ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಅಂತರ್ ಕಾಲೇಜು ಸ್ಪರ್ಧೆ 'ಪಿನಾಕಲ್ 2K24'
ಉಜಿರೆ: ವೃತ್ತಿಪರ ಜೀವನದ ಯಶಸ್ಸಿಗೆ ಉತ್ತಮ ಜ್ಞಾನದ ಜತೆಗೆ ಧೈರ್ಯವಾಗಿ ಅಂದುಕೊಂಡಿದ್ದನ್ನು ಸಾಧಿಸುವ ಮನೋಭಾವ ಅತ್ಯಗತ್ಯ ಎಂದು ನಿಡ್ಲೆಯ ಅಗ್ರಿಲೀಫ್ ಎಕ್ಸ್‌ಪೋರ್ಟ್ಸ್ ಸಂಸ್ಥೆಯ ಸಹ ಸಂಸ್ಥಾಪಕ ಅತಿಶಯ್ ಎಂ ಜೈನ್ ಹೇಳಿದರು.
ಉಜಿರೆಯ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವತಿಯಿಂದ ಇಂಟರ್ನಲ್ ಕ್ವಾಲಿಟಿ ಅಶ್ಯೂರೆನ್ಸ್ ಸೆಲ್ ಸಹಯೋಗದಲ್ಲಿ ಸೆ. 28ರಂದು ಪದವಿಪೂರ್ವ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಅಂತರ್ ಕಾಲೇಜು ಸ್ಪರ್ಧೆ 'ಪಿನಾಕಲ್ 2K24' ಉದ್ಘಾಟಿಸಿ ಅವರು ಮಾತನಾಡಿದರು.
"ಇಂದಿನ ವಿದ್ಯಾರ್ಥಿಗಳು ಕೇವಲ ಪುಸ್ತಕ ಜ್ಞಾನ ಹಾಗೂ ಕಾಲೇಜಿಗೆ ಸಂಬಂಧಪಟ್ಟ ವಿಷಯಗಳನ್ನು ಮಾತ್ರ ತಮ್ಮಲ್ಲಿ ರೂಢಿಸಿಕೊಂಡಿರುತ್ತಾರೆ. ಪುಸ್ತಕದ ಹೊರತಾದ ಜ್ಞಾನ ಅವರಲ್ಲಿ ಮರೆಯಾಗಿದೆ. ಆದ್ದರಿಂದ ಅವರನ್ನು ಕಂಪೆನಿಗಳು ಉದ್ಯೋಗಕ್ಕೆ ಪರಿಗಣಿಸದಿರುವ ಪ್ರಸಂಗಗಳು ನಡೆಯುತ್ತಿವೆ. ಹಾಗಾಗಿ, ಜ್ಞಾನ ಸಂಪಾದನೆ ಕುರಿತು ವಿದ್ಯಾರ್ಥಿಗಳು ಚಿಂತನೆ ನಡೆಸಬೇಕು" ಎಂದು ಅವರು ಅಭಿಪ್ರಾಯಪಟ್ಟರು.
"ಈಗಿನ ವಿದ್ಯಾರ್ಥಿಗಳಲ್ಲಿ ಕೌಶಲದ ಕೊರತೆ ಕಾಣುತ್ತಿದೆ. ಹಾಗಾಗಿ ಅವರು ಉತ್ತಮ ಕೌಶಲ ಬೆಳೆಸಿಕೊಳ್ಳುವತ್ತ ಗಮನ ಹರಿಸಬೇಕು. ನೋಡುವ ದೃಷ್ಟಿಕೋನ ಬದಲಾಗಬೇಕು. ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುವ ವಿದ್ಯಾರ್ಥಿಗಳು ತಮ್ಮ ಗುರಿ, ತಮ್ಮ ಆಸಕ್ತಿಯ ಕುರಿತಾದ ವಿಷಯಗಳನ್ನೇ ನೋಡಿದರೆ ಅವರ ವೈಯಕ್ತಿಕ ಬೆಳವಣಿಗೆ ಸಾಧ್ಯ" ಎಂದರು.
ಮುಖ್ಯ ಅತಿಥಿ, ಉಜಿರೆಯ ಶ್ರೀ ಧ.ಮಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ., “ಈಗಿನ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಹೆಚ್ಚಾಗಿದ್ದು, ಗುರಿ ಸಾಧಿಸಲು ಅದು ತಡೆಯಾಗಿದೆ. ಕೀಳರಿಮೆಯನ್ನು ಬಿಟ್ಟು ಮುನ್ನುಗ್ಗಬೇಕು. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಬೇಕು ಎಂದರೆ ಹಿಂದೇಟು ಹಾಕದೆ ಮುನ್ನುಗ್ಗುವ ಮನೋಭಾವ ಹೊಂದಿರಬೇಕು. ಆತ್ಮವಿಶ್ವಾಸದಿಂದ ಕೆಲಸವನ್ನು ಮಾಡಿದರೆ ನಾವು ಸಶಕ್ತರಾಗುತ್ತೇವೆ ಮತ್ತು ಪ್ರಬಲರಾಗುತ್ತೇವೆ. ಆದರೆ ಯಾವುದೇ ಕೆಲಸಕ್ಕೆ ಮುನ್ನ ಅದರ ಪೂರ್ವತಯಾರಿ ಸಮರ್ಪಕವಾಗಿರಬೇಕು. ಹಾಗಿದ್ದರೆ ಮಾತ್ರ ಸಾಧಿಸಬಹುದು" ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಧ. ಮಂ. ಸ್ವಾಯತ್ತ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಎಸ್. ಎನ್. ಕಾಕತ್ಕರ್ ಮಾತನಾಡಿ, ಉತ್ತಮ ಫಲಿತಾಂಶ ಬೇಕು ಎಂದರೆ ಯಾವುದೇ ಕೆಲಸವನ್ನು ಮುಂದೂಡದೆ ಇಂದು ಮಾಡುವ ಕೆಲಸವನ್ನು ಇಂದೇ ಮಾಡಬೇಕು. ಪ್ರಯತ್ನದಲ್ಲಿ ವಿಫಲವಾದರೆ ಅದು ಸೋಲಲ್ಲ ಕಲಿಯುವಿಕೆಯಲ್ಲಿನ ಮೊದಲ ಹಂತ ಎಂಬ ಭಾವನೆ ಹೊಂದಿರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಅಧ್ಯಾಪಕರು- ಕಾರ್ಯಕ್ರಮ ಸಂಯೋಜಕ ಡಾ. ಲಕ್ಷ್ಮೀನಾರಾಯಣ ಕೆ.ಎಸ್. , ಹರೀಶ್ ಶೆಟ್ಟಿ, ಇತರ ಅಧ್ಯಾಪಕರು ಉಪಸ್ಥಿತರಿದ್ದರು.
ತಾಲೂಕಿನ ಸುಮಾರು 8 ಕಾಲೇಜುಗಳಿಂದ 11 ತಂಡಗಳು ಭಾಗವಹಿಸಿದ್ದವು.
ಕ್ಷಿತಿ ಮತ್ತು ತಂಡದವರು ಪ್ರಾರ್ಥಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರತ್ನಾವತಿ ಕೆ. ಸ್ವಾಗತಿಸಿದರು. ವಿದ್ಯಾರ್ಥಿ ಮಾಧವ್ ದಾಸ್ ವಂದಿಸಿದರು. ವಾಣಿಜ್ಯ ವಿಭಾಗದ ಅಧ್ಯಾಪಕಿ ಸಫೀರ ಹಾಗೂ ವಿದ್ಯಾರ್ಥಿಗಳಾದ ಜಯಸೂರ್ಯ, ಗೌತಮಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ