ಕೈವಲ್ಯ ಪದ್ಧತಿ ಎನ್ನುವುದು ಶ್ರೀಮನ್ ನಿಜಗುಣ ಶಿವಯೋಗಿಗಳು ವಿರಚಿತ ಬಹು ವಿಶಿಷ್ಟವಾದ ಗ್ರಂಥ. ಒಂದು ಮೈಲುಗಲ್ಲು ಈ ದಾರಿಯೂ ಯಾವ ಊರಿಗೆ ಹೋಗುತ್ತದೆ ಆ ಊರು ಎಷ್ಟು ದೂರ ಇರುವುದು ಎನ್ನುವುದರ ತಿಳುವಳಿಕೆಯನ್ನು ನೀಡುತ್ತದೆ. ಹಾಗೆ ಕೈವಲ್ಯಧಾಮ ಊರ ಸೇರಲು ಮೋಕ್ಷಾಪೇಕ್ಷಿಗಳಿಗೆ ದಾರಿ ತೋರುವ ಅತ್ಯಮೂಲ್ಯವಾದ ಗ್ರಂಥ ಎಂದರೆ ಅದು ಕೈವಲ್ಯ ಪದ್ಧತಿ. ಕೈವಲ್ಯ ಪದ್ಧತಿಯಲ್ಲಿ ಶಿವಕಾರುಣ್ಯ, ಜೀವಸಂಬೋಧನಾ, ನೀತಿಕ್ರಿಯಾಚರ್ಯ, ಯೋಗ ಪ್ರತಿಪಾದನಾ, ಜ್ಞಾನ ಪ್ರತಿಪಾದನ, ಎಂಬ ಐದು ಸ್ಥಲಗಳಿವೆ. ಅದರಲ್ಲಿ ನೀತಿಕೃಯಾಚರ್ಯ ಸ್ಥಲದ ಮೊದಲ ಪದ್ಯದ ಪ್ರಥಮ ನುಡಿಯಲ್ಲಿ "ಶ್ರೀ ಗುರು ವಚನದಿಂದಧಿಕ ಸುಧೆಯೊಂಟೆ?" ಎಂದು ಹೇಳುತ್ತಾರೆ. ವಚನ ಎಂದರೆ ಮಾತು ಎಂದರ್ಥ, ಸುಧೆ ಎಂದರೆ ಅಮೃತ ಎಂದರ್ಥ, ಉಂಟೆ ಎಂದರೆ ಇರಲು ಸಾಧ್ಯವೇ ಎಂದರ್ಥ, ಶ್ರೀ ಗುರುವಿನ ಮಾತಿಗಿಂತ ಮತ್ತೊಂದು ಅಮೃತ ಇರಲು ಸಾಧ್ಯವಿಲ್ಲ ಎಂದು ನಿಜಗುಣರು ಹೇಳುತ್ತಾರೆ.
ಭಾರತೀಯ ಪರಂಪರೆಯಲ್ಲಿ ಹಾಗೂ ನಮ್ಮ ವೇದ ಗ್ರಂಥ ಪುರಾಣಗಳಲ್ಲಿ ಗುರುವಿಗೆ ಅತಿ ಮಹತ್ವದ ಸ್ಥಾನವಿದೆ. ಆತನು ನಮ್ಮ ಅಂತ:ಕರಣ ಎಂಬ ಮನಸ್ಸಿನ ಕಲ್ಮಶಗಳನ್ನು ತನ್ನ ನುಡಿಗಳೆಂಬ ಪೊರಕೆಯಿಂದ ಸ್ವಚ್ಛಗೊಳಿಸುತ್ತಾನೆ. ಹರ ಮುನಿದರೂ ಗುರು ಕಾಯುವನು, ಗುರು ಮುನಿದರೆ ಹರ ಕಾಯಲಾರನು ಅದಕ್ಕಾಗಿ ಹರನಿಗಿಂತಲೂ ಗುರು ಶ್ರೇಷ್ಠ ಎಂದು ಹೇಳುತ್ತಾರೆ ನಮ್ಮ ಪೂರ್ವಜರು. ಗುರುಗಳಲ್ಲಿ ಎರಡು ವಿಧ. ಒಬ್ಬರು ಲೌಕಿಕ ಗುರುಗಳು, ಇನ್ನೊಬ್ಬರು ಆಧ್ಯಾತ್ಮ ಗುರುಗಳು. ಲೌಕಿಕದಲ್ಲಿ ನಮಗೆ ಕಾಣುವ ಮೊದಲ ಗುರುವೇ ತಾಯಿ. ಅದು ಸನ್ಯಾಸಿ ಇರಲಿ ಸಂಸಾರಿಕನಿರಲಿ ಎಲ್ಲರಿಗೂ ಮೊದಲ ಗುರುವಾದವಳೆ ತಾಯಿ ಅವಳೇ ಕಣ್ಣಿಗೆ ಕಾಣುವ ದೇವತೆ ನಮ್ಮ ಲಾಲನೆ, ಪಾಲನೆ, ಪೋಷಣೆಗಾಗಿ ತನ್ನ ಬದುಕನ್ನೇ ಮುಡಿಪಿಟ್ಟವಳು. ನಾವು ಎಷ್ಟೇ ತಪ್ಪು ಮಾಡಿದರೂ ಕ್ಷಮಿಸುವ ಕರುಣಾಮೂರ್ತಿಯವಳು.
ಹಾಗೆ ಆಧ್ಯಾತ್ಮದ ಗುರುಗಳು ನಮ್ಮೊಳಗಿನ ಅಹಂಕಾರವನ್ನು ಅಳಸಿ ಜ್ಞಾನಾಮೃತವನ್ನು ಉಣಬಡಿಸಿ ಮುಕ್ತಿಯ ಮಾರ್ಗದೆಡೆಗೆ ಕೈಹಿಡಿದು ನಡೆಸುವರು. ಗುರು ಎಂಬಾತ ನಮ್ಮ ಕತ್ತಲ ದಾರಿಗೆ ಬೆಳಕಾಗಿ ಬಂದವನು. ನಗ್ನಮುನಿ ತರುಣ ಸಾಗರಜೀ ಮಾತೇ, ಮಹಾತ್ಮ, ಮನಸ್ಸು (3ಮ) ಸೂತ್ರವನ್ನು ಹೇಳುತ್ತಾರೆ. ಯಾವ ವ್ಯಕ್ತಿಯೂ ಮಾತೆ ಮಹಾತ್ಮರ ನುಡಿಗಳಲ್ಲಿ ಶ್ರದ್ಧೆ ವಿಶ್ವಾಸವನ್ನಿಟ್ಟು ಶ್ರವಣ ಮಾಡುತ್ತಾನೆಯೋ ಆತನ ಮಾತನ್ನು ಮನಸ್ಸು ಕೇಳುತ್ತದೆ ಯಾರ ಮನಸು ತಮ್ಮ ಮಾತನ್ನು ಕೇಳುತ್ತದೆಯೋ ಅವರು ಏಕಾಗ್ರಹಶೀಲರಾಗಿರುತ್ತಾರೆ. ಮನಸ್ಸಿನ ಏಕಾಗ್ರತೆಯೇ ಬದುಕಿನ ಗೆಲುವು. ಅದಕ್ಕಾಗಿ ನಾವೆಲ್ಲರೂ ಬದುಕು ಗೆಲ್ಲಬೇಕೆಂದರೆ ಗುರುಪಾದವ ಹಿಡಿದು ಗುರುನುಡಿಯ ಪಡೆಯಬೇಕಾಗಿದೆ ಬೆನ್ನ ಹಿಂದೆ ಗುರು ಇದ್ದವನ ಗುರಿ ಸುಲಭದಾಯಕವಾದದ್ದು.
-ಶ್ರೀ ರಾಮಕೃಷ್ಣ ದೇವರು
ಶ್ರೀ ಷಣ್ಮುಖಾರೂಢ ಮಠ ವಿಜಯಪುರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ