ಸ್ವಾತಂತ್ರ್ಯ ದಿನಾಚರಣೆ ಮನೆ ಮನೆಯ ಹಬ್ಬವಾಗಲಿ

Upayuktha
0



ಸ್ವಾತಂತ್ರ್ಯ ದಿನಾಚರಣೆಯ ಇತಿಹಾಸ ನಮ್ಮೆಲ್ಲರಿಗೂ ಗೊತ್ತಿರುವಂತದ್ದೇ. ಅದೇನು ಮಹಾ, ಬ್ರಿಟಿಷರ ವಿರುದ್ಧ ಹೋರಾಡಿ ನಮ್ಮದೇ ಸರ್ಕಾರ ಸ್ಥಾಪನೆಯಾದ ದಿನ ಎಂದು ಮೂಗು ಮುರಿಯುವವರ ಸಂಖ್ಯೆ ದಿನ ಕಳೆದಂತೆ ದೊಡ್ಡದಾಗುತ್ತಿದೆ. ಅಂದು ಹೋರಾಡಿ ಸ್ವಾತಂತ್ರ್ಯ ತಂದು ಕೊಟ್ಟರು. ಇಂದು ನಾವೇನು ಮಾಡುವುದು? ಎಂದು ಹಲವರು ಪ್ರಶ್ನೆ ಕೇಳುತ್ತಾರೆ.‌ ಇವರಿಗೆ ಮಾಗ೯ದಶ೯ನ ಮಾಡಿ ನಮ್ಮ ದೇಶದ ಘನತೆ ಶ್ರೇಷ್ಠತೆಯ ಬಗ್ಗೆ ಪರಿಚಯ ಮಾಡಿ ಬೇಕಾದ ಸ್ಥಿತಿ ಇದೆ.


ಶೋಕಿಯ ಆಚರಣೆ ಸಲ್ಲದು: 

ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧ ಮಾದರಿಯ ಒಂದು ಸಂದೇಶ ಭಾಷಣ, ರಾಷ್ಟ್ರಧ್ವಜ, ಭೂಪಟ, ಮಹಾತ್ಮ ಗಾಂಧಿ ಚಿತ್ರ ಇರುವ ಚಿತ್ರ ಸಂದೇಶವನ್ನು ವಾಟ್ಸ್‌ಆ್ಯಪ್‌ನಲ್ಲಿ ತೇಲಿ ಬಿಡುತ್ತಾರೆ. ‘ಹ್ಯಾಪಿ ಇಂಡಿಪೆಂಡೆನ್ಸ್ ಡೇ’ ಎಂದು ಹೇಳಿ ತಾವು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆವು ಎಂದು ಸಂಭ್ರಮಿಸು ತ್ತಾರೆ. ಈ ಸಂದೇಶಗಳನ್ನು ಎಲ್ಲರಿಗೂ ಕಳುಹಿಸುತ್ತಾರೆ. ಈ ಮೂಲಕ ಸ್ವಾತಂತ್ರ್ಯವನ್ನು ಆಚರಿಸುವವರು ನಮ್ಮಲ್ಲಿ ಇದ್ದಾರೆ.ಕೇವಲ ಶೋಕಿಗಾಗಿ ಆಚರಿಸಿ ನಾವೇ ದೊಡ್ದ ಸಾಧನೆ ಮಾಡಿದ್ದೇವೆ ಎಂದು ಹೇಳುವವರಲ್ಲಿ ನಮ್ಮ ಹೋರಾಟಗಾರ ಶ್ರಮ ತ್ಯಾಗದ ಬಗ್ಗೆ ಹೇಳಬೇಕಾಗಿದೆ.


ಮತ್ತೆ ಹಲವರು ಇಂತಹ ಸಂದೇಶಗಳನ್ನು ತೆರೆದೇ ನೋಡುವುದಿಲ್ಲ. ರಜಾ ಸಿಕ್ಕಿತೆಂದು ಪ್ರವಾಸಕ್ಕೆ ಹೊರಡುತ್ತಾರೆ. ಮನೆಯಲ್ಲಿ ಕುಳಿತು ಟಿ.ವಿಯಲ್ಲಿ ಹಾಕುವ ಸಿನಿಮಾಗಳನ್ನು ವೀಕ್ಷಿಸುತ್ತಾರೆ. ಇಲ್ಲವೇ ಮನೆಯಲ್ಲಿನಿದ್ದೆಗೆ ಜಾರುತ್ತಾರೆ.


ಅತ್ತ ಜಿಲ್ಲಾಡಳಿತ ಆಚರಿಸುವ ಸ್ವಾತಂತ್ರ್ಯ ದಿನಾಚರಣೆ ಜನರಿಲ್ಲದೇ ಬಣಗುಡುವಂತಾಗುತ್ತಿದೆ. ಅಧಿಕಾರಿಗಳು ಕಡ್ಡಾಯವಾಗಿ ಬರಲೇಬೇಕು ಎಂದು ಆದೇಶ ಹೊರಡಿಸುವ ಮಟ್ಟಕ್ಕೆ ಅಧಿಕಾರಿಗಳ ಬದ್ಧತೆ ಇಳಿದಿದೆ. ಮನಸೊಳಗೆ ಬೈಯ್ದುಕೊಳ್ಳುತ್ತ ಬರುವವರು ಅನೇಕರು. ಧ್ವಜಾರೋಹಣದಂದು ಸೇರುವ ಬಹುತೇಕ ಮಂದಿ ಶಾಲಾ ಮಕ್ಕಳ ಪೋಷಕರು. ಅದೂ ಅವರು ತಮ್ಮ ಮಕ್ಕಳು ಹೇಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುತ್ತಾರೆ, ಎನ್‌ಸಿಸಿಯಲ್ಲಿ ಹೇಗೆ ಕವಾಯತು ಮಾಡುತ್ತಾರೆ ಎಂದು ವೀಕ್ಷಿಸುವುದಕ್ಕೆ ಬಂದಿರುತ್ತಾರೆ.‌ ಕೇವಲ ಕಾಟಾಚಾರ ಆಚರಣೆ ಮಾಡದೆ, ಸಾಥ೯ಕತೆಯಿಂದ ಈ ಉತ್ಸವ ಆಚರಿಸಬೇಕು.


ಸ್ವಾತಂತ್ರ್ಯ ದಿನಾಚರಣೆ ಎಂಬುದು ಬಲು ದೊಡ್ಡ ಹಬ್ಬ, ಉತ್ಸವ. ಅಂದು ದಸರೆಯ ಪಂಜಿನ ಕವಾಯತಿಗೆ ಸೇರುವಷ್ಟು ಜನ ಸೇರಬೇಕು. ರಾಷ್ಟ್ರಗೀತೆಯನ್ನು ಒಕ್ಕೊರಲಿನಿಂದ ಹೇಳಬೇಕು. ರಾಷ್ಟ್ರಧ್ವಜಕ್ಕೆ ವಂದಿಸಬೇಕು.


ಮನೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಇತಿಹಾಸದ ಪುಸ್ತಕಗಳನ್ನು ತೆರೆಯಬೇಕು. ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟದ ವಿವಿಧ ಮಗ್ಗುಲುಗಳನ್ನು ಪರಿಚಯ ಮಾಡಿಕೊಡಬೇಕು. ಇಡೀ ದಿನ ದೇಶದ ಸ್ವಾತಂತ್ರ್ಯದ ಮಹತ್ವವನ್ನು ಅರಿಯುವ ಕೆಲಸ ಮಾಡಬೇಕು. ಸ್ವಾತಂತ್ರ್ಯ ದಿನಾಚರಣೆಗೆ ಉಂಟಾಗಿರುವ ಬೆದರಿಕೆಗಳನ್ನು ಕುರಿತು ಚಿಂತಿಸಬೇಕು. ಮುಖ್ಯವಾಗಿ ಯುವ ತಲೆಮಾರಿಗೆ ಅವುಗಳ ಪರಿಚಯ ಮಾಡಿಕೊಡಬೇಕು.


ಪ್ಲಾಸ್ಟಿಕ್ ಬಾವುಟ ಹಿಡಿದೊ, ರಾಷ್ಟ್ರಧ್ವಜದ ಚಿತ್ರವನ್ನು ಎಲ್ಲೆಂದರಲ್ಲಿ ಬರೆದೊ, ರಾಷ್ಟ್ರ ಲಾಂಛನ ವನ್ನು ಬೇಕಾಬಿಟ್ಟಿ ಇಟ್ಟೊ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆವು ಎಂದುಕೊಂಡರೆ ಅದು ದೊಡ್ಡ ತಪ್ಪು. ನಿಜಕ್ಕೂ ಈ ರೀತಿ ಮಾಡಿದರೆ ರಾಷ್ಟ್ರಕ್ಕೆ ಅವಮಾನ ಮಾಡಿದಂತೆ. ರಾಷ್ಟ್ರಧ್ವಜಾರೋಹಣಕ್ಕೆ ಗೊತ್ತುಪಡಿಸಿದ ಜಾಗದಲ್ಲಿಯೇ ಮಾಡಬೇಕು. ಜಿಲ್ಲಾಡಳಿತ ಸಕಾ೯ರ ಅಥವಾ ಶಾಲಾ ಕಾಲೇಜುಗಳಲ್ಲಿ ಮಾಡುವ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗಿಯಾಗಬೇಕು.ಈ ಮೂಲಕ ವಷ೯ದಲ್ಲಿ ಒಮ್ಮೆಯಾದರೂ ದೇಶ ಸೇವಕರ ನೆನಪು ಮಾಡುವ ಕೆಲಸ ಮಾಡಬೇಕಾಗಿದೆ.


ನಮ್ಮ ಸ್ವಾತಂತ್ರ್ಯದಲ್ಲಿ ರಾಜಕೀಯ ಬೇಡ: ದೇಶ ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಕೇಂದ್ರ ಸರ್ಕಾರ ಪ್ರತಿ ಮನೆ ಮನೆಯಲ್ಲಿ ರಾಷ್ಟ್ರಧ್ವಜ ಹಾರಾಡಬೇಕು ಎಂಬ ಸಂಕಲ್ಪದಂತೆ ಹರ್ ಘರ್ ತಿರಂಗಾ ಅಭಿಯಾನ ನಡೆಸುತ್ತಿದೆ. ಈ ನಿಟ್ಟಿನಲ್ಲಿಯೂ ರಾಜಕೀಯ, ಮಾತುಗಳು ಕೇಳಿ ಬರುತ್ತಿವೆ. ಇದು ಸಲ್ಲದು ದೇಶಭಕ್ತಿಯ ವಿಷಯದಲ್ಲಿ ರಾಜಕೀಯ ಬರಬಾರದು.

ದೇಶದ ಅಖಂಡತೆ, ದೇಶಭಕ್ತಿಯ ಕುರಿತು ಚಿಂತನ ಮಂತನ ನಡೆಯಬೇಕು ಈ ಮೂಲಕ ಸ್ವಾತಂತ್ರ್ಯದ ಕಹಳೆ ಎಲ್ಲೆಡೆ ಮೊಳಗಲಿ 

ಭಾರತ ಮಾತೆಗೆ ನಮನವಿರಲಿ ಸದಾ

ದೇಶ ಮೊದಲು ಎನ್ನುವ ಉಸಿರಿರಲಿ ಸದಾ .


- ರಾಘವೇಂದ್ರ ಪ್ರಭು, ಕರ್ವಾಲು

ಸಂ.ಕಾರ್ಯದರ್ಶಿ

ಕಸಾಪ ಉಡುಪಿ ತಾ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top