ಬಾಂಧವ್ಯದ ರಕ್ಷಣೆಯ ಕವಚ ಸದಾ ರಕ್ಷಿಸುತ್ತಿರಲಿ ಪ್ರೀತಿ ಬೆಸುಗೆಯ ಬಿಗಿದು ರಶ್ಮಿಯಂತೆ ರಂಜಿಸಲಿ ಈ ಅಣ್ಣ– ತಂಗಿ ಸಂಬಂಧವು. ಸಂಬಂಧಕ್ಕೊಂದು ಭಾವ ತುಂಬಿದ ಹಬ್ಬ ಈ ರಕ್ಷಾಬಂಧನ. ತಂಗಿಯು ಅಣ್ಣನಿಗೆ ಪ್ರೀತಿಯಿಂದ ಕಟ್ಟುವ ರಕ್ಷಾ ಕವಚವೇ– ರಕ್ಷಾಬಂಧನ. ರಕ್ಷ ಎಂದರೆ, ರಕ್ಷಣೆ ಮತ್ತು ಬಂಧ ಎಂದರೆ ಸಂಬಂಧ ಎಂದರ್ಥ. ಬಂಧ ಬಿಗಿಯಾಗಿಸುವ ರಕ್ಷಾಬಂಧನವಿದು. ಅಣ್ಣನಿಗೊಂದು ಆತುರ! ತನಗೆ ತಂಗಿಯೋ ತಮ್ಮನೋ ಎಂಬ ಕುತೂಹಲ. ತಮ್ಮನಾದರೆ ಪರವಾಗಿಲ್ಲ, ಆದರೆ ತಂಗಿ ಹುಟ್ಟಿದರೆ ಮನಕ್ಕೊಂದು ಹಬ್ಬದೌತಣ ಸರಿ. ಹೌದು ಅದೇನೋ ತಿಳಿಯದು ಅಣ್ಣ ತಂಗಿಯ ಸಂಬಂಧದ ನಡುವಿನ ಪ್ರೀತಿ, ವಾತ್ಸಲ್ಯ.
ಅಣ್ಣನೆಂಬ ರಕ್ಷಾ ಕವಚ ತಂಗಿಗೆ ಮಾತ್ರವೇ ಸ್ವಂತ. ತಂಗಿ ಎಂಬ ಉಸಿರಿಗೆ ಉಸಿರಾದವನು, ಜೀವನಾಡಿಯ ಮಿಡಿತವಾದವನು, ನನ್ನೆದೆಯ ಅಂತರಾಳದಲ್ಲಿ ಹುದುಗಿರುವನು– ನನ್ನ ಅಣ್ಣ. ಅಣ್ಣ ಎಂದಕ್ಷಣ ತಟ್ಟನೆ ನೆನಪಾಗುವುದೆಂದರೆ, ನನ್ನ ಅಣ್ಣ. ಅವನ ಬಗ್ಗೆ ಹೇಳಬೇಕೆಂದರೆ ನಾನು ಅವನು ಅಂಟುಹುಳದಂತೆ. ನಾವು ಜಗಳವಾಡದ ದಿನವಿಲ್ಲ, ಸಂದಾನವಾಗದ ಗಳಿಗೆಯೇ ಇಲ್ಲ. ಒಮ್ಮೆ ಕಿರು ನಗು, ಮತ್ತೊಮ್ಮೆ ತುಸುಕೋಪ. ಹೇಳಬೇಕೆಂದರೆ ನಾನು ತುಸು ಮುಂಗೋಪಿಯೇ ಸರಿ. ಆದರೆ ಅವನು ನಗಿಸಿ ನಗು ಬಾ ಎನ್ನುವ ವ್ಯಕ್ತಿತ್ವ. ನಮ್ಮಿಬ್ಬರ ನಡುವೆ ಕೋಪ ಕ್ಷಣಿಕ ಪ್ರೀತಿ ಅಮರ. ಗಳಿಗೆಗೊಮ್ಮೆ ಜಗಳ, ಹೊಡೆದಾಟ ಕೈಗೆಟಕುವ ವಸ್ತುಗಳೇ ನಮ್ಮ ಯುದ್ಧದ ಆಯುಧಗಳು. ಊರೇ ಒಂದಾಗುವ ಹಾಗೆ ಯುದ್ಧ ಸಾರುವೆವು.ಆದರೆ ಒಂದು ಗಳಿಗೆಯು ನನ್ನ ಬಿಟ್ಟು ಅವನಿಲ್ಲ ಅವನ ಬಿಟ್ಟು ನಾನಿಲ್ಲ.
ನಗಬಲ್ಲೆ ನಾನು ಅವನೊಬ್ಬ ನನ್ನೊಂದಿಗಿದ್ದರೆ, ಆಡಿಸಬಲ್ಲೆ ಇಡೀ ಜಗವನ್ನೇ ನೀ ನನ್ನ ಧೈರ್ಯವೆಂದೇ, ನೀ ನನ್ನವನೆಂದೇ. ತಿಳಿದಿಲ್ಲ ನನಗೆ ನೀ ಯಾಕಿಷ್ಟು ಹತ್ತಿರ, ತಿಳಿಯಿತು ನನಗೆ ನೀ ನನ್ನ ಒಡೆಯ. ತಂದೆಯಂತೆ ಕಾಳಜಿ ಮಾಡುವ ಜೀವ, ತಾಯಿಯಂತೆ ಪ್ರೀತಿ ತೋರುವ ಹೃದಯ. ತಂದೆ ಪ್ರೀತಿಗೂ ಸೈ, ತಾಯಿ ಪ್ರೀತಿಗೂ ಸೈ ಎನ್ನುವವ ನನ್ನ ಜೀವನದ ಸಾರಥಿಯಾದವ– ನನ್ನ ಅಣ್ಣ. ಗೆದ್ದಾಗ ಬೆನ್ನು ತಟ್ಟುವನು, ಸೋತಾಗ ಆತ್ಮಸ್ಥೈರ್ಯ ತುಂಬವನು. ಭರವಸೆಯ ಬೆಳಕಾಗಿ ಸ್ಫೂರ್ತಿಯ ಚಿಲುಮೆಯಾಗುವನು.
ಬಣ್ಣಿಸಲಾಗದ ಬಂಧವಿದು ಹೇಳಲಾಗದ ರಕ್ತ ಸಂಬಂಧವಿದು. ಅಣ್ಣನೆಂಬ ದೇವರ ವರ ನನಗೆ ಮಾತ್ರವೇ ಒದಗಿದೆ ಎಂಬ ಹೆಚ್ಚು ಖುಷಿಯ ಹುಚ್ಚು ಮನಸ್ಸು. ಅಣ್ಣನೆದುರು ತಂಗಿ ಮಗುವಾಗುವಳು, ಅಣ್ಣ ತಂದೆಯಾಗುವನು. ಅವನಿಟ್ಟ ಹೆಜ್ಜೆ ನನ್ನ ದಾರಿದೀಪ. ಆತನೇ ನನಗೆ ಶಕ್ತಿ–ಯುಕ್ತಿ. ಮನಸ್ಸಿನಾಳದಲ್ಲಿಏನೋ ಒಂದು ಬಂಡ ಧೈರ್ಯ!" ನಡೆ ಮುಂದೆ, ಇರುವ ನಿನ್ನ ಅಣ್ಣ ಸದಾ ನಿನ್ನ ಹಿಂದೆ" ಎಂದು. ನಿನ್ನ ಪ್ರೀತಿಗೆ ಅಳತೆ ಬೇಕಿಲ್ಲ, ನೀನೇ ಈ ಹೃದಯದ ರಾಯಭಾರಿಯಲ್ಲವೇ.
ಹೇ ಅಣ್ಣನೆಂಬ ರಕ್ತ ಸಂಬಂಧದ ನಂಟೇ, ಈ ತಂಗಿ ಎಂಬ ಪುಟ್ಟ ಹೃದಯದಿಂದ ನಿನಗೆ ರಕ್ಷಾಬಂಧನದ ಶುಭಾಶಯಗಳು.
- ಕೀರ್ತನ ಒಕ್ಕಲಿಗ ಬೆಂಬಳೂರು (ಕೊಡಗು)
ವಿವೇಕಾನಂದ ಕಾಲೇಜು ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ