ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ಘಟಕ, ರೋವರ್ಸ್ ಮತ್ತು ರೇಂಜರ್ಸ್ ಘಟಕ ಮತ್ತು ಮಾನವಿಕ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 10 ನೇ ತಾರೀಕಿನಂದು ಕಾಲೇಜಿನ ರಜತ ಮಹೋತ್ಸವ ಸ್ಮಾರಕ ಭವನದಲ್ಲಿ 'ಫಿಲೋ ಆಟಿದ ಕೂಟ' ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಯಕ್ಷ ಬೊಳ್ಳಿ ದಿನೇಶ್ ರೈ ಕಡಬ ಮಾತನಾಡಿ ಆಟಿ ಬಹಳ ಕಷ್ಟದ ತಿಂಗಳಾದರೂ ಅದು ಇಷ್ಟದ ಸಮಯ. ಆಟಿದ ತಿಂಗಳಲ್ಲಿ ಯಾವುದೇ ಹಬ್ಬ ಹರಿದಿನಗಳು, ಶುಭ ಸಮಾರಂಭಗಳು ನಡೆಯದಿದ್ದರೂ ತುಳುವ ನಾಡಿನ ಜನ ಆಚರಿಸುವ ಪದ್ಧತಿಗಳು ವಿಶಿಷ್ಟವಾಗಿದೆ. ಪ್ರಕೃತಿಯ ಜೊತೆಗೆ ನಮ್ಮ ಒಡನಾಟ ನಿರಂತರವಾಗಿರಬೇಕು. ಹಿರಿಯರು ನಮ್ಮ ನಾಡಿನ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಿದ್ದು, ಅದನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ನಡೆಯಬೇಕಾಗಿದೆ. ಆರೋಗ್ಯದೊಂದಿಗೆ ನಮ್ಮ ಸಂಬಂಧಗಳನ್ನು ಉಳಿಸುವ ಕೆಲಸವನ್ನು ಮಾಡುವ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕುಸಲ್ದ ರಾಜೆ ಸುಂದರ ರೈ ಮಂದಾರ ಮಾತನಾಡಿ ನಮ್ಮ ಬದುಕನ್ನು ರೂಪಿಸುವ ಮಹತ್ತರವಾದ ಜವಾಬ್ದಾರಿಯನ್ನು ವಿದ್ಯಾ ಸಂಸ್ಥೆಗಳು ಹೊಂದಿದ್ದು, ಆ ವಿದ್ಯಾ ದೇಗುಲವನ್ನು ಗೌರವಿಸೋಣ. ನಾವು ಕಲಿತ ಶಾಲೆ, ಊರು, ಹೆತ್ತವರಿಗೆ ಕೀರ್ತಿಯನ್ನು ತರೋಣ ಎಂದು ವಿದ್ಯಾರ್ಥಿಗಳಿಗೆ ಯಶಸ್ಸನ್ನು ಕೋರಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಪುತ್ತೂರಿನ ಪ್ರಸಿದ್ಧ ದಂತ ವೈದ್ಯರಾದ ಡಾ. ಶ್ರೀ ಪ್ರಕಾಶ್ ಬಿ ಮಾತನಾಡಿ ಆಟಿ ತಿಂಗಳು ಪ್ರಕೃತಿಯ ಬದಲಾವಣೆಯ ಸಮಯ. ಸೋಣ ತಿಂಗಳಲ್ಲಿ ಪ್ರಕೃತಿ ಅರಳುವಂತೆ ನಮ್ಮ ಭವಿಷ್ಯ ಬೆಳಗಲಿ. ವಿದ್ಯಾ ದೇಗುಲವು ನೀಡುವ ಜ್ಞಾನ ಸಂಪತ್ತನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗೋಣ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ ಆಧುನಿಕತೆಯ ಈ ಸಂದರ್ಭದಲ್ಲಿ ನಮ್ಮ ತುಳುನಾಡಿನ ಸಂಪ್ರದಾಯಗಳು, ಆಚರಣೆಗಳು ಮತ್ತು ಸಂಸ್ಕೃತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಜವಾಬ್ದಾರಿ ಮಹತ್ತರವಾಗಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣ ಎಂದು ಹೇಳಿದರು.
ವೇದಿಕೆಯಲ್ಲಿ ಕುಸಲ್ದ ಗುರಿಕಾರೆ ದಿನೇಶ್ ಶೆಟ್ಟಿಗಾರ್ ಕೋಡಪದವು, ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಉಪಸ್ಥಿತರಿದ್ದರು.
ವಿಶೇಷ ಆಕರ್ಷಣೆಯಾಗಿ ಯಕ್ಷ ಬೊಳ್ಳಿ ದಿನೇಶ್ ರೈ ಕಡಬ, ಕುಸಲ್ದ ಗುರಿಕಾರೆ ದಿನೇಶ್ ಶೆಟ್ಟಿಗಾರ್ ಕೋಡಪದವು, ಕುಸಲ್ದ ರಾಜೆ ಸುಂದರ ರೈ ಮಂದಾರ ಮತ್ತು ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಇವರಿಂದ 'ಹಾಸ್ಯ ವೈಭವ' ಕಾರ್ಯಕ್ರಮ ನಡೆಯಿತು. ಇವರಿಗೆ ಹಿಮ್ಮೆಳದಲ್ಲಿ ಭಾಗವತಿಗೆಯಲ್ಲಿ ಪದವಿ ಕಾಲೇಜಿನ ಉಪನ್ಯಾಸಕರಾದ ಪ್ರಶಾಂತ್ ರೈ ಮುಂಢಾಲಾಗುತ್ತು ಮತ್ತು ಪ.ಪೂ ಕಾಲೇಜಿನ ಶರತ್ ಆಳ್ವಾ, ಚೆಂಡೆಯಲ್ಲಿ ಶ್ರೀಧರ್ ವಿಟ್ಲ ಹಾಗೂ ಮದ್ದಲೆಯಲ್ಲಿ ಪ್ರಣವ್ ಕಲ್ಲೂರಾಯ ಸಹಕರಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಂದ ಕಂಗೀಲು, ಆಟಿಕಳೆಂಜ, ಹುಲಿ ಕುಣಿತ, ತುಳುನಾಡಿನ ವೈಭವವನ್ನು ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ ಆಟಿ ತಿಂಡಿಯ ಪ್ರದರ್ಶನವು ನಡೆಯಿತು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ಜೂನಿಯರ್ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಜ್ಯೋತಿ ಅತಿಥಿಗಳನ್ನು ಸ್ವಾಗತಿಸಿದರು. ಮಾನವಿಕ ಸಂಘದ ನಿರ್ದೇಶಕರಾದ ಭರತ್ ಕುಮಾರ್ ವಂದಿಸಿ, ರೋವರ್ಸ್ ಮತ್ತು ರೇಂಜರ್ಸ್ ಘಟಕದ ನಿರ್ದೇಶಕರಾದ ಶರತ್ ಕಾರ್ಯಕ್ರಮವನ್ನು ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ