ಇಂದು ವಿಶ್ವ ಅನುವಾದ ದಿನ- ಸೆಪ್ಟೆಂಬರ್ 30
ಅಂತಾರಾಷ್ಟ್ರೀಯ ಅನುವಾದ ದಿನವನ್ನು ಸೆಪ್ಟೆಂಬರ್ 30ನೇ ತಾರೀಖಿನಂದು ಆಚರಿಸಲಾಗುತ್ತದೆ. ಅನುವಾದಕರ ಕೆಲಸದ ಮಹತ್ವ ಅವರ ಪರಿಶ್ರಮವನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಅಂತಾರಾಷ್ಟ್ರೀಯ ಅನುವಾದದಿನವನ್ನು ಆಚರಿಸಲಾಗುತ್ತಿದೆ. ಮೇ ತಿಂಗಳ 24ನೇ ತಾರೀಖಿನಂದು 2017ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಂತಹ ಒಂದು ಅನುವಾದ ದಿನದ ಆಚರಣೆಯ ಮಸೂದೆಯನ್ನು 11 ರಾಷ್ಟ್ರಗಳ ಸಹಿಯಿಂದ ಅಂಗೀಕರಿಸಲಾಗಿ ಭಾಷೆಯ ಮೂಲಕ ತಮ್ಮ ವಿಶೇಷತೆಯನ್ನು ವಿಶ್ವದಾದ್ಯಂತ ಪ್ರಸಾರ ಮಾಡುವ ಅನುವಾದಕರ ಶ್ರಮಕ್ಕೆ ಗೌರವ ಸೂಚಕವಾಗಿ ಈ ದಿನದ ಆಚರಣೆ ಆರಂಭಿಸಲಾಗಿದೆ. ಸೆಪ್ಟೆಂಬರ್ 30ನೇ ತಾರೀಖಿನಂದು ಕ್ರಿಶ್ಚಿಯನ್ ಮತಪ್ರಚಾರಕ ಸೈಂಟ್ ಜೋರೇಮ್‌ರ ನೆನಪಿಸಿಕೊಳ್ಳುವ ದಿನ ಅವರು ಬೈಬಲ್‌ಅನ್ನು ಗ್ರೀಕ್ ಭಾಷೆಯಿಂದ ಲ್ಯಾಟಿನ್ ಭಾಷೆಗೆ ಅನುವಾದ ಮಾಡಿದ್ದರು.
ಸಾಂಸ್ಕೃತಿಕ ವೈವಿಧ್ಯತೆಯನ್ನು ವಿಶ್ವದಾದ್ಯಂತ ಪ್ರಚಾರ ಮಾಡಲು ಅನುವಾದ ಮತ್ತು ಅನುವಾದಕರ ಅಗತ್ಯತೆ ಬಹಳವೇ ಆಗಿದೆ. ಕೇವಲ ಸಂಸ್ಕೃತಿ ಅಥವಾ ಧಾರ್ಮಿಕ ಪ್ರಚಾರಕ್ಕಾಗಿ ಮಾತ್ರವಲ್ಲದೇ ಎಲ್ಲ ರೀತಿಯ ವ್ಯವಹಾರ ವ್ಯಾಪಾರ ಮತ್ತು ಪರಸ್ಪರ ಸಂಬಂಧಗಳನ್ನು ಗಟ್ಟಿಗೊಳಿಸಲು ಭಾಷಾ ಅನುವಾದಕರ ಕೊಡುಗೆ ಮಹತ್ವವನ್ನು ಪಡೆಯುತ್ತದೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಬಹಳವೇ ಅವಶ್ಯಕತೆ ಇರುವ ಬಹು ದೊಡ್ಡ ಬೇಡಿಕೆಯ ಹುದ್ದೆ ಅನುವಾದಕರದ್ದು. ಅನುವಾದ ಮಾಡಿ ನಮ್ಮ ಸಂಸ್ಕೃತಿ ಸಂಪ್ರದಾಯ ತತ್ವಗಳ ಪ್ರಚಾರ ಪ್ರಸಾರವೂ ಮಹತ್ವದ್ದೇ ಆದರೂ ಇಂದಿನ ಯುಗದಲ್ಲಿ ಜಾಗತಿಕವಾಗಿ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಆಯಾ ದೇಶದ ಜೊತೆಗೆ ವ್ಯವಹಾರ ಮಾಡಲು ಸ್ಥಳೀಯ ಭಾಷಾಜ್ಞಾನಿಗಳು ಅನುವಾದಕರ ಬೇಡಿಕೆ ಹೆಚ್ಚಾಗಿದೆ.
ಅನುವಾದ ಎಂದರೆ ಒಂದು ಬಾಷೆಯಿಂದ ಇನ್ನೊಂದು ಭಾಷೆಗೆ ತರ್ಜುಮೆ ಮಾಡುವುದು ಎನ್ನಬಹುದು ಆದರೆ ಅನುವಾದದಲ್ಲಿ ಕೂಡ ಅನೇಕ ಬಗೆಗಳಿವೆ. ಶಬ್ದಾನುವಾದ, ಭಾವಾನುವಾದ ಹಾಗೂ ರೂಪಾಂತರ ಎಂದು. ಕಛೇರಿ ಕೆಲಸಗಳು ಮತ್ತು ಕೆಲವು ವ್ಯವಹಾರಗಳಲ್ಲಿ ಶಬದಾನುವಾದ ಮಹತ್ವವನ್ನು ಪಡೆಯುತ್ತದೆ. ಅನುವಾದಕರ ಕರ್ತವ್ಯ ಮೂಲ ಲೇಖಕರ ಭಾವನೆಗೆ ಧಕ್ಕೆ ಆಗದಂತೆ ಯಥಾವತ್ತಾಗಿ ಪದಗಳ ಚಾತುರ್ಯವನ್ನು ಬಳಸಿ ಬರವಣಿಗೆಯನ್ನು ಬರೆಯುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಆದರೆ ಮೂಲ ಭಾಷೆ ಹಾಗೂ ಲೇಖಕರ ಆಶಯ ಬಹಳ ಮಹತ್ವವನ್ನು ಪಡೆದಿರುತ್ತದೆ. ಇದು ಅನುವಾದಕರ ಜವಾಬ್ದಾರಿಯಾಗಿರುತ್ತದೆ. ಶಬ್ದಾನುವಾದದಲ್ಲಿ ಸರಿಯಾದ ಅರ್ಥವನ್ನು ಕೊಡುವ ಪದಗಳೊಂದಿಗೆ ಸ್ಥಳೀಯ ಭಾಷೆಯಲ್ಲಿ ಅನುವಾದ ಮಾಡಲಾಗಿರುತ್ತದೆ ಅಥವಾ ಸ್ಥಳೀಯ ಭಾಷೆಯಿಂದ ಆಂಗ್ಲ ಅಥವಾ ಬೇಕಾದ ಭಾಷೆಗೆ ಅನುವಾದವಾಗಿರುತ್ತದೆ. ಇಂತಹ ಅನುವಾದಗಳನ್ನು ಅನುವಾದವೆಂದುಇ ಸುಲಭವಾಗಿ ಗುರುತಿಸಬಹುದು ಭಾವಾನುವಾದ ಎಂದರೆ ಆ ವಿಷಯದ ಭಾವ ಬಂದರೆ ಸಾಕು ಅಲ್ಲಿ ಬಳಸಲಾಗ ಪದಗಳನ್ನೇ ಬಳಸಬೇಕೆಂಬ ನಿಯಮವಿಲ್ಲ. ಇಂತಹ ಅನುವಾದಗಳು ಸ್ಥಳೀಯಭಾಷೆಯ ಸೊಗಡನ್ನು ಉಳಿಸಿಕೊಂಡು ತರ್ಜುಮೆಯಾದ ಭಾಷೆಯಲ್ಲಿ ಕೂಡ ಉತ್ತಮ ಎನಿಸಿಕೊಳ್ಳುತ್ತದೆ.
ಇನ್ನು ರೂಪಾಂತರಗಳು ಕೂಡ ಅನುವಾದದ ವಿಧವೇ ಆಗಿದೆ. ಇದರಲ್ಲಿ ಮೂಲ ಪುಸ್ತಕದ ಆಶಯವನ್ನು ಉಳಿಸಿಕೊಂಡರೂ ತರ್ಜುಮೆಯಾದ ಭಾಷೆಗೆ ಹೊಂದಾಣಿಕೆಯಾಗುವಂತೆ ವಿಶೇಷ ರೀತಿಯ ಮೌಲಿಕ ಕೃತಿಯಾಗುತ್ತದೆ. ಮೂಲ ಲೇಖಕರ ಆಶಯಕ್ಕೆ ಧಕ್ಕೆಯಾಗದೇ ಹೋದರೂ ಅದಕ್ಕೆ ವಿಶೇಷ ಮೌಲಿಕತೆ ದೊರೆತಿರುತ್ತದೆ. ಸಾಹಿತ್ಯಿಕವಾಗಿ ಅನುವಾದಕರ ಜವಾಬ್ದಾರಿ ಬಹಳ ದೊಡ್ಡದು. ಕಛೇರಿ ಕೆಲಸಗಳಿಗೆ ಅಲ್ಪ ಜ್ಞಾನ ಇದ್ದರೂ ನಡೆದೀತು ಆದರೆ ನುರಿತ ಅನುವಾದಕರಾಗಲು ಪರಿಶ್ರಮ ಮತ್ತು ಭಾಷಾ ಪ್ರೇಮದ ಅವಶ್ಯಕತೆ ಬಹಳವಾಗಿದೆ. ಇಂದಿನ ಯುಗದಲ್ಲಿ ಅನುವಾದ ಡಿಪ್ಲೋಮಾ ಅಥವಾ ಸ್ನಾತಕೋತ್ತರ ಪದವಿಯನ್ನು ಮಾಡಿದವರಿಗೂ ಹೆಚ್ಚಿನ ಬೇಡಿಕೆ ಇರುವದರಿಂದ ಉತ್ತಮ ಔದ್ಯೋಗಿಕ ಅವಕಾಶವೂ ಆಗಿದೆ.
ಈ ವರ್ಷದ 2024ನೇ ಸಾಲಿನ ಅನುವಾದ ದಿನದ ಘೋಷ ವಾಕ್ಯ “ಅನುವಾದ ಸಂರಕ್ಷಿಸಲ್ಪಡಬೇಕಾದ ಕಲೆಯಾಗಿದೆ: ಸ್ಥಳೀಯ ಭಾಷೆಗಳ ನೈತಿಕ ಮತ್ತು ಮೌಲಿಕ ಹಕ್ಕುಗಳನ್ನು ಕಾಯಬೇಕು” ಎಂಬುದಾಗಿದೆ. ಇಲ್ಲಿ ನೈತಿಕವಾಗಿ ಕಾಪಿರೈಟ್ ವಿಷಯಗಳು, ಮಾಹಿತಿ ಸಂಗ್ರಹಣೆ ಮತ್ತು ಅನುವಾದ ಕೆಲಸಗಳ ಬಳಕೆಯ ಬಗೆಗೆ ಅದರ ಸಂರಕ್ಷಣೆಯ ಬಗೆಗೆ ಗಮನ ಹರಿಸುವುದಾಗಿದೆ. ಇತ್ತೀಚಿಗೆ ಎಲ್ಲ ಕಡೆಗಳಲ್ಲಿ ಜಾಲತಾಣದ ಬಳಕೆ ಹಾಗೂ ಅದರ ದುರುಪಯೋಗದ ಪರಿಣಾಮವಾಗಿ ಮೌಲಿಕ ಕೃತಿಗಳು ಹಾಗೂ ಅನುವಾದಿತ ಕೃತಿಗಳ ಚೌರ್ಯ ದುರ್ಬಳಕೆ ಆಗುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಗಳು ಅತೀ ಅವಶ್ಯಕವೆನಿಸುತ್ತದೆ.
ಇತ್ತೀಚಿಕೆ ಭಾಷೆಯ ಅನುವಾದಕ್ಕೆ ಸಹಾಯಕವಾಗುವ ಆಪ್ ಗಳು ಟ್ರಾನ್ಸ್ಲೇಷನ್ ವೈಬ್ ಸೈಟ್ಗಳು ಬೇಕಾದಷ್ಟು ಇವೆ. ಆದರೆ ಅವುಗಳಿಗೆ ಸ್ವಂತ ಜ್ಞಾನ ಅಥವಾ ಭಾಷೆಯ ಸೊಗಡು ತಿಳಿಯದೇ ಇರುವುದರಿಂದ ಗೂಗಲ್ ಟ್ರಾನ್ಸ್ಲೇಟ್ ಮಾಡಿ ಅನೇಕ ಆಭಾಸ ಪೂರ್ಣ ಲೇಖನವನ್ನು, ಮಾಹಿತಿಗಳನ್ನು ನೋಡುತ್ತಿರುತ್ತೇವೆ, ಉದಾಹರಣೆ ಇಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ ಎಂದು ಬರೆಯಲು ಇಲ್ಲಿ ಮೂತ್ರ ಮೂತ್ರವನ್ನು ಉತ್ತೀರ್ಣಮಾಡಬೇಡಿ ಎಂದು ಅನುವಾದ ಮಾಡಿಕೊಟ್ಟು ಅದರ ಅರ್ಥತಿಳಿಯದೇ ಯಥಾವತ್ತಾಗಿ ಗೋಡೆಗಳ ಮೇಲೆ ಬರೆದವರನ್ನು ಕೂಡ ನೋಡುತ್ತೇವೆ. ಹೀಗಾಗಿ ಯಾವುದೇ ವಿದ್ಯೆಯನ್ನು ಸುಲಭವಾಗಿ ತಿಳಿಯಲು ಸಾಧ್ಯವಿಲ್ಲ ಎರಡೂ ಭಾಷೆಗಳಲ್ಲಿ ಪರಿಶ್ರಮವಿರುವ ಜನರು ಮಾತ್ರ ಉತ್ತಮ ಅನುವಾದ ಮಾಡಲು ಸಾಧ್ಯ ಇಂತಹ ಜವಾಬ್ದಾರಿಯುತ ಕೆಲಸ ಮಾಡುವ ಅನುವಾದಕರಿಗೆ ಗೌರವವನ್ನು ಸೂಚಿಸಲೇ ಬೇಕು
- ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ