ನಮ್ಮ ಕುಡ್ಲದ ಕುವರಿ... ಲಕ್ಷ್ಮೀ ಬಾರಮ್ಮಾದ 'ಕೀರ್ತಿ' !

Upayuktha
0

ನಾಡಿನ ಜನತೆಯ ಪ್ರೀತಿ ಅನಿರೀಕ್ಷಿತ: ತನ್ವಿರಾವ್




-ಗಣೇಶ್ ಕಾಮತ್


ಮೂಡುಬಿದಿರೆ: ನಾಟ್ಯವನ್ನೇ ಪ್ರೀತಿಸಿ ಬೆಳೆದು ಡ್ಯಾನ್ಸರ್ ಆಗುವ ಹಂತದಲ್ಲಿ ಆಕ್ಟರ್ ಆದ ಕಿರುತೆರೆಯ ಜನಪ್ರಿಯ ನಟಿ ತನ್ವಿರಾವ್ ಅವರದ್ದು ಸಾಧನೆಯ ಹಾದಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಲಕ್ಷ್ಮೀ ಬಾರಮ್ಮ" ಧಾರವಾಹಿಯಲ್ಲಿ ಪ್ರಧಾನ ಪಾತ್ರಗಳಲ್ಲಿ ಒಂದಾಗಿರುವ "ಕೀರ್ತಿ" ಈ ಪಾತ್ರದಿಂದಾಗಿ ನಾಡಿನೆಲ್ಲೆಡೆ ಅಭಿಮಾನಿಗಳ ದಂಡೇ ಕಟ್ಟಿಕೊಂಡಿರುವವರು ತನ್ವಿ ಮೂಲತಃ ಮಂಗಳೂರಿನ ಕದ್ರಿಯ ಹರಿಪ್ರಸಾದ್ ರಾವ್ ಸ್ವರ್ಣ ಗೌರಿ ದಂಪತಿಯ ಪುತ್ರಿ. ವಿದುಷಿ ಗೀತಾ ಸರಳಾಯ ಅವರ ಹೆಮ್ಮೆಯ ಭರತ ನಾಟ್ಯ ಪ್ರತಿಭೆ.


ಬಾಲ ಪ್ರತಿಭೆಯಾಗಿದ್ದಾಗಲೇ ಅಂದಿನ ರಾಷ್ಟ್ರ ಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಗಮನ ಸೆಳೆದು ಪ್ರಶಂಸೆಗೆ ಒಳಗಾಗಿದ್ದ ತನ್ವಿ ಈಗಾಗಲೇ ಕನ್ನಡ, ತಮಿಳು ಧಾರವಾಹಿಗಳ ಜತೆ ಬಾಲಿವುಡ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಭರತ ನಾಟ್ಯವನ್ನೇ ಉಸಿರಾಗಿಸಿಕೊಂಡ ತನ್ವಿ ಅಭಿಯನ ರಂಗದಲ್ಲಿದ್ದರೂ ಕಿರಿ ಹಿರಿ ತೆರೆಯಲ್ಲೂ ನಾಟ್ಯಾಧಾರಿತ ಪಾತ್ರಗಳಲ್ಲೇ ಮಿಂಚಿದ್ದಾಗಿದೆ. ನವರಾತ್ರಿಯ ಸಂದರ್ಭ ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾ ಪರಮೇಶ್ವರಿಯ ಸನ್ನಿಧಿಯಲ್ಲಿ ನಾಟ್ಯ ಸೇವೆ ನಡೆಸಿದ ಖುಷಿಯಲ್ಲೇ ಕಿರುತೆರೆಯ ಈ ಜನಾನುರಾಗಿ ನಟಿ ತನ್ವಿ ತನ್ನ ಕನಸು, ಮನಸಿನ ಮಾತುಗಳನ್ನು ಸಂಕ್ಷಿಪ್ತವಾಗಿ ಹಂಚಿಕೊಂಡಿದ್ಧಾರೆ.


ಈ ಪ್ರೀತಿ ಅನಿರೀಕ್ಷಿತ!

ಹೌದು ಲಕ್ಷ್ಮೀ ಬಾರಮ್ಮ ಧಾರವಾಹಿಯ ಕೀರ್ತಿಯನ್ನು ಕರ್ನಾಟಕದ ಜನತೆ ಈ ಮಟ್ಟಕ್ಕೆ ಪ್ರೀತಿಸುತ್ತಾರೆ ಎನ್ನುವುದೇ ಅಚ್ಚರಿ. ಅನಿರೀಕ್ಷಿತ. ಇಲ್ಲಿ ನನ್ನದು ನೆಗೆಟೀವ್ ಲೀಡ್ ರೋಲ್. ಆದರೆ ಜನತೆಯ ಪ್ರೀತಿ ಧಾರವಾಹಿಯ ದಿಕ್ಕನ್ನೇ ಬದಲಿಸಿ ಒಂದಷ್ಟು ತಿರುವುಗಳನ್ನು ಪಡೆದುಕೊಂಡಿದೆ. ಕೀರ್ತಿಯ ಪಾತ್ರ ದಾರಿಯಾಗಿ ಹಲವರ ಆತ್ಮ ವಿಶ್ವಾಸ ಕ್ಕೆ ಕಾರಣಳಾಗಿದ್ದೇನೆ ಎಂದರು ತನ್ವಿ.


ಓದಿನಲ್ಲಿ ಜಾಣೆ ತನ್ವಿ ವೈದ್ಯೆಯಾಗುವ ಕನಸು ಕಂಡಿದ್ದರೂ ಮನಸು ಬದಲಾಯಿಸಿ ನಾಟ್ಯ, ನಟನೆಯತ್ತ ಹೊರಳಿದ್ದೇ ವಿಶೇಷ. ಎಳೆಯ ವಯಸ್ಸಿನಲ್ಲೇ ಎಲೋಶಿಯಸ್ ಐಕಾನ್ ಗೌರವ ಪಡೆದಿರುವುದು ಮಾತ್ರವಲ್ಲ ಎರಡು ವರ್ಷಗಳಿಂದಲೂ ಅನುಬಂಧ ಅವಾರ್ಡ್ ಗೆದ್ದಾಕೆ.


ರಾಮ ಸೇವೆಯ ತವಕ...

ಅಮೇರಿಕದಲ್ಲಿ ಹಿಂದೆ ನಡೆದ ಅಕ್ಕ ಸಮ್ಮೇಳನದಲ್ಲಿ ನವರಸ ರಾಮ ಪ್ರಸ್ತುತಿಯಲ್ಲಿ ನಟಿಸಿ ಅಲ್ಲಿನ ವಿವಿಧೆಡೆ ಜನ ಮನಗೆದ್ದಿದ್ದ ಪ್ರದರ್ಶನದಲ್ಲಿಯೂ ತನ್ವಿ ಕಾಣಿಸಿಕೊಂಡಿದ್ದರು. ಇದೀಗ ಸಂಕ್ಷಿಪ್ತ ರಾಮಾಯಣವನ್ನೇ ನವರಸಗಳ ರಾಮನಾಗಿ ಅಯೋಧ್ಯೆಯ ರಾಮನ ಸನ್ನಿಧಿಯಲ್ಲಿ ನೃತ್ಯಾರ್ಪಣೆ ಮಾಡಬೇಕೆಂಬ ಯೋಜನೆಗೆ ಹಿನ್ನೆಲೆಯ ಸಿದ್ದತೆಗಳು ಆರಂಭವಾಗಿವೆ.


ಉತ್ತಮ ಪಾತ್ರಗಳನ್ನು ಆರಿಸಿಕೊಳ್ಳುವತ್ತ:


ಕಿರುತೆರೆಯ ಕೀರ್ತಿಯ ಪಾತ್ರಗಳಿಂದ ಬದುಕು ಬದಲಾಗುತ್ತಲೇ ಇದೆ. ಹಲವು ಅವಕಾಶಗಳು ಬಾಗಿಲು ಬಡಿದಿವೆ. ಹಿರಿತೆರೆಯಲ್ಲೂ ಹಲವು ಅವಕಾಶಗಳಿವೆ. ಹೊಸತನದ, ಛಾಲೆಂಜಿಂಗ್, ಉತ್ತಮ ಪಾತ್ರಗಳ ಆಯ್ಕೆಯ ಬಗ್ಗೆ ಯೋಚಿಸಿದ್ದೇನೆ ಎನ್ನುವ ತನ್ವಿಗೆ ಸೈಕಾಲಜಿಯೇ ಫೇವರಿಟ್.

ಅವಕಾಶ ಸಿಕ್ಕರೆ ಸೈಕಾಲಜಿಯ ಉನ್ನತ ಅಧ್ಯಯನ, ಆಕ್ಟಿಂಗ್ ತೆರೆಪಿಯತ್ತ ಗಮನ ಹರಿಸಬೇಕು ಎನ್ನುವ ಆಕೆ ನೃತ್ಯ ಶಿಕ್ಷಣ ವೃತ್ತಿ ರಂಗದಲ್ಲಿ ತಳಪಾಯದ ಜತೆಗೆ ಶಿಸ್ತು, ಮೌಲ್ಯವನ್ನೇ ನೀಡಿದೆ. ಕಲೆ ಮಾತ್ರವಲ್ಲ ಅಪಾರ ಅಭಿಮಾನಿಗಳಿಂದ ಬೆಲೆ ಕಟ್ಟಲಾಗದ ಪ್ರೀತಿ ಸಿಕ್ಕಿದೆ. ಗಳಿಸಿದ್ದನ್ನು ಕಲೆಗೆ ಮರಳಿ ನೀಡುವ ಜವಾಬ್ದಾರಿ ನನ್ನ ಮೇಲಿದೆ. ಅದೇ ನನ್ನ ಆಸೆ ಎಂದರು.


ಬಿಗ್ ಬಾಸ್ ನಲ್ಲಿ ತನ್ವಿ ಕಾಣಿಸಿಕೊಳ್ಳುವ ಗಾಸಿಪ್ ಹಬ್ಬಿತ್ತು ಎಂದ ತ್ವನ್ವಿ ಲಕ್ಷ್ಮೀ ಬಾರಮ್ಮ.. ಮುಂದಿನ ಕೆಲವೇ ಎಪಿಸೋಡ್‌ಗಳಲ್ಲಿ ವೀಕ್ಷಕರಿಗೆ ಹೊಸ ಟ್ವಿಸ್ಟ್ ನೀಡಲಿದೆ ಎಂದಷ್ಟೇ ಹೇಳಿ ಮುಗಳ್ನಕ್ಕರು. ಸಾಧಿಸಿದ್ದೆಲ್ಲವೂ ಕದ್ರಿ ಮಂಜುನಾಥನ ಕೃಪೆ ಎನ್ನಲು ಮರೆಯಲಿಲ್ಲ. ಧಾರವಾಹಿಯಲ್ಲಿ ಕೀರ್ತಿಗೆ ತಾನು ಪ್ರೀತಿಸಿದ ವೈಷ್ಣವ್ ಸಿಗ್ತಾರಾ ಎನ್ನುವ ಕುತೂಹಲದ ನಡುವೆ ತನ್ವಿ ಮದುವೆಯಾಗ್ತಿದ್ದಾರಾ ಎನ್ನುವ ಪ್ರಶ್ನೆಗೂ ಸಧ್ಯಕ್ಕಂತೂ ಇಲ್ಲ ಎನ್ನುವುದರೊಂದಿಗೆ ಜನತೆಯ ಈ ಪ್ರೀತಿ ಸದಾ ಇರಲಿ ಎಂದಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top