ ಸಲುವಾಗಿ ಸಾಮಾಜಿಕ ಸೇವೆಗಳಿಗೆ ಡೇಟಾದ ಜವಾಬ್ದಾರಿಯುತ ಬಳಕೆಗಾಗಿ ಡೇಟಾದ ಸಾರ್ವತ್ರೀಕರಣಕ್ಕೆ ಸರ್ಕರ ಮುಂದಾಗಬೇಕು. ಮುಕ್ತ ಡೇಟಾ ನೀತಿಯನ್ನು ಸರ್ಕಾರ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ