ವನಿತಾ ಕಥನ- 15: ಪಾರ್ವತಿ ದೇವಿ- ಗೌರಿ

Upayuktha
0



ವಿಶೇಷವಾಗಿ ದಾಂಪತ್ಯದ ಸಲುವಾಗಿ ಗೌರಿ ಪೂಜೆ ವಿಶೇಷವಾಗಿ ಮಾಡುತ್ತಾರೆ. ಮಾಂಗಲ್ಯ ಭಾಗ್ಯ, ಪತಿಯ ಆಯಸ್ಸು ಎಲ್ಲಕ್ಕೂ ಪಾರ್ವತಿಯ ಆರಾಧನೆ ವಿಶೇಷವಾಗಿದೆ. ಏಕೆಂದರೆ ಶಿವ ಪಾರ್ವತಿಯರದ್ದು ಅನುರೂಪ ದಾಂಪತ್ಯ ಮತ್ತು ಅವರಿಬ್ಬರೂ ಅರ್ಧನಾರೀಶ್ವರರಾಗಿ ಒಟ್ಟಿಗೆ ಇರುವವರು. ಹೀಗಾಗಿ ಗೌರಿಯನ್ನು  ದಾಂಪತ್ಯದ ಸುದೀರ್ಘತೆಗಾಗಿ ಪರಸ್ಪರ ಪ್ರೀತಿಗಾಗಿ ಪೂಜಿಸುತ್ತಾರೆ. 


ಗೌರಿಯು ಜ್ಞಾನಕ್ಕೆ ಮಹತ್ವವನ್ನು ನೀಡಿದವಳು ಮಹಾಭಾರತದಲ್ಲಿ ಉಮಾಮಹೇಶ್ವರ ಸಂವಾದಿಂದ ಅನೇಕ ಲೋಕ ಶಿಕ್ಷಣವನ್ನು ವೇದವ್ಯಾಸರು ಇತರ ಗ್ರಂಥಕರ್ತರು ಮಾಡಿಸಿರುತ್ತಾರೆ. ತುಳಸಿ ದಾಸರ ರಾಮಚರಿತ ಮಾನಸದಲ್ಲಿ ಕೂಡ ಶಿವ ಪಾರ್ವತಿಯರ ಸಂವಾದದ ಮೂಲಕ ರಾಮ ನಾಮದ ಮಹಿಮೆಯನ್ನು ತಿಳಿಸುತ್ತಾರೆ ಅಂತಹ ಗೌರಿದೇವಿ ಎಷ್ಟು ಜಿಜ್ಞಾಸುವಾಗಿದ್ದಳು ಎಂದು ನಮಗೆ ತಿಳಿಯುತ್ತದೆ. ಅನುಶಾಸನ ಪರ್ವದ ಮೂಲಕ ಪಾರ್ವತಿಯ ಪ್ರಶ್ನೆಗಳಿಗೆ ಮಹೇಶ್ವರನು ಉತ್ತರವನ್ನು ನೀಡಿ ಮನುಷ್ಯರಿಗೆ ಮಾರ್ಗದರ್ಶನವನ್ನು ಮಾಡಿದ ಕಾರಣ ರುದ್ರದೇವರನ್ನು ಮಹಾ ಗುರುವಾಗಿ ಪೂಜಿಸಲ್ಪಡುವಂತೆ ಮಾಡಿದೆ.


ಗೌರಿಗೆ ಇಬ್ಬರು ಮಕ್ಕಳು ಕಾರ್ತೀಕೇಯ ಮತ್ತು ಗಣೇಶ. ತಾರಕಾಸುರ ವಧೆಗಾಗಿಯೇ ಸ್ಕಂದನ ಜನನವಾಗುತ್ತದೆ. ಪರ್ವತ ರಾಜನ ಕುವರಿಯಾಗಿ ಜನಿಸಿದ ಗೌರಿಯು ಶಿವನ ಕುರಿತು ತಪಸ್ಸನ್ನು ಆಚರಿಸುತ್ತಾಳೆ ಆದರೆ ರುದ್ರನೇ ತಪಸ್ಸಿನಲ್ಲಿ ಮಗ್ನನಾಗಿರುವ ಕಾರಣ ದೇವತೆಗಳು ಶಿವನನ್ನು ಗಾಢವಾದ ತಪಸ್ಸಿನಿಂದ ಎಚ್ಚರಿಸುವ ಪ್ರಯತ್ನವನ್ನು ಮಾಡುತ್ತಾರೆ. ಲೋಕಕಲ್ಯಾಣಾರ್ಥವಾಗಿ ಶಿವನ ಮೂರನೆ ಕಣ್ಣಿನ ಕ್ರೋಧಕ್ಕೆ ಗುರಿಯಾಗಿ ಮನ್ಮಥನು ಸುಟ್ಟು ಬೂದಿಯಾದರೂ ತಪಸ್ಸಿನಿಂದ ಹೊರಬಂದ ಶಿವನು ಪಾರ್ವತಿಯ ತಪಸ್ಸಿಗೆ ಮೆಚ್ಚಿ ಪಾರ್ವತಿಯನ್ನು ಮದುವೆಯಾಗಿ ಕಾರ್ತೀಕೇಯನ ಮಾತೆಯಾಗಿ ತಾರಕಾಸುರ ವಧೆಯಲ್ಲಿ ಪ್ರಮುಖ ಪಾತ್ರವಹಿಸಿದ ದೇವತೆಗಳ ಸೇನಾಧಿಪತಿ ಕಾರ್ತೀಕೇಯನಾಗಿದ್ದಾನೆ.

ಇನ್ನು ಗಣಾಧಿಪ ಗಣಪತಿಯ ಕೂಡ ಗೌರಿನಂದನ. ಗಣಪತಿಯ ಹುಟ್ಟಿನ ಕಥೆಯಂತೂ ಎಲ್ಲರಿಗೂ ತಿಳಿದಿದೆ. ಪಾರ್ವತಿಯ ಮೈಯಿಂದ ಬಂದ ಮಣ್ಣಿನಿಂದ ಗಣಪನನ್ನು ದೇವಿ ಸೃಷ್ಟಿ ಮಾಡಿದಳು. ಗಣಪತಿಯು ಸರ್ವಗಣಗಳ ನಾಯಕನಾಗಿದ್ದಾನೆ.


ಪಾರ್ವತಿಯು ಅನೇಕ ರೂಪಗಳನ್ನು ಪಡೆದು ದುಷ್ಟರ ಶಿಕ್ಷಣ ಹಾಗೂ ಶಿಷ್ಟ ರಕ್ಷಣೆಯನ್ನು ಮಾಡಿದ್ದಾಳೆ. ಭಾರತೀಯರಲ್ಲಿ 18 ಶಕ್ತಿಪೀಠಗಳಿದ್ದು ಅಲ್ಲಿ ಎಲ್ಲ ಕಡೆಯೂ ವಿವಿಧ ನಾಮಗಳಿಂದ ವಿವಿಧ ಅವತಾರಗಳಿಂದ ದೇವಿಯು ನೆಲಿಸಿ ಭಕ್ತರನ್ನು ರಕ್ಷಿಸುತ್ತಾಳೆ.  ಶಾಕ್ತ್ಯ ಮತವು ಭಾರತದಲ್ಲಿ ಬಹು ಪ್ರಚಲಿತವಾದ ಮತವಾಗಿದೆ. ಭಾರತದಲ್ಲಿ ಮತ್ತು ವಿದೇಶಗಳಲ್ಲಿ ದೇವಿಯ ಆರಾಧಕರು ಬಹಳಷ್ಟು ಇದ್ದಾರೆ. ದೇವಸ್ಥಾನಗಳನ್ನು ಕೂಡ ನೋಡಬಹುದು. ಹಲವಾರು ಸೌಮ್ಯ ಅವತಾರಗಳು ಇದ್ದರೂ ದುರ್ಗೆ ಮತ್ತು ಕಾಳಿಯ ರೂಪದಲ್ಲಿ ಶತ್ರು ಭಯಂಕರಳಾಗಿ ಮನುಷ್ಯರನ್ನು ಅನವಶ್ಯಕವಾಗಿ ತೊಂದರೆ ಕೊಡುವ ರಾಕ್ಷಸರ ಸಂಹಾರಕಳಾಗಿ ಪೂಜೆಗೊಳ್ಳುತ್ತಿದ್ದಾಳೆ.


ಪಾರ್ವತಿ ದೇವಿಯ ಪಾತ್ರ ಬಹು ಪ್ರೇರಕವಾದುದು, ಶಿವನನ್ನು ಮೆಚ್ಚಿ ತಪಸ್ಸು ಮಾಡಿ ಮದುವೆಯಾದ ವಳು ಪಾರ್ವತಿ. ನಾವು ಕೂಡ ಜೀವನದಲ್ಲಿ ಮೆಚ್ಚಿ ಮದುವೆಯಾದರೆ ಕಡೆಯವರೆಗೂ ನಮ್ಮ ಪ್ರೀತಿಗೆ ಬೆಲೆಯನ್ನು ಕೊಟ್ಟು ಪತಿಯೊಂದಿಗೆ ಸಂತಸದಿಂದ ಇರಬೇಕು ಎಂದು ಕಲಿಯಬೇಕು. ಪಾರ್ವತಿ ದೇವಿ ತನ್ನ ಮಕ್ಕಳಿಗೆ ಆದರ್ಶ ತಾಯಿ ಕೂಡ ಆಗಿದ್ದಳು, ಇದನ್ನು ಅನೇಕ ಪುರಾಣಗಳ ಕಥೆಗಳ ಮೂಲಕ ತಿಳಿಯುತ್ತೇವೆ. ಮಹಾಭಾರತದ ಅನುಶಾಸನ ಪರ್ವದಲ್ಲಿ ಅವಳ ಜಿಜ್ಞಾಸೆಯ ಪ್ರಶ್ನೆಗಳ ಮೂಲಕ ಜೀವನ ನಿರ್ವಹಣೆ ಹೇಗೆ ಮಾಡಬೇಕೆಂದು ತಿಳಿಸಿಕೊಡುತ್ತಾಳೆ. ಇಂದಿನ ಆಧುನಿಕ ಮಹಿಳಾ ಸಬಲೀಕರಣದ ಹೋರಾಟ ಮಾಡುವವರಿಗೆ ಪಾರ್ವತಿ/ ಗೌರಿ ಉತ್ತಮ ಉದಾಹರಣೆಯಾಗಿದ್ದಾಳೆ. ನಮ್ಮ ಪುರಾಣ ಇತಿಹಾಸಗಳಲ್ಲಿ ಮಹಿಳೆಯರ ಸಾಮರ್ಥ್ಯ ಮತ್ತು ಅವರ ಶಕ್ತಿಯ ವರ್ಣನೆಯು ದೇವಿಯ ಕಥೆಗಳ ಮೂಲಕ ನೋಡಬಹುದು.


- ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top