ಉಜಿರೆ: ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ಹಿಂದಿ ವಿಭಾಗ ಹಾಗೂ ಕೆನರಾ ಬ್ಯಾಂಕ್ ಉಜಿರೆ ಶಾಖೆ ಸಂಯುಕ್ತ ಆಶ್ರಯದಲ್ಲಿ ಹಿಂದಿ ಮತ್ತು ದಕ್ಷಿಣ ಭಾರತೀಯ ಭಾಷೆಗಳ ಅಂತರ್ ಸಂಬಂಧ’ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., “ನಮ್ಮ ದೇಶದಲ್ಲಿ 22 ಅಧಿಕೃತ ಭಾಷೆಗಳಿದ್ದರೂ 121 ಭಾಷೆಗಳು ಗುರುತಿಸಲ್ಪಟ್ಟಿದ್ದರೂ ಹಿಂದಿ ಭಾಷೆ ಮಾತ್ರ ರಾಷ್ಟ್ರಭಾಷೆಯಾಗಿ ಗುರುತಿಸಲ್ಪಟ್ಟಿದೆ. ಭಾಷೆ ಎಂಬುದು ನಮ್ಮ ಮನಸ್ಸಿನ ಭಾವನೆಯನ್ನು ಹಂಚಿಕೊಳ್ಳುವ ಸಾಧನವೇ ಹೊರತು, ಪ್ರತಿಷ್ಠೆಯ ಸಂಕೇತವಲ್ಲ” ಎಂದರು.
"ಭಾಷೆಯು ದೇಶ, ಪ್ರಾಂತ್ಯ ಮತ್ತು ಧರ್ಮಗಳ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತದೆ. ಭಾಷೆಯು ಎಲ್ಲರನ್ನು ಬೇರ್ಪಡಿಸಲು ಇರುವುದಲ್ಲ. ಭಾರತೀಯರಾದ ನಮ್ಮನ್ನು ನಾವು ಗುರುತಿಸಿಕೊಳ್ಳಲು ಹಿಂದಿ ಭಾಷೆ ಬಹಳ ಮುಖ್ಯ” ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿ, ಮದ್ರಾಸಿನ ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾದ ಉನ್ನತ ಶಿಕ್ಷಣ ಮತ್ತು ಶೋಧ ಸಂಸ್ಥಾನದ ನಿರ್ದೇಶಕ ಡಾ. ಸುಭಾಷ್ ಜಿ. ರಾಣೆ ಅವರು ಮಾತನಾಡಿ, ಭಾರತದ ಯಾವ ಮೂಲೆಗೂ ಹೋದರೂ ಹಿಂದಿ ಭಾಷೆ ಬಹಳ ಪ್ರಯೋಜನಕ್ಕೆ ಬರುತ್ತದೆ. ಹಿಂದಿಯ ಲಿಪಿ ದೇವನಾಗರಿ ಆಗಿರುವುದರಿಂದ ಇದನ್ನು ದೇವಭಾಷೆ ಎನ್ನಲಾಗುತ್ತದೆ ಎಂದು ಹೇಳಿದರು.
“1949ರ ಸೆಪ್ಟೆಂಬರ್ 14 ರಂದು ಹಿಂದಿಯನ್ನು ರಾಷ್ಟ್ರ ಭಾಷೆಯಾಗಿ ಅಂಗೀಕರಿಸಲಾಯಿತು. ಆ ಪ್ರಯುಕ್ತ ಸೆ. 14 ರಿಂದ 15 ದಿನಗಳ ಕಾಲ ಹಿಂದಿ ದಿವಸವನ್ನು ಆಚರಿಸಲಾಗುತ್ತದೆ. ಹಿಂದಿ ದಿವಸದ ಪ್ರಯುಕ್ತ ಈ ವಿಚಾರ ಸಂಕಿರಣ ಆಯೋಜಿಸಿರುವುದು ಸಂತಸದ ಸಂಗತಿ” ಎಂದರು.
ಕನ್ನಡ, ಆಂಗ್ಲ, ಹಿಂದಿ ಸಹಿತ ಭಾಷೆಗಳ ಇತಿಹಾಸವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ದಿಕ್ಸೂಚಿ ಭಾಷಣ ಮಾಡಿದ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ಹಿಂದಿ ವಿಭಾಗ ಮುಖ್ಯಸ್ಥ ಡಾ. ಮುಕುಂದ ಪ್ರಭು, ಹಿಂದಿ ಭಾಷೆಯ ಇತಿಹಾಸ ಮತ್ತು ಸಾಹಿತ್ಯಿಕ ಕೆಲಸಗಳ ಕುರಿತು ಮಾಹಿತಿ ನೀಡಿದರು.
ಅತಿಥಿ, ಸೋಲಾಪುರದ ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಲಕರ್ ವಿಶ್ವವಿದ್ಯಾಲಯದ ಅಧಿಸಭಾ ಸದಸ್ಯ ಮತ್ತು ಸಾಹಿತಿ ಪ್ರೊ. ಧನ್ಯಕುಮಾರ್ ಬಿರಾಜ್ದಾರ್ ಮಾತನಾಡಿ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ. ಕಾಲೇಜು ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ, ಭಾರತೀಯರಲ್ಲಿನ ಒಗ್ಗಟ್ಟು, ಏಕತೆ ಮತ್ತು ಸೌಹಾರ್ದತೆಗೆ ಹಿಂದಿ ಭಾಷೆಯ ಯೋಗದಾನ ಮಹತ್ವದ್ದಾಗಿದೆ. ದೇಶದ ಬಹುಪಾಲು ಜನರು ಹಿಂದಿ ಭಾಷೆಯನ್ನು ಬಳಸುವಾಗ ಎಲ್ಲರೂ ಈ ಭಾಷೆಯನ್ನು ಕಲಿಯುವುದು ಬಹಳ ಮುಖ್ಯವಾಗುತ್ತದೆ. ರಾಷ್ಟ್ರೀಯ ಪರಿಕಲ್ಪನೆಯನ್ನು ಹೆಚ್ಚಿಸಲು ಹಿಂದಿ ಭಾಷೆಯನ್ನು ಕಲಿಯಲೇಬೇಕು. ಆ ಭಾಷೆಯಲ್ಲಿನ ಶ್ರೇಷ್ಠ ಜ್ಞಾನವನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯ ವಿವಿಧ ಹತ್ತು ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಹಾಗೂ ಶ್ರೀ ಧ. ಮಂ. ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ವೈದೇಹಿ ಮತ್ತು ತಂಡದವರು ಪ್ರಾರ್ಥಿಸಿದರು. ಹಿಂದಿ ವಿಭಾಗ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ್ ಎನ್. ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕಿ ಶ್ರುತಿ ಮನಕೀಕರ್ ನಿರೂಪಿಸಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಧಾರಿಣಿ ವಂದಿಸಿದರು ಕನ್ನಡ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕವನ ಮತ್ತು ತಂಡದವರು ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ರಾಜಶೇಖರ ಹಳೆಮನೆ ಸ್ವಾಗತಿಸಿ, ತೇಜಶ್ರೀ ಎಂ. ವಂದಿಸಿ, ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ