“ಹಲಸು ಯಾರು ತಿಂತಾರೆ ಅಂತ ಕೇಳೋವ್ರ ನಡುವೆಯೇ ಹಲಸಿಗೂ ಬೆಲೆ ಇದೆ ಅಂತ ಗೊತ್ತಾಯಿತು. ಇನ್ಮುಂದೆ ಅಡಿಕೆ, ತೆಂಗು ಮೊದಲಾದ ವಾಣಿಜ್ಯ ಬೆಳೆಗಳಿಗಾಗಿ ಹಲಸಿನ ಮರ ಕಡಿಯಬೇಡಿ ಅಂತ ಎಲ್ರ ಹತ್ರಾನೂ ಹೇಳ್ತೀನಿ. ನಾನೇ ತಾತ ನೆಟ್ಟ ಮರ ಅಡಿಕೆ ಗಿಡ ಹಾಕಲು ಕಡಿಯೋಣ ಅಂತಿದ್ದೆ. ಇನ್ನು ಆ ಯೋಚನೇನೂ ಮಾಡೋದಿಲ್ಲ”.
ಇದು ದೊಡ್ಡಕಟ್ಟಿಗೇನಹಳ್ಳಿಯ 45 ವರ್ಷ ಪ್ರಾಯದ ಕೃಷಿಕ ಜಗದೀಶ್ ಅವರ ಮಾತು. ಅವರು ಇಂದು ತಿಪಟೂರು ಕೇವೀಕೆಯ ಮೂರನೆಯ ವಾರದ 'ಹೆದ್ದಾರಿಯಂಚಿನ ಹಲಸಿನ ಹಣ್ಣಿನ ನೇರ ಮಾರಾಟ'ದಲ್ಲಿ 9 ಹಣ್ಣು ಮಾರಿ ಹೊಸ ಆತ್ಮವಿಶ್ವಾಸದಿಂದ ಆಗ ತಾನೇ ಮನೆ ಸೇರಿದ್ದರು.
ಗುಬ್ಬಿ ತಾಲೂಕಿನ ಇವರ ಮನೆಯಿಂದ ಪಾಪ, 70 ಕಿಲೋಮೀಟರ್ ದೂರಕ್ಕೆ ಈ ಚಾರಿತ್ರಿಕ ಪ್ರಯೋಗಕ್ಕೆಂದೇ ಹಣ್ಣು ಒಯ್ದಿದ್ದರು ಜಗದೀಶ್.
“ಶನಿವಾರ, ಅಂದರೆ, ವೀಕೆಂಡಿಗೆ ಇಂದಿನ ಮಾರಾಟವನ್ನು ನಿಗದಿ ಮಾಡಿದ್ದರೂ, ಏಕೋ, ವಾಹನ ಸಂಚಾರ ಕಡಿಮೆಯಾಗಿತ್ತು. ನೆನೆಸಿದಷ್ಟು ಬಿರುಸಿನ ವ್ಯಾಪಾರ ನಡೆಯಲಿಲ್ಲ. ಆದರೂಪರವಾಗಿಲ್ಲ” ಎನ್ನುತ್ತಾರೆ ತಿಪಟೂರು ಕೇವೀಕೆ ಮುಖ್ಯಸ್ಥ ಡಾ. ಗೋವಿಂದ ಗೌಡ. ಮುಂದಿನ ವಾರವೂ ಈ ನೇರ ಮಾರಾಟ ಮುಂದುವರಿಯಲಿದೆ.
ಇಂದು ಒಟ್ಟು ಆರು ಮಂದಿ ರೈತರ 25 ಹಣ್ಣು ಬಿಕರಿಯಾಯಿತು. ಒಟ್ಟು ಸಂಪಾದನೆ ರೂ. 10,500. ಆದರೆ ಅದಕ್ಕಿಂತಲೂ ಹೆಚ್ಚು ಮೌಲ್ಯದ ಸಂಪಾದನೆ ಇವರುಗಳಲ್ಲಿ ಮೂಡಿದ ಆತ್ಮವಿಶ್ವಾಸ. ಒಬ್ಬರು ಮಹಿಳೆ ರುಚಿರುಚಿಯ ಹಲಸಿನ ಹಣ್ಣಿನ ಒಬ್ಬಟ್ಟು, ಇನ್ನೊಬ್ಬರು ಚಿಪ್ಸ್ ಮಾಡಿ ತಂದಿದ್ದರು.
ಮಾಹಿತಿ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ