ಮನದ ಬೇಗುದಿಗಳನ್ನೆಲ್ಲ ಬದಿಗೊತ್ತಿ, ದೈವವನ್ನು, ದೇವರನ್ನು, ಭಕ್ತಿಯಿಂದ ಪೂಜಿಸಿ, ಬಂಧುಬಾಂಧವರನ್ನು, ಸ್ನೇಹಿತರನ್ನು ಕರೆದು, ಹಬ್ಬದಡಿಗೆ ಮಾಡಿ, ಸಿಹಿ ಹಂಚಿ, ಸಂಭ್ರಮ ಪಡುವುದೇ ಹಬ್ಬಗಳ ಹಿಂದಿನ ಉದ್ದೇಶ. ಹಬ್ಬಗಳೆಂದರೆ ಸಂಭ್ರಮ, ಸಡಗರ, ಕಷ್ಟವೋ, ಸುಖವೋ, ನೋವೋ, ನಲಿವೋ, ಇದ್ದುದರಲ್ಲೇ ಎಲ್ಲವನ್ನೂ ಒಪ್ಪ ಓರಣ ಮಾಡುವ ಹೊಂದಿಕೊಂಡು ಹೋಗುವ, ದುಡ್ಡು ಕಾಸು ಹೊಂದಿಸಿಕೊಂಡು ಯಥಾಶಕ್ತಿ, ಹಬ್ಬಹರಿದಿನಗಳನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಚಾಚೂತಪ್ಪದೇ ಆಚರಿಸುವುದನ್ನು ಮಧ್ಯಮವರ್ಗದವರಿಂದಲೇ ಕಲಿಯಬೇಕು. ಆಡಂಬರಗಳಿಗೆ ಮಹತ್ವಕೊಡದೆ, ಸಂಪ್ರದಾಯ ನಿಯಮಗಳಿಗೆ, ಆಚರಣೆಗಳಿಗೆ ಮಹತ್ವ ಕೊಟ್ಟು, ಸಂಬಂಧಗಳಿಗೆ ಸಮಯ ಕೊಟ್ಟು, ಹಬ್ಬಗಳನ್ನು ಸಾರ್ಥಕವಾಗಿ ಆಚರಿಸುವ ರೀತಿಯೇ ಚಂದ.
ಆಷಾಢ ಬಿಸಿಲಿನ ಬೇಗೆ ಕಳೆದು, ವರುಣನ ಕೃಪೆಯಿಂದ ಇಳೆಗೆ ಮಳೆ ಸುರಿಸಿ, ಭೂಮಿಯ ಒಡಲು ತಂಪಾಗಿಸಿ, ಇಡೀ ಭೂಮಂಡಲವನ್ನೇ ತೋಯಿಸಿ, ಇಳೆಗೆ ಖಳೆ ನೀಡುವ ವರುಣ ಆಗಾಗ ತಂಪೆರೆದರೆ, ಪ್ರಕೃತಿಯ ಒಡಲನ್ನು ತನ್ನ ಸ್ವಾರ್ಥಕ್ಕಾಗಿ ಅಗೆದು ಬಗೆದು ತುಂಡರಿಸಿದ, ಭೂಮಿತಾಯಿಯನ್ನು ವಿರೂಪಗೊಳಿಸಿದ ಮನುಷ್ಯರಿಗೆ, ಊರು ಊರುಗಳನ್ನೇ ಇನ್ನಿಲ್ಲದಂತೆ ಕೊಚ್ಚಿಕೊಂಡುಹೋಗಿ ಬುದ್ಧಿ ಕಲಿಸುತ್ತಾನೆ. ಮಳೆಯ ಅಬ್ಬರದಿಂದ ತತ್ತರಿಸಿದ ಮನುಕುಲ, ಅತಿವೃಷ್ಟಿ ಅನಾವೃಷ್ಟಿ ಆಗದಂತೆ ಮತ್ತೆ ಭಗವಂತನಲ್ಲಿ ಮಾಡಿದ ತಪ್ಪನ್ನು ಕ್ಷಮಿಸೆಂದು ಪ್ರಾರ್ಥಿಸಿ, ಎಲ್ಲ ವೃತ ನೇಮಗಳನ್ನು ಆಚರಿಸಿ ತಮ್ಮ ಮನಶಾಂತಿಗಾಗಿ ಪ್ರಾರ್ಥಿಸಿ ಸಂಭ್ರಮಿಸುತ್ತಾನೆ.
ಶ್ರಾವಣ ಬಂತೆಂದರೆ ಸಾಕು ಹಬ್ಬಗಳು ಸಾಲುಸಾಲಾಗಿ ನಿಲ್ಲುತ್ತವೆ. ಅಮಾವಾಸೆಯ ದಿನ ದೀಪಸ್ತಂಭದ ದಿವಸೀಗೌರಿ ವೃತದಿಂದ ಆರಂಭವಾಗಿ ನಾಗರಚೌತಿ, ಪಂಚಮಿ, ಸುಮಂಗಲಿಯರ ಪರಮಪ್ರೀತಿಯ, ಮುತ್ತೈದೆ ಭಾಗ್ಯ ನೀಡುವ ಮಂಗಳಗೌರಿ ವ್ರತ, ಐದುಶುಕ್ರವಾರ, ಐದು ಶನಿವಾರದ ವೃತಾಚರಣೆಗಳು ಸಾಲುಸಾಲಾಗಿ ನಡೆಯುತ್ತವೆ.
ವರಮಹಾಲಕ್ಷ್ಮಿ ವ್ರತ
ಶ್ರಾವಣದ ಎರಡನೇ ಶುಕ್ರವಾರವೇ ವರಮಹಾಲಕ್ಷ್ಮಿ ವ್ರತ ಅಥವಾ ಹಬ್ಬ. ಈ ವ್ರತಕ್ಕೆ ಅಧಿದೇವತೆ ಮಹಾಲಕ್ಷ್ಮಿ. ಇದನ್ನು ಶ್ರಾವಣಮಾಸದಲ್ಲಿ ಪೌರ್ಣಿಮೆ ಸಮೀಪಸ್ಥವಾದ ಭೃಗುವಾರದಲ್ಲಿ ಮಾಡಬೇಕು. ಆ ರೀತಿ ವ್ರತ ಮಾಡಿದ ಭಕ್ತರ ಕೋರಿಕೆಗಳೆಲ್ಲ ಕೈಗೂಡಿ, ಕಷ್ಟ ಕಾರ್ಪಣ್ಯಗಳೆಲ್ಲ ನಾಶವಾಗಿ ಸಂಪತ್ತು ಸಮೃದ್ಧಿ ಲಭಿಸುವುದು.
ಅಮೃತಸ್ವರೂಪಿಣ ಯಾದ ಲಕ್ಷ್ಮೀದೇವಿ ಸಂಪತ್ತಿನ ಅಧಿದೇವತೆ, ಐಶ್ವರ್ಯಗಳ ಮೂಲ ದೇವತೆ ಜ್ಞಾನ, ಸುಖ, ಆರೋಗ್ಯ, ಧನ, ಧಾನ್ಯ, ಜಯ ಇವು ವರಮಹಾಲಕ್ಷ್ಮಿಯ ಲಕ್ಷಣ ವೈಶಿಷ್ಟ್ಯ. ವರಮಹಾಲಕ್ಷ್ಮಿ ವ್ರತ ಮಾಡಿದರೆ ಈ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ.
ಅಂದು ಎಳೆ ಚಿಗುರು ಬಾಳೆಯಕಂಬದಿಂದ ಮಂಟಪ ಕಟ್ಟಿ. ಅದರ ಮಧ್ಯದಲ್ಲಿ ಪಂಚವರ್ಣದಿಂದ ಕೂಡಿದ ಅಷ್ಟದಳ ಪದ್ಮವನ್ನು ರಚಿಸಿ, ಅದರ ಮೇಲೆ ಮಾವಿನ ಚಿಗುರುಗಳಿಂದ ಕೂಡಿದ ಕಲಶವನ್ನು ಇಟ್ಟು ಕಳಶ ಸ್ಥಾಪಿಸಬೇಕು. ಒಂದು ಬೆಳ್ಳಿ ತಂಬಿಗೆಯಲ್ಲಿ ಸ್ವಲ್ಪ ನೀರು ಅಕ್ಕಿ ಹಾಕಿ ಅರಿಶಿಣ ಕೊಂಬು ಅಡಿಕೆ ಬೆಳ್ಳಿ ನಾಣ್ಯ, ಅದರ ಮೇಲೆ ತೆಂಗಿನಕಾಯಿ ಇಟ್ಟು, ಲಕ್ಷ್ಮೀದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ಈ ತೆಂಗಿನ ಕಾಯಿಗೆ ಜೋಡಿಸುತ್ತಾರೆ. ಈ ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯಲ್ಲಿಟ್ಟು ಆ ತಟ್ಟೆಯನ್ನು ಅಷ್ಟದಳದ ರಂಗವಲ್ಲಿಯ ಮೇಲಿಡಬೇಕು. ಕಳಶಕ್ಕೆ ಹೊಸ ಸೀರೆ ಉಡಿಸಿ ಒಡವೆಗಳಿಂದ ಅಲಂಕರಿಸುತ್ತಾರೆ.
ವೃತದ ಮೊದಲಲ್ಲಿ ಗಣಪತಿ ಪೂಜೆ ನಂತರ ಪೂಜೆ ಮಾಡಿ, ಕುಂಕುಮಾರ್ಚನೆ ಮಾಡಬೇಕು. ಷೋಡಶೋಪಚಾರದಿಂದ ಸತ್ಕರಿಸಿ ಪದ್ಮಾಸನೆ, ಪದ್ಮಊರು, ಪದ್ಮಾಕ್ಷಿ, ಪದ್ಮ ಸಂಭವೆ ಎಂಬ ಮಂತ್ರದೊಂದಿಗೆ ಶಾಸ್ತ್ರೋಸ್ತ್ರ ಪೂಜೆಯನ್ನು ಮಾಡಬೇಕು. ಹೂವಿನಿಂದ ಅಲಂಕರಿಸಿದ ಕಳಶದಲ್ಲಿ, ಲಕ್ಷ್ಮಿ ವಿಗ್ರಹದಲ್ಲಿ ಲಕ್ಷ್ಮಿದೇವಿಯನ್ನು ಆವಾಹನೆ ಮಾಡಿ, ವಿವಿಧ ಹೂವು ಪತ್ರೆಗಳಿಂದ ಪೂಜಿಸಿ ಮಂಗಳಾರತಿ ಮಾಡಿ, 21 ಬಗೆಯ ಸಿಹಿ ತಿಂಡಿಗಳು ಅಥವಾ ಯಥಾಶಕ್ತಿ ಭಕ್ಷ್ಯಗಳನ್ನು ಮಾಡಿ, ನೃವೇದ್ಯ ಮಾಡುತ್ತಾರೆ. ಅರಿಷಿಣ ಕುಂಕುಮ ಹಚ್ಚಿದ ದಾರವನ್ನು ದೇವರ ಮುಂದಿಟ್ಟು ಪೂಜಿಸಿ ಸುಮಂಗಲಿಯರು ಆ ದಾರವನ್ನು ಕಟ್ಟಿಕೊಳ್ಳುತ್ತಾರೆ. ವರ ಮಹಾಲಕ್ಷ್ಮಿ ಪ್ರಿಯವಾದ ಕಡಲೆಬೇಳೆ ಪಾಯಸ, ಪೊಂಗಲ್, ಅಥವಾ ಹಯಗ್ರೀವ ಮಾಡುವ ಸಂಪ್ರದಾಯವೂ ಇದೆ. ಪೂಜೆಯ ನಂತರ ಆರತಿ ಎತ್ತಿ ಮತ್ತೃದೆಯರಿಗೆ ಬಾಗಿನ ಕೊಡುತ್ತಾರೆ. ವರ ಮಹಾಲಕ್ಷ್ಮಿ ವೃತದ ಕಥೆಯನ್ನು ಓದಿ, ಲಕ್ಷ್ಮಿದೇವಿಯನ್ನು ತೃಪ್ತಿಪಡಿಸುತ್ತಾರೆ. ಯೋಗ್ಯರಾದ ಬ್ರಾಹ್ಮಣರಿಗೆ ಸುವಾಸಿನಿಯರಿಗೆ ಸುಗಂಧ, ಫಲ ತಾಂಬೂಲಗಳಿಂದ ಉಪಚರಿಸಿ ಭೂರಿದಕ್ಷಿಣೆಗಳನ್ನು ಕೊಟ್ಟು ಕಥೆಯನ್ನು ಓದಿ, ದಾನವನ್ನು ಕೊಟ್ಟು ಭೂರಿಭೋಜನವನ್ನು ಮಾಡಿಸಿ ತೃಪ್ತಿಪಡಿಸಬೇಕು" ಎಂದು ವ್ರತದ ಮಹಿಮೆಯನ್ನು, ವೃತ್ತಾಂತವನ್ನು ಉಮಾದೇವಿಗೆ ಮನೋನಿಯಾಮಕನಾದ, ಪರಮ ವೈಷ್ಣವನಾದ ಪರಮೇಶ್ವರನು ವಿವರಿಸಿ, ಈ ವ್ರತವನ್ನು ಮಾಡಲು ಹೇಳುತ್ತಾನೆ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ.
ಸಮುದ್ರ ಮಥನದಿಂದ ಮಹಾಲಕ್ಷ್ಮಿ ಉದ್ಭವಿಸಿದ ಕಥೆ
ಒಮ್ಮೆ ಹೂವಿನ ಪ್ರಸಾದವನ್ನು ಸ್ವೀಕರಿದೆ ಇಂದ್ರನು ಋಷಿಯ ಶಾಪಕ್ಕೆ ಗುರಿಯಾಗಿ ಇಂದ್ರ ರಾಜ್ಯ ರಾಜ್ಯಭ್ರಷ್ಟನಾದ. ಆಗ ಸ್ವರ್ಗ ಲಕ್ಷ್ಮಿಯು ಸ್ವರ್ಗ ಬಿಟ್ಟು ವೈಕುಂಠ ಸೇರಿದಳು. ಆಗ ದೇವತೆಗಳೆಲ್ಲರೂ ಬ್ರಹ್ಮನ ನೇತೃತ್ವದಲ್ಲಿ ವೈಕುಂಠಕ್ಕೆ ಬಂದು ವಿಷ್ಣುವನ್ನು ಪ್ರಾರ್ಥಿಸಿ ಮತ್ತೆ ಸ್ವರ್ಗ ಪ್ರಾಪ್ತಿಯಾಗುವಂತೆ ಅನುಗ್ರಹಿಸಬೇಕೆಂದು ಬೇಡಿದಾಗ ವಿಷ್ಣುವಿನ ಯೋಜನೆಯಂತೆ ದೇವತೆಗಳು ದಾನವರೊಡನೆ ಒಪ್ಪಂದ ಮಾಡಿಕೊಂಡು ಅಮೃತಕ್ಕಾಗಿ ಕ್ಷೀರಸಾಗರ ಮಥನ ಮಾಡಿದರು ಆಗ ಪರಮಸ್ವರೂಪಿಣ ಯಾದ ಲಕ್ಷ್ಮಿಯು ಸಂಭ್ರಮದಲ್ಲಿ ಅವತರಿಸಿ ದೇವತೆಗಳಿಗೆ ವರ ನೀಡಿ ಅನುಗ್ರಹಿಸಿದಳು. ಅಲ್ಲೇ ಮಹಾ ವಿಷ್ಣುವಿಗೆ ಮಾಲೆ ಹಾಕಿ ವಿವಾಹವಾದಳು.
ಕ್ಷೀರಸಾಗರದಲ್ಲಿ ಶ್ವೇತವರ್ಣದಲ್ಲಿ ಅವತರಿಸಿದ್ದರಿಂದ ವರಮಹಾಲಕ್ಷ್ಮಿ ವ್ರತದಂದು ಲಕ್ಷ್ಮಿಗೆ ಶ್ವೇತವರ್ಣದ ಕೆಂಪಂಚಿನ ಸೀರೆ ಉಡಿಸುವ ಸಂಪ್ರದಾಯವೂ ಕೆಲವೆಡೆ ಇದೆ. ಲಕ್ಷ್ಮಿ ಸಹಸ್ರನಾಮ, ಲಕ್ಷ್ಮೀದೇವಿ ಲಕ್ಷ್ಮೀದೇವಿ ಕುರಿತ ದಾಸರ ಹಾಡುಗಳನ್ನು ಹೇಳುತ್ತಾ ಭಕ್ತಿಯಿಂದ ಭಜಿಸುತ್ತಾರೆ.
`ಕೋಟಿಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ ತಾನೆ ಮಾಡುತಿಹಳು ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ’
ಜಗತ್ತಿಗೇ ಸ್ವಾಮಿಯಾದ, ಆ ಸ್ವಾಮಿಯ ಸೇವೆಯನ್ನು, ಜಗಜ್ಜನನಿಯಾದ ಜಗತ್ಸ್ವಾಮಿನಿಯಾದ ಮಹಾಲಕ್ಷ್ಮಿಯೇ ಮಾಡುತ್ತಾಳೆ, ಸೇವೆಯ ಒಂದು ಚೂರು ಭಾಗವನ್ನು ಸಹ ತಾಯಿ ಯಾರಿಗೂ ಬಿಟ್ಟುಕೊಡಲಾರದೆ ದಾಸತ್ವತ ನಿಜವಾದ ಅರ್ಥವನ್ನು ತೋರಿಸಿಕೊಟ್ಟವಳು ಮಹಾಲಕ್ಷ್ಮಿ. ಹರಿದಾಸರೆಲ್ಲ ಮಹಾಲಕ್ಷ್ಮಿಯನ್ನು ಕೊಂಡಾಡಿದ್ದಾರೆ, ಹಾಡಿಹೊಗಳಿದ್ದಾರೆ. ಇದೇ ಮಹಾಲಕ್ಷ್ಮಿಯನ್ನು ಶ್ರೀವಾದಿರಾಜರು ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ ಎನ್ನುತ್ತಾ, ಲಕ್ಷ್ಮೀ ಶೋಭಾನೆಯಲ್ಲಿ ಮಾತೆಯ ಸೂಕ್ಷ್ಮಾತಿಸೂಕ್ಷ ಸ್ವಭಾವವನ್ನೂ ಬಹಳ ಮನೋಜ್ಞವಾಗಿ ಕಣ್ಣೆದುರು ನಡೆಯುವಂತೆ ಪಡಿಮೂಡಿಸಿದ ರಚನೆಯ ಪರಿಯೇ ಪರಮಾದ್ಭುತ.
ಜ್ಞಾನ ಭಕ್ತಿ ವೈರಾಗ್ಯಗಳ, ಒಡತಿ ಜಗಜ್ಜನನಿ ಶ್ರೀಮಹಾಲಕ್ಷ್ಮಿ, ಇಂತಹ ಜಗನ್ಮಾತೆಯು ಶ್ರೀಮನ್ನಾರಾಯಣನಿಗೆ ಶುಭಕೋರುವ, ಶ್ರೀಹರಿಯ ಸರ್ವೋತ್ತಮತ್ವವನ್ನು ಸಾರುವ, ಭಗವಂತನಿಗೆ ಸಮರ್ಪಣೆ ಮಾಡಿರುವ, ಸುಂದರ ರತ್ನಖಚಿತ ಹಾರವೇ ಶ್ರೀವಾದಿರಾಜರ "ಲಕ್ಷ್ಮೀ ಶೋಭಾನೆ"
ಇಂತಹ ಲಾವಣ್ಯಮಯವಾದ ಹಾರವನ್ನು ಎಲ್ಲರ ಮನನದಲ್ಲೂ ಕಂಗೊಳಿಸುವಂತೆ ಮಾಡಿದವರು ಶ್ರೀವಾದಿರಾಜರು.
ಲಕ್ಷ್ಮೀ ಎಂದರೆ ಗೆಲುವು, ನಲಿವು, ಸಂತೋಷ ಸಂಭ್ರಮ ಸಡಗರ. ಲೋಕವಿಖ್ಯಾತೆ, ಪಾವನಖ್ಯಾತೆ, ಕೈವಲ್ಯದಾತೆ, ಮಂಗಳದಾತೆ, ಪರಮ ಪುನೀತೆ. ಮಂಗಳಕ್ಕೆ ಮಂಗಳೆಯಾದ ಲಕ್ಷ್ಮೀದೇವಿ ಜಗನ್ಮಾತೆ. ಲಕ್ಷಣಕ್ಕೆ ಲಕ್ಷಣಳಾದ ಸುಲಕ್ಷಣವಂತೆ. ಲಕ್ಷ್ಮೀ ಎಂದರೆ ವಜ್ರ ವೈಡೂರ್ಯ, ಮುತ್ತುರತ್ನ, ಬೆಳ್ಳಿ ಬಂಗಾರ, ಧನಕನಕಗಳ ಸಂಪತ್ತು ಎಂದರ್ಥವಲ್ಲ. ಲಕ್ಷ್ಮಿ ಎಂದರೆ ಜ್ಞಾನವೇ ನಿಜವಾದ ಸಂಪತ್ತು.
ಇಂತಹ ವರಮಹಾ ಲಕ್ಷ್ಮೀ ದೇವಿಯು ಭಕ್ತಿಯ ಪುಷ್ಪಕ್ಕೆ, ಭಕ್ತಿಯ ಅರ್ಚನೆಗೆ, ತನ್ನ ಪ್ರಾಣ ವಲ್ಲಭನಾದ ಜಗತ್ಪತಿ, ಜಗತ್ಪಿತನನ್ನು ಅನನ್ಯವಾಗಿ ಪೂಜಿಸುವ, ಶ್ರೀಮನ್ನಾರಾಯಣನ ಜೊತೆಗೆ ಲಕ್ಷ್ಮೀದೇವಿಯನ್ನು ಪೂಜಿಸಿದರೆ ಮಾತ್ರ ಆಕೆ ನಿಸ್ಸಂದೇಹವಾಗಿ ಒಲಿಯುತ್ತಾಳೆ ನಲಿಯುತ್ತಾಳೆ.
ತುಳಸಿ ಇಲ್ಲದ ಪೂಜೆ ವಲ್ಲನೋ ಹರಿಕೊಳ್ಳನೋ ಎಂಬ ದಾಸರ ಸಾಲಿನಂತೆ, ತುಳಸಿಯಲ್ಲಿ ಮಹಾಲಕ್ಷ್ಮಿಯ ಸನ್ನಿಧಾನವಿದೆ. ಆಕೆಯನ್ನು ಬಿಟ್ಟು ಮಹಾವಿಷ್ಣು ಇರಲಾರ. ವಿಷ್ಣುವನ್ನು ಬಿಟ್ಟು ಮಹಾಲಕ್ಷ್ಮಿ ಇರಲಾರಳು. ಅದಕ್ಕೆ ಲಕ್ಷ್ಮಿ ಹೆಸರಿನ ಮುಂದೆ ವರ ಎಂದು ಸೇರಿರುವುದು. ವರ ಎಂದರೆ ಸಾಕ್ಷಾತ್ ಶ್ರೀಮನ್ನಾರಾಯಣ. ಭಗವಂತ ಸ್ವರಮಣನಾದರೂ ಅವ ಶ್ರೀರಮಣ ಯೂ ಹೌದಲ್ಲವ. ಹಾಗಾಗಿ ಕರೆದರೆ ದಂಪತಿಗಳಿಬ್ಬರನ್ನೂ ಕರೆಯಬೇಕು. ಇಬ್ಬರನ್ನೂ ಆರಾಧಿಸಬೇಕು.
ಪಾಲ್ಗಲೊಡೆಯ ಸ್ವಾಮಿಯಾದರೆ, ಸ್ವಾಮಿಗೆ ಪ್ರೀತಿಯಾದ ಹಾಲಿನಿಂದ ಕಡೆದ ಬೆಣ್ಣೆಯಲ್ಲಿ ಲಕ್ಷ್ಮಿಯ ಸನ್ನಿಧಾನವಿದೆ. ಅಷ್ಟೇ ಅಲ್ಲದೇ ಶಂಖದಲ್ಲಿ, ತುಪ್ಪದಲ್ಲಿ, ದೀಪದಲ್ಲಿ, ತೇಜಸ್ಸಿನಲ್ಲಿ, ಬೆಳಕಿನಲ್ಲಿ, ಹೊಳಪಿನಲ್ಲಿ, ಗೋಮಯದಲ್ಲಿ, ಶುದ್ಧವಾದ ಮನೆಮನದಲ್ಲಿ, ಹೀಗೆ ಹಲವೆಡೆಯಲ್ಲಿ ತಾಯಿ ವರಮಹಾಲಕ್ಷ್ಮೀ ಸನ್ನಿಧಾನವಿದೆ. ಭಗವಂತನಿಗೆ ಅರ್ಪಣೆಯಾಗುವ, ಭಕ್ತಾಪರಾಧೀನನಿಗೆ ಭಕ್ತಿಯಿಂದ ಸಮರ್ಪಣೆಯಾಗುವ ಎಲ್ಲದರಲ್ಲೂ ಲಕ್ಷ್ಮೀದೇವಿಯ ಸನ್ನಿಧಾನವಿದೆ.
ಕಾಟಾಚಾರಕ್ಕೋ, ಡಂಭಾಚಾರಕ್ಕೋ, ತೋರಿಕೆಗೋ ಪೂಜೆ ಅಲಂಕಾರಗಳನ್ನು ಮಾಡದೇ, ಮನಸ್ಸಿನಲ್ಲಿ ಭಕ್ತಿಯ ದೀಪ ಹಚ್ಚಿ ಸಂತೋಷ, ಸಂಭ್ರಮದಿಂದ ಶ್ರೀಲಕ್ಷ್ಮೀನಾರಾಯಣರಿಬ್ಬರನ್ನೂ ಪೂಜಿಸಿದಾಗ ವರಮಹಾಲಕ್ಷ್ಮೀಯ ಸಂಪೂರ್ಣ ಅನುಗ್ರಹವಾಗುತ್ತದೆ.
ವೃತನೇಮ ಆಚರಣೆಗಳಿಂದ ದೇಹ ಶುದ್ಧಿ, ಧ್ಯಾನ, ಜಪ ತಪ, ಪಾರಾಯಣಗಳಿಂದ ಮನಸ್ಸು ಶುದ್ಧಿ, ಹೀಗೆ ದೇಹ ಮನಸ್ಸು ಎರಡನ್ನೂ ನಿರ್ಮಲವಾಗಿಟ್ಟುಕೊಂಡು, ಮನೆಯನ್ನು ಗೋಮೂತ್ರದಿಂದ ಶುದ್ಧಿಗೊಳಿಸಿ, ಗೋಮಯದಿಂದ ಮನೆಯಂಗಳವನ್ನು ಸಾರಿಸಿ ರಂಗೋಲಿಯನ್ನು ಹಾಕಿ ಅರಿಷಿಣ ಕುಂಕಮವಿಟ್ಟು, ತಳಿರು ತೋರಣಗಳಿಂದ ಮನೆ, ಪೂಜಾಗೃಹ, ಮಂಟಪವನ್ನು ಸಿಂಗರಿಸಿ, ಮನೆಯವರೆಲ್ಲಾ ನಗುನಗುತ್ತಾ ಆಚರಿಸುವ ಪೂಜೆ ಸಂಪನ್ನಗೊಳ್ಳುತ್ತದೆ.
ಹಳ್ಳಿಗಳಲ್ಲಿ ಈಗಲೂ ಮಹಾಲಕ್ಷ್ಮಿ ಹಬ್ಬವನ್ನು ವಿಶೇಷವಾಗಿ ಮತ್ತು ದೊಡ್ಡದಾಗಿ ಆಚರಿಸುತ್ತಾರೆ. ವರ ಮಹಾಲಕ್ಷ್ಮಿ ಹಬ್ಬವು ತವರುಮನೆಯ ಹಬ್ಬವೆಂದು ತಮ್ಮ ಹೆಣ್ಣು ಮಕ್ಕಳನ್ನು ತೌರಿಗೆ ಕರೆಸಿಕೊಳ್ಳು ತ್ತಾರೆ. ಹೆಣ್ಣು ಮಕ್ಕಳು ತೌರಿಗೆ ಬರಲಾಗದಿದ್ದರೆ ಸಹೋದರರು ಹೆಣ್ಣು ಮಕ್ಕಳ ಮನೆಗೆ ಹೋಗಿ ಅರಿಷಿಣ ಕುಂಕುಮ, ಬಾಗಿನ ಕೊಟ್ಟು ಬರುತ್ತಾರೆ.
ಲಕ್ಷ್ಮಿ ಅನುಗ್ರಹ ಬೇಡ ಎನ್ನುವವರುಂಟೇ. ಎಲ್ಲರಿಗೂ ಪರಮಪ್ರಿಯಳು. ವರ ಮಹಾಲಕ್ಷ್ಮಿ ಹಬ್ಬವನ್ನು ಎಲ್ಲ ವರ್ಗದವರೂ ಅದ್ದೂರಿಯಾಗಿ ಆಚರಿಸುತ್ತಾರೆ. ಇಂದ್ರಾದಿ ದೇವತೆಗಳಿಂದ, ಸುರಮುನಿಗಣ ಗಳಿಂದ, ದೇವತೆಗಳಿಂದ ಸ್ತುತಿಸಲ್ಪಡುವ ತಾಯಿಯನ್ನು, ಶ್ರೀಮನ್ನಾರಾಯಣನ ಪತ್ನಿ ಮಹಾಲಕ್ಷ್ಮಿ ಅಂತ ಉಪಾಸನೆ ಮಾಡಿದರೆ ಮಾತ್ರ ಪೂಜೆಯನ್ನು ತಾಯಿ ಸ್ವೀಕರಿಸಿ, ಸಂತುಷ್ಠಳಾಗಿ ಪ್ರಸನ್ನಳಾಗುತ್ತಾಳೆ. ಬೇಡಿದ ವರಗಳನ್ನು ನೀಡುತ್ತಾಳೆ.
- ಡಾ.ವಿದ್ಯಾಶ್ರೀ ಕುಲಕರ್ಣಿ ಮಾನವಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ