ಈ ವಿಶಾಲವಾದ ಜೀವನದಲ್ಲಿ ನಾವೆಲ್ಲ ಯಾತ್ರಿಕರು, ಭಗವಂತನ ಕಡೆಗೆ ದೀರ್ಘವಾದ ಯಾತ್ರೆಯನ್ನು ನಾವು ಆರಂಭಿಸಿದ್ದೇವೆ, ಆದರೆ ನಮ್ಮ ಗುರಿಯನ್ನು ನಾವು ಮುಟ್ಟುವ ಬಗೆ ಹೇಗೆ, ನಾವು ಮುಟ್ಟಬೇಕಾದ ಗುರಿ ಮತ್ತು ಶ್ರಮಿಸಬೇಕಾದ ದಾರಿಯ ಪರಿಜ್ಞಾನವಿಲ್ಲದೆ ನಮ್ಮ ಈ ಜೀವನ ಯಾತ್ರೆಯು ಪರಿಪೂರ್ಣವಾಗಲಾರದು, ನಾವು ಈ ಜೀವನದಲ್ಲಿ ಅನೇಕ ಸಲ ದಾರಿ ತಪ್ಪುವ ಸಂಭವವಿದೆ, ನಮ್ಮ ಮೇಲೆ ಆಕ್ರಮಣ ನಡೆಸಿ ಕೊಳ್ಳೆ ಹೊಡೆಯುವ ದರೋಡೆಕೋರರಂತೆ ಇರುವ ಆಸುರಿ ಶಕ್ತಿಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕಿದೆ. ನಮಗೆ ಸರಿಯಾದ ದಾರಿ ತೋರಿಸಿ ಸುರಕ್ಷಿತವಾಗಿ ನಮ್ಮನ್ನು ಭಗವಂತನ ಕಡೆಗೆ ಒಯ್ಯಬಲ್ಲ ಮಹಾನ್ ಮಾರ್ಗದರ್ಶಕರಿಲ್ಲದೆ ನಮ್ಮ ಈ ಮಹಾ ಯಾತ್ರೆಯು ಸಫಲವಾಗಲಾರದು. ಇದನ್ನೇ 'ಆಚಾರ್ಯವಾನ್ ಪುರುಷೋ ವೇದ' ಆಚಾರ್ಯರ ಅನುಗ್ರಹದಿಂದ ಭಗವಂತನನ್ನು ನಾವು ಪಡೆಯಬಲ್ಲೆವು ಎಂಬುದಾಗಿ ಉಪನಿಷತ್ತು ಹೇಳಿದೆ.
ಅರಿವಿನೊಡನೆ ಅನುಸಂಧಾನ ಮಾಡಿಸುವ ಆಚಾರ್ಯ ಮಧ್ವರ ದರ್ಶನವೇ ತತ್ವವಾದ: ದ್ವೈತ ವೇದಾಂತವೆಂತಲು ಕರೆಯುವ ಮತ ಅಂತಿಮ ಮತ್ತು ಪರಿಪೂರ್ಣ. ಪರಿಪೂರ್ಣತೆಯತ್ತ ನಮ್ಮನ್ನು ಕೊಂಡಯ್ಯುವ ಶ್ರೀ ಮಧ್ವಾಚಾರ್ಯರ ಸತ್ಸಂದೇಶಗಳು ಏನು ಎನ್ನುವುದನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ಜಿಜ್ಞಾಸುವಿನ ಕರ್ತವ್ಯವೂ ಆಗಿದೆ. ಶ್ರೀ ಮಧ್ವಾಚಾರ್ಯರು ಯಾವುದೋ ಒಂದು ಜನಾಂಗಕ್ಕೆ ಸೀಮಿತವಾಗಿ ಸಿದ್ಧಾಂತವನ್ನು ಪ್ರಚಾರ ಮಾಡದೆ ಸಕಲ ಮಾನವ ಜನಾಂಗದ ಏಳ್ಗೆಯ ಕಲ್ಯಾಣದೃಷ್ಟಿಯಿಂದ ಮಾಡಿದ್ದಾರೆ. ಇಂತಹ ಸತ್ಸಿದ್ದಾಂತ ವಿಚಾರ, ಹಿತ ನುಡಿಗಳನ್ನು ಸಂಸ್ಕೃತ ಅರಿಯದ ಜನಸಾಮಾನ್ಯರಿಗೆ ತಲುಪಿಸುವಂತೆ ಮಾಡುವುದು ಪ್ರಾಜ್ಞರ ಆದ್ಯ ಕರ್ತವ್ಯವಾಗಿದೆ.
ಪ್ರಪಂಚ ಸತ್ಯ, ವಿಷ್ಣು ಸರ್ವೋತ್ತಮ, ದೇವ -ಜೀವ -ಜಡ ಎಲ್ಲದರಲ್ಲೂ ತಾರತಮ್ಯವಿದೆ ಎಂಬುದು ಸಿದ್ಧಾಂತದ ಮುಖ್ಯಾಂಶ. ಸರ್ವಮೂಲ ಗ್ರಂಥಗಳೆಂದು ಕರೆಯುವ ಸುಮಾರು 37 ಗ್ರಂಥಗಳನ್ನು ರಚಿಸಿದ ಮಹಾಜ್ಞಾನಿಗಳು ಪೂರ್ಣಪ್ರಜ್ಞರು. ಮೋಕ್ಷ ಮಾರ್ಗಕ್ಕೆ ಆಸರೆ ಈ ಕೃತಿಗಳ ಅಧ್ಯಯನ.
ಪರಂಪರೆಯಯ ಪ್ರವಕ್ತಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಸನಾತನ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಮ್ಮದೇ ಆದ ಮೌಲಿಕ ಕೊಡುಗೆಯನ್ನು ನೀಡುತ್ತಿರುವ ಬರಹಗಾರರು. ಪ್ರಸ್ತುತ ಕೃತಿಯಲ್ಲಿ ಅವರ ವಿಸ್ತಾರವಾದ ಓದು, ಪರಿಶ್ರಮ, ಪ್ರಯತ್ನ ಮತ್ತು ಶ್ರೀ ಮಧ್ವಾಚಾರ್ಯರ ಬಗೆಗಿನ ಶ್ರದ್ಧನಿಷ್ಠೆಗಳನ್ನು ದಾಖಲಿಸಿವೆ.
ಇದು ಪಂಡಿತರಿಗೆ ಬರೆದ ಗ್ರಂಥವಲ್ಲ. ಈಗಿನ ನಾಗರಿಕತೆಯ ಸುಳಿಗೆ ಸಿಕ್ಕಿ ಸಾಮಾಜಿಕ ಸ್ಥಿತ್ಯಂತರಗಳ ನಡುವೆ ತಮ್ಮ ಕಾಲವನ್ನೆಲ್ಲ ಜೀವನ ನಿರ್ವಹಣಕ್ಕಾಗಿಯೇ ಕಳೆಯುವ ಮಂದಿಯ ಸಲುವಾಗಿ ಜಗತ್ತು ಕಂಡರಿಯದ ಅದ್ಭುತ ಸೀಮಾಪುರುಷರಾದ ಶ್ರೀ ಆನಂದತೀರ್ಥ ಭಗತ್ಪಾದಾಚಾರ್ಯರ ಸ್ಪೂರ್ತಿಪ್ರದ ಜೀವನ ಸಾಧನೆಗಳ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.
- ಕೆ. ವಿ. ಪದ್ಮಾವತಿ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ