ಖಾರ ಮಸಾಲೆ: 'ಅತ್ಯಾಚಾರ ಮಾಡುದಂದ್ರs ಸಲೀಸಾಗೇತಿ'

Upayuktha
0



'ಏನು ಸುದ್ದಿ ಗುರುವೇ?' ಕೇಳಿದ ಬೀಡಿ ಸೇದುತ್ತ ಸ್ಪೀಡ ಬ್ರೇಕರ್

'ಏನಿಲ್ಲಾ ನೀ ಹ್ಯಾಂಗ ಆರಾಮಸೀರ ಬೀಡಿ ಸೇದ್ತಿಯಲಾ, ಹಂಗs ಇಲ್ಲಿ ಅಷ್ಟೇ ಸಲೀಸಾಗಿ ಅತ್ಯಾಚಾರ ನಡದಾವು!' ಅಂದ ಟಕಳು

'ಹಂಗಂದ್ರ ಏನು? ನಿನ್ನ ಮಾತಿನ ಅರ್ಥ?' ಎಂದ ಸ್ಪೀಡ ಬ್ರೇಕರ್

'ಶುದ್ದ ಕನ್ನಡದಾಗೇ ಐತೇಲ್ರಿ ಸಾಹೇಬ್ರs, ಇನ್ನಾ ಏನು ಬಿಡಿಸಿ ಹೇಳೂದು?' ಎಂದ ಡ್ರಮ್ಶೇಟ್

'ಇಂವಾ ಯಾರಲೇ ತಮ್ಮಾ? ಯಾರ ಯಾರ್ಯಾನೋ ಕರ್ಕೊಂಡ ಬರ್ತಿರಲಲೇ?' ಎಂದ ಕಾಕಾ

'ಇಂವಾ ಡ್ರಮ್ ಶೆಟ್ ಅಂತ ಹೇಳಿ ಕಾಕಾ, ನಮ್ಮ ಡುಮ್ಯಾ ಅದಾನಲಾ, ಉಸ್ಕಾ ಕಜೀನ್ ಬ್ರದರ್' ಎಂದ ಬಾಶಾ

'ಹೌಂದಾ? ಅಂವಾ ಡುಮ್ಯಾ ಎಲ್ಲಿ ಅದಾನ ಈಗ?' ಕೇಳಿದಳು ರಾಶಿ

'ಅಂವಾ ನೋಡವಾ ಈಗ ಕಮಲಾನ ಪ್ರಚಾರಕ್ಕ ಹೋಗ್ಯಾನು' ಅಂದ ಶೌರಿ.


'ಯಾವ ಕಮಲಾ? ಗುತ್ನಾಳನ ಕಮಲಾನೋ ಏನು ಜಜೀಯೆಂದ್ರನ ಕಮಲಾನೋ?' ಎಂದು ವ್ಯಂಗ ನಗೆ ನಕ್ಕ ಕಾಳ್ಯಾ

'ಏ ಕಮಲಾ ಅಂದ್ರs ಇಲ್ಲಿಗಿ ಏನೂ ಸಂಬಂಧ ಇಲ್ಲ, ಅಲ್ಲಿ ಅಮೇರಿಕಾದಾಗ ಎಲೆಕ್ಷನ್ ನಡೆದೈತಲಾ ಅಲ್ಲಿಯ ಕಮಲಾ ಹ್ಯಾರಿಸ್!' ಅಂದ ಶೌರಿ

'ಸುಳ್ಳ ಹೇಳಾಕತ್ತಿ ನೀ, ಅಲ್ಲಾ ಎಲ್ಲಿ ಡುಮ್ಯಾ? ಎಲ್ಲಿ ಹ್ಯಾರಿಸ್? ಎಲ್ಲಿ ಅಮೇರಿಕಾ? ಒಂದಕ್ಕೊಂದು ತಾಳ ಇಲ್ಲಾ ಮೇಳ ಇಲ್ಲಾ?' ಎಂದ ಕಾಕಾ

'ಏ ಕಾಕಾ ನೀ ತಾಳ ಇಲ್ಲ ತಂತಿ ಇಲ್ಲಂತ ಹ್ಯಾಂಗ ಅಂತಿದಿ? ಈಗ ಬಂಡೆ ಹೋಗಿಲ್ಲs ಏನು ಪ್ರಚಾರಕ್ಕs? ಹಂಗೇನಪಾ ಇದೂನು!' ಎಂದ ಶೌರಿ

'ಏ ಮಳ್ಳಮಕಾಸಿ, ಬಂಡೆನ ಲೇವಲ್ ಏನು? ಇವ್ನ ಲೇವಲ್ ಏನು? ಎರಡೂ ಒಂದೇ ಏನು?' ಅಂತ ನಕ್ಕ ಸ್ಟೀಲ

'ಅಲ್ಲೋ ಈ ಡುಮ್ಯಾಗ ಇಲ್ಲಿ ಪಂಚಾಯತಿ ಲೇವಲ್ ಎಲೆಕ್ಷನ್ ಗೆಲ್ಲಿಕ್ಕೇ ಆಗಿಲ್ಲ, ಇಂವಾ ಹೋಗಿ ಟ್ರಂಪನ ವಿರುದ್ಧ ಪ್ರಚಾರ ಮಾಡ್ತಾನಾ?' ಎಂದ ಟಕಳು.

'ಅದ್ಕೇನ ಸಂಬಂಧ ಐತಿ? ಇಲ್ಲಿನೂ ಎಲೆಕ್ಷನ್ದಾಗ ಗೆಲ್ಲಲಾರ್ದು ಮಿನಿಸ್ಟರ್ ಆಗಿಲ್ಲೇನs? ಹಂಗೇಪಾ ಅದು!' ಎಂದಳು ರಾಣಿ

'ಏ ಅದು ಇಲ್ಲಿ ನಡಿತೈತಿ, ಅಲ್ಲಿ ನಡೆಂಗಿಲ್ಲ!' ಎಂದ ಗುಂಡ್ಯಾ

'ಏ ಈಗ ನೋಡು ಬರೀ ಎಲ್ಲಿ ನೋಡಿದರಲ್ಲಿ ಅತ್ಯಾಚಾರ ನಡದಾವು, ಹಂಗೇ ಅದೂ' ಎಂದ ಕಾಳ್ಯಾ

'ಏನ ಹುಚ್ಚ ಅದಾನಲೇ ಇಂವಾ? ಅತ್ಯಾಚಾರಕ್ಕೂ ಎಲೆಕ್ಷನ್ಕೂ ಏನ ಸಂಬಂಧ ಐತಿ?' ಎಂದ ಸ್ಪೀಡ ಬ್ರೇಕರ

'ಅತ್ಯಾಚಾರನೂ ಒಪ್ಪಿಗಿ ಇರಲಾರ್ದೇ ಯಾವುದರೇ ಆಸೆ ಆಮಿಷ ತೋರ್ಸಿ ಮಾಡ್ತಾವು, ಹಂಗೇ ಎಲೆಕ್ಷನ್ನೂ ಯಾವುದರೇ ಗ್ಯಾರಂಟಿ ತೋರ್ಸಿ ಮಾಡ್ತಾರು!' ಎಂದು ನಕ್ಕ ಡ್ರಮ್ಶೆಟ್

'ಆಹಾಹಾ! ಏನೂ ನಿಮ್ಮ ವಿಚಾರ ಆಚಾರ! ಮೆಚ್ಚಬೇಕು ನೋಡು' ಎಂದು ಕಾಕಾ ಕಟಕಟನೇ ಹಲ್ಲು ಕಡಿದ

'ಹಂಗೇ ಐತಿ ಕಾಕಾ ಈಗ, ಅಧಿಕಾರದ ಮದವೇರಿದ ರಜ್ವಲನಂತೋರು ಮಾಡ್ತಾವು, ಮ್ಯಾಗ ವಿಡಿಯೋ ಬ್ಯಾರೆ ಮಾಡ್ಕೊಂಡು ಸಾಯ್ತಾವು' ಎಂದ ಗುಡುಮ್ಯಾ.


'ಅದ್ಕೇ ಗೌಡ್ರು ಗುಡಿಗ್ಯಾರ ಮೊನ್ನೆ, ಮೂರು ತಿಂಗಳು ನನ್ನ ಮನ್ಯಾಗ ಮನಗ್ಸಿದ್ರಿ ಇನ್ನs ನಡೆಂಗಿಲ್ಲ ನಿಮ್ಮ ಆಟ! ನಾ ಈಗ ಹೊಂಟೆ ಹೊರಗ ಅಂತ' ಅಂದ ಡುಪ್ಲಿಕೇಟ

'ಇಂವಾ ಯಾರು? ಹೊಸಾ ಗಿರಾಕಿ ಕಾಣ್ತೈತಲಾ?' ಅಂತ ಆಕಳಸಗೊಂತs ಕೇಳಿದ ರಬಡ್ಯಾ

'ಇಂವಾ ಡುಪ್ಲಿಕೇಟ ಅಂತ' ಅಂದ ಗುಂಡ್ಯಾ

'ಹಂ ಮತ್ತs ಈಗ ಎಲ್ಲಾ ಕಡೆ ಡುಪ್ಲಿಕೇಟ್ನೆ ಅಲಾ? ಓರಿಜಿನಲ್ ಎಲ್ಲಿ ಐತೆ?' ಎಂದು ನಕ್ಕಳು ರಾಶಿ

'ಏ ಹಂಗನಬ್ಯಾಡಾ ನೀ, ನಮ್ಮ 'ಮುಡಾ' ಮತ್ತ ನಮ್ಮ ಈಗ ಪುಢಾರಿಗಳು ಆಡೋ ನಾಟಕ ಎಲ್ಲಾ ಓರಿಜಿನಲ್ ಅದಾವು!' ಅಂತ ನಕ್ಕ ಡ್ರಮ್ಶೆಟ್

'ಹೌಂದ? ಅವುನೂ ನಿನ್ನ ಗತ್ಲೆ ಡಂ ಡಂ ಡುಂ ಡುಂ ಅಂತ ಡ್ರಮ್ ಶೆಟ್ ಆವಾಜ್ ಮಾಡಕತ್ತಾವು ಅದ್ಕೆ' ಎಂದ ಅದೇ ಬಂದ ಟುಮ್ಯಾ

'ಈಗ ಎಲ್ಲಾ ಆವಾಜ್ ಬಂದ್! ಎಲ್ಲಿ ನೋಡಿದ್ರೂ ಬರೇ ಅತ್ಯಾಚಾರದ ಸುದ್ದಿನೇ ಕೇಳಿ ಕೇಳಿ ಸಾಕಾಗೇತಿ' ಎಂದಳು ರಾಣಿ

'ಹೌಂದು ಏನೂ ಅರಿಯದ ಕಂದಮ್ಮಗಳ ಮ್ಯಾಲೂ ಅತ್ಯಾಚಾರ ಮಾಡ್ತಾವು, ಸ್ವಂತ ತಂದೆನೇ ಮಗಳ ಮ್ಯಾಲ ಅತ್ಯಾಚಾರ ಮಾಡಿ ಗರ್ಭಿಣಿ ಮಾಡ್ತಾವು! ಛೇ ಛೇ ಛೇ ಇದು ಮರ್ಯಾದಿವಂತರು ಬಾಳುವ ಜಗತ್ತs?' ಎಂದು ಬೇಸರದಿಂದ ಕೇಳಿದ ಕಾಕಾ.


'ಎಲ್ಲಾ ಸೌಕರ್ಯಗಳು ಹೆಚ್ಚಾದಂಗ ಜಗತ್ತು ಹೀಂಗೇ ಕೆಡ್ತೈತಿ ನೋಡ್ರಿ' ಎಂದಳು ರಾಶಿ.

'ಏನಿಲ್ಲs ಕಾನೂನು ಬಿಗಿ ಆಗ್ಬೇಕು, ಅಂತವನ್ನ ಗಲ್ಲಿಗ್ಹಾಕಬೇಕು, ಅಂದ್ರs ಉಳಿಕಿದ್ದು ಅಂಜಿ ಸೀದಾ ಹಾದಿಗೆ ಬರ್ತಾವು!' ಎಂದ ಡುಪ್ಲಿಕೇಟ

'ಮತ್ತ ಹಂಗs ಆಕ್ಕಿದ್ರ ಹಿಂಗ್ಯಾಕ ಇರ್ತಿತ್ತು ಇಲ್ಲಿ?' ಕೇಳಿದ ರಬಡ್ಯಾ

'ಹ್ಯಾಂಗ?' ಅಂದ ಧೀಮಾಕಿನ ಗಂಜಿ

'ಅದೇ ಜಲ್ದಿ ಜಲ್ದಿ ನ್ಯಾಯಾ ಸಿಗಬೇಕು, ಈಗ ನೋಡಪಾ 1994ರ ಆಗಿದ್ದ ಗದ್ಲ ಟೈಟ್ಲರಂದು ಇನ್ನಾ ನಡದೈತಿ, ಅದರಾಗ ಇದ್ದವರೇ ಅದನ್ನು ಮರತಾರು' ಎಂದ ಸ್ಪೀಡ ಬ್ರೇಕರ್


'ಅವರು ಮರತರ ಏನಾತು? ಇವ್ರು ನೆನಪ್ರಸ್ತಾರಲಾ?' ಅಂತ ನಕ್ಕ ಧಿಮಾಕ ಗಂಜಿ

'ಈಗ ನೋಡಪಾ, ರಾಜ್ಯಪಾಲರು ಎಷ್ಟ ಗಡಿಬಿಡಿ ಮಾಡಿ ಮುಡಾದ್ದು ತನಿಖೆ ಮಾಡಕ್ಕ ಹೇಳ್ಯಾರು ಅಂತ ತಗಾದೆ ತಗದ್ರು, ಸ್ಟ್ರೈಕ್ ಮಾಡಿದ್ರು ಟಗರು ಬಂಡೆ ಎಲ್ಲಾ ಸೇರಿ' ಎಂದಳು ರಾಶಿ.

'ಹೌದು ಏನಾತು ಮುಂದ ಹೇಳು?' ಎಂದ ಸ್ಟೀಲ್

'ಅದೇ ಆ ಮುನಿದ ರತ್ನ ಇದ್ನಲಾ ಅವನ ಕೇಸಿನ್ಯಾಗ ತಾಬಡ ತೋಬಡ ಅರೆಸ್ಟ್ ಮಾಡಿ ತಂದು ಠಾಣೆದಾಗ ಕುಂದರ್ಸ್ಯಾರು, ಇದು ತಪ್ಪಲ್ಲ ಏನು?' ಎಂದಳು ರಾಶಿ.

'ಅದೇ ಟೈಪ್ ಕೇಸ್ ಇಲ್ಲಿ ಯಾದ್ಗಿರಿ ಎಂಎಲ್ಎ ಮ್ಯಾಲ ಐತಿ, ಇಲ್ಲಿ ನೋ ಅರೆಸ್ಟ್ ಓನ್ಲಿ ರೆಸ್ಟ್!' ಎಂದ ಡುಪ್ಲಿಕೇಟ.

'ಏ ಘೋಡಾ ಭೀ ಉನ್ಕಾ ಹೈ ಔರ್ ಮೈದಾನ್ ಭೀ ಉನ್ಕಾ ಹೈ! ಅದ್ಕs ಅವರು ಹ್ಯಾಂಗ ತಮಗ ಬೇಕು ಹಂಗ ಮಾಡ್ತಾರು, ಅದನ್ನು ಕೇಳಾಕ ತೂ ಕೌನ್?' ಎಂದ ಬಾಶಾ.


'ನಾ ಯಾರಾ? ಹ್ಯಾರಿಸ್ ನ ಪ್ರಚಾರಕ ಅಮೇರಿಕಾಕ್ಕ ಹೋಗ್ಯಾನಲಾ ಡುಮ್ಯಾ ಅವನ ಪೈಕಿ ಇದ್ದೀನಿ ನಾ!' ಎಂದು ಎದೆಯುಬ್ಬಿಸಿ ಹೇಳಿದ ಡುಪ್ಲಿಕೇಟ.

'ಇದೆಲ್ಲಾ 'ಆಕಸ್ಮಿಕ' ಅಂತ ನಮ್ಮ ಹೊಂ ಮಿನಿಸ್ಟರ್ನೇ ಹೇಳ್ಯಾರಲಾ?' ಎಂದು ನಕ್ಕ ಸ್ಪೀಡ ಬ್ರೆಕರ್.

' ಅಲ್ಲಲೇ ನೀನೂ ಹೋಗಬೇಕಿಲ್ಲ ಅಮೇರಿಕಾಕ್ಕ ಆ ಡುಮ್ಯಾನ ಕೂಡ, ಇಲ್ಯಾಕ ಬಂದಿ ಸಾಯ್ಲಾಕ?' ಎಂದು ಜಬರಿಸಿದ ಕಾಳ್ಯಾ

'ಏ ಅಲ್ಲಿ ಟ್ರಂಪನ ಮ್ಯಾಗ ಮತ್ತs ಅಟ್ಯಾಕ್ ಆಗೇತಿ, ಇಂವಾ ಹೋಗಿ ಏನ್ಮಾಡ್ತಾನು?' ಅಂದಳು ರಾಣಿ.

'ಏ ಇಂವಾ ಖರೇನs ಹೋಕ್ಕಾನಂದೇನು? ಇವನು ಇಲ್ಲ ಆ ಡುಮ್ಯಾನೂ ಇಲ್ಲ ಎಲ್ಲಾ ಬೋಗಸ್!' ಅಂತ ನಕ್ಕಳು ರಾಶಿ.

'ಇವಕ್ಕ ಇಲ್ಲೇ ಬಿಟ್ಟಬಂದಹಳ್ಳಿಗಿ ಹೋಗಾಕ ಆಗವಲ್ತು, ಸುಮ್ನ ಉದ್ರಿ ಮಾತ ಹೇಳ್ತಾವು' ಎಂದ ಕಾಕಾ.

'ಅಲ್ಲಿ ನೋಡಿದ್ರಿಲ್ಲೋ, ನಾಗಮಂಗಲದಾಗ ಗಣೇಶನ ಮೆರವಣಿಗಿ ಮ್ಯಾಗ ತಲವಾರ ಪೇಟ್ರೋಲ್ ಬಾಂಬ್ ಹಾಕ್ಯಾರ, ಎಂಥಾ ಕಾಲ ಬಂತಂತಿನಿ?' ಅಂದಳು ರಾಶಿ.


'ಮಂಡ್ಯ ಅಂದ್ರs ಸಕ್ಕರಿ ಹಂಗ ಸಿಹಿ ಮಂದಿ ಐತಿ ಅಲ್ಲಿ, ಅಲ್ಲಿನೂ ಇಂಥಾ ಕ್ರಿಮಿನಲ್ ಮಂದಿ ಸೇರ್ಯಾರಾ?' ಅಂದ ಕಾಕಾ

'ಹಂ ಬೈ ಎಲೆಕ್ಷನ್ ಬಂತಲಾ, ಇನ್ನ ಶುರು ಡಿಶುಂ ಡಿಶುಂ!' ಎಂದ ಸ್ಪೀಡ ಬ್ರೇಕರ್.

'ಹೊಗ್ಗೊ ಇವ್ನ ಹೇಂತಿ, ಎಲ್ಲಾ ಸಾಮರಸ್ಯ ಹಾಳುಗೆಡುವುತಾರ ನೋಡು' ಎಂದ ಸ್ಟೀಲ್.

'ಹಂ ಮತ್ತs ಬೆಂಕಿ ಹತ್ತಿ ಉರಿಯೂ ಗಳಾ ಹೀರಿ ಅದ್ರಾಗ ಮೆಕ್ಕೆ ತೆನಿ ಸುಟಗೊಳು ಮಂದಿನೇ ಭಾಳಾಗೈತಿ ನೋಡು ಈಗ!' ಎಂದ ಟಕಳು.

'ನಿನ್ನ ತಲ್ಯಾನ ಕೂದಲಾ ಹ್ಯಾಂಗ ಹೋಗ್ಯಾವಲಾ ಟಕಳು, ಹಂಗs ಆ ಸಾಮರಸ್ಯ ಕೆಡ್ಸವ್ರs ಒಂದೊಂದು ಎಲುಬು ಸೆಪರೇಟ ಮಾಡಿದ್ರs, ಆಗ ಹಾದಿಗಿ ಬತಾ೯ರು ಇವ್ರು' ಎಂದ ಶೌರಿ.


'ಏ ನನ್ನ ತೆಲಿ ಉಸಾಬ್ರಿಗಿ ಬರಬ್ಯಾಡ ನೋಡು ಈಗೇ ಹೇಳ್ತಿನಿ' ಅಂತ ಆವಾಜ್ ಹಾಕಿದ ಟಕಳು.

'ಮತ್ತs ಯಾರ ತೆಲಿ ಹಿಡಿಲಿ?' ಎಂದು ನಕ್ಕ ಶೌರಿ.

'ಏ ನೀ ಆ 'ಅಸಂತೋಸ'ನ ತಲಿ ಹಿಡಿ, ಮೊನ್ನೇ ಎಲ್ಲಾರನೂ ಕರದು ಮಾತಾಡ್ಯಾನು ಆದ್ರೂ ಇವರು ಪಾದಯಾತ್ರೆ ಮಾಡ್ತಿನಿ ಅಂತ ಹಿಂಹುಲಿ ಗೋಕಾಕ ಕರದಂಟ, ಉಗ್ರಪ್ರತಾಪಿ, ದಾವಣಗೇರೆ ದೋಸೆ, ಚಿಕ್ಕೋಡಿ ಸೊಲ್ಲೆ ಆ ಸೊರಬದ ಕುಮಾರಾ ಎಲ್ಲಾರೂ ಹೊಂಟಾರ!' ಎಂದು ನಕ್ಕ ಡ್ರಮಸೆಟ್.

'ಅದು ಸಿಟ್ಟೂರಿ ಆಯಂಡ್ ಮರಿಸಿಟ್ಟೂರಿ ಮ್ಯಾಗಿನ ಸಿಟ್ಟು ತಗೋ' ಎಂದ ಕಾಳ್ಯಾ.


'ಅಲ್ಲಿನೂ 'ಕಮಲ'ಕ್ಕ ಎಷ್ಟ ದಳಗಳು ಅದಾವು ಅಷ್ಟು ಗ್ರೂಪ್ಗಳು ಅದಾವು ನೋಡು' ಎಂದ ಡುಪ್ಲಿಕೇಟ್.

'ಅದ್ರಾಗ ಡುಪ್ಲಿಕೇಟೇ ಭಾಳ ಅದಾವು!' ಅಂತ ನಕ್ಕ ಸ್ಟೀಲ್.

'ಹಂ ಇರಲಿ ನಡ್ರಿ ನಾವು ಚಾ ಕುಡುದು ನಾಗಮಂಗಲಕ ಹೋಗಾಮು, ಅಲ್ಲಿ ಶಾಂತಿ ಸಭೆ ಮಾಡಿ ಎಲ್ಲಾರಿಗೂ ತಿಳವಳಿಕೆ ಹೇಳಾಮು, ಎಲ್ಲಾರೂ ಅಣ್ಣ ತಮ್ಮಂದಿರಂತೆ ಚಂದಗೆ ಬಾಳ್ರಿ ಅಂತ ಹೇಳಿ ಅಲ್ಲಿ ಹೊತ್ತಿದ ಕಿಡಿ ಆರ್ಸಿ ಬರಾಮು ನಡ್ರಿ' ಅಂತ ರಾಣಿ ಎಲ್ಲಾರಿಗೂ ಕರಕೊಂಡು ಶಾಂತಿ ಸ್ಥಾಪನೆ ಮಾಡಾಕ ದೃಢ ನಿಶ್ಚಯ ಮಾಡಿ ಹೊಂಟಳು


-ಶ್ರೀನಿವಾಸ ಜಾಲವಾದಿ, ಸುರಪುರ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top