ದೀಪಾವಳಿ ಆಚರಣೆ ಶುರುವಾಗಿದ್ದು ಹೇಗೆ...? ಯಾವಾಗಿನಿಂದ...?

Upayuktha
0


ಬೆಳಕಿನ ಹಬ್ಬವಾದ ದೀಪಾವಳಿ ರಾಮಾಯಣಕ್ಕೆ ತನ್ನ ಮೂಲವನ್ನು ಗುರುತಿಸಿದೆ. ರಾವಣನ ಸೋಲಿನ ನಂತರ ಭಗವಾನ್ ರಾಮ, ಸೀತೆ ಮತ್ತು ಲಕ್ಷ್ಮಣರು ಅಯೋಧ್ಯೆಗೆ ಮರಳಿದರು. ಅಯೋಧ್ಯೆಯಲ್ಲಿ ಜನರು ತಮ್ಮ ನಗರವನ್ನು ಮಣ್ಣಿನ ದೀಪಗಳಿಂದ ಬೆಳಗಿಸಿ ರಾಮನನ್ನು ಸ್ವಾಗತಿಸಿದರು. ವನವಾಸದ ಅಂತ್ಯ!! ಇದು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಸಂಕೇತಿಸುತ್ತದೆ. ದಕ್ಷಿಣದಲ್ಲಿ, ರಾಕ್ಷಸ ನರಕಾಸುರನ ಮೇಲೆ ಶ್ರೀಕೃಷ್ಣನ ವಿಜಯದ ಗೌರವಾರ್ಥವಾಗಿ ದೀಪಾವಳಿಯನ್ನು ಒಂದು ದಿನದ ಹಬ್ಬವಾಗಿ ಆಚರಿಸಲಾಗುತ್ತದೆ. ಜೈನ ಧರ್ಮದಲ್ಲಿ, ದೀಪಾವಳಿಯು ಭಗವಾನ್ ಮಹಾವೀರನ ಮೋಕ್ಷ (ಜ್ಞಾನೋದಯ) ಪ್ರಾಪ್ತಿಯ ವಾರ್ಷಿಕೋತ್ಸವವನ್ನು ಗುರುತಿಸುವ ಮಂಗಳಕರ ದಿನವಾಗಿದೆ. ಪೂರ್ವದಲ್ಲಿ ದೀಪಾವಳಿಯು ಕಾಳಿದೇವಿ, ಕಮಲಾತ್ಮಿಕಾ ದೇವಿಯ ಪುನರ್ಜನ್ಮವನ್ನು ಸ್ಮರಿಸುತ್ತದೆ. ಬೌದ್ಧರು ಸಹ ಪ್ರಬುದ್ಧ ದಿನವನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಗೌತಮ ಬುದ್ಧನು ತನ್ನ ಅನುಯಾಯಿಗಳೊಂದಿಗೆ 18 ವರ್ಷಗಳ ನಂತರ ಕಪಿಲವಸ್ತುವಿಗೆ ಮರಳಿದನು. ಅವರ ಮರಳುವಿಕೆಯನ್ನು ದೀಪದ ಹಬ್ಬ ಎಂದರೆ ಜ್ಞಾನದ ಸಂಕೇತವಾಗಿದೆ. 


ದೀಪಾವಳಿಯ ಐದು ದಿನಗಳಲ್ಲಿ ಪ್ರತಿಯೊಂದೂ ತನ್ನದೇ ಆದ ಪ್ರಾಮುಖ್ಯತೆ ಮತ್ತು ವಿಶಿಷ್ಟ ಆಚರಣೆ ಹೊಂದಿದೆ, ಅಲ್ಲಿ ಮೊದಲ ದಿನ -   ಆರಂಭವಾಗುವುದೇ ಆಶ್ವಯುಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನದಂದು. ಇದನ್ನು ನೀರು ತುಂಬುವ ಹಬ್ಬ ಎನ್ನುತ್ತಾರೆ. ಈ ದಿನದಂದು ಮನೆಯ ಹೆಂಗಳೆಯರು ತಮ್ಮ ಸ್ನಾನಗೃಹಗಳಲ್ಲಿ ಇರುವ ಹಂಡೆ, ಕೊಳಗಗಳನ್ನು ಚೆನ್ನಾಗಿ ಶುಭ್ರಗೊಳಿಸಿ ಅದಕ್ಕೆ ಸುಣ್ಣ ಮತ್ತು ಕೆಮ್ಮಣ್ಣುಗಳಿಂದ ಅಲಂಕರಿಸಿ, ಮಹಾಲಿಂಗನ ಬಳ್ಳಿ ಸುತ್ತಿ, ಗಂಡು ಮಕ್ಕಳು ಸ್ನಾನಗೃಹದಲ್ಲಿ ಇರುವ ಎಲ್ಲಾ ಪಾತ್ರೆಗಳಿಗೂ ನೀರು ತುಂಬಿಸಿಡುತ್ತಾರೆ. ಇಂದೆಲ್ಲಾ ಬಚ್ಚಲು ಮನೆಗಳಲ್ಲಿ ನೀರಿನ ಹಂಡೆಗಳೇ ಕಾಣೆಯಾಗಿರುವಾಗ, ಸಾಂಕೇತಿಕವಾಗಿ ಮನೆಯಲ್ಲಿ ಇರಬಹುದಾದ ಬಾಯ್ಲರ್ ಅಥವಾ ಗೀಜರ್ ಗಳಿಗೆ ಅಲಂಕಾರ ಮಾಡುತ್ತಾರೆ. ಈ ರೀತಿ ಶುಚಿತ್ವ ಮತ್ತು ಸಾತ್ವಿಕ ಅನಭೂತಿಯ ಕ್ಷಣಗಳು. ಅವುಗಳಿಗೆ ಪೂಜೆ, ಮಂಗಳಾರತಿ ಮಾಡುತ್ತಾರೆ. 


ಎರಡನೇ ದಿನ- ದೀಪಾವಳಿಯ ಎರಡನೇ ದಿನವಾದ ನರಕ ಚತುರ್ದಶಿಯಂದು, ಶ್ರೀಕೃಷ್ಣ ಪರಮಾತ್ಮ ನರಕಾಸುರನನ್ನು ವಧಿಸಿ, ಜಗತ್ತನ್ನು ಕಾಪಾಡಿದ ದಿನವೆಂದು ಆಚರಿಸಲಾಗುತ್ತದೆ. ಅಂದು ಆರತಿ ಮಾಡುವ ಸಂಪ್ರದಾಯ ವಿಶೇಷವಾಗಿರುತ್ತದೆ. ಸೂರ್ಯ ಮೂಡುವ ಮುನ್ನವೇ,ಬೆಳಗ್ಗಿನ ಬ್ರಾಹ್ಮೀ ಮುಹೂರ್ತದಲ್ಲಿ ಮನೆಯ ಹಿರಿಕಿರಿಯರರೆಲ್ಲರೂ ಸುಂದರವಾದ ಬಟ್ಟೆಗಳೊಂದಿಗೆ ಅಲಂಕಾರ ಮಾಡಿಕೊಂಡು,ಹೆಂಗಳೆಯರು ,ಅಕ್ಕಪಕ್ಕದವರು ಒಗ್ಗೂಡಿ ಎಲ್ಲರಿಗೂ ಆರತಿ ಮಾಡುತ್ತಾರೆ. ಹಾಗೆ ಮನೆಮನೆಗೆ ಹೋಗಿ ಆರತಿ ಮಾಡಿಸಿ ಕೊಂಡು ಬರುವ ಸಂಪ್ರದಾಯ ಉತ್ತರ ಕರ್ನಾಟಕದಲ್ಲಿ ಇದೆ!! ಇದು ದೀಪಾವಳಿಯ ವಿಶೇಷ. ದಸರಾ ದೇವರ ಹಬ್ಬ! ದೀಪಾವಳಿ ಮನುಷ್ಯರ ಹಬ್ಬ!!.. ದೀಪಾವಳಿಗೆ ಒಮ್ಮೆ ಯಾದರೂ ಆರುತಿ ಮಾಡಿಸಿ ಕೊಳ್ಳಲೇ ಬೇಕು ಎಂಬ ಸಂಪ್ರದಾಯ. ಹಿಂದಿನ ದಿನ ಸಿಂಗಾರಗೊಂಡ ಹಂಡೆಗಳಿಗೆ ಬೆಳಗಿನ ಜಾವವೇ ಉರಿ ಹಾಕಿ ಎಣ್ಣೆ ಹಚ್ಚಿಕೊಂಡು ಅಭ್ಯಂಗಸ್ನಾನ ಮಾಡಲೇ ಬೇಕು ಎಂಬ ಸಂಪ್ರದಾಯ. 


ಮೂರನೆ ದಿನ ಅಮವಾಸ್ಯೆ, ಈ ಅವಧಿಯಲ್ಲಿಲಕ್ಷ್ಮೀ ಕರುಣಾಮಯಿ ಚಂದ್ರನ ಕಟಾಕ್ಷ ಹೊಂದಿರುವುದರಿಂದ ಅವಳ ಪೂಜೆ ಸಮೃದ್ಧಿ,ಸಂಪತ್ತು ಹಾಗೂ ಆನಂದ ನೀಡುವಳು. ವ್ಯಾಪಾರಿಗಳಿಗೆ ಅತ್ಯಂತ ವಿಜೃಂಭಣೆಯ ದಿನ. ದೀಪಾವಳಿ ಸ್ವಚ್ಛತಾ ಕಾರ್ಯಕ್ರಮ ಎರಡು ದಿನ ಮುಂಚಿನಿಂದ ನಡೆಯುತ್ತದೆ.ಅಂದಿನ ರಾತ್ರಿ ಮನೆಯಲ್ಲಿನ ದರಿದ್ರ ಲಕ್ಷ್ಮಿಯನ್ನು ಹೊರಹಾಕುವ ಉದ್ದೇಶದಿಂದ ಲಕ್ಷ್ಮೀ ಪೂಜೆಯನ್ನು ಮಾಡಿ, ತಮ್ಮ ಮನೆಯಲ್ಲಿ ಹಾಗೂ ತಮ್ಮ ಅಂಗಡಿಗಳಲ್ಲಿ ಲಕ್ಷ್ಮಿಯ ವಿಗ್ರಹವನ್ನಿಟ್ಟು ಅದಕ್ಕೆ ತಮ್ಮಲ್ಲಿದ್ದ ಎಲ್ಲಾ ರೀತಿಯ ಆಭರಣಗಳು ಮತ್ತು ಧನಕನಕಾದಿಗಳಿಂದ ಸಿಂಗರಿಸಿ ಅಂಗಡಿ ಮುಂಗಟ್ಟುಗಳನ್ನು ಹೂವಿನಲಂಕಾರ ಮಾಡಿ ಪೂಜಿಸಿ ಪೂಜಿಸುತ್ತಾರೆ. ಅನೇಕ ವ್ಯಾಪಾರಿಗಳು ತಮ್ಮ ವ್ಯವಹಾರದ ಹೊಸ ಲೆಕ್ಕ ಪತ್ರಗಳನ್ನು ಬರೆಯುವ ಖಾತೆ ನೋಟ ಬುಕ್‌ಗಳನ್ನು ಪೂಜಿಸಿ ಲಕ್ಷ್ಮಿ ಮುಂದೆ ಇಡುತ್ತಾರೆ. ಅಂದಿನಿಂದ ಹೊಸ ಖಾತೆ ಬರೆಯಬಹುದು.


ಅಮವಾಸ್ಯೆಯಂದು, ಜನರು ಕುಬ್ಜ ಅವತಾರವನ್ನು ಧರಿಸಿ ಬಲಿಯನ್ನು ನರಕಕ್ಕೆ ತಳ್ಳಿದ ಭಗವಾನ್ ವಿಷ್ಣುವಿನ ಕಥಯ ರೂಪಕ ಪ್ರದರ್ಶನ ಮಾಡುತ್ತಾರೆ. ದೀಪಾವಳಿಯಲ್ಲಿ ಮಾತ್ರ ಬಲಿಯು ಮತ್ತೆ ಪ್ರಪಂಚವನ್ನು ಸುತ್ತಾಡಲು ಅನುಮತಿಸಲಾಗಿದೆ, ಭಗವಾನ್ ವಿಷ್ಣುವಿನ ಪ್ರೀತಿ, ಕರುಣೆ ಮತ್ತು ಜ್ಞಾನದ ಸಂದೇಶವನ್ನು ಹರಡಲು ಮತ್ತು ದಾರಿಯುದ್ದಕ್ಕೂ ದೀಪಗಳನ್ನು ಬೆಳಗಿಸುತ್ತಾರೆ.


ದೀಪಾವಳಿ ಹಬ್ಬದ ಎರಡನೇ ದಿನದಿಂದ ಆರಂಭಿಸಿ, ಕಾರ್ತಿಕ ಮಾಸವಿಡೀ ತಮ್ಮ ಮನೆಗಳ ಮುಂದೆ ದೀಪದ ಹಣತೆಗಳನ್ನು ಹಚ್ಚಿ ಇಡುತ್ತಾರೆ. ಈಗೆಲ್ಲಾ ಬಗೆ ಬಗೆಯ ವಿದ್ಯುತ್ ದೀಪಾಲಂಕಾರಗಳು, ದೀಪದ ಬುಟ್ಟಿಗಳನ್ನು ಹಚ್ಚಿ ಸಂಭ್ರಮಿಸುತ್ತಾರೆ. ಕಾರ್ತಿಕ ಬುಟ್ಟಿ ಎನ್ನುವರು.


ನಾಲ್ಕನೇ ದಿನ- ಕಾರ್ತಿಕ ಶುದ್ಧ ಪಾಡ್ಯಮಿ, ಬಲಿ ನರಕದಿಂದ ಹೊರಬಂದು ಭಗವಾನ್ ವಿಷ್ಣುವು ನೀಡಿದ ವರಗಳ ಪ್ರಕಾರ ಭೂಮಿಯನ್ನು ಆಳುತ್ತಾನೆ. ಉತ್ತರ ಕರ್ನಾಟಕದಲ್ಲಿ ಆಕಳ ಸಗಣಿಯಿಂದ ಮಾಡಿದ ಪಾಂಡವರನ್ನು ಬಾಗಿಲಿಗೆ ಇಟ್ಟು ಅವರ ಮುಂದೆ ದೀಪ ಹಚ್ಚುತ್ತಾರೆ. ಹಳ್ಳಿಗಳಲ್ಲಿ ಹಟ್ಟೆವ್ವ ಎಂದು ಸಗಣಿಯಿಂದ ಮಾಡಿದ ಕೊಂತಿಗಳನ್ನು ಇಟ್ಟು ಅದಕ್ಕೆ ಚಂಡು ಮತ್ತು ಅಡಿಕೆ ಹೂ ಇಟ್ಟು ಪೂಜಿಸಿ ಆರುತಿ ಮಾಡುವರು. ನಂತರ ಸಾಯಂಕಾಲ ಅವುಗಳನ್ನು ಸಾಲಾಗಿ ಮನೆಯ ಮಾಳಿಗೆಯ ಮೇಲೆ ಇಡುವರು. ಇವು ಬಿಸಿಲಿಗೆ ಒಣಗಿದಾಗ, ಮನೆಯ ಬಾಣಂತಿಯ ಅಗ್ಗಿಷ್ಟಿಕೆಯಲ್ಲಿ ಹಾಕಿ, ಬಾಣಂತಿಯರು ಕೈ, ಕಾಲು ಕಾಸಿಕೊಂಡರೆ ಆರೋಗ್ಯ ಎಂಬ ನಂಬಿಕೆ. ಬಲೀಂದ್ರನ ಪೂಜೆ, ಗೋ ಪೂಜೆ ಕೂಡ ಮಾಡುತ್ತಾರೆ.

 

ಐದನೇ ದಿನ- ಭಾಯಿ ದೂಜ್ ಎಂದೂ ಕರೆಯಲ್ಪಡುವ ಯಮ ದ್ವಿತೀಯವನ್ನು ಆಚರಿಸುತ್ತಾರೆ. ಯಮುನಾ ಅಂದರೆ ನದಿ ಯಮನ ತಂಗಿ. ಅವತ್ತಿನ ದಿನ ತಂಗಿ ಯಮುನಾ ಯಮನನ್ನು ಕರೆದು ಆತಿಥ್ಯ ನೀಡಿ ಕಳುಹಿಸುವಾಗ ಯಮ ತಂಗಿಗೆ ವರ ನೀಡುತ್ತಾನೆ. ನಿನಗೇನು ವರ ಬೇಕು ಎಂದು ತಂಗಿ ಯಮುನಾಳನ್ನು ಕೇಳಿದಾಗ, ನನಗೇನು ವರ ಬೇಡ, ನಾನು ಸಂತೋಷವಾಗಿದ್ದೇನೆ.ಇವತ್ತಿನ ದಿನ ಯಾವುದೇ ಸೋದರಿಯರು ತಮ್ಮ ಅಣ್ಣ ತಮ್ಮಂದಿರಿಗೆ ಆತಿಥ್ಯ ಕೊಡುತ್ತಾರೋ, ಅವರಿಗೆ ಆಯುರಾರೋಗ್ಯ, ಸಕಲ ಸಂಪತ್ತು ಕೊಟ್ಟು ಸೋದರ ಬಾಂಧವ್ಯ ಚೆನ್ನಾಗಿಟ್ಟಿರಲಿ ಎಂದು ಪ್ರಾರ್ಥಿಸುತ್ತಾಳೆ. ಯಮನಿಗೂ ಸಂತೋಷವಾಗಿ ಆಗಲಿ ಎಂದು ಹರಸುತ್ತಾನೆ. ಅಂದು ಸಹೋದರಿಯರು ತಮ್ಮ ಸಹೋದರರಿಗೆ ಆರುತಿ ಮಾಡುತ್ತಾರೆ. 


ಇನ್ನು ದೀಪಾವಳಿಯಲ್ಲಿ ಜನರು ಜೂಜಿನಲ್ಲಿ ತಮ್ಮ ಕೈಯನ್ನು ಪ್ರಯತ್ನಿಸುತ್ತಾರೆ. ಏಕೆಂದರೆ ಪಾರ್ವತಿ ದೇವಿಯ ಆಶೀರ್ವಾದ ಇದೆ ಎಂಬ ನಂಬಿಕೆ. ದಂತಕಥೆಯ ಪ್ರಕಾರ, ಈ ದಿನ ಪಾರ್ವತಿ ದೇವಿಯು ತನ್ನ ಪತಿ ಶಿವನೊಂದಿಗೆ ದಾಳಗಳನ್ನು ಆಡಿದಳು.


ಹೀಗೆ ತಮವನ್ನು ಕಳೆದು ಜ್ಞಾನವನ್ನು ಬೆಳಗಿಸುವುದು ದೀಪಾವಳಿ ಹಬ್ಬ. ಮಣ್ಣಿನ ಹಣತೆ ಶಾಂತಿ ಮತ್ತು ಸ್ಥಿರತೆಯ ಸಂಕೇತ. ಹಣತೆಯಿಂದ ಬೆಳಗುವ ದೀಪ ವಿದ್ಯೆ, ಮತ್ತು ಸಾತ್ವಿಕ ಜ್ಞಾನ ಬದುಕಿನಲ್ಲಿ ತುಂಬಲಿ ಎಂದು.


ದೀಪಾವಳಿ ಆಹಾರ: ದೀಪಾವಳಿ ಮಾನವರ ಹಬ್ಬ!! ಅದಕ್ಕೆ ವಿಶೇಷವಾಗಿ ಈ ಸಮಯದಲ್ಲಿ ಉಂಡಿ, ಚಕ್ಕುಲಿ, ಕೋಡುಬಳೆ, ಕರ್ಚಿಕಾಯಿ, ಲಾಡು, ಶಂಕರಪೋಳೆಯಂತಹ ಸ್ವಾದಿಷ್ಟ ಖಾದ್ಯ ಮನೆ ಮನೆಗಳನ್ನು ತಯಾರಿಸಿ ಹಂಚುತ್ತಾರೆ, ಉತ್ತರ ಕರ್ನಾಟಕದಲ್ಲಿ ಒಬ್ಬರನ್ನೊಬ್ಬರು ಮನೆಗೆ ಆಹ್ವಾನಿಸಿ ಉಪಹಾರ ನೀಡಿ, ಆರತಿ ಮಾಡಿ ಸತ್ಕರಿಸುತ್ತಾರೆ. ಹಿಂದಿನ ಕಾಲದಲ್ಲಿ ವಿಶೇಷ ತಿಂಡಿ, ಕರಿದ ಪದಾರ್ಥ ದಿನವೂ ಬೇಕರಿ ಅಂಗಡಿಗಳಲ್ಲಿ ಮಾರುತಿರಲಿಲ್ಲ, ಇವುಗಳನ್ನು ದೀಪಾವಳಿಯಲ್ಲಿ ಮಾತ್ರ ಮಾಡಿ ಸವಿಯುತ್ತಿದ್ದರು. ಪಟಾಕಿ ಹಾರಿಸುವುದು ದೀಪಾವಳಿ ವಿಶೇಷತೆ. ಹೀಗೆ ಬೆಳಕಿನ ಹಬ್ಬ ಸಂಭ್ರಮದ ಹಬ್ಬ. ದೀಪಾವಳಿಯಂದು ಕಛೇರಿಗಳಲ್ಲಿ, ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವುದು ವಾಡಿಕೆ. ಉತ್ತರ ಕರ್ನಾಟಕದಲ್ಲಿ ನವ ದಂಪತಿಗಳ ಪರಿವಾರವನ್ನು ತವರಿಗೆ ಕರೆಯಿಸಿ ಉಡುಗೊರೆ ನೀಡಿ ಆರತಿ ಮಾಡಿ ಸತ್ಕಾರ ಮಾಡುವ ವಿಶೇಷ ಆಚರಣೆ ಇದೆ. ಅದನ್ನು "ದೀಪಾವಳಿ ಅಳಿಯತನ" ಎಂದೂ ಕರೆಯುವರು. 

ದೀಪಾವಳಿ ಸಂಭ್ರಮ ಸಡಗರದ ಬೆಳಕಿನ ಹಬ್ಬ. ಆ ಸಡಗರದ  ಜ್ಞಾನ ಮತ್ತು ವಿವೇಕಯುತವಾಗಿರಲಿ ಎಂದು ಸಂದೇಶ ನೀಡುವುದು.




- ಸಾಕ್ಷಿ ಶ್ರೀಕಾಂತ ತಿಕೋಟಿಕರ, ಕೊಪ್ಪಳ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top