ಪಣಜಿ: ಗೋವಾದಲ್ಲಿ ನೆಲೆಸಿರುವ ಕನ್ನಡಿಗರ ಬೇಡಿಕೆಯ ಮೇರೆಗೆ ಕರ್ನಾಟಕ ಸರ್ಕಾರವು ಜಾಹೀರಾತನ್ನು ಹೊರಡಿಸಿ ಗೋವಾದಲ್ಲಿ ಸಾಂಸ್ಕೃತಿಕ ಭವನವನ್ನು ನಿರ್ಮಿಸಲು ಗೋವಾದ ವೆರ್ಣಾ ಅಥವಾ ವಾಸ್ಕೊ ಪ್ರದೇಶದ ಭೂ ಮಾಲೀಕರಿಂದ 10 ಸಾವಿರ ಚದರ ಮೀಟರ್ ಜಾಗವನ್ನು ಖರೀದಿಸಲು ಮುಂದಾಗಿದೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಈ ಜಾಹೀರಾತನ್ನು ಗೋವಾದ ಸ್ಥಳೀಯ ದಿನಪ್ರತಿಕೆಗಳಲ್ಲಿ ಪ್ರಕಟಿಸಿದೆ. ಈ ಮೂಲಕ ಗೋವಾದ ಕನ್ನಡಿಗರ ಬಹು ವರ್ಷಗಳ ಕನ್ನಡ ಭವನದ ಕನಸು ನನಸಾಗುವ ಕಾಲ ಸನಿಹವಾಗುತ್ತಿದೆ ಎಂಬಂತಾಗಿದೆ.
ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಜಾಹೀರಾತನ್ನು ಬಿಡುಗಡೆ ಮಾಡಲಾಗಿದ್ದು, ಗೋವಾದ ಆಸಕ್ತ ಭೂ ಮಾಲೀಕರು ಮತ್ತು ಬಿಲ್ಡರ್‍ಗಳು ಪತ್ರಿಕೆಯ ಜಾಹೀರಾತಿನಲ್ಲಿ ನೀಡಿರುವ ಇಮೇಲ್ ಅಥವಾ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಸಂಪರ್ಕಿಸಲು ತಿಳಿಸಲಾಗಿದೆ.
ಪ್ರಕಟವಾಗಿರುವ ಜಾಹೀರಾತಿನ ಪ್ರಕಾರ; ಆಸಕ್ತ ಪ್ಲಾಟ್ ಮಾಲೀಕರು ಮತ್ತು ಬಿಲ್ಡರ್‍ಗಳು ಆಯಾ ಪ್ಲಾಟ್‍ನ ಸಂಪೂರ್ಣ ವಿವರಗಳನ್ನು ಜಿಪಿಎಸ್ ಫೋಟೋಗಳೊಂದಿಗೆ ಕಳುಹಿಸಲು ಹೇಳಲಾಗಿದೆ. ಜಾಗದ ಬಗ್ಗೆ ನ್ಯಾಯಸಮ್ಮತವಾದ ವಿವಾದ ಇರಬಾರದು ಎಂದೂ ಹೇಳಲಾಗಿದೆ. ಅಲ್ಲದೆ, ಉತ್ತಮ ರಸ್ತೆ ಸಂಪರ್ಕವಿರಬೇಕು ಮತ್ತು ಸಾಂಸ್ಕೃತಿಕ ಭವನವನ್ನು ಸ್ಥಾಪಿಸಲು ಸೈಟ್ ಸೂಕ್ತವಾಗಿರಬೇಕು ಎಂದೂ ಜಾಹೀರಾತಿನಲ್ಲಿ ತಿಳಿಸಲಾಗಿದೆ. ಖಾಲಿ ಜಾಗದ ಮಾಲೀಕರು ಹಾಗೂ ಬಿಲ್ಡರ್‍ಗಳು ಅಗತ್ಯ ದಾಖಲೆಗಳೊಂದಿಗೆ ಜಾಹೀರಾತಿನಲ್ಲಿ ನೀಡಿರುವ ಪ್ರಾಧಿಕಾರದ ಬೆಂಗಳೂರು ವಿಳಾಸವನ್ನು ಸಂಪರ್ಕಿಸಲು ಕೋರಲಾಗಿದೆ.
ಗೋವಾದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಕನ್ನಡಿಗರು ಸ್ಥಾಯಿಕರಾಗಿದ್ದಾರೆ. ಇಷ್ಟೇ ಅಲ್ಲದೆಯೇ ಗೋವಾಕ್ಕೆ ಕರ್ನಾಟಕದಿಂದ ಬಂದು ಹೋಗುವ ಕೂಲಿ ಕಾರ್ಮಿಕರ ಸಂಖ್ಯೆ ಇನ್ನೂ ಹೆಚ್ಚಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಗೋವಾದಲ್ಲಿ ಕನ್ನಡಿಗರು ನೆಲೆಸಿದ್ದರೂ ಕೂಡ ಇದುವರೆಗೂ ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಕನಸು ಕನಸಾಗಿಯೇ ಉಳಿದಿದೆ. ಆದರೆ ಇದೀಗ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಗೋವಾದಲ್ಲಿ ಕನ್ನಡಿಗರಿಗೆ ಸಾಂಸ್ಕೃತಿಕ ಭವನವನ್ನು ನಿರ್ಮಿಸಿಕೊಡಲು ಜಾಗ ಖರೀದಿಸಲು ಮುಂದಾಗಿರುವುದು ಗೋವಾ ಕನ್ನಡಿಗರಿಗೆ ಒಂದು ಸಂತಸದ ಸಂಗತಿಯಾಗಿದೆ.
ಗೋವಾದಲ್ಲಿ 20 ಕ್ಕೂ ಹೆಚ್ಚು ಕನ್ನಡ ಸಂಘಟನೆಗಳಿವೆ ಈ ಸಾಂಸ್ಕೃತಿಕ ಭವನ ನಿರ್ಮಾಣವಾದರೆ ಈ ಎಲ್ಲ ಸಂಘಟನೆಗಳಿಗೆ ಒಂದು ವೇದಿಕೆಯಾಗಿ ಉಳಿಯಲಿದೆ. ಇದರಿಂದಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಗೋವಾದ ಮಧ್ಯವರ್ತಿ ಸ್ಥಳ ಹಾಗೂ ಕನ್ನಡಿಗರು ಹೆಚ್ಚು ವಾಸಿಸುವ ಸ್ಥಳ, ರೈಲ್ವೆ ಹಾಗೂ ವಿಮಾನ ನಿಲ್ದಾಣದಿಂದ ಸಮೀಪವಿರುವ ಸ್ಥಳದಲ್ಲಿ ಜಾಗ ಖರೀದಿಸಲು ಗೋವಾದ ದಿನಪತ್ರಿಕೆಗಳಲ್ಲಿ ಜಾಹೀರಾತನ್ನು ಪ್ರಕಟಿಸಿದೆ. ಇದರಿಂದಾಗಿ ಶೀಘ್ರದಲ್ಲಿಯೇ ಗೋವಾ ಕನ್ನಡಿಗರ ಬಹು ವರ್ಷಗಳ ಕನಸು ನನಸಾಗುವ ಕಾಲ ಬಂದಂತಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ