ವಾಸ್ತವ: ಕೃಷಿಯಲ್ಲಿ ಜನರೇಶನ್ ಎಂಡ್...

Upayuktha
0


ಗ್ಗೆ ಮೂವತ್ತು ವರ್ಷಗಳ ಹಿಂದಿನ ತನಕವೂ ಭಾರತೀಯ ಎಲ್ಲಾ ವೃತ್ತಿ ಪರಂಪರೆಯಲ್ಲೂ ತಲಾಂತರತೆ ಇತ್ತು. ಅಪ್ಪ ಮಗ ಮೊಮ್ಮಗ ಮರಿಮಗ ಸಂತತಿ ಮುಂದುವರಿಯುತ್ತಿತ್ತು. ಭಾರತದ ಎಲ್ಲಾ ಕುಲವೃತ್ತಿಗಳೂ ಅವಸಾನವಾಗಿ ಈಗುಳಿದದ್ದು ಕೃಷಿ ಮಾತ್ರ. ಚಮ್ಮಾರ ಕಮ್ಮಾರ ಕುಂಬಾರ ಸೊನಗಾರ ಸಿಂಪಿಗ ನೇಕಾರ ಹೀಗೆ ಎಲ್ಲಾ ವೃತ್ತಿಗಳೂ ತಲೆಮಾರಿನ ಕೊಂಡಿ ಕಳಚಿದೆ. 


ಕೃಷಿಯೂ ಈ ಮೂವತ್ತು ವರ್ಷಗಳ ಈಚೆ ಮೂಲ ಸ್ವರೂಪದಿಂದ ಬದಲಾಗುತ್ತಿದೆ. ಕೃಷಿ ಭಾವನಾತ್ಮಕತೆ ಕಳೆದುಕೊಂಡಿದೆ. ಕೃಷಿಕ ಅಪ್ಪ ತನ್ನ ಮಗನಿಗೆ ಕೃಷಿಯಲ್ಲಿ ಭವಿಷ್ಯದ ದಿಕ್ಕಿದೆ ಎಂದು ಕೃಷಿ ಬದುಕಿನ ಬಗ್ಗೆ ಆಸಕ್ತಿ ಮೂಡಿಸುತ್ತಿಲ್ಲ. ಕೃಷಿಗೆ ಮೂರು ನಾಲ್ಕನೇ ತಲೆಮಾರು ಬರುತ್ತಿಲ್ಲ...!!


ಇವತ್ತು ಯಾವುದೇ ಹಳ್ಳಿ ಊರಿನ (especially ಮಲೆನಾಡು ಕರಾವಳಿಯ) ಕೃಷಿಕರ ಮನೆ ಬಾಗಿಲು ತಟ್ಟಿದರೆ ಬಾಗಿಲು ತೆರೆವುದು ಅರವತ್ತು ದಾಟಿದವರೇ. ಇವತ್ತು ಹಳ್ಳಿಗಳ ಪ್ರತಿ ನೂರು ಮನೆಗಳಲ್ಲಿ ಇಪ್ಪತ್ತೈದು ಮನೆ ಸಂಪೂರ್ಣ ಖಾಲಿಯಾಗಿದೆ! ಅರವತ್ತೈದು ಮನೆಗಳಲ್ಲಿ ಐವತ್ತು ದಾಟಿ ದವರೇ ಅಧಿಕ...!! ಒಂದು ಹತ್ತು ಮನೆಗಳಲ್ಲಿ ಎರಡು ಮತ್ತು ಮೂರನೇ ತಲೆಮಾರಿನ ಪೀಳಿಗೆ ಕಾಣಬಹುದು...‌!! ಅದೆಷ್ಟೇ ದೊಡ್ಡ ಹಿಡುವಳಿದಾರರ ಮನೆಯಾದರೂ ಅಷ್ಟೆ. ಎಲ್ಲಾ ಕೃಷಿ ಕುಟುಂಬದ ಕಥೆಯೂ ಹೀಗೆಯೇ ಖಾಲಿ...!?


ಅಡಿಕೆ ಗೆ ಎಲೆಚುಕ್ಕಿ ಶಿಲೀಂಧ್ರ ರೋಗ ಬಂದಿದೆ. ಅಕ್ಟೋಬರ್ ಕಳೆದರೂ ಮಳೆಗಾಲ ಮುಗೀತಿಲ್ಲ. ಅಡಿಕೆ ಸುಗ್ಗಿ ನೆಡೆಯಬೇಕಾದ ಸಂದರ್ಭವಿದು.

ಆದರೆ ಅಡಿಕೆ ಎಲೆಚುಕ್ಕಿ ವಿವರ್ಣವಾದ ಹಸಿರು ಬಣ್ಣ ಅಡಿಕೆ ಬೆಳೆಗಾರರಿಗೆ ಮುಂದೇನು? ಎಂಬ ಪ್ರಶ್ನೆ ಮೂಡಿಸಿದೆ.


ಆದರೆ ಮುಂದೇನು? ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆಗೆ ಮಲೆನಾಡು ಕರಾವಳಿಯ ಬಹುತೇಕ ಕೃಷಿಕರು ತಲೆಮೇಲೆ ಕೈ ಹೊತ್ತು ಕೂತಿಲ್ಲ...!

ಏಕೆಂದರೆ ಅವರ ಮಕ್ಕಳು ಪಟ್ಟಣ ಸೇರಿ ಅಲ್ಲಿ ನೆಲೆ ಬದುಕು ಭವಿಷ್ಯ ಕಂಡಾಗಿದೆ...!!


ಮಲೆನಾಡು ಕರಾವಳಿಯ ಹಳ್ಳಿ ಮನೆಗಳು ಅನಿವಾಸಿ ಮಲೆನಾಡು ಮಕ್ಕಳಿಗೆ ದಸರಾ ದೀಪಾವಳಿ ಇತರೆ ರಜೆಯ ದಿನಗಳ ಕಳೆವ 

"ಹಾಲಿಡೆ ಹೋಮು" ಗಳಾಗಿದೆ...!! ಪಟ್ಟಣದಲ್ಲಿರುವ ತಮ್ಮ ಮಕ್ಕಳಿಗೆ ಇಲ್ಲಿನ ಅಡಿಕೆ ಬೆಳೆಗಾರರು ಹಿಂಗಾಗಿದೆ ಅಂದರೆ ಅವು "ಹೋಗಲಿ ಬಿಡಪ್ಪಾ" ಅಂತ ಸಮಾಧಾನ ಮಾಡ್ತಿದಾವೆ...!!


ಇವತ್ತು ಕೃಷಿ ಜಮೀನು ಹಳ್ಳಿಮನೆ ಕೃಷಿ ಭಾವನಾತ್ಮಕತೆಯ ಆರ್ಥಿಕತೆ (ತೆರಿಗೆ) ಇನ್ನಿತರ ಕಾರಣಕ್ಕೆ ಮಾತ್ರ ಮಾನ್ಯತೆ ಪಡೆದಿದೆ ಅಥವಾ ಉಳಿದಿದೆ...!! 


ಅಡಿಕೆ ಕೊಯ್ಲು ಎಂಬುದು ಮಲೆನಾಡಿನ ಲ್ಲಿ ಅಡಿಕೆ ಸುಲಿತದ ಸಮಯದಲ್ಲಿ ಅಡಿಕೆ ಸುಲಿಯುವ ಕಾರಣಕ್ಕೆ ಬೆಳೆಗಾರರಿಗೆ ನಾಕು  ಜನರ ಒಡನಾಟ.. ‌ಅಡಿಕೆ ಚಪ್ಪರದ ಕೆಳಗೆ ರಾತ್ರಿ ಹೊತ್ತಿಗೆ ನೆಡೆವ ಒಂದು ಸುಂದರವಾದ ಸಮಾಗಮದ ಸ್ಥಳವಾಗಿತ್ತು. ಆ ಗೌಜು ಗಮ್ಮತ್ತೇ ಬೇರೆ ಯಾಗಿತ್ತು..!! ಅಡಿಕೆ ಸುಲ್ತ, ಅಡಿಕೆ ಬೇಸುವ ಚಪ್ಪರದ ಮೇಲೆ ಹರಗುವ, ಇಳಿಸುವ, ಆರಿಸುವ ಮೂಟೆ ಮಾಡಿ ಮಂಡಿಗೆ ಕಳಿಸುವ ಒಂದು ಬಗೆಯ ಖುಷಿಯ ಧಾವಂತದ ನಿರಂತರವಾದ ಕೃಷಿ ಚಟುವಟಿಕೆಯ ಕಾರ್ಯಕ್ರಮವಾಗಿತ್ತು.


ಅಡಿಕೆ ತೋಟದ ಬೇಸಾಯ... ಬೇಸಾಯಕ್ಕೆ ಬೇಕಾದ ಗೊಬ್ಬರಕ್ಕಾಗಿ ಮನೆ ಸದಸ್ಯರಿಗಾಗಿ ಹಾಲಿಗಾಗಿ ಜಾನುವಾರುಗಳ ಸಾಕಣೆ...

ತುಂಬಿದ ಕೊಟ್ಟಿಗೆ. ದೊಡ್ಡ ಮನೆ, ಅವಿಭಕ್ತ ಕುಟುಂಬ, ನೆಂಟರಿಷ್ಟರು ಮದುವೆ ಹಬ್ಬ ಬಸುರು ಬಾಣಂತನ.... 


ಈಗೇನಿದೆ...? ಅಡಿಕೆ ಹಸಿ ಅಡಿಕೆಗೆ ಒಣ ಅಡಿಕೆ ಎಕ್ಸ್ ಚೇಂಜು.....!! ಕೊಟ್ಟಿಗೆ ಖಾಲಿ. ಮನೆ ಖಾಲಿ...!! 

ದೊಡ್ಡ ಜಮೀನ್ದಾರರ ಮನೆಯಲ್ಲಿ ಉಳಿದಿರುವ ಎರಡು ಹಿರಿಯ ಜೀವಗಳು ನೆಟ್ವರ್ಕ್ ಸಿಗುವ ಮರದ ಬೋಧಿಗೆಯ ಕಂಬದ ಬುಡದಲ್ಲಿ ‌ನಿಂತು ದೂರದ ಬೆಂಗಳೂರಿನ ಮಗನೋ ಮಗಳ ಜೊತೆಗೆ ಸಂವಹನ ಮಾಡಿ ಒಂದು ಬಗೆಯ ಸಮಾಧಾನ ಹೊಂದುತ್ತಾರೆ...!!! ಒಂಟಿತನವ ಗೆಲ್ಲುವ ಪ್ರಯತ್ನ ಮಾಡ್ತಾರೆ...!!!


ಒಂದು ಕಾಲದಲ್ಲಿ ಅಡಿಕೆ ಕೊಯ್ಲಿನ ಸಂಧರ್ಭದಲ್ಲಿ ಗಿಜಿಗಿಡುತ್ತಿದ್ದ ಅಂಗಳದಲ್ಲಿ ಈಗ ಯಾವತ್ತೂ ದಟ್ಟ ಮೌನ...!!

ಬಳ್ಳಜ್ಜಿ, ಬೀರ, ಕಿಟ್ಟ, ಗುಬ್ಬಿ, ಜಲಜರ ಅಡಿಕೆ ಸುಲಿತದ ಮಣೆಗಳು ಬತ್ತವಿಲ್ಲದ ಬೂತ ಬಂಗಲೆಯಂತಹ ಪಣತದ ಮೂಲೆಗೆ ಆತುಕೊಂಡು ಕುಂಬಾಗುತ್ತಿದೆ..! ಈಗ ಈ ಮಣೆಗಳನ್ನ ಕೇಳುವವರಿಲ್ಲ. ! 


ಮನೆ ಮನೆಯ ಸಾಂಪ್ರದಾಯಿಕ ಹಬ್ಬ ಹರಿದಿನ ಪೂಜೆ ಪುನಸ್ಕಾರಗಳು ನೆನಪಾಗಿ ಮುಗಿದು ಹೋಗುವ ದಾರಿಯಲ್ಲೇ ಮಲೆನಾಡಿನ ಅಡಿಕೆಗೂ ವಾಸಿಯಾಗದ ಖಾಯಿಲೆ ಬಂದು ಅಡಿಕೆಯೇ ಮುಂದಿನ ದಿನಗಳಲ್ಲಿ ಇಲ್ಲದಂತಾಗಿ ಮುಂದೊಂದು ದಿನ‌ ಈ ಹಿರಿ ಜೀವಗಳು ಅಳಿದ ಮೇಲೆ ಮತ್ತೆ ಇಡೀ ಪರಿಸರ ಕಾಡಾಗಿ ಕಾಡಲಿದೆಯೇ‌?


ಮೊದಲು ಅವಿಭಕ್ತ ಕುಟುಂಬಗಳು ಕಾಣೆಯಾದವು. ದೊಡ್ಡ ಮನೆಗಳು ಖಾಲಿಯಾದವು. ಗದ್ದೆ ಬೇಸಾಯ ನಿಂತು ಹೋಯಿತು. ಕೊಟ್ಟಿಗೆ ಖಾಲಿಯಾಯಿತು. ನೆಂಟರಿಷ್ಟರು ಬಂದು ಹೋಗುವುದು ನಿಂತು ಹೋಯಿತು. ಸ್ವಂತ ಅಡಿಕೆ ಸಂಸ್ಕರಣೆ ಮಾಡುವುದು ನಿಂತುಹೋಯಿತು. ಎಲ್ಲ ಖಾಲಿಯಾಗಿ ಎಲ್ಲ ಮುಗಿಯುತ್ತಿರುವಾಗ ಉಳಿದದ್ದೊಂದೇ ಕೃಷಿ ಬದುಕು.


ಅಡಿಕೆ ಕೃಷಿ: ಈಗ ಅಡಿಕೆ ಬೆಳೆಗೂ ಚೇತರಿಸಿಕೊಳ್ಳಲು ಆಗದ ಎಲೆಚುಕ್ಕಿ ಶಿಲೀಂಧ್ರ ರೋಗ, ಹಳದಿಎಲೆ ರೋಗ.

ಕಳೆದ ನಲವತ್ತು ಐವತ್ತು ವರ್ಷಗಳಲ್ಲಿ ಎಲ್ಲ ಮುಗಿಯುವಾಗ ಅಡಿಕೆ ಮರಗಳು ದೇವಸ್ಥಾನದ ದ್ವಜಸ್ತಂಭಗಳಂತೆ ನಾವೆಂದೂ ಶಾಶ್ವತವಾಗಿ ಇರುತ್ತೇವೆ ಎಂಬಂತೆ ಫಸಲು ನೀಡುತ್ತಾ ಇದೂವರೆಗೂ ಬಾಳಿ ಬದುಕಿ ಕೃಷಿಕರಿಗೆ ಬಾಳು ಭವಿಷ್ಯ ನೀಡಿದ್ದವು. ಈಗ ಈ ಮಿನಾರು- ಧ್ವಜ ಸ್ತಂಭದಂತಹ ಅಡಿಕೆ ಬೆಳೆಗೂ ಕುಂದು ಬಂದಿದೆ!

ಮಲೆನಾಡು ಕರಾವಳಿಯಲ್ಲಿ ಅಡಿಕೆಯೇ ಇಲ್ಲದ್ದನ್ನ ನೋಡುವ ದಿನಗಳು ಹತ್ತಿರದಲ್ಲಿದ್ದೇವೆ. ಮಲೆನಾಡು ಕರಾವಳಿಯ ಜಮೀನ್ದಾರರ ಬದುಕಿನ ಒಡನಾಡಿ ಅಡಿಕೆ ಬೆಳೆಯೇ ಇಲ್ಲವಾದರೆ? ಎಲ್ಲ ಮುಗಿದಿರುವಾಗ "ಅಡಿಕೆ ಕೃಷಿಯೂ ತನ್ನ ಕೆಲಸ ಮುಗೀತು" ಎನ್ನುವಂತೆ ಶಿಲೀಂದ್ರಕ್ಕೆ ಸೋತು ಶರಣಾಗಿದೆ...!!


"ಅಡಿಕೆಗೆ ಪರ್ಯಾಯ ಬೇಕಾ..!?" ಪರ್ಯಾಯ ಬೆಳೆ ಯಾರಿಗೆ ಬೇಕು...?

ಮಲೆನಾಡು ಕರಾವಳಿಯ ಅಡಿಕೆ ಕೃಷಿಕರ ಕುಟುಂಬದ ಅರವತ್ತು ಎಪ್ಪತ್ತು ವರ್ಷಗಳ ಹಿರಿಯ ಜೀವಗಳು ಬತ್ತಿದ ಕಣ್ಣಿಗಳಲ್ಲಿ ಅರ್ಧ ಕಳವಳ ಅರ್ಧ ನಿರ್ಲಿಪ್ತತೆ ಕಾಣಿಸುತ್ತಿದೆ. ‌ 

ಆದರೂ ಅಡಿಕೆಗೆ ಪರ್ಯಾಯ ಬೇಕು. ಆದರೆ ಪರ್ಯಾಯ ಕೃಷಿ ಮಾಡಲು ಬರುವವರು ಯಾರು...? ಯಾರಿಗಾಗಿ ಕೃಷಿ ಮುಂದುವರೆಯಬೇಕು!?

ಎಂಬ ಪ್ರಶ್ನೆಯೊಂದಿಗೆ....


ಈ ನಡುವೆ ನಡೆದಷ್ಟು ದಿನ ಈ ಕೃಷಿ ಬದುಕು ನಡೆಯಲಿ ಎಂಬ ಇಲ್ಲಿನ ಬಹುಸಂಖ್ಯಾತರೊಂದಿಗೆ ಇದೊಂದೇ ಬದುಕು ಭವಿಷ್ಯವಾಗಿರೋ ಅಲ್ಪಸಂಖ್ಯಾತರ ಧ್ವನಿ ಕ್ಷೀಣವಾಗಿದೆ...!!


- ಪ್ರಬಂಧ ಅಂಬುತೀರ್ಥ

9481801869

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top