ಸುರತ್ಕಲ್: ದೇಶದ ಭವಿಷ್ಯದ ನಾಯಕರು ರೂಪುಗೊಳ್ಳುವುದರಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಮುಖ್ಯವಾಗಿದೆ. ವಿದ್ಯಾರ್ಥಿಗಳು ಕಾಲೇಜಿನ ಚಟುವಟಿಕೆಗಳಲ್ಲಿ ಶ್ರದ್ಧೆ ಉತ್ಸಾಹಗಳಿಂದ ಭಾಗವಹಿಸುವ ಮೂಲಕ ತಮ್ಮೊಳಗಿನ ಸುಪ್ತ ಪ್ರತಿಭೆಗಳನ್ನು ಅನಾವರಣಗಳಿಸಬೇಕು. ಕಲಾ ಲೋಕದಲ್ಲಿ ಮಿನುಗುತ್ತಿರುವ ಅನೇಕ ಪ್ರತಿಭೆಗಳಿಗೆ ಕಾಲೇಜಿನ ವೇದಿಕೆ ಅವರ ಕಲಾ ಪ್ರಯಾಣಕ್ಕೆ ಮೊದಲ ವೇದಿಕೆಯಾಗಿದ್ದು ಗೋವಿಂದ ದಾಸ ಕಾಲೇಜಿನ ಲಲಿತಕಲಾ ಸಂಘವು ಅನೇಕ ಪ್ರತಿಭಾವಂತ ಕಲಾವಿದರನ್ನು ಕಲಾರಂಗಕ್ಕೆ ನೀಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ರೋಟರಾಕ್ಟ್ ಸಮಿತಿ ಅಧ್ಯಕ್ಷೆ ರೋ. ಯಶೋಮತಿ ನುಡಿದರು.
ಅವರು ಹಿಂದೂ ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು, ಸುರತ್ಕಲ್‌ನ ವಿದ್ಯಾರ್ಥಿ ಸೆನೆಟ್ ಮತ್ತು ಲಲಿತಕಲಾ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಜೀವನದ ಪ್ರತಿಯೊಂದು ಹೆಜ್ಚೆಯು ಮುಂದಿನ ಬದುಕಿಗೆ ಮಹತ್ವದ್ದಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಎಲ್ಲಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡರೆ ಉತ್ತಮ ಅವಕಾಶಗಳು ಲಭ್ಯವಾಗುತ್ತದೆ ಎಂದು ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ಗೋಪಾಲ ಎಂ. ಗೋಖಲೆ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಅರಿವನ್ನು ಮೂಡಿಸಿ ನಾಯಕತ್ವದ ಗುಣಗಳನ್ನು ಬೆಳೆಸಲು ವಿದ್ಯಾರ್ಥಿ ಸೆನೆಟ್ ರೂಪಿತಗೊಂಡಿದೆ. ವಿದ್ಯಾರ್ಥಿ ಸೆನೆಟ್‌ನ ಪ್ರತಿನಿಧಿಗಳು ಶಿಸ್ತು, ವಿನಯ, ಆದರ್ಶ ಹಾಗೂ ಆತ್ಮವಿಶ್ವಾಸದೊಂದಿಗೆ ಕಾರ್ಯನಿರ್ವಹಿಸುವುದರ ಮೂಲಕ ಮಾದರಿ ನಾಯಕರಾಗಿ ಬೆಳೆಯಬೇಕು. ವಿದ್ಯಾರ್ಥಿಗಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಕಾಲೇಜು ಸಮಾನ ಅವಕಾಶಗಳನ್ನು ಮತ್ತು ವೇದಿಕೆಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ ಎಂದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯ ಪ್ರವೀಣ್ ಕೆ. ವಿದ್ಯಾರ್ಥಿ ಸೆನೆಟ್‌ನ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ವಿದ್ಯಾರ್ಥಿ ಸೆನೆಟ್‌ನ ಕಾರ್ಯದರ್ಶಿಗಳಾದ ತುಷಾರ್ ಸ್ವಾಗತಿಸಿ ಯಶಸ್ ಕೆ. ಬಂಗೇರ ವಂದಿಸಿದರು. ಪೂರ್ವಿಕಾ ಕಾರ್ಯಕ್ರಮ ನಿರೂಪಿಸಿದರು.
ಉಪಪ್ರಾಚಾರ್ಯ ಪ್ರೊ. ನೀಲಪ್ಪ ವಿ, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ ಆಚಾರ್ಯ ಪಿ., ಲಲಿತಕಲಾ ಸಂಘದ ಸಂಯೋಜಕರಾದ ಡಾ. ವಿಜಯಲಕ್ಷ್ಮಿ , ಡಾ. ಸಂತೋಷ್ ಆಳ್ವ, ಸಜಿತಾ ಕೆ. ನಾಯರ್, ತರಬೇತುದಾರ ವಿನೋದ್ ಶೆಟ್ಟ್ಟಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಧನ್ವಿನ್, ಜಿತಿನ್ ಎನ್. ಶೆಟ್ಟಿ, ಗಗನ್ ಎನ್. ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ವೇದಿಕಾ, ಸ್ವಾತಿ, ಪ್ರತೀಕ್ಷಾ ಎ. ಭಟ್, ಶಿವಾನಿ ಮತ್ತು ಲಲಿತಕಲಾ ಸಂಘದ ಕಾರ್ಯದರ್ಶಿಗಳಾದ ಹಿತ ಉಮೇಶ್, ವೈಶಾಖ್, ನಿರ್ಮಿಕಾ, ಮನೀಶ್ ಡಿ. ಶೆಟ್ಟಿ, ಭರತ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ