​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ಪಿತೃ ಪಕ್ಷದ ಮಹತ್ವ

Upayuktha
0


ಪಿತೃಪಕ್ಷವು ನಮ್ಮ ಪೂರ್ವಜರನ್ನು ಸ್ಮರಿಸಿ ಅವರಿಗೆ ಕೃತಜ್ಞತೆ ಸಲ್ಲಿಸಲು ಮೀಸಲಾಗಿಟ್ಟ ವಿಶೇಷ ದಿನವಾಗಿದೆ. ನಾವು ಇಂದು ಜನ್ನ ತಳೆಯಲು, ಬದುಕಲು, ಸುಖಸಂತೋಷಗಳನ್ನು ಅನುಭವಿಸುವಲ್ಲಿ, ಸನ್ಮಾರ್ಗದಲ್ಲಿ ನಡೆಯುವಲ್ಲಿ ಪ್ರತಿಯೊಂದರಲ್ಲಿ ಕೂಡ ನಮ್ಮ ಪೂರ್ವಜರ‌ ಕೊಡುಗೆಯಿರುತ್ತದೆ. ನಾವು ಆಚರಿಸುವ ಸಂಸ್ಕೃತಿ, ರೀತಿ ನೀತಿಗಳು, ಆಚರಣೆಗಳು ಪದ್ಧತಿಗಳು ಅವರಿಂದ ನಮಗೆ ಹರಿದು ಬಂದಿರುತ್ತವೆ.


ಹಾಗಾಗಿ ಅವರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ. ಆದ್ದರಿಂದಲೇ ಸನಾತನ ಹಿಂದೂ ಧರ್ಮದಲ್ಲಿ ಪೂರ್ವಜರನ್ನು ಸ್ಮರಿಸುವ, ಗೌರವಿಸುವ ಸಂಪ್ರದಾಯವಾಗಿ ಪಿತೃಪಕ್ಷ ಮಹತ್ವ ಪಡೆದಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಯಾವುದೇ ಶುಭ ಸಮಾರಂಭಗಳನ್ನು ನಡೆಸುವುದಿಲ್ಲ. ಪಿತೃಪಕ್ಷದಲ್ಲಿ ಪೂರ್ವಜರು ಭೂಮಿಗೆ ಬರುತ್ತಾರೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ಸಮಯದಲ್ಲಿ ತರ್ಪಣ ಮತ್ತು ಶ್ರಾದ್ಧವನ್ನು ಮಾಡುವುದರಿಂದ ಪೂರ್ವಜರ ಕೃಪೆ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಪ್ರತಿವರ್ಷ ಪಿತೃಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯ ದಿನದಿಂದ ಪ್ರಾರಂಭವಾಗಿ ಅಮಾವಸ್ಯೆಯವರೆಗೆ ಇರುತ್ತದೆ. ಇದನ್ನು ಮಹಾಲಯ ಅಮಾವಸ್ಯೆ,ಸರ್ವಪಿತೃ ಅಮಾವಸ್ಯೆ ಎಂದೂ ಕರೆಯಲಾಗುತ್ತದೆ. ಇದು ಹದಿನೈದು ದಿನಗಳ ಆಚರಣೆಯಾಗಿದೆ.


ಪಿತೃಪಕ್ಷದಲ್ಲಿ ಪೂರ್ವಜರ ಆತ್ಮ ಶಾಂತಿಗಾಗಿ ಶ್ರಾದ್ಧ ಆಚರಣೆಗಳನ್ನು ಮಾಡಲಾಗುತ್ತದೆ. ತಿಥಿಗಳಿಗ ನುಸಾರವಾಗಿ ಪಿತೃಗಳ ಶ್ರಾದ್ಧ ಮಾಡುವುದರಿಂದ, ಸತ್ಪಾತ್ರರಿಗೆ ಅನ್ನದಾನ ಮಾಡುವುದರಿಂದ ವಿಶೇಷ ಫಲಗಳು ಸಿಗುತ್ತವೆಂದು  ನಂಬಲಾಗಿದೆ.

 

ಬ್ರಹ್ಮ ವೈವರ್ತ ಪುರಾಣವು ಕುಟುಂಬದಲ್ಲಿ ಹಿರಿಯ ಮಗ ತನ್ನ ತಂದೆ ಮತ್ತು ಅವನ ವಂಶಸ್ಥರಿಗೆ ಶ್ರಾದ್ಧ ಮಾಡಬೇಕು. ಪಿತೃಗಳ ಮೋಕ್ಷಕ್ಕೆ ಪುತ್ರರು ಪಿಂಡ ದಾನ ಮಾಡುವುದು ಅಗತ್ಯವೆಂದು ನಂಬಲಾಗಿದೆ. ಒಂದು ವೇಳೆ ಒಬ್ಬ ವ್ಯಕ್ತಿಗೆ ಪುತ್ರನಿರದಿದ್ದರೆ, ಆತನ ಮಗಳು, ಹೆಂಡತಿ ಮತ್ತು ಸೊಸೆ ಕೂಡ ಶ್ರಾದ್ಧ ಮಾಡಬಹುದೆಂದು ಪುರಾಣ ತಿಳಿಸುತ್ತದೆ.


ಆಚರಣೆ:

ಮನೆಯಲ್ಲಿ ತಿಲ ತರ್ಪಣ ನೀಡುವುದನ್ನು ಶಾಸ್ತ್ರಗಳು ನಿಷೇಧಿಸಿವೆ. ಭಾನುವಾರ, ಶುಕ್ತವಾರ, ಭರಣಿ, ಕೃತಿಕಾ ಹಾಗೂ ಮಖಾ ನಕ್ಷತ್ರಗಳಿರುವ ದಿನಗಳಲ್ಲಿ ಕೂಡ ತಿಲತರ್ಪಣ ನಿಷೇಧಿಸಲಾಗಿದೆ‌. ತರ್ಪಣಕ್ಕೆ ಪವಿತ್ರ ನದಿ ತೀರಗಳು, ಗಯ ಗೋಕರ್ಣಾದಿ ಪುಣ್ಯ ಕ್ಷೇತ್ರಗಳು ಶ್ರೇಷ್ಠವೆಂದು ಪರಿಗಣಿಸಲಾಗಿದೆ. ವಿವಾಹವಾಗಿ ಇನ್ನೂ ಒಂದು ವರ್ಷ ತುಂಬದವರು ತರ್ಪಣ ನೀಡಕೂಡದೆಂಬ ನಿಯಮವಿದೆ. ಗರುಡಪುರಾಣದಲ್ಲಿ 'ಯಾವನು ಎಂಬ ನರಕದಿಂದ ಪಿತೃಗಳನ್ನು ಪಾರು ಮಾಡುತ್ತಾನೋ ಅವನೇ ಪುತ್ರ'ಎಂದು ತಿಳಿಸುತ್ತದೆ. ಯಾವುದೇ ಬೇಧವಿಲ್ಲದೆ ವ್ಯಕ್ತಿಗಳು ತಮ್ಮ ಪಿತೃಗಳಿಗೆ ಶ್ರಾದ್ಧ,ತರ್ಪಣ ಹಾಗೂ ದಾನಗಳನ್ನು ಮಾಡಿ ತಮ್ಮ ಕರ್ತವ್ಯ ಮಾಡಬೇಕೆಂದು, ತಮ್ಮ ಋಣ ತೀರಿಸಬೇಕೆಂದು ಶಾಸ್ತ್ರ ತಿಳಿಸುತ್ತದೆ.ವಾರ್ಷಿಕ ಶ್ರಾದ್ಧದಲ್ಲಿ ತಂದೆ, ತಾತ, ಮುತ್ತಾತ ಹಾಗೂ ತಾಯಿ, ಅಜ್ಜಿ, ಮುತ್ತಜ್ಜಿ ಯರಿಗೆ ಪಿಂಡಾದಿಗಳನ್ನಿಟ್ಟು ಶ್ರಾದ್ಧ ವನ್ನು ಮಾಡಲಾಗುತ್ತದೆ. ಆದರೆ ಭಾದ್ರಮಾಸದ ಕೃಷ್ಷ ಪಕ್ಷದಲ್ಲಿ ಮಾತ್ರ ಕುಟುಂಬದಲ್ಲಿ ಮೃತರಾದ ಎಲ್ಲರಿಗೂ ತರ್ಪಣ ನೀಡಬೇಕು. ಕಾರಣವೇನೆಂದರೆ ಮಾಸಗಳಲ್ಲಿ ಭದ್ರ ಮಾಸ ಎಂದು ಕರೆಯಲ್ಪಡುವ ಮಾಸವೆಂದರೆ‌ ಈ ಭಾದ್ರಪದ ಮಾಸ. ಶಾಸ್ತ್ರಗಳ ಪ್ರಕಾರ, ನಿರ್ಣಯ ಸಿಂಧು ಗ್ರಂಥದ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯ ನಂತರ ಐದನೆಯ ಪಕ್ಷದಲ್ಲಿ ಪಿತೃಗಳು ಪ್ರತಿದಿನ ಅನ್ನ ಹಾಗೂ ನೀರನ್ನು ಬಯಸುತ್ತಾರೆ. ಪಕ್ಷವೆಂದರೆ ಹದಿನೈದು ತಿಥಿಗಳು, ಆಷಾಢ ಮಾಸದ ಹುಣ್ಣಿಮೆಯ ನಂತರದ ಐದನೆಯ ಪಕ್ಷ ಈ ಭಾದ್ರಪದ ಕೃಷ್ಷಪಕ್ಷ. ಆದ್ದರಿಂದ ಈ ಪಕ್ಷವನ್ನು ಪಿತೃಪಕ್ಷ ಎಂದು ಕರೆದಿದ್ದಾರೆ. ಆದ್ದರಿಂದ ಪಿತೃಗಳನ್ನು ತೃಪ್ತಿಪಡಿಸಲು ಅವರು ಬಯಸುವ ಅನ್ನವನ್ನು ಪಿಂಡಗಳ ಮೂಲಕ ಹಾಗೂ ನೀರನ್ನು ತರ್ಪಣದ ಮೂಲಕ ನೀಡಿ ಅವರ ಕೃಪೆಗೆ ಪಾತ್ರರಾಗಬಹುದೆಂದು ತಿಳಿಸಲಾಗಿದೆ.


ಆಚರಣೆ ಕ್ರಮ:

ತರ್ಪಣ ಬಿಡುವ ರೂಢಿ ಇಲ್ಲದವರು, ಪಿತೃಗಳಿಗೆ ಪ್ರಿಯವಾದ ಭಕ್ಷ್ಯಗಳನ್ನು ತಯಾರಿಸಿ ಬಾಳೆಲೆಗಳಲ್ಲಿ ಅದನ್ನು ಹರಡಿ, ಮನೆಯ ತುಂಬ ಧೂಪ ಹಾಕಿ ಪಿತೃಗಳನ್ನು ನೆನೆದು, ಅವರಿಗೆ ಈ ಎಲ್ಲಾ ಭಕ್ಷ್ಯಭೋಜ್ಯಗಳನ್ನು ಸ್ವೀಕರಿಸಿ ತಮ್ಮನ್ನು ಹರಸಬೇಕೆಂದು ಪ್ರಾರ್ಥಿಸಬೇಕು. ಇದನ್ನೇ ಹಿರಿಯರಿಗೆ ಎಡೆ ನೀಡುವುದು ಎನ್ನುತ್ತಾರೆ. ಇದರಿಂದ ಪಿತೃಗಳು ತೃಪ್ತರಾಗುತ್ತಾರೆ. ತರ್ಪಣಗಳನ್ನು  ಕೊಡುವಾಗ ಯಾರು ಯಾರಿಗೆ ಹಾಗೂ ಯಾರಿಗೆ ಮೊದಲು ತರ್ಪಣ ಕೊಡಬೇಕೆಂದು ಶಾಸ್ತ್ರ ತಿಳಿಸುತ್ತದೆ.


ಆದೌ ಪಿತಾ ತತೋ ಮಾತಾ ಸಪತ್ನೀ ಜನನೀ ತಥಾ |


ಮಾತಾಮಹಾಃ ಸಪತ್ನೀಕಾಃ ಹ್ಯಾತ್ಮಪತ್ನೀ ತತಃ ಪರಂ ||


ಸುತಭ್ರಾತೃಪಿತೃವ್ಯಾಶ್ಚ ಮಾತುಲಾಶ್ಚ ಸಭಾರ್ಯಕಾಃ |


ದುಹಿತಾ ಭಗಿನೀ ಚೈವ ದೌಹಿತ್ರೋ ಭಾಗಿನೇಯಕಃ ||


ಶ್ಯಾಲಕೋ ಭಾವುಕಶ್ಬೈವ ಶ್ವಶುರೋ ಗುರುಋತ್ವಿಜಾ |


ಏತೇ ಸ್ಯುಃ ಪಿತರಸ್ತೀರ್ಥೆ ತರ್ಪಣೇಚ ಮಹಾಲಯೇ ||


ಕುಟುಂಬದಲ್ಲಿ ಮೃತಪಟ್ಟವರಲ್ಲಿ ಕ್ರಮವಾಗಿ ಮೊದಲು ತಂದೆ, ತಾಯಿ, ಹೆಂಡತಿ, ಅತ್ತೆ, ಮಾವ, ಮಗ, ಸಹೋದರರು, ದೊಡ್ಡಪ್ಪ, ಚಿಕ್ಕಪ್ಪ, ಹಾಗೂ ಅವರ ಹೆಂಡತಿ, ತಾಯಿಯ ತಮ್ಮ ಅಥವಾ ಅಣ್ಣ, ಅವರ ಹೆಂಡತಿಯರು, ಮಗಳು, ಅಕ್ಕ, ತಂಗಿ ಹಾಗೂ ಅವರ ಮಕ್ಕಳಿಗೆ, ಭಾವ, ಮೈದುನ ಮುಂತಾದವರು ಹಾಗೂ ವಿಶೇಷವಾಗಿ ಗುರುಗಳು, ಕುಲಪುರೋಹಿತರೂ ಸೇರಿದಂತೆ ಯಾರು ನಮಗೆ ತಿಳಿದಂತೆ ಮೃತರಾಗಿರುವರೋ ಅವರಿಗೆ ಹೀಗೆ ಸರ್ವರಿಗೂ ತರ್ಪಣ ನೀಡಬೇಕು.


ಅನಾರೋಗ್ಯ, ವೃದ್ಧಾಪ್ಯ ಇತ್ಯಾದಿ ಕಾರಣಗಳಿಂದ ಇಷ್ಟು ವಿಸ್ತೃತವಾಗಿ ತರ್ಪಣಗಳನ್ನು ನೀಡಲು ಸಾಧ್ಯವಾಗದವರು ಸರಳವಾಗಿ ಕೂಡ ಆಚರಿಸಬಹುದು.


ಆಬ್ರಹ್ಮಸ್ತಂಭಪರ‍್ಯಂತಂ ದೇವರ್ಷಿ ಪಿತೃಮಾನವಾಃ |

ತೃಪ್ಯಂತು ಪಿತರಃ ಸರ್ವೇ ಮಾತೃಮಾತಾಮಹಾದಯಃ ||

ಆತೀತ ಕುಲಕೋಟೀನಾಂ ಸಪ್ತದ್ವೀಪ ನಿವಾಸಿನಾಂ |

ಆಬ್ರಹ್ಮ ಭುವನಾಲ್ಲೋಕಾತ್ ಇದಮಸ್ತು ತಿಲೋದಕಮ್ll


ಎಂದು ಹೇಳುತ್ತಾ ಮೂರು ಸಲ ಎಳ್ಳು ನೀರು ಬಿಡಬೇಕು. ಸಾಮಾನ್ಯವಾಗಿ ಇದನ್ನು ಮನೆಯ ಮುಂದೆ ಅಥವಾ ತುಳಸಿ ಕಟ್ಟೆಯ ಹತ್ತಿರ ಮಾಡುವ ಸಂಪ್ರದಾಯ ಕೆಲವರಲ್ಲಿದೆ. ತರ್ಪಣಾದಿಗಳನ್ನು ಮಾಡುವಾಗ ಮಾನಸಿಕ ಹಾಗೂ ದೈಹಿಕ ಶುದ್ಧತೆಗೆ ಪ್ರಾಮುಖ್ಯತೆ ಕೊಡಬೇಕು. ಉಂಗುರದ ಬೆರಳಿನಲ್ಲಿ ದರ್ಭೆ ಧರಿಸಿ ತರ್ಪಣ ನೀಡಬೇಕೆಂಬ ನಿಯಮವಿದೆ. ಶುದ್ಧವಾದ ಸ್ಥಳದಲ್ಲಿ ಕುಳಿತು ಶುದ್ಧವಾದ ಅಕ್ಕಿ, ನೀರು, ಎಳ್ಳನ್ನು ಬಳಸಿ ತರ್ಪಣ ನೀಡಬೇಕು. ಮನೆಯಲ್ಲಿ ಈ ಸಮಯದಲ್ಲಿ ಶಾಂತಿಯುತ ವಾತಾವರಣವಿರಬೇಕು. ಘಂಟಾನಾದ ಮಾಡಬಾರದು. ಶ್ರಾದ್ಧ ವಿಧಿಗಳಿಗಾಗಿ ಅಕ್ಕಿ ಮತ್ತು ಎಳ್ಳು ಬೀಜಗಳನ್ನು ಒಳಗೊಂಡಿರುವ ಪಿಂಡ ಹಾಗೂ ವಿವಿಧ ಬಗೆಯ ವಿಶೇಷ ಆಹಾರ ತಯಾರಿಸಬೇಕು. ಇದನ್ನು ಮೊದಲು ಕಾಗೆಗೆ ಅರ್ಪಿಸುವ ಪದ್ಧತಿ ಇದೆ. ಕಾಗೆಯನ್ನು ಪಿತೃಲೋಕದ ಪಾಲಕನಾಗಿರುವ ಯಮನ ಸಂಕೇತ ಎಂದು ನಂಬಲಾಗಿದೆ.


ಕುಟುಂಬದಲ್ಲಿ ಅಪಘಾತ, ವಿಷಸೇವನೆ, ಬೆಂಕಿ ದುರಂತ ಇತ್ಯಾದಿಗಳಿಂದ ಮೃತಪಟ್ಟವರಿದ್ದಲ್ಲಿ ಮಹಾಲಯ ಅಮಾವಸ್ಯೆಯ ಹಿಂದಿನ ದಿನ ಬರುವ ಚತುರ್ದಶಿಯಂದು ಅವರಿಗೆ ತರ್ಪಣ ನೀಡುವುದು ಶ್ರೇಯಸ್ಕರ. ಇದನ್ನು ಘಾತ ಚತುರ್ದಶಿ ಎನ್ನಲಾಗುತ್ತದೆ.


ದಾನದ ಮಹತ್ವ:

ಪಿತೃ ಪಕ್ಷದಲ್ಲಿ ಪಿತೃಗಳ ತೃಪ್ತಿಗಾಗಿ ಅವರ ಹೆಸರಿನಲ್ಲಿ ದಾನ ಮಾಡುವುದಕ್ಕೆ ಬಹಳ ಮಹತ್ವವಿದೆ. ತಾಮಸ ಪದಾರ್ಥ ಹೊರತುಪಡಿಸಿ ಅಕ್ಕಿ, ಬೇಳೆ, ಬೆಲ್ಲ, ತರಕಾರಿ, ಇತ್ಯಾದಿಗಳನ್ನು ಕುಂಬಳ ಕಾಯಿ ಸಹಿತ ದಾನ ನೀಡಬೇಕು. ಗೋವು, ಕೊಡೆ, ಹೊಸ ಪಾದರಕ್ಷೆ, ಇತ್ಯಾದಿಗಳ ದಾನ ಕೂಡ ವಿಶೇಷ ಫಲದಾಯಕ ಹಾಗೂ ಪಿತೃಗಳಿಗೆ ತೃಪ್ತಿದಾಯಕ. ದಾನವು ಸತ್ಪಾತ್ರರಿಗೆ ನೀಡುವಂತಹುದಾಗಿದ್ದು, ಗುಣಮಟ್ಟದಿಂದ ಕೂಡಿರುವುದು ಅವಶ್ಯಕ. ಇವನ್ನೆಲ್ಲ ಕೊಡಲು ಅಶಕ್ತರು ಯಥಾಶಕ್ತಿ ಮಾಡಿದರೂ ಸಾಕೆಂದು ಶಾಸ್ತ್ರ ತಿಳಿಸುತ್ತದೆ.

  

ಬೇರೆ ಬೇರೆ ಪ್ರಾಂತಗಳಲ್ಲಿ ಪಿತೃಪಕ್ಷದ ಆಚರಣೆಯಲ್ಲಿ ಭಿನ್ನತೆಗಳು ಕಂಡು ಬರುವುದಾದರೂ, ಅವುಗಳ ಮೂಲ ಉದ್ದೇಶ ಪಿತೃಗಳ ಸ್ಮರಣೆಯೇ ಆಗಿದೆ. ಒಟ್ಟಿನಲ್ಲಿ ಪಿತೃಪಕ್ಷವು ನಮ್ಮ ಹಿರಿಯರನ್ನು ಸ್ಮರಿಸಲು, ಕೃತಜ್ಞತೆ ಸಲ್ಲಿಸಲು ಇರುವ ಸತ್ಸಂಪ್ರದಾಯವೇ ಹೌದು ಎಂಬುದರಲ್ಲಿ ಎರಡು ಮಾತಿಲ್ಲ.


- ಎಸ್.ಎಲ್. ವರಲಕ್ಷ್ಮೀ ಮಂಜುನಾಥ್‌. ನಂಜನಗೂಡು​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top