ಓದುವ ಹವ್ಯಾಸದಿಂದ ವ್ಯಕ್ತಿತ್ವ ವಿಕಸನ

Upayuktha
0

ಧರ್ಮಸ್ಥಳದಲ್ಲಿ ಪುಸ್ತಕಗಳ ಲೋಕಾರ್ಪಣೆ, ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ಸಮಾರಂಭ



ಹಾವೇರಿಯ ಹುಕ್ಕೇರಿ ಮಠದ  ಸದಾಶಿವ ಮಹಾಸ್ವಾಮೀಜಿ “ಜ್ಞಾನ ದರ್ಶಿನಿ ಮತ್ತು ಜ್ಞಾನವರ್ಷಿಣಿ” ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.

*ದಾವಣಗೆರೆಯ ಖ್ಯಾತ ಕಲಾವಿದ ಶಾಂತಯ್ಯ ಪರಡಿಮಠ ಕುಂಚದಿಂದ ರೂಪಿಸಿದ ಭಾರತಮಾತೆಯ ಚಿತ್ರ ಮತ್ತು ಮಂಗಳೂರಿನ ಸನಾತನ ನಾಟ್ಯಾಲಯದ ಕಲಾವಿದರ ಗಾಯನ ಮತ್ತು ನೃತ್ಯ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು.


ಉಜಿರೆ: ಆಟ-ಪಾಠಗಳು ಜೊತೆಯಾಗಿದ್ದಾಗ ಶಿಕ್ಷಣ ಅರ್ಥಪೂರ್ಣವಾಗಿದ್ದು ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಪುಸ್ತಕದ ಜೊತೆ ಇದ್ದಾಗ ಮಸ್ತಕದ ವಿಕಾಸವೂ ಆಗುವುದರಿಂದ ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮೀಜಿ ಹೇಳಿದರು.


ಅವರು ಶನಿವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಶಾಂತಿವನ ಟ್ರಸ್ಟ್ ನಿಂದ ಪ್ರಕಟಿಸಿದ “ಜ್ಞಾನದರ್ಶಿನಿ ಮತ್ತು ಜ್ಞಾನವರ್ಷಿಣಿ” ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. 


ಪುಸ್ತಕಗಳನ್ನು ಓದುವುದರಿಂದ ಜ್ಞಾನವೃದ್ಧಿಯೊಂದಿಗೆ ಮಸ್ತಕದ ವಿಕಾಸವೂ ಆಗುತ್ತದೆ. ಕಾಲಹರಣ ಮಾಡುವ ಮೊಬೈಲ್ ಫೋನ್ ಬಳಕೆಯ ಚಟವನ್ನು ಕಡಿಮೆ ಮಾಡಿ, ದೃಢಸಂಕಲ್ಪದೊಂದಿಗೆ ನಿರ್ಧಿಷ್ಟ ಗುರಿಯನ್ನು ಇಟ್ಟುಕೊಂಡು ಉನ್ನತ ಸಾಧನೆ ಮಾಡಬೇಕು. ಸಾಧನೆ ಸಾಧಕರ ಸೊತ್ತು, ಅಲ್ಲದೆ ಸೋಮಾರಿಗಳ ಸೊತ್ತು ಅಲ್ಲ. ಪಠ್ಯದ ಜೊತೆಗೆ ನಿತ್ಯವೂ ಇತರ ಪುಸ್ತಕಗಳನ್ನೂ ಓದಬೇಕು. ಸರ್ಕಾರ ಮಾಡಬೇಕಾದ ಕೆಲಸವನ್ನು ಧರ್ಮಸ್ಥಳದ ವತಿಯಿಂದ ಮಾಡುತ್ತಿದ್ದು, ಪುಸ್ತಕ ಪ್ರಕಾಶನ ರಾಜ್ಯಕ್ಕೆ ಮಾದರಿ ಕಾರ್ಯಕ್ರಮವಾಗಿದೆ ಎಂದು ಸ್ವಾಮೀಜಿ ಹೆಗ್ಗಡೆಯವರನ್ನು ಅಭಿನಂದಿಸಿದರು.


ಚಲನಚಿತ್ರ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಶುಭಾಶಂಸನೆ ಮಾಡಿ ಕಲೆಯನ್ನು ತಪಸ್ಸಿನಂತೆ ಏಕಾಗ್ರತೆ ಮತ್ತು ಸತತ ಪ್ರಯತ್ನದಿಂದ ಅಭ್ಯಾಸ ಮಾಡಿದರೆ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ದಕ್ಷಿಣ ಕನ್ನಡ ಜಿಲ್ಲಾ ಡಿ.ಡಿ.ಪಿ.ಐ. ವೆಂಕಟೇಶ ಸುಬ್ರಾಯ ಪಟಗಾರ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡು ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಬೇಕು ಎಂದು ಸಲಹೆ ನೀಡಿದರು.


ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಮಾನವೀಯತೆ ಇಲ್ಲದ ಜನ್ಮ ವ್ಯರ್ಥ. ಗುರು-ಹಿರಿಯರನ್ನು ಗೌರವಿಸುವುದು, ಸಮಾನ ಮನಸ್ಕರಲ್ಲಿ ಸ್ನೇಹಿತರಂತೆ ಪ್ರೀತಿ-ವಿಶ್ವಾಸದಿಂದ ವ್ಯವಹರಿಸುವುದು ಹಾಗೂ ಕಿರಿಯರಲ್ಲಿ ಪ್ರೀತಿ, ಕರುಣೆ ಅನುಕಂಪ ತೋರಿಸುವುದು ಇತ್ಯಾದಿ ಮಾನವೀಯ ಮೌಲ್ಯಗಳಿಂದ ಜೀವನ ಪಾವನವಾಗುತ್ತದೆ. ಆದುದರಿಂದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನೂ ಕಲಿಸಿಕೊಡಲಾಗುತ್ತದೆ ಎಂದರು.


ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಪೂರನ್‌ವರ್ಮ ಉಪಸ್ಥಿತರಿದ್ದರು.


ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಯೋಗ ನಿರ್ದೇಶಕ ಶಶಿಕಾಂತ್ ಜೈನ್, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯನ್ನು ಈ ವರ್ಷ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರಕ್ಕೂ ವಿಸ್ತರಿಸಲಾಗುವುದು ಎಂದು ಪ್ರಕಟಿಸಿದರು.


ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top