ಭಕ್ತಿರಸ ಸಾಮ್ರಾಜ್ಞಿ: ಎಂ.ಎಸ್ ಸುಬ್ಬುಲಕ್ಷ್ಮಿ

Upayuktha
0


(16 ಸೆಪ್ಟೆಂಬರ್ 1916- 11 ಡಿಸೆಂಬರ್ 2004)


ಜಾಗತಿಕವಾಗಿ ಸಾಮಾನ್ಯರಲ್ಲಿ ಸಾಮಾನ್ಯವಾಗಿದ್ದ ಭಾರತ ದೇಶದ ಸಾಂಪ್ರದಾಯಿಕ ಗಾಯನದ ವೈಶಿಷ್ಟ್ಯತೆಯನ್ನು ವಿಶ್ವಸಂಸ್ಥೆಯ ಮೂಲಕ ಪರಿಚಯಿಸಿದ ಮಹಾನ್ ಚೇತನ ಎಂ ಎಸ್ ಸುಬ್ಬುಲಕ್ಷ್ಮಿ. ಹೌದು, ಭಾರತದ ಸಂಗೀತ ಪ್ರಕಾರವನ್ನು ವಿಶ್ವ ಸಂಸ್ಥೆಯ ಮುಂದೆ ಹಾಡಿದ ಭಾರತದ ಪ್ರಪ್ರಥಮ ವ್ಯಕ್ತಿ ಇವರು. ಅಲ್ಲೊಬ್ಬರು ಸ್ವಾಮಿ ವಿವೇಕಾನಂದರು ಚಿಕಾಗೋ ವಿಶ್ವಧರ್ಮ ಸಮ್ಮೇಳನದ ಮೂಲಕ ಭಾರತೀಯ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಟ್ಟರೆ ಇಲ್ಲೋರ್ವ ಗಾಯಕಿ ಭಾರತೀಯ ಗಾನ ಲೋಕವನ್ನು ಲೋಕಕ್ಕೆ ಪರಿಚಯಿಸಿದ ಕೀರ್ತಿಯನ್ನು ಪಡೆದುಕೊಳ್ಳುತ್ತಾರೆ. 

ಕಳೆದ ಶತಮಾನದ ದಕ್ಷಿಣ ಪಥದ ಗಾನ ಕೋಗಿಲೆಯರಲ್ಲಿ ಅಗ್ರಮಾನ್ಯರೆನಿಸಿದವರು ಎಂ.ಎಸ್ ಸುಬ್ಬುಲಕ್ಷ್ಮಿ ಅವರು. ಭಾರತರತ್ನವನ್ನು ಮುಡಿಗೇರಿಸಿಕೊಂಡ ಮೊದಲ ಭಾರತೀಯ ಗಾಯಕಿ ಎಂದರೆ ಇವರೇ.


1916 ಸೆಪ್ಟೆಂಬರ್ 16 ರಂದು ತಮಿಳುನಾಡಿನ ಮಧುರೈಯಲ್ಲಿ ಜನಿಸಿದ ಇವರು ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಗಾಯನ ಕ್ಷೇತ್ರಕ್ಕೆ ಕೊಡುಗೆ ನೀಡುವುದರಲ್ಲಿ ಸಫಲರಾದರು. ಇವರ ಮೊದಲ ರೆಕಾರ್ಡಿಂಗ್ ಅಂದೇ ನೆರವೇರಿತು. ಅಪ್ರತಿಮ ಪ್ರತಿಭೆಯಾಗಿದ್ದ ಇವರು ತಮ್ಮ 13ನೇ ವಯಸ್ಸಿನಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ಮೊದಲ ಪ್ರದರ್ಶನವನ್ನಿತ್ತರು. ಈ ಚೊಚ್ಚಲ ಪ್ರದರ್ಶನದ ಬಳಿಕವೇ ಇವರು ನಾಡಿನ ಪ್ರಸಿದ್ಧ ಗಾಯಕಿಯರಲ್ಲೊಬ್ಬರಾದರು.


ಭಾರತ ಅದಿನ್ನೂ ಆಂಗ್ಲರ ಕಪಿಮುಷ್ಠಿಯಲ್ಲಿದ್ದ ಕಾಲ. ಆದರೂ ಅದಾಗಲೇ ಅವರು ನ್ಯೂಯಾಕ್, ಲಂಡನ್, ಕೆನಡಾ ಹೀಗೆ ಹಲವೆಡೆ ಭಕ್ತಿಗೀತೆಯ ಪ್ರದರ್ಶನ ನೀಯಲು ಸಫಲತೆಯನ್ನು ಕಂಡರು.1963 ರಲ್ಲಿ ಎಡಿನ್‌ಬರ್ಗ್ ಇಂಟರ್‌ನ್ಯಾಶನಲ್ ಫೆಸ್ಟಿವಲ್ ಆಫ್ ಮ್ಯೂಸಿಕ್ ಅಂಡ್ ಡ್ರಾಮಾದಲ್ಲಿ ಅವರ ಸಂಗೀತ ಕಚೇರಿಗಳು; ಕಾರ್ನೆಗೀ ಹಾಲ್, ನ್ಯೂಯಾರ್ಕ್; 1966ರಲ್ಲಿ UN ದಿನದಂದು UN ಜನರಲ್ ಅಸೆಂಬ್ಲಿ; ರಾಯಲ್ ಆಲ್ಬರ್ಟ್ ಹಾಲ್, ಲಂಡನ್ 1982 ರಲ್ಲಿ; ಮತ್ತು 1987 ರಲ್ಲಿ ಮಾಸ್ಕೋದಲ್ಲಿ ನಡೆದ ಫೆಸ್ಟಿವಲ್ ಆಫ್ ಇಂಡಿಯಾ ಅವರ ವೃತ್ತಿಜೀವನದಲ್ಲಿ ಗಮನಾರ್ಹ ಹೆಗ್ಗುರುತುಗಳಾಗಿವೆ. ಪದ್ಮ ಭೂಷಣ, ಪದ್ಮ ವಿಭೂಷಣ, ರೋಮನ್ ಮೆಗಸಸಿ ಅವಾರ್ಡ್, ಭಾರತ ರತ್ನ ಹೀಗೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾದವರಿವರು.


ಎಷ್ಟೇ ಮೇಲೇರಿದರೂ ಭಕ್ತಿಯೇ ಇವರ ಜೀವನದ ಸಕಲ ಜೀವಾಳವಾಗಿತ್ತು. 1969  ರಲ್ಲಿ ರಾಮೇಶ್ವರಂ ಗೆ ಬಂದ ಅವರು ರಾಮನಾಥ ಸ್ವಾಮಿಯ ಪ್ರತಿ ವಿಗ್ರಹದ ಮುಂದೆಯೂ ಭಕ್ತಿಗೀತೆಗಳನ್ನು ಹಾಡಿ ಭಗವಂತನಿಗೆ ಸಮರ್ಪಿಸಿದರು. ಇಂದಿಗೂ ಸುಪ್ರಭಾತಗಳು, ವಿಷ್ಣು ಸಹಸ್ರನಾಮ ಹಾಗೂ ಶಂಕರಾಚಾರ್ಯ ವಿರಚಿತ ಹಲವು ಸ್ತೋತ್ರಗಳು ಎಂದ ತಕ್ಷಣ ನೆನಪಾಗುವವರು ಇವರೇ.


1997 ರಲ್ಲಿ ತಮ್ಮ ಪತಿಯ ನಿಧನಾ ನಂತರ ತಮ್ಮ ಸಾರ್ವಜನಿಕ ಜೀವನಕ್ಕೆ ಪೂರ್ಣವಿರಾಮವಿಟ್ಟರು. ಹಾಗೂ ಕಳೆದ ಶತಮಾನ ಕಂಡ ಅಪ್ರತಿಮ ಗಾನ ಜ್ಯೋತಿ 2004 ರ ಡಿಸೆಂಬರ್ 11 ರಂದು ಕೊನೆ ಉಸಿರಳೆದರು.


ದಕ್ಷಿಣ ಭಾರತದ ಭಕ್ತಿ ಗೀತೆಗಳ ಜೀವಾಳವೆನಿಸಿದ ಇವರು, ಹಲವಾರು ಸಂಸ್ಕೃತ ಸ್ತೋತ್ರಗಳಿಗೆ ರಾಗ ಸಂಯೋಜನೆ ಮಾಡಿ ಮನೆ ಮನಗಳಲ್ಲಿಯೂ ಆ ಎಲ್ಲಾ ಸ್ತೋತ್ರಗಳು ತಲುಪುವಂತೆ ಮಾಡಿದ್ದು ಇವರ ಭಕ್ತಿಗೆ ಹಿಡಿದ ಕೈಗನ್ನಡಿ. ಸದಾಕಾಲ ಭಕ್ತಿಗೀತೆಗೆ ಪ್ರಶಸ್ತಿಯನ್ನು ನೀಡುತ್ತಿದ್ದ ಇವರು ಹಿಂದಿಯ ಮೀರಾ ಎನ್ನುವ ಚಲನಚಿತ್ರದಲ್ಲಿಯೂ ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ. ಹಲವು ಚಿತ್ರಗಳಲ್ಲಿ ನಟಿಸಿದ ಇವರು ಅಲ್ಲಿಯೂ ಭಕ್ತೀರಸಕ್ಕೆ ಪ್ರಾಧಾನ್ಯತೆಯನ್ನು ನೀಡಿದ್ದರು.


ಗಾಂಧೀಜಿಯೇ ಮೊದಲಾದ ಸ್ವಾತಂತ್ರ್ಯ ಹೋರಾಟಗಾರರು ಇವರನ್ನು ಕೊಂಡಾಡಿದ್ದನ್ನು ನೋಡಬಹುದು. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿದೆ. ಅಂತೆಯೇ ಇವರು ಹಾಡಿದ ಭಾರತೀಯ ಭಾಷೆಗಳು ಹಲವು. ಇವರು ಕನ್ನಡ, ಸಂಸ್ಕೃತ, ತಮಿಳು, ತೆಲುಗು, ಮಳೆಯಾಳಂ, ಹಿಂದಿ, ಮರಾಠಿ, ಬೆಂಗಾಲಿ ಭಾಷೆಗಳಲ್ಲದೆ ಅರೇಬಿಕ್ ಹಾಗೂ ಆಂಗ್ಲ ಭಾಷೆಗಳಲ್ಲಿಯೂ ತಮ್ಮ ಗಾಯನದ ಚಾಪನ್ನು ಮೂಡಿಸಿದ್ದಾರೆ. 93 ರಾಗಗಳಲ್ಲಿ ಇವರು ಹಾಡಿ ರಾಷ್ಟ್ರದಾದ್ಯಂತ ಮನೆ ಮಾತಾಗಿದ್ದಾರೆ. ಇಂದಿಗೂ ಸಂಸ್ಕೃತ ಶ್ಲೋಕಗಳ ಅರ್ಥಪೂರ್ಣ ಪಠಣವೆಂದ ತಕ್ಷಣ ಜನಮಾನಸದಲ್ಲಿ ಕೇಳಿ ಬರುವ ಏಕಮಾತ್ರ ಅದ್ವಿತೀಯ ನಾಮವೆಂದರೆ ಅದೇ ಸಂಗೀತ ಸಾಮ್ರಾಜ್ಞೆ ಎಮ್. ಎಸ್ ಸುಬ್ಬಲಕ್ಷ್ಮಿ.

- ಅಭಿಜ್ಞಾ ಉಪಾಧ್ಯಾಯ

ಉಪನ್ಯಾಸಕಿ,

ಎಸ್‌ಡಿಎಂ ಕಾಲೇಜು ಉಜಿರೆ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top