ಉಜಿರೆ: ‘ಸಾಹಿತ್ಯ ಮತ್ತು ರಂಗಭೂಮಿ’ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ

Upayuktha
0


ಉಜಿರೆ:
ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ  ಐಚ್ಛಿಕ ಕನ್ನಡ ವಿಭಾಗದ ವತಿಯಿಂದ ‘ಸಾಹಿತ್ಯ ಮತ್ತು ರಂಗಭೂಮಿ’ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ರಂಗಭೂಮಿ ಕಲಾವಿದೆ, ನೀನಾಸಂ ಹಿರಿಯ ವಿದ್ಯಾರ್ಥಿನಿ ಸಂಗೀತ ಭಿಡೆ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.


ಅಭಿನಯ, ರಂಗತಂತ್ರ, ನಾಟಕ ಸಂಗೀತ, ತಂತ್ರಜ್ಞಾನ ಇಂತಹ ವಿವಿಧ ಅಂಶಗಳನ್ನು ಹೊಂದಿರುವುದೇ ರಂಗಭೂಮಿ. ರಂಗಭೂಮಿಗೆ ಸಾವಿರಾರು ವರ್ಷದ ಇತಿಹಾಸ ಇದೆ. ಮೊದಲು ಇದಕ್ಕೆ ರಂಗಭೂಮಿ ಎಂದು ಹೆಸರಿರಲಿಲ್ಲ, ಕಾಲಕ್ರಮೇಣ ಈ ಹೆಸರು ಬಂದಿದೆ ಎಂದು ಅವರು ಹೇಳಿದರು. ಒಂದು ಲಕ್ಷ ವರ್ಷದ ಹಿಂದೆ ಮಾನವನ ಉಗಮವಾಗಿದೆ. ಭಾಷೆ ಇರದಿದ್ದ ಕಾಲದಲ್ಲಿ ಮಾನವ ತಾನು ಬೇಟೆಯಾಡಿದ ರೀತಿಯನ್ನು ಮನೋರಂಜನೆಗಾಗಿ ತನ್ನ ಕುಟುಂಬಸ್ಥರ ಜೊತೆ ಅಭಿನಯಿಸುತ್ತ ಹೇಳಿಕೊಳ್ಳಲು ಪ್ರಾರಂಭಿಸಿದ. ಈ ರೀತಿ, ನಟನೆಗೆ ಹಲವಾರು ವರ್ಷಗಳ ಇತಿಹಾಸ ಇದೆ ಎಂದು ಅವರು ಅಭಿಪ್ರಾಯಪಟ್ಟರು.


ಹಿಂದೆ ಗ್ರೀಕ್ ಹಾಗೂ ರೋಮನ್ ನಾಗರಿಕತೆಯ ಸಮಯದಲ್ಲಿ ಅಭಿನಯಕ್ಕೆ ಹೆಚ್ಚು ಪ್ರಾಮುಖ್ಯ ಇತ್ತು. ಇವರ ಸಮಯದಲ್ಲಿ ರಾಜಭವನದಲ್ಲಿ 500-700 ಜನರಿಗೆ ನಾಟಕ ಪ್ರದರ್ಶಿಸಲು ಅವಕಾಶ ನೀಡಲಾಗುತ್ತಿತ್ತು ಎಂದು ಅವರು ತಿಳಿಸಿದರು. ಭರತನ ನಾಟ್ಯಶಾಸ್ತ್ರವು ನಾಟಕಕ್ಕೆ ಸಂಬಂಧಿಸಿದೆ. ನಾಟ್ಯ (ನಟನೆ) ಮತ್ತು ನೃತ್ಯ ಸೇರಿ ನಾಟಕವಾಯಿತು. ಭಾಸ, ಕಾಳಿದಾಸ, ಶೂದ್ರಕ, ವಿಶಾಖದತ್ತ ಇಂತಹ ಅನೇಕ ಶ್ರೇಷ್ಠ ನಾಟಕಗಾರರು ಉಗಮಗೊಂಡರು. ಇಂತಹ ಮಹಾಕವಿಗಳು ನಾಟಕಕ್ಕೆ ದೊಡ್ಡ ಪ್ರಮಾಣದ ಕೊಡುಗೆ ನೀಡಿದ್ದಾರೆ ಎಂದರು.


ಕ್ರಿ. ಶ. 19ನೇ ಶತಮಾನದ ನಂತರ ಜನಪದ ರಂಗಭೂಮಿ ಸ್ಥಾಪನೆಯಾಯಿತು. ಇದರಲ್ಲಿ ಜನರಿಂದ ಜನರಿಗೆ ಹರಡುವ ಕಥೆಗಳು, ಪುರಾಣಗಳು, ಲೋಕಧರ್ಮದಂತಹ ಕಥೆ ಆರಿಸಿಕೊಳ್ಳುತ್ತಿದ್ದರು. ಇದರ ನಂತರ ನಾಟಕವು ವೃತ್ತಿ (ವೃತ್ತಿ ರಂಗಭೂಮಿ)ಯಾಗಿ ಬದಲಾಯಿತು. ತದನಂತರ ರಂಗತಂತ್ರಗಳು, ದೃಶ್ಯ ಮಾಧ್ಯಮ (ಪರದೆ) ಬಳಕೆ ಆರಂಭವಾಯಿತು ಎಂದರು. ಕ್ರಮೇಣ ನಾಟಕ ಸಂಘಗಳು ಪ್ರಾರಂಭವಾದವು. ಮೊದಮೊದಲು ನಾಟಕಕ್ಕೆ ಮಹಿಳೆಯರು ಬರುತ್ತಿರಲಿಲ್ಲ. ಹಾಗಾಗಿ ಸ್ತ್ರೀ ವೇಷಗಳನ್ನು ಪುರುಷರೇ ಮಾಡುತ್ತಿದ್ದರು. ನೀನಾಸಂ ತರಬೇತಿ ಕೇಂದ್ರದಲ್ಲೂ ಇದೇ ಸ್ಥಿತಿ ಇತ್ತು. ಕಾಲ ಕ್ರಮೇಣ ಮಹಿಳೆಯರು ನಟನೆ ತರಬೇತಿಗೆ ಬರಲು ಆರಂಭಿಸಿದರು ಎಂದು ಅವರು ವಿವರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ ಕೆ. ಎನ್. ವಹಿಸಿದ್ದರು. ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಮೃತ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಡಾ. ರಾಜಶೇಖರ್ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top