ಚಿತ್ತ-ಭಿತ್ತಿ: ಚಿತ್ರರಂಗದ ಮಿನುಗುವ ನಕ್ಷತ್ರ- ವಿಷ್ಣುವರ್ಧನ್

Upayuktha
0


ಮೈಸೂರಿನ 23 ವರ್ಷದ ಸಂಪತ್‌ಕುಮಾರ್‌ನ್ನು, ಬೆಂಕಿ ಚೆಂಡಾಗಿ 1973 ರಲ್ಲಿ, ನಾಗರಹಾವು ಚಿತ್ರದ ರಾಮಾಚಾರಿಯನ್ನಾಗಿಸಿದ ಚಿತ್ರಶಿಲ್ಪಿ ಪುಟ್ಟಣ್ಣ ಕಣಗಾಲ್‌ರ ಸಾರ್ಥಕ ಶ್ರಮ, ಕನ್ನಡ ಚಿತ್ರರಂಗಕ್ಕೆ ಒಬ್ಬ ಕೋಪಿಷ್ಠ ತರುಣ ಸಂಕೇತದ ಪ್ರತಿಭಾವಂತ ಯುವಕ ಕಲಾವಿದರನ್ನು ದೊರಕಿಸಿಕೊಟ್ಟಿತು. ನಾಯಕ ರಾಮಾಚಾರಿಯಾಗಿ ಮೊದಲ ಚಿತ್ರದಲ್ಲೇ, ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಪೋಷಕ ಚಕ್ರವರ್ತಿ ನುರಿತ ಕಲಾವಿದರಾದ ಕೆ.ಎಸ್. ಅಶ್ವಥ್ ಚಾಮಯ್ಯ ಮೇಷ್ಟ್ರಾಗಿ ದೊರಕಿದ್ದು, ಅವರಿಬ್ಬರ ಗುರು-ಶಿಷ್ಯ ಸಂಬಂಧ ಇಡೀ ಚಿತ್ರಕ್ಕೆ ಹೊಸ ಆಯಾಮ ಸೃಷ್ಟಿಸಿತು. ಕ್ರಿಕೆಟ್ ಆಟಗಾರ, ಅಂಚೆ ಚೀಟಿಯಲ್ಲಿ ಕಂಡ ಮುಖ, 20 ಚಲನಚಿತ್ರಗಳಲ್ಲಿ ಗಾಯಕ, ರಸಿಕರು ದೇವಾಲಯ ಕಟ್ಟಿಸಿದ ಕನ್ನಡದ ಮೊದಲ ನಟ. ಆಸ್ಪತ್ರೆಗಳಲ್ಲಿ ಬಿಲ್ ಕಟ್ಟಲಾಗದ ಎಷ್ಟೋ ಜನರಿಗೆ ಅಜ್ಞಾತವಾಗಿ ನೆರವು ನೀಡಿದವ, ಬಳ್ಳಾರಿಯಲ್ಲಿ ಮೂರ್ತಿಯಾಗಿ ಕೆತ್ತಲ್ಪಟ್ಟವ, ಎಲ್ಲ ಇದೇ ವಿಷ್ಣುವರ್ಧನ್. ಬ್ರೂಸ್ ಲೀ ಪ್ರಭಾವ ಇದ್ದ ಆ ಕಾಲದಲ್ಲಿ, ಚಲನಚಿತ್ರಕ್ಕಾಗಿ ಮಾರ್ಷಿಯಲ್ ಕಲೆ (ಸಾಹಸ ಕಲೆ) ಕಲಿತ ಇಬ್ಬರೆಂದರೆ, ಕಮಲಹಾಸ್ ಹಾಗೂ ವಿಷ್ಣುವರ್ಧನ್ ಮಾತ್ರ. 1972 ರಿಂದ 2009 ರವರೆಗೆ ಒಟ್ಟು 220 ಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತಿ ಇವರದ್ದು. ಇವುಗಳಲ್ಲಿ 200 ಕನ್ನಡ ಚಿತ್ರಗಳು, 5 ಹಿಂದಿ, 5 ತೆಲುಗು, 6 ತಮಿಳು ಹಾಗೂ 5 ಮಲಯಾಳಂ ಚಿತ್ರಗಳು. 


ಕೌಟುಂಬಿಕ ಹಿನ್ನೆಲೆ: ಮೈಸೂರಿನ ಚಾಮುಂಡಿಪುರದಲ್ಲಿ ವಾಸವಾಗಿದ್ದ ವಿಷ್ಣುವರ್ಧನ್ ತಂದೆ ಎಚ್.ಎಲ್. ನಾರಾಯಣರಾವ್, 1935 ರಲ್ಲಿ ಪ್ರೊ. ಎಂ.ವಿ. ಗೋಪಾಲಸ್ವಾಮಿಯವರ ಮನೆಯಲ್ಲಿ ಆರಂಭವಾಗಿದ್ದ ಖಾಸಗಿ ರೇಡಿಯೋ ಕೇಂದ್ರದಲ್ಲಿ, ನೇರ ಪ್ರಸಾರದ ನಾಟಕದ ಕಲಾವಿದರಾಗಿ, ನನ್ನ ತಂದೆ ಎನ್.ಎಸ್. ವಾಮ್ ಅವರ ಆಪ್ತ ಗೆಳೆಯನಾಗಿ, ಇಬ್ಬರೂ ಸೇರಿ ಅನೇಕ ಪೌರಾಣಿಕ ನಾಟಕಗಳನ್ನಾಡಿದ್ದರಂತೆ. ನಾಟಕಕಾರರಾಗಿದ್ದ ಇವರು ವಿಧಿ ವಿಲಾಸ ಸೇರಿದಂತೆ ಅನೇಕ ಚಲನಚಿತ್ರಗಳಿಗೆ ಸಾಹಿತ್ಯ ಬರೆದಿದ್ದಲ್ಲದೇ, ಸಂಗೀತ ಸಂಯೋಜಕರೂ ಆಗಿದ್ದಾರೆ. ವಿಷ್ಣುವರ್ಧನ್ ತಾಯಿ ಕಾಮಾಕ್ಷಮ್ಮ ನನ್ನ ತಾಯಿ ಗಿರಿಜಮ್ಮನವರ ಆಪ್ತ ಗೆಳತಿ. ವಿಷ್ಣುವರ್ಧನರ ಅಣ್ಣ ರವಿ, ಸೋದರಿಯರಾದ ಇಂದ್ರಾಣಿ, ಜಯಶ್ರೀ, ಪೂರ್ಣಿಮಾ ಹಾಗೂ ನೃತ್ಯಗಾತಿ ರಮಾ ಎಲ್ಲರೂ ಆ ಕಾಲದಲ್ಲಿ ನಮ್ಮ ಕಟುಂಬಕ್ಕೆ ನಮ್ಮ ಆಪ್ತರಾಗಿದ್ದರು. ನಾರಾಯಣರಾವ್ ಅವರ 6 ಮಕ್ಕಳಲ್ಲಿ ಸಂಪತ್‌ಕುಮಾರ್ 18.09.1950 ರಂದು ಜನಿಸಿ, ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಕಲಿತು, ಬೆಂಗಳೂರಿನಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದರು.


ಚಲನಚಿತ್ರ ಪ್ರವೇಶ: 1972 ರಲ್ಲಿ ಬಿ.ವಿ. ಕಾರಂತ್ ಹಾಗೂ ಗಿರೀಶ್ ಕಾರ್ನಾಡ್ ನಿರ್ದೇಶನದ ಎಸ್.ಎಲ್. ಭೈರಪ್ಪನವರ ಕಾದಂಬರಿ ಆಧರಿಸಿದ ವಂಶವೃಕ್ಷ ಚಿತ್ರದ ಮೂಲಕ ಕುಮಾರ್ ಪೃಥ್ವಿ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ವಂಶವೃಕ್ಷ ಚಿತ್ರ ಚಿತ್ರಿಸಲ್ಪಟ್ಟ ಅಂದಿನ ನಂಜನಗೂಡಿನ ಅರಮನೆ ರಸ್ತೆಯಲ್ಲಿದ್ದ ಹಳೆಯ ಕಾಲದ ಮನೆ, ನನ್ನ ಚಿಕ್ಕಮ್ಮ ವಿಶಾಲಾಕ್ಷಿ ಅವರ ತಮದೆ ಚಂದ್ರಶೇಖರ ಶಾಸ್ತ್ರಿಗಳ ಮನೆ. ಹೀಗಾಗಿ ಆ ಚಿತ್ರದ ಶೂಟಿಂಗ್ ನೋಡಿದ್ದೆವು. 1972 ರಲ್ಲಿ ನಾಗರಹಾವು ಚಿತ್ರದ ಚಿತ್ರೀಕರಣ ಚಿತ್ರದುರ್ಗದಲ್ಲಿ ನಡೆದಿತ್ತು. ಮೈಸೂರಿನಿಂದ ಕಾರಿನಲ್ಲಿ ಹೋಗುವಾಗ, ನನ್ನನ್ನೂ ಹಾಗೂ ನನ್ನ ತಮ್ಮ ಬಾಲಚಂದ್ರನನ್ನೂ ಜೊತೆಗೆ ಕರೆದೊಯ್ದು ನೆನಪು ನನಗೆ ಇನ್ನೂ ದಟ್ಟವಾಗಿದೆ. ಅವರ ಚಿತ್ರದುರ್ಗದ ಶೂಟಿಂಗ್ ನಂತರ, ಹುಬ್ಬಳ್ಳಿಗೆ ವೃತ್ತಿ ಕಂಪನಿ ನಾಟಕಕ್ಕೆ ಅಭಿನಯಿಸಲು ಹೋಗಬೇಕಾಗಿತ್ತು. ಹೀಗಾಗಿ ಚಿತ್ರದುರ್ಗದಲ್ಲಿ 3 ದಿನ ನಾಗರಹಾವು ಶೂಟಿಂಗ್ ನೋಡುವ ಭಾಗ್ಯ ನಮ್ಮದಾಗಿತ್ತು. ಕಾಲೇಜಿನ ದೃಶ್ಯಗಳ ಜೊತೆಗೆ, ತುಪ್ಪದ ಹೊಂಡದ ಮೇಲಿನ ಅಂತಿಮ ದೃಶ್ಯಗಳ ಚಿತ್ರೀಕರಣ ಕಂಡೆವು. ಕುದುರೆ ಪಾದಗಳಂತೆ ಬಹಳ ಕಷ್ಟಪಟ್ಟು ಆ ಬೆಟ್ಟ ಹತ್ತಲೇಬೇಕಿತ್ತು. ಅಂತಿಮ ದೃಶ್ಯ. ಗುರು ಶಿಷ್ಯನಿಗೆ ಮಾರ್ಗರೆಟ್‌ಳಿಂದ ದೂರವಾಗೆಂದು ಕೇಳಿಕೊಳ್ಳುವ ದೃಶ್ಯ. ಆಗ ಶಿಷ್ಯ "ಮೇಷ್ಟ್ರೇ. ನನ್ನೇ ನಂಬಿದ ಮಾರ್ಗರೇಟ್‌ಳನ್ನು ಬಿಟ್ಟುಬಿಡು ಅಂತ ಹೇಳ್ತೀರಾ" ಎಂದು ಆವೇಶದಿಂದ ಕೂಗಬೇಕಿತ್ತು.


ಈ ದೃಶ್ಯದಲ್ಲಿ ಶಿಷ್ಯ ಆವೇಶದಲ್ಲಿ ಗುರುವನ್ನು ಪ್ರಶ್ನೆ ಕೇಳಿ ಅಲ್ಲಾಡಿಸಿದಾಗ, ಗುರು ಜಾರಿ ಬಿದ್ದು ಮೃತನಾಗುವ ದೃಶ್ಯ. ಈ ದೃಶ್ಯ ಪುಟ್ಟಣ್ಣ ಚಿತ್ರಿಸುತ್ತಿದ್ದರು. ಅನೇಕ ಟೇಕ್ಸ್ ಆದರೂ ನಿರ್ದೇಶಕನಿಗೆ ಮೆಚ್ಚಿಗೆ ಆಗಲಿಲ್ಲ. ಸಿಟ್ಟಿಗೆದ್ದ ನಿರ್ದೇಶಕ ನಾಯಕನಟನ ಕೆನ್ನೆಗೆ ಬಾರಿಸಿದರು. ಸೂರ್ಯನ ಸಂಜೆ ಕೆಂಪಿನೊಂದಿಗೆ ಕೆಂಪು ಬಣ್ಣದ ನಾಯಕರ ಕೆನ್ನೆ ಮತ್ತಷ್ಟು ಕೆಂಪು ಬಣ್ಣದ ನಾಯಕರ ಕೆನ್ನೆ ಮತ್ತಷ್ಟು ಕೆಂಪಾದರೂ, ನಾಯಕ ನಟನ ಅತ್ಯುತ್ತಮ ಪಾತ್ರ ನಿರ್ವಹಣೆ, ಆಗ ಹೊರಬಂದು ಟೇಕ್ ಎಲ್ಲರ ಮೆಚ್ಚುಗೆ ಪಡೆಯಿತು. ನಾಗರಹಾವು ಜನಮೆಚ್ಚುಗೆ ಪಡೆದು, ಕನ್ನಡ ಚಲನಚಿತ್ರ ರಂಗದಲ್ಲಿ ಮುಂದೆ ಈ ಕಲಾವಿದ 220 ಚಲನಚಿತ್ರ ಅಭಿನಯಿಸಲು ನಾಂದಿ ಹಾಡಿತು. ಡಾ.ರಾಜಕುಮಾರರಂತೆಯೇ ವಿಷ್ಣುವರ್ಧನ್ ಸಹ ಒಂದು ಅಭಿನಯ ಪರಂಪರೆ ಸೃಷ್ಟಿಸಿದರು. ವೃತ್ತಿ ಜೀವನದ ಆರಂಭದಲ್ಲಿ, ಇತ್ತಲೋ ಅತ್ತಲೋ ಎಂಬ ಸಂದಿಗ್ಧತೆಯಲ್ಲಿದ್ದಾಗ, ತಮಗೆ ಆಪ್ತಮಿತ್ರನಾಗಿ ವಿಷ್ಣು ಮಾರ್ಗದರ್ಶನ ನೀಡಿದ್ದರಿಂದಲೇ ತಾವು ಇಂದು ಈ ಸ್ಥಿತಿಗೆ ಬಂದಿರುವುದಾಗಿ ರಜನೀಕಾಂತ್ ಹೇಳಿದ್ದಾರೆ. ಶಬ್ದಗಳಲ್ಲಿ ವರ್ಣಿಸಲಾಗದ ಆ ಸ್ನೇಹ ಅನುಭವಿಸಿ ಸಂತಸ ಪಡುವಂತಹುದು ಎಂದಿದ್ದಾರೆ ರಜನೀಕಾಂತ್. ವಿಷ್ಣುವಿಜಯ ಚಿತ್ರ ಕನ್ನಡದಲ್ಲಿ ಅತಿ ಯಶಸ್ವಿಯಾಗಿ, ಹಿಂದಿ ರೂಪ ಅಶಾಂತ್ ಸೋಲನ್ನು ಅನುಭವಿಸಿದಾಗ ವಿಷ್ಣುವರ್ಧನ ಹಾಗೂ ಕನ್ನಡ ಕೊಂಡಿಯ ಯಶಸ್ಸನ್ನು, ಸಹಪಾತ್ರಧಾರಿ ಅಕ್ಷಯ್ ಕುಮಾರ್ ಹೊಗಳಿದ್ದಾರೆ. 

ವಿವಾಹ: ವಿಷ್ಣುವರ್ಧನ್ ಹಾಗೂ ಭಾರತಿ ಅವರ ವಿವಾಹವಾದದ್ದು ಬೆಂಗಳೂರಿನ ಜಯನಗರದ ಕುಚಲಾಂಬಾ ಕಲ್ಯಾಣಮಂಟಪದಲ್ಲಿ 17.02.1975 ರಂದು. ಆ ವಿವಾಹಕ್ಕೆ ನಾನು ನನ್ನ ತಮ್ಮ ಹೋಗಿ ಭಾಗವಹಿಸಿದ್ದೆವು. ಸಂಜೆ ಆರತಕ್ಷತೆಗೆ ಜನ ಕಿಕ್ಕಿರಿದು, ಆ ಸಮಯದಲ್ಲಿ ನುಗ್ಗಿದ ರಸಿಕರು, ಅಲ್ಲಗೆ ಬಂದ ಚಿತ್ರತಾರೆಯರನ್ನು ಕಾಣುವ ಆತುರದಲ್ಲಿ, ಚಲನಚಿತ್ರ ಕಲಾವಿದರ ಮೇಲಿನ ಅಭಿಮಾನದಿಂದ, ಕಲ್ಯಾಣ ಮಂಟಪದ ದೊಡ್ಡ ಬಾಗಿಲನ್ನ ಬೀಳಿಸಿದ್ದು ಇನ್ನೂ ನನಗೆ ನೆನಪಿದೆ. 


ಚಲನಚಿತ್ರಗಳಲ್ಲಿ ಅಭಿನಯ: ಇವರು ತ್ರಿಪಾತ್ರಗಳಲ್ಲಿ ಅಭಿಯಿಸಿದ ಚಿತ್ರಗಳು ಸಿಂಹಾದ್ರಿಯ ಸಿಂಹ ಹಾಗೂ ಸತ್ಯಂ ಶಿವಂ ಸುಂದರಂ. ಇವರ ದ್ವಿಪಾತ್ರಗಳಿದ್ದ 13 ಚಿತ್ರಗಳು ಒಂದೇ ರೂಪ ಎರಡು ಗುಣ, ಸಿಡಿದೆದ್ದ ಸಹೋದರ, ಕಾಳಿಂಗ, ದಾದಾ, ಯಜಮಾನ, ಸೂರ್ಯವಂಶ, ಜಮೀನ್ದರ‍್ರು, ದಿಗ್ಗಜರು, ಮೋಜುಗಾರ ಸೊಗಸುಗಾರ, ಅಪ್ಪಾಜಿ, ನಾಗ ಕಾಳ ಭೈರವ, ಕರ್ತವ್ಯ, ಸೌಭಾಗ್ಯಲಕ್ಷ್ಮಿ, ಶಿವಶಂಕರ, ಲಯನ್ ಜಗಪತಿರಾವ್, ಪೊಲೀಸ್ ಮತ್ತು ದಾದಾ ಹಾಗೂ ಕಿಲಾಡಿಗಳು, ಹೊಂಬಿಸಿಲು, ಬಂಧನ, ಡಾ.ಕೃಷ್ಣ ಚಿತ್ರಗಳಲ್ಲಿ ಡಾಕ್ಟರ್‌ಗಾಗಿ, ಭುತಯ್ಯನ ಮಗ ಅಯ್ಯು, ಬಯಸದೇ ಬಂದ ಭಾಗ್ಯ, ದೇವ, ಯಜಮಾನ, ಮುಂತಾದ ಚಿತ್ರಗಳಲ್ಲಿ ಗ್ರಾಮೀಣ ನಾಯಕನಾಗಿ ಮಿಂಚಿದ್ದಾರೆ. ಸಾಹಸಸಿಂಹ ಚಿತ್ರದಲ್ಲಿ ತಮ್ಮ ಸಾಹಸ ದೃಶ್ಯಗಳಲ್ಲಿ ತಾವೇ ನೈಜವಾಗಿ ಅಭಿನಯಿಸಿ ನಿಜವಾದ ಸಾಹಸಸಿಂಹ ಆಗಿದ್ದಾರೆ. ಗಂಧದಗುಡಿ ಚಿತ್ರದಲ್ಲಿ ಡಾ.ರಾಜಕುಮಾರ್ ಅರಣ್ಯಾಧಿಕಾರಿ ವಿಷ್ಣು ದಾರಿತಪ್ಪಿದ ತಮ್ಮನ ಪಾತ್ರದಲ್ಲಿ ರಾರಾಜಿಸಿದ್ದಾರೆ. ಮುತ್ತಿನಹಾರ ಚಿತ್ರದಲ್ಲಿ ಕೊಡಗಿನ ಯೋಧನಾಗಿ ಮಿಂಚಿದ್ದಾರೆ. 2008 ರಲ್ಲಿ ಸಿ.ಎನ್.ಎನ್. ಹಾಗೂ ಐ.ಬಿ.ಎನ್. ನಡೆಸಿದ ಒಂದು ಅಭಿಪ್ರಾಯ ಸಂಗ್ರಹದಲ್ಲಿ, ಜೀವಂತವಿರುವ ಅತ್ಯಂತ ಜನಪ್ರಿಯ ಕನ್ನಡ ನಟ ಇವರೇ ಎಂದು ತಿಳಿದುಬಂತಂತೆ. ಇವರನ್ನು ಕೆಲವರು ಮೂಡಿ ಎಂದು ಕರೆದಾಗ, ವಿಷ್ಣು ಉತ್ತರ "ಯಾವುದೇ ವ್ಯಕ್ತಿ ಆಳವಾದ ಆಂತರಿಕ ಯೋಚನೆಗಳಲ್ಲಿ ತಲ್ಲಿನರಾದಾಗ ಹೀಗೇ ಇರುತ್ತಾರೆ. ಹಾಗೆ ನೋಡಿದರೆ ಎಷ್ಟು ಕ್ರಿಯಾತ್ಮಕ ಜನರು ಮೂಡಿ?" ಚಂದ್ರಶೇಖರ ಕಂಬಾರರ ನಾಟಕ ಆಧರಿಸಿದ ಹರಕೆಯ ಕುರಿ ಚಿತ್ರದಲ್ಲಿ ಅಭಿನಯಿಸಿದರು.


ಕನ್ನಡ ಚಿತ್ರಗಳಲ್ಲಿ ಬಯಸದೇ ಬಂದ ಭಾಗ್ಯ, ದೇವರಗುಡಿ, ಭಾಗ್ಯಜ್ಯೋತಿ, ಚಿತ್ರಗಳಲ್ಲಿ ಭಾರತಿ, ಬಂಧ, ಸುಪ್ರಭಾತ, ಮುತ್ತಿನಹಾರ ಚಿತ್ರಗಳಲ್ಲಿ ಸುಹಾಸಿನಿ, ಕಿಲಾಡಿ ಕಿಟ್ಟು, ಗಲಾಟೆ ಸಂಸಾರ ಚಿತ್ರಗಳಲ್ಲಿ ರಜನೀಕಾಂತ್, ಹೊಂಬಿಸಿಲು ವಸಂತಲಕ್ಷ್ಮಿ ಚಿತ್ರಗಳಲ್ಲಿ ಆರತಿ, ಗುರುಶಿಷ್ಯರು, ಪ್ರೊ. ಹುಚ್ಚುರಾಯ, ಚಿತ್ರಗಳಲ್ಲಿ ಮಂಜುಳಾ, ಆಪ್ತಮಿತ್ರ ಚಿತ್ರದಲ್ಲಿ ರಮೇಶ್ ಅರವಿಂದ್ ಹಾಗೂ ಸೌಂದರ್ಯ, ಕಿಲಾಡಿಜೋಡಿ, ಅವಳ ಹೆಜ್ಜೆಗಳಲ್ಲಿ ಲಕ್ಷ್ಮಿ, ಭೂತಯ್ಯನ ಮಗ ಆಯ್ಯು ಚಿತ್ರದಲ್ಲಿ ಲೋಕೇಶ್, ಭವಾನಿ, ವೀರಪ್ಪನಾಯಕ, ಸಿರಿವಂತ ಚಿತ್ರಗಳಲ್ಲಿ ಶ್ರುತಿ, ಮಲಯಮಾರುತದಲ್ಲಿ ಸರಿತಾ ಹಾಗೂ ಮಾಧವಿ, ಇಂದಿನ ರಾಮಾಯಣದಲ್ಲಿ ಜಯಚಿತ್ರಾ, ಹಿಮಪಾತ, ಈ ಬಂಧನ ಚಿತ್ರಗಳಲ್ಲಿ ಜಯಪ್ರಭಾ ಜೊತೆಗೆ ಅಭಿನಯಿಸಿದ್ದಾರೆ. ತಮಿಳಿನಲ್ಲಿ ದಿ ಟೆರರಿಸ್ಟ್ ಚಿತ್ರದಲ್ಲಿ ಆಯೇಷಾ ಧರ್‌ಕರ್ ಜೊತೆಗೆ, ಶ್ರೀ ರಾಘವೇಂದ್ರರ್ ಚಿತ್ರದಲ್ಲಿ ರಜನೀಕಾಂತ್ ಜೊತೆಗೆ, ಮಲಯಾಳಂ ಭಾಷೆಯ ಅಡಿಮ ಚೆಂಗಲದಲ್ಲಿ ಪ್ರೇಮ ನಝೀರ್ ಜೊತೆಗೆ, ಕೌರವರ್ ಚಿತ್ರದಲ್ಲಿ ಮಮ್ಮುಟ್ಟಿ ಜೊತೆಗೆ, ಹಿಂದಿಯಲ್ಲಿ ಅಶಾಂತ್ ಚಿತ್ರದಲ್ಲಿ ಅಕ್ಷಯಕುಮಾರ್, ಮಮತಾ ಕುಲಕರ್ಣಿ ಜೊತೆಗೆ ವಿಷ್ಣು ಅಭಿನಯಿಸಿದ್ದಾರೆ.


ಹಿನ್ನೆಲೆ ಗಾಯನ: ನಾಗರಹೊಳೆ ಚಿತ್ರದ ಈ ನೊಟಕ್ಕೆ, ಸಾಹಸಸಿಂಹ ಚಿತ್ರದ ಹೇಗಿದ್ದರೂ ನೀನೇ ಚೆನ್ನ, ಸಿರಿತನಕ್ಕೆ ಸವಾಲ್ ಚಿತ್ರದ ಶಶಿಯ ಕಂಡು ಮೋಡ ಹೇಳಿತು, ಜಿಮ್ಮಿಗಲ್ಲು ಚಿತ್ರದ ತುತ್ತು ಅನ್ನ ತಿನ್ನೋಕೆ, ಸಿಡಿದೆದ್ದ ಸಹೋದರ ಚಿತ್ರಕ್ಕಾಗಿ ಬೇಡ ಅನ್ನೋದು ಉಂಟೆ, ಮೋಜುಗಾರ ಸೊಗಸುಗಾರ ಚಿತ್ರಕ್ಕಾಗಿ ಕನ್ನಡವೇ ನಮ್ಮನ್ನು, ವಿಷ್ಣುಸೇನಾದ ಅಭಿಮಾನಿಗಳೇ ನಮ್ಮ ಪ್ರಾಣ, ಕಿಲಾಡಿ ಕಿಟ್ಟು ಚಿತ್ರದ ಮಡಿಲಲ್ಲಿ ಮಗುವಾಗಿ ನಾನು, ಹಂತಕನ ಸಂಚು ಚಿತ್ರದ ಆಸೆಗಳ ತೊಟ, ನಾಗ ಕಾಳ ಭೈರವ ಚಿತ್ರಕ್ಕಾಗಿ ನಗುವ ಸ್ವರ್ಗ, ಕಲ್ಲು ವೀಣೆ ನುಡಿಯಿತು ಚಿತ್ರದ ಒಲವಿನ ಜೋಡಿ, ಗಂಡುಗಲಿ ರಾಮದ ವಯ್ಯಾರಿ ನೀ, ಚಿನ್ನದಂತ ಮಗ ಚಿತ್ರದ ಸವಿಮಾತನು, ರುದ್ರನಾಗದ ಚೆಲುವಿನ ಚೆನ್ನಿಗ, ಕಿಲಾಡಿಯ ಮುತ್ತೇ ಮಣಿಯೇ ಬೆಂಕಿ ಬಿರುಗಾಳಿಯ ನಮ್ಮೂರ ಬೀದಿಯಲ್ಲಿ ಹಾಗೂ ಅನುರಾಗ ಗೀತೆಯಲ್ಲಿ, ಸಿಂಹಘರ್ಜನೆಯ ಕಣ್ಣಲ್ಲಿ ನೀ ಬಂದು, ಹುಲಿಹೆಜ್ಜೆಯ ಕಂಡದ್ದು ಕಂಡ ಹಾಗೆ. 


ಭಕ್ತಿಗೀತೆಗಳು: ಸ್ವಾಮಿ ಅಯ್ಯಪ್ಪ, ಬನಶಂಕರಿ, ಮಂಜುನಾಥ, ಮಲೆಮಾದೇಶ್ವರ, ಚಾಮುಂಡಿ ದೇವತೆಗಲ ಮೇಲೆ ಭಕ್ತಿಗೀತೆಗಳ ಅಲ್ಬಂಗಳನ್ನು ಹಾಡಿದ್ದಾರೆ. 

ಉತ್ತಮ ನಟನೆಗಾಗಿ ವಿಷ್ಣುವರ್ಧನ್‌ಗೆ ಬಂದಿರುವ ಫಿಲಂಫೇರ್ ಪ್ರಶಸ್ತಿಗಳು: ನಾಗರಹಾವು, ಸುಪ್ರಭಾತ, ಹಾಲುಂಡ ತವರು, ಯಜಮಾನ ಹಾಗೂ ಆಪ್ತಮಿತ್ರ, ಉತ್ತಮ ನಟ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ನಾಗರಹಾವು, ಹೊಂಬಿಸಿಲು, ಬಂಧನ, ಲಯನ್ ಜಗಪತಿರಾವ್, ಲಾಲಿ, ವೀರಪ್ಪನಾಯಕ ಹಾಗೂ ಆಪ್ತರಕ್ಷಕ. 2008ರಲ್ಲಿ ಜೀವಮಾನ ಸಾಧನೆಗೆ ಡಾ. ರಾಜ್‌ಕುಮಾರ್ ರಾಜ್ಯ ಪ್ರಶಸ್ತಿ. 


ಇತರ ಪ್ರಶಸ್ತಿಗಳು: ಬೆಂಗಳೂರು ವಿಶ್ವವಿದ್ಯಾನಿಲಯ ನೀಡಿರುವ ಗೌರವ ಡಾಕ್ಟರೇಟ್, ಸುವರ್ಣ ಜೀವಮಾನ ಸಾಧನೆ ಪ್ರಶಸ್ತಿ ಇಂದಿರಾ ಪ್ರತಿಷ್ಠಾನ ರಾಷ್ಟ್ರೀಯ ಪ್ರಶಸ್ತಿ, ವಿ. ಶಾಂತಾರಾಂ ಪ್ರಶಸ್ತಿ, ಮದ್ರಾಸ್ ಚಲನಚಿತ್ರ ಸಂಘ ಪ್ರಶಸ್ತಿ, ಕೇರಳ ಸಾಂಸ್ಕೃತಿಕ ಹಾಗೂ ಕಲಾಪ್ರಶಸ್ತಿ, 1990ರ ರಾಜ್ಯೋತ್ಸವ ಪ್ರಶಸ್ತಿ, ಆರ್.ಎನ್.ಆರ್. ಪ್ರಶಸ್ತಿ ಮುಂತಾದವು.


ಧಾರಾವಾಹಿಯಲ್ಲಿ: ಶಂಕರ್‌ನಾಗ್ ದೂರದರ್ಶನಕ್ಕಾಗಿ ನಿರ್ದೇಶಿಸಿದ ಆರ್.ಕೆ. ನಾರಾಯಣ್ ಅವರ ಮಾಲ್ಗುಡಿ ಡೇಸ್ ಧಾರವಾಹಿಯಲ್ಲಿ ತಿಂಗಳಿಗೆ 45 ರೂಪಾಯಿ ಎಂಬ ಅಧ್ಯಾಯದಲ್ಲಿ, ವಿಷ್ಣುವರ್ಧನ್ ವೆಂಕಟರಾವ್ ಪಾತ್ರದಲ್ಲಿ ಅಭಿನಯಿಸಿದ್ದರು.

ಸಮಾಜಮುಖಿಯಾಗಿ: ಭಾವೈಕ್ಯತೆ ಪಸರಿಸಲು ಹಾಗೂ ಪ್ರವಾಹದಂತಹ ಪ್ರಾಕೃತಿಕ ವಿಪತ್ತು ಬಂದಾಗ ನೆರವು ನೀಡಲು, ವಿಷ್ಣುವರ್ಧನ್ ಸ್ನೇಹಲೋಕ ಎಂಬ ಸಂಸ್ಥೆ ಸ್ಥಾಪಿಸಿದರು. ಉತ್ತರ ಕರ್ನಾಟಕದಲ್ಲಿ ಪ್ರವಾಹ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಲು, ಇವರು ಪಾದಯಾತ್ರೆ ಮಾಡಿದ್ದರು. ಮೇಲುಕೋಟೆ ಪಟ್ಟಣವನ್ನು ದತ್ತು ತೆಗೆದುಕೊಂಡು ವಿಷ್ಣುವರ್ಧನ್ ಭಾರತಿ ದಂಪತಿಗಳು. ಅಲ್ಲಿ ಕೊಳವೆ ಬಾವಿಗಳನ್ನು ಅಗೆಸಿದ್ದಾರೆ. ಬೆಂಗಳೂರಿನ ಕ್ಯಾನ್ಸರ್ ಸಂಸ್ಥೆ ನಡೆಸಿದ ಕ್ಯಾನ್ಸರ್ ಜಾಗೃತಿ ಪಾದಯಾತ್ರೆಯಲ್ಲಿ, ಸೈಯದ್ ಕಿರ್ಮಾನಿ ಹಾಗೂ ಶಿವರಾಮ್ ಅವರೊಂದಿಗೆ ವಿಷ್ಣು ಭಾಗವಹಿಸಿದ್ದರು. ಮೈಸೂರಿನಲ್ಲಿ ಹುಟ್ಟಿದ ವಿಷ್ಣುವರ್ಧನ್ ತೀವ್ರ ಹೃದಯಘಾತದಿಂದ ಮೈಸೂರಿನಲ್ಲೇ 30.12.2009 ರಂದು ವೈಕುಂಠವಾಸಿಗಳಾದರು. ಚಿತ್ರರಂಗದ ಜೀವಮಾನ ಸಾಧನೆ ಪ್ರಶಸ್ತಿಯನ್ನು ಕರ್ನಾಟಕ ಸರಕಾರ ಡಾ. ವಿಷ್ಣುವರ್ಧನ್ ಪ್ರಶಸ್ತಿ ಹೆಸರಿನಲ್ಲಿ 2011 ರಿಂದ ಕೊಡಮಾಡುತ್ತಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top