ಮಾಗನೂರು ಬಸಪ್ಪ: ಸಾರ್ಥಕ ಬದುಕಿನ ಸಾಧಕ ಜಂಗಮ

Upayuktha
0



ಶ್ರೇಷ್ಠರಾಗಿ ಹುಟ್ಟುವುದು ಬೇರೆ, ಶ್ರೇಷ್ಠತೆಯನ್ನು ಸಾಧಿಸುವುದು ಬೇರೆ, ಶ್ರೇಷ್ಠತೆಯನ್ನು ಆರೋಪಿಸಿಕೊಳ್ಳುವುದು ಬೇರೆ, ಹೇರುವುದು, ಹೇರಿಕೊಳ್ಳುವುದು ಬೇರೆಯೇ! ಇದು ಶ್ರೇಷ್ಠತೆಯೆಂಬ ವ್ಯಸನದ ಮಾತು. ಅಷ್ಠಕ್ಕೂ ಶ್ರೇಷ್ಠತೆಯ ವ್ಯಸನ ಯಾರಿಗಿಲ್ಲ ಹೇಳಿ? ಮನ್ನಣೆಯ ದಾಹವು ಹಸಿವು, ಹಣ, ಪ್ರೇಮ, ಕಾಮ ಈ ಎಲ್ಲ ದಾಹಕ್ಕಿಂತಲೂ ತೀಕ್ಷ್ಣವಾದುದು ಎನ್ನುತ್ತಾರೆ ಡಿವಿಜಿ. ಕೀರ್ತಿಯ ಶನಿ ಒಳಗಿನಿಂದಲೇ ಕೊಲ್ಲುತ್ತಿರುತ್ತದೆ. ಪರಿಶ್ರಮ, ನಿಷ್ಠೆ, ಕ್ರಮ-ನಿಯಮ. ಪ್ರಾಮಾಣಿಕತೆ, ಸಹನೆ, ಜೀವನಿಷ್ಠ ಮೌಲ್ಯಗಳನ್ನು ಅಳವಡಿಸಿಕೊಂಡು, ಸ್ವಸಾಧನೆ, ಪರೋಪಕಾರದಿಂದ ಅಕ್ಷರ ದಾಸೋಹವನ್ನು ಮಾಡಿದ, ಬದುಕು ಮತ್ತು ಭಾವದಲ್ಲಿ ಸಮನ್ವಯವನ್ನು ಸಾಧಿಸಿ, ತನ್ನ ಬದುಕೇ ಜನಮಾನಸದಲ್ಲಿ ಶಾಶ್ವತ ಮಾದರಿಯಾಗುವಂತೆ ಬಾಳಿದವರು ದಾವಣಗೆರೆಯ ಶರಣ ಶ್ರೇಷ್ಠ, ಎತ್ತರದ ಜಂಗಮ ಶ್ರೀ ಮಾಗನೂರು ಬಸಪ್ಪ ಅವರು ನಿಜದ ಆರೂಢ ದಾಸೋಹಿ, ದಾನ ಚಿಂತಾಮಣಿ (ವಿಲಕ್ಷಣ ದಾನಿ, ಪರೋಪಕಾರಿ ರತ್ನ) ಎಂಬ ಅಭಿದಾನಗಳಿಂದ ಜನಮಾನಸದಲ್ಲಿ ಪ್ರಾತಃಸ್ಮರಣೀಯರು. ಏರುಪಥದಲ್ಲಿ ಏರುಮುಖ ಮಾಡಿ ಎತ್ತರಕ್ಕೆ ಬೆಳೆದವರು. 


ದಾವಣಗೆರೆಯೆ ಗಾಂಧಿ ಎಂದೇ ಜನಮಾನ್ಯರಾದ ಮಾಗನೂರು ಬಸಪ್ಪ ಅವರು ಜನ್ಮತಃ ಉಳ್ಳವರಲ್ಲ. ಉಳ್ಳವರ ಮನೆತನವೂ ಅಲ್ಲ. ಇವರು ಇವರಂಥ ಶ್ರೇಷ್ಠರ ಬದುಕನ್ನು ಗಟ್ಟಿಯಾಗಿಸಿ ಎತ್ತರಕ್ಕೆ ಬೆಳೆಸುವುದು ಬಡತನವೆಂಬ ಸಿರಿವಂತಿಕೆ. ಬಡತನ ತಂದೊಡ್ಡುವ ಕಷ್ಟಕಾರ್ಪಣ್ಯಗಳನ್ನು ಸವಾಲುಗಳನ್ನು ಎದುರಿಸಿ ಎತ್ತರಕ್ಕೇರಿದವರು ಬಸಪ್ಪನವರು. ಹೀಗೆಯೇ ಬದುಕಬೇಕೆಂದು ಶಿಸ್ತಿನ್ನು ಅಳವಡಿಸಿಕೊಂಡು ಕೊನೆವರೆಗೂ ಸಮಾಜದ ಒಳಿತಿಗಾಗಿ ಚಿಂತಿಸಿ ದುಡಿದುಡಿದು ಮಡಿದವರು. ಮಡಿದು ಪ್ರಾತಃ ಸ್ಮರಣೀಯರಾದವರು. ಒಂದು ಸ್ವಾಸ್ಥ್ಯಪೂರ್ಣ ಸಮಾಜವನ್ನು ಕಟ್ಟುವುದಕ್ಕೆ ತನ್ನ ಜೀವಿತಾವಧಿಯನ್ನು ಸವೆಸಿದ ಬಸಪ್ಪನವರು ಯಾರಿಗೆ ತಾನೆ ಮಾದರಿಯಲ್ಲ? ಅನುಕರಣೀಯ ಅನುಸರಣೀಯ ವ್ಯಕ್ತಿತ್ವ ಅವರದ್ದು. ಸಮೂಹವೊಂದು ಸ್ವೀಕರಿಸಲೇಬೇಕಾದ ಅವರ ಒಟ್ಟೂ ಬದುಕು ಚಿರಸ್ಥಾಯೀಯಾಗೇ ಇರುತ್ತದೆ. ಶರಣರ ಔನ್ನತ್ಯವನ್ನು ಮರಣದಲ್ಲಿ ನೋಡಬೇಕಂತೆ. ಬದುಕಿದ್ದಾಗಲೇ ಔನ್ನತ್ಯಕ್ಕೆ ಔನ್ನತ್ಯ (peak of the excellence) ಎಂಬ ತೆರದಿ ಬಾಳಿದವರು ಬಸಪ್ಪನವರು.


ಹರಿಜನರ ವಿದ್ಯಾಭ್ಯಾಸಕ್ಕಾಗಿ ಬಸಪ್ಪನವರು ಶಾಲೆ‌ ಮತ್ತು ಹಾಸ್ಟೆಲ್ಲುಗಳನ್ನು ಕಟ್ಟಿದರು. ಗಾಂಧಿವಾದಿಯಾಗಿ ಬಸಪ್ಪನವರು ಗಾಂಧಿಯ ಮೌಲ್ಯವನ್ನು ತನ್ನ‌ ಬದುಕಿನೊಳಗೆ ಅಳವಡಿಸಿಕೊಂಡರು ಎಂಬುದನ್ನು ಅವರ ಬದುಕಿನ‌ ವಿವಿಧ ಮಜಲುಗಳನ್ನು ನೋಡಿದರೆ ಅರ್ಥವಾಗುತ್ತದೆ. ಬಾಲ್ಯದ ಬಡತನ ಎಂಥವನಲ್ಲೂ ಸ್ವಾಭಿಮಾನವನ್ನು ಹುಟ್ಟಿಸುತ್ತದೆ. ಮೊದಲೇ ನೀತಿವಂತ ಮನಸ್ಸಿನ ಬಸಪ್ಪನವರು ಸ್ವಾಭಿಮಾನದ ಬದುಕನ್ನು ರೂಢಿಸಿಕೊಂಡದ್ದರಿಂದ ಇಂದು ಜನತೆಯ ಮನಸ್ಸಿನಲ್ಲಿ ಔನ್ನತ್ಯವನ್ನು ತಲುಪಿದ್ದಾರೆ. ವಾರಕ್ಕೆ 3 ರೂಪಾಯಿಯ ಸಂಬಳದಿಂದ 50 ರೂಪಾಯಿ ಸಂಬಳದವರೆಗೂ ಅನ್ಯಾನ್ಯ ಕಡೆಗಳಲ್ಲಿ ಗುಮಾಸ್ತ, ಸೇವಕರಾಗಿ ದುಡಿದು ನೂರು ರೂಪಾಯಿಯ ಬಂಡವಾಳದೊಂದಿಗೆ ತಮ್ಮ ೩೫ನೆಯ ವಯಸ್ಸಿನಲ್ಲಿ ಸ್ವಂತ ವ್ಯಾಪಾರವನ್ನು ಆರಂಭಿಸಿದ ಬಸಪ್ಪನವರು ಪರಿಶ್ರಮ, ನಿಷ್ಠೆ, ಬದ್ಧತೆ, ಪ್ರಾಮಾಣಿಕತೆಯಿಂದ ಮುಖ್ಯವಾಗಿ ವ್ಯಾಪಾರ ಧರ್ಮವನ್ನು ಪಾಲಿಸಿದ್ದರಿಂದಲೇ ಬಹುದೊಡ್ಡ ವ್ಯಾಪಾರಿಯಾಗಿ ಬೆಳೆಯುತ್ತ ದಾವಣಗೆರೆಯಲ್ಲಿ ಪ್ರಸಿದ್ಧಿಗೆ ಬಂದವರು. ಕಾಯಕದಲ್ಲೇ ಕೈಲಾಸವನ್ನು ಕಂಡರು. ಅಧಿಕಾರ ಬರುವುದು ಸೇವೆಗಾಗಿ; ಸಂಪತ್ತು ಬರುವುದು ದಾನಕ್ಕಾಗಿ ಎಂಬ ಮಾತಿದೆ. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೇ ಅರ್ಪಿಸುವ ಬುದ್ಧಿ ಅಷ್ಟು ಸುಲಭವಾಗಿ ಹುಟ್ಟುವುದಿಲ್ಲ. ಪಡೆದ ಪ್ರತಿಫಲವನ್ನು ಸಮಾಜಕ್ಕೇ ನೀಡಿದವರು ಬಸಪ್ಪನವರು. ಕೊಡದೆ ಕೆಟ್ಟವರುಂಟು; ಕೊಟ್ಟು ಕೆಟ್ಟವರಿಲ್ಲ ಎಂಬ ಮಾತಿದೆ. ಕಾಯಕದಿಂದ ಪಡೆದ ಪ್ರತಿಫಲವನ್ನು ಸಮಾಜೋದ್ಧಾರಕ್ಕಾಗಿ ಬಳಸಿ ಧರ್ಮ ಚಿಂತಾಮಣಿ, ಆರೂಢ ದಾಸೋಹಿ ಎನಿಸಿದರು. 


1930ರಲ್ಲಿ ಕಾಂಗ್ರೆಸ್ ಚಳವಳಿಯಲ್ಲಿ ಗಾಂಧಿಯ ಸಾಮೀಪ್ಯ ಪಡೆದರು. 1934ರಲ್ಲಿ Mysore congress state conference ಅನ್ನು ಆಯೋಜಿಸುವುದರ ಜೊತೆಗೆ ಖಜಾಂಚಿಯಾಗಿ ಸೇವೆಗೈದು ಎಸ್.ನಿಜಲಿಂಗಪ್ಪ ಹಾಗೂ ಡಾ.ಬಾಬು ರಾಜೇಂದ್ರ ಪ್ರಸಾದರಂಥವರ ಮೆಚ್ಚುಗೆ ಪಡೆದವರು. 1942ರ ಕ್ವಿಟ್ ಇಂಡಿಯಾ, ಚಲೇಜಾವ್ ಚಳವಳಿಯಲ್ಲಿ ಭಾಗವಹಿಸಿದ್ದಷ್ಟೇ ಅಲ್ಲದೆ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರಿಗೆ, ಅವರ ಕುಟುಂಬಕ್ಕೆ ಸ್ವಂತ 10 ಸಾವಿರ ರೂಪಾಯಿಗಳಷ್ಟು ತನ್ನ ದುಡಿಮೆಯ ಹಣವನ್ನು ನೀಡಿದವರು ಬಸಪ್ಪನವರು. ದಾವಣಗೆರೆ ನಗರದ ಮುನ್ಸಿಪಲ್ ಕೌನ್ಸಿಲರ್ ಆಗಿ ಜನಪರ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಾನುರಾಗಿಯಾದರು. ಮುನ್ಸಿಪಲ್ ಸೊಸೈಟಿ ಆರಂಭಿಸಿ ನಗರಸಭಾ ಕಟ್ಟಡ ನಿರ್ಮಾಣಕ್ಕೆ ಕಾರಣರಾದರು. ಹುಟ್ಟೂರಿನ‌ ಸೇವೆ ಜನ್ಮಾಂತರ ಪುಣ್ಯವಂತೆ. ದಾವಣಗೆರೆ ನಗರದಲ್ಲಿ ಅನೇಕ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಬಸಪ್ಪನವರು ೧೯೩೭ರಲ್ಲಿ ೭೫ ಸಾವಿರ ರೂಗಳ ಸ್ವಂತ ವಂತಿಕೆಯೊಂದಿಗೆ Education Association ಅನ್ನು ಆರಂಭಿಸಿ ಆ ಭಾಗದ ಮಕ್ಕಳಿಗೆ ಅಕ್ಷರ ದಾಸೋಹ ಮಾಡಿಸಿದ ನಿತ್ಯ ದಾಸೋಹಿಯೆನಿಸಿದರು. 


1938ರಲ್ಲಿ ಆರ್ಥಿಕವಾಗಿ ಆಶಕ್ತ ಪೋಷಕರ ಸಂಘವನ್ನು ಆರಂಭಿಸಿ ಹಳ್ಳಿಯಿಂದ ನಗರಕ್ಕೆ ಶಿಕ್ಷಣಕ್ಕಾಗಿ ಬರುವ ಮಕ್ಕಳಿಗೆ ಉಚಿತ ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಕಲ್ಪಿಸಿದರು. 1961ರಲ್ಲಿ ದಾವಣಗೆರೆ Urban Cooperative bank ಅನ್ನು ಸ್ವಂತ ಷೇರು ಹಣ ಹಾಕಿ ಆರಂಭಿಸಿ ಅದರ ನಿರ್ದೇಶಕರಾಗಿ ದಶಕಗಳ ಕಾಲ ದುಡಿದರು. 1970ರಲ್ಲಿ ಬಾಪೂಜಿ ಸಹಕಾರಿ ಬ್ಯಾಂಕ್, 1974ರಲ್ಲಿ ಶಿವ ಸಹಕಾರಿ ಬ್ಯಾಂಕುಗಳ ಸ್ಥಾಪಕ ಅಧ್ಯಕ್ಷರಾಗಿ ಆರ್ಥಿಕ ಪ್ರಗತಿಯ ಒಳಿತಿಗಾಗಿ ಕಾರ್ಯ ನಿರ್ವಹಿಸಿದರು. ತಮ್ಮ  ದುಡಿಮೆಯ 70 ಸಾವಿರಕ್ಕಿಂತಲೂ ಹೆಚ್ಚು ಹಣ ಖರ್ಚುಮಾಡಿ 1974 ರಲ್ಲಿ ಹರಿಜನ್ ಹಾಸ್ಟೆಲ್, 1975 ರಲ್ಲಿ ಛಲವಾದಿ‌ ಹಾಸ್ಟೆಲ್, ಭೋವಿ ಹಾಸ್ಟೆಲ್ ಗಳನ್ನು ಆರಂಭಿಸಿ ಬಡವರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ‌ನೀಡಿದರು. 1977ರಲ್ಲಿ ಶಿವ ಫೈನಾನ್ಸ್ ಕಾರ್ಪೊರೇಷನ್ ಆರಂಭಿಸಿ, ವ್ಯವಸ್ಥಾಪಕ ನಿರ್ದೇಶಕರಾಗಿ ಹೆಸರು ಮತ್ತು‌ ಕೀರ್ತಿಯನ್ನು ಪಡೆಯುವಂತೆ ಮಾಡಿದ ತಾಕತ್ತು ಬಸಪ್ಪನವರದ್ದು. ಗಣೇಶ ಟೆಕ್ಸ್ ಟೈಲ್ ಮಿಲ್ ಅನ್ನು ಆರಂಭಿಸಿ 20 ವರ್ಷಗಳ ಕಾಲ ನಿರ್ದೇಶಕರಾಗಿ ದುಡಿದರು. 


1958ರಲ್ಲಿ ಬಾಪೂಜಿ ವಿದ್ಯಾಸಂಸ್ಥೆಗಳನ್ನು ಆರಂಭಿಸಿ DRM First Grade Degree College, Medical College, AVK College, Law College, MSB College ಗಳನ್ನು ಆರಂಭಿಸಿ‌ ದಾವಣಗೆರೆ ನಗರದ ಶೈಕ್ಷಣಿಕ ಹರಿಕಾರ ಅಂತ ಹೆಸರನ್ನು ಸಂಪನ್ನಗೊಳಿಸಿಕೊಂಡ ಬಸಪ್ಪನವರು ನಿಜಾರ್ಥದಲ್ಲಿ ಔನ್ನತ್ಯದ ಬದುಕನ್ನು ಬಾಳಿದರು. ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯರ ಶಿಷ್ಯರಾಗಿ ಮಠದ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಲೇ 1975ರಲ್ಲಿ ತರಳಬಾಳು ಹುಣ್ಣಿಮೆ ಕಾರ್ಯಕ್ರಮವನ್ನು ಜಗಳೂರಿನಲ್ಲಿ ಯಶಸ್ವಿಯಾಗಿ ನಡೆಸಿದರು. ದಾವಣಗೆರೆಯ ಅನುಭವ ಮಂಟಪಕ್ಕೆ 15 ಎಕರೆ 23 ಗುಂಟೆ ಜಮೀನನ್ನು ದಾಸೋಹಕ್ಕಾಗಿ ನೀಡಿ ಅದರ ಕಟ್ಟಡ ನಿರ್ಮಾಣಕ್ಕೆ ಸ್ವಂತ ಜಮೀನು ಮಾರಿ 92 ಸಾವಿರ ರೂಗಳನ್ನು ಕಟ್ಟಡ ನಿಧಿಗೆ ಅರ್ಪಿಸಿದ ದೊಡ್ಡತನ ಬಸಪ್ಪನವರದ್ದು. ಸಿರಿಗೆರೆಯ ಹಳೆಯ ಹಾಸ್ಟೆಲ್ ಆರಂಭಿಸಿ ಅದಕ್ಕಾಗಿ 30 ಸಾವಿರ ವ್ಯಯಿಸಿ ವಿದ್ಯಾರ್ಥಿನಿಲಯದ ಆವರಣದಲ್ಲಿ 22 ಮಳಿಗೆಗಳನ್ನು ಕಟ್ಟಿಸಿದರು. ಸಮಾಜದ ಭಕ್ತರಿಂದ 6 ಲಕ್ಷ ರೂಪಾಯಿಯನ್ನು ಸಂಗ್ರಹಿಸುವುದರ ಮುಖೇನ 1946ರಲ್ಲಿ ಗುರುಶಾಂತ ಸ್ವಾಮೀಜಿ ಹಾಸ್ಟೆಲನ್ನು ಆರಂಭಿಸಿ ಮೂರು ಅಂತಸ್ತಿನ ಮಟ್ಟ ನಿರ್ಮಿಸಿದರು.


ಬದುಕಿನ ಬಹುಪಾಲು ದಾವಣಗೆರೆಯಲ್ಲಿ ವಾಸವಾಗಿದ್ದ ಬಸಪ್ಪ ಎಂಬ ಮಾಗಿದ ಮನುಷ್ಯನನ್ನು ನಗರದ ಮುದುಕ ಎನ್ನುತ್ತಾರೆ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ತರಳಬಾಳು ಶ್ರೀಗಳು. ನೀವು ಸಮಾಜದಲ್ಲಿ ಸೇವೆ ಸಲ್ಲಿಸಲು ಬಯಸಿದರೆ ಸಾರ್ವಜನಿಕರಿಂದ ಆಪಾದನೆಯ ಭಾರವನ್ನು ಹೊರಲು ಸಿದ್ಧರಾಗಿರಿ ಎನ್ನುತ್ತಿದ್ದ ಬಸಪ್ಪನವರು ಸಾರ್ವಜನಿಕ ಸೇವೆ ಮಾಡುವಾಗ ಯಾರ ಮೇಲೆ ಆರೋಪ ಮಾಡಿದರೂ ಬೇಸರಗೊಳ್ಳುವುದಿಲ್ಲ ಅಥವಾ ಕೋಪಗೊಳ್ಳುವುದಿಲ್ಲ. ದಾನವು ಬಾವಿ ನೀರು ಇದ್ದಂತೆ. ಬೀದಿ ನಲ್ಲಿಯ ನೀರಿನಂತೆ ಬಾವಿಯ ನೀರು ಖಾಲಿಯಾಗುವುದಿಲ್ಲ. ಎಷ್ಟು ಹೆಚ್ಚು ಸೆಳೆಯುತ್ತೀರೋ ಅಷ್ಟು ಹೆಚ್ಚು ಲಾಭವಾಗುತ್ತದೆ. ದಾನ ಮಾಡಿದಷ್ಟು ಸಂಪತ್ತು ಬರುತ್ತದೆ. ನೀವು ನಿಮ್ಮ ಸಂಪತ್ತನ್ನು ಯಾವ ಮನೆಯಲ್ಲಿ ಸಂಗ್ರಹಿಸುತ್ತೀರೋ ಅದೇ ಮನೆಯಲ್ಲಿ ನೀವು ಹುಟ್ಟುವುದಿಲ್ಲ. ನೀವು ಬೇರೆಡೆ ಹುಟ್ಟುತ್ತೀರಿ. ಆದ್ದರಿಂದ ಅದನ್ನು ನಿಮ್ಮ ಮನೆಯಲ್ಲಿ ಇಡಬೇಡಿ. ಅದನ್ನು ಹರಡಿ‌ ಮತ್ತು ನೀವು ಮತ್ತೆ ಜನಿಸಿದಾಗ ಅದು ನಿಮಗೆ ಬಳಸಲು ಇರುತ್ತದೆ. ಬಸಪ್ಪನವರು ತಮ್ಮ ಸಂಪತ್ತನ್ನು ದಾನ‌ ಮಾಡಿ ಆರೂಢ ದಾಸೋಹಿ, ದಾನ ಚಿಂತಾಮಣಿ ಎನಿಸಿದರು. ದಾನ ಮಾಡುವುದನ್ನು ಕಲಿಸಿದರು.


ಮೇಲ್ಭಾಗದಲ್ಲಿರುವ ಮನುಷ್ಯ ಯಾವಾಗಲೂ ಏಕಾಂಗಿಯಾಗಿರುತ್ತಾನೆ. ತಮ್ಮ ದುಃಖ ಅಥವಾ ಸಂತೋಷವನ್ನು ಹಂಚಿಕೊಳ್ಳಲು ಕಷ್ಟಪಡುತ್ತಾರೆ. ಅವರದಕ್ಕಾಗಿ ಪ್ರಯತ್ನಿಸಿದರೆ ತಪ್ಪಾಗಿ ಅರ್ಥೈಸಲಾಗುತ್ತದೆ ಮತ್ತು ದುಷ್ಕರ್ಮಿಗಳು ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಾರೆ. ಸಾರ್ವಜನಿಕ ಜೀವನದಲ್ಲಿ ಜನರನ್ನು ನಂಬುವುದು ಕಷ್ಟ, ನಂಬದಿರುವುದು ಕಷ್ಟ. ಯಾರನ್ನು ನಂಬಬೇಕು, ಎಷ್ಟು ನಂಬಬೇಕು, ಯಾವಾಗ ಮತ್ತು ಎಲ್ಲಿ ನಂಬಬೇಕೆಂಬ ನ್ಯಾಯಯುತ ಮೌಲ್ಯಮಾಪನವನ್ನು ಹೊಂದಿರಬೇಕು. ವೈಯಕ್ತಿಕವಾಗಿ, ನಾನು ಯಾವುದೇ ಮೀಸಲಾತಿಯಿಲ್ಲದೆ ಅವನನ್ನು ನಂಬಿದ್ದೇನೆ. ನನ್ನ ಹತಾಶೆ, ಸಂಕಟ, ಕಷ್ಟ-ಸುಖ, ಆರೋಪಗಳನ್ನು ಸಮಾಜದಿಂದ ಹಂಚಿಕೊಂಡು ತನ್ನ ಮನಸ್ಸನ್ನು ಹಗುರಾಗಿಸಿಕೊಂಡವರು ಬಸಪ್ಪನವರು.


ಏಳನೆಯ ತರಗತಿಗೆ ವಿದಾಯ ಹೇಳಿದ ಬಸಪ್ಪ ಸ್ವಯಂ ಸಹಾಯ ಮತ್ತು ದೈವಿಕ ನಂಬಿಕೆಯಿಂದ ಜೀವನದ ಮೆಟ್ಟಿಲುಗಳನ್ನು ಏರಿದ ಬಸಪ್ಪ ಯಾವುದೇ ರೀತಿಯಲ್ಲಿ ಬರಹಗಾರನಾಗಿರಲಿಲ್ಲ. ಹಾಗಿದ್ದರೂ, ಅವರು ತಮ್ಮ ಜೀವನ ಚರಿತ್ರೆಯನ್ನು ಮೊಮ್ಮಕ್ಕಳ ಹೋಮ್ ವರ್ಕ್ ನೋಟ್‌ಬುಕ್‌ಗಳ ಖಾಲಿ ಪುಟಗಳಲ್ಲಿ ಬರೆದಿದ್ದಾರೆ. ವೈಯಕ್ತಿಕ ಜೀವನದ ನೈಜ ಅನುಭವಗಳು ಸ್ಪಷ್ಟತೆಯೊಂದಿಗೆ ಒಟ್ಟಿಗೆ ಸೇರಿಕೊಂಡಿವೆ. ಇದು ಕನ್ನಡದಲ್ಲಿ "ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳು ಆ ನಾಡವರ್ಗಳ್" ಎಂಬ ಕಾವ್ಯಾತ್ಮಕ ಅಭಿವ್ಯಕ್ತಿಯನ್ನು ಬೆಂಬಲಿಸುತ್ತದೆ. ಯಾವುದೇ ಸಾರ್ವಜನಿಕ ಅಥವಾ ಸಾಮಾಜಿಕ ಸಂಸ್ಥೆಗಳ ಹಣವನ್ನು ದುರುಪಯೋಗ ಮಾಡಬಾರದು. ಒಂದು ಮರದ ತುಂಡಾಗಲಿ, ಬಂಡೆಯ ಕಣವಾಗಲಿ ಅವರ ಮನೆಯನ್ನು ತಲುಪಬಾರದು. ಅವರ ಬಳಕೆಗೆ ಒಂದು ಪೈಸೆಯನ್ನೂ ಬಳಸಬಾರದು. ಈ ಒಳ್ಳೆಯ ಅಭ್ಯಾಸಗಳನ್ನು ಅನುಸರಿಸುವವರನ್ನು ದೇವರು ಕೈಬಿಡುವುದಿಲ್ಲ ಎಂದು ನಾನು ನಂಬುತ್ತೇನೆ. ಇದು ನನ್ನ ಅನುಭವ. ಪ್ರತಿಯೊಬ್ಬರೂ ಈ ಬೋಧನೆಯನ್ನು ಅನುಸರಿಸಿದರೆ ನಮ್ಮ ದೇಶವಾದ ಭಾರತವನ್ನು ಸ್ವರ್ಗವಾಗಿ ಪರಿವರ್ತಿಸಬಹುದು. ಇಂತಹ ಪ್ರಜೆಗಳು ಹುಟ್ಟಿ ಈ ದೇಶ ಸಮೃದ್ಧಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಬಸಪ್ಪನವರ ಮಾತುಗಳಲ್ಲಿ ಸಾಮಾಜಿಕ ಅರಿವು ಮತ್ತು ರಾಷ್ಟ್ರದ ಮೇಲಿನ ಪ್ರೀತಿಯು ನನಗೆ ಬಸವಣ್ಣನವರ ವಚನವನ್ನು ನೆನಪಿಸುತ್ತದೆ, "ನಾನು ನಿಮ್ಮ ಮತ್ತು ನಿಮ್ಮ ಪವಿತ್ರ ಪೋಷಕರ ಮೇಲೆ ಪ್ರಮಾಣ ಮಾಡುತ್ತೇನೆ, ನಾನು ಸಣ್ಣ ಆಭರಣವಾಗಲಿ ಅಥವಾ ಬಟ್ಟೆಯ ಸಡಿಲವಾದ ದಾರವನ್ನಾಗಲಿ ಅಪೇಕ್ಷಿಸುವುದಿಲ್ಲ. "ಸತ್ಯದಿಂದ ಅಸತ್ಯದೆಡೆಗೆ, ಬೆಳಕಿನಿಂದ ಕತ್ತಲೆಯೆಡೆಗೆ ಹಂತಹಂತವಾಗಿ ಸಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿ ದಿನ ದಿವಂಗತ ಮಾಗನೂರು ಬಸಪ್ಪನವರ ಹೊಸ ನಿರೀಕ್ಷೆಗಳಿಗೆ ಬದ್ಧವಾಗಿರುವ ಎಷ್ಟು ಒಳ್ಳೆಯ ಆತ್ಮಗಳನ್ನು ನಾವು ಕಾಣಲು ಸಾಧ್ಯವಿದೆ? ನಾನು ಆಶ್ಚರ್ಯ ಪಡುತ್ತೇನೆ!” ಎನ್ನುತ್ತಾರೆ ಶ್ರೀ  ಡಾ. ಶಿವಮೂರ್ತಿ ಶಿವಾಚಾರ್ಯ ತರಳಬಾಳು ಶ್ರೀಗಳು.

 

ಆತ್ಮಾರ್ಥಂ ಜೀವ ಲೋಕೇಸ್ಮಿನ್ ಕೋ ನ ಜೀವತಿ ಮಾನವಃ|| 

ಪರಂ ಪರೋಪಕಾರಾರ್ಥಂ ಯೋ ಜೀವತಿ ಸ ಜೀವತಿ||-

ಪರೋಪಕಾರಕ್ಕಾಗಿ ಯಾವನು ಬದುಕಿರುತ್ತಾನೋ ಅವನ ಬದುಕೇ ನಿಜವಾದ ಬದುಕು ಎನ್ನುತ್ತದೆ ಸೂಕ್ತಿ ಶತಕ. ಮಾಗನೂರು ಬಸಪ್ಪ ಒಬ್ಬ ವ್ಯಕ್ತಿಯಾಗಿ ಮಾತ್ರವಲ್ಲ, ಕಾಯಕ ಮತ್ತು ದಾಸೋಹದ ಸಮರ್ಥ ಪ್ರತೀಕವಾಗಿ ಸದ್ಯ ಮತ್ತು ಶಾಶ್ವತವಾಗಿ ಉಳಿಯುತ್ತಾರೆ. ಈ ಔನ್ನತ್ಯದ ಲೌಕಿಕ ಜಂಗಮ ನಿತ್ಯ ಪ್ರಾತಃ ಸ್ಮರಣೀಯರು.



- ಟಿ.ದೇವಿದಾಸ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top