ನಿಸ್ವಾರ್ಥ ಜೀವನ ನಡೆಸಿ, ಅಜ್ಞಾತ ಸಾಹಿತಿಯಾಗಿ, ಮಹತ್ವದ ಕಥೆಗಾರರಾದ ಅಶ್ವತ್ಥ ಅವರು, ಚಿಕ್ಕಮಗಳೂರು ಜಿಲ್ಲೆಯ ಕೂದುವಳ್ಳಿ ಗ್ರಾಮದವರು. ಚಾಮರಾಜನಗರದಲ್ಲಿ ಸೋಮಯ್ಯ ಮತ್ತು ಲಕ್ಷ್ಮಮ್ಮ ಅವರಿಗೆ ಪುತ್ರನಾಗಿ ತಾ॥ 18-6-1912 ರಂದು ಜನಿಸಿದರು. ದೊಡ್ಡಮ್ಮ ಆವರ ಆಶ್ರಯದಲ್ಲಿ ತರೀಕೆರೆ, ಚಿತ್ರದುರ್ಗ, ಶಿವಮೊಗ್ಗ, ಮೈಸೂರು, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಜರುಗಿತು. ಇವರು ನವೋದಯ ಕಾಲದ ಪ್ರಸಿದ್ಧ ಕಥೆಗಾರರಾಗಿ, ಕನ್ನಡ ನಾಡಿಗೆ ಅತ್ಯುತ್ತಮ ಸಾಹಿತ್ಯ ನೀಡಿದ ಮಹನೀಯರು. ಬಾಲ್ಯದಲ್ಲಿ ವ್ಯಾಸಂಗ ಮುಗಿಸಿ, ಉನ್ನತ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ಬಂದು ಮೈಸೂರು ವಿಶ್ವವಿದ್ಯಾಲಯದ ಬಿ.ಇ. (ಸಿವಿಲ್) ಇಂಜಿನಿಯರಿಂಗ್ ಪರೀಕ್ಷೆ ಪಾಸು ಮಾಡಿ, ಪದವಿಯನ್ನು ಪಡೆದರು.
ಮೊದಮೊದಲು, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ "ಜೀವನ ಮಾಸಪತ್ರಿಕೆಯಲ್ಲಿ ಇವರ ಅನೇಕ ಪ್ರಸಿದ್ಧ ಕಥೆಗಳು,ಪ್ರಬಂಧಗಳು ಪ್ರಕಟವಾದವು. ವೃತ್ತಿಯನ್ನು ಲೋಕೋಪಯೋಗಿ ಇಲಾಖೆಯಲ್ಲಿ ಮಾಡಿದರೂ, ನಂತರ ಮಹಾತ್ಮಾ ಗಾಂಧೀಜಿಯವರ ಕ್ವಿಟ್ ಇಂಡಿಯಾ ಚಳುವಳಿಯ (1942) ಕರೆಗೆ, ಓಗೊಟ್ಟು ತಮ್ಮ ಹುದ್ದೆಯನ್ನೇ ತ್ಯಜಿಸಿದರು! ಹಲವು ವರ್ಷಗಳ ತನಕ ಮುಂಬೈನಲ್ಲಿ ಖಾಸಗಿ ಸೇವೆ ಮಾಡಿದರು. ತದನಂತರ ಸಿಮ್ಲಾದಲ್ಲಿ ಮಿಲಿಟರಿ ಇಂಜಿನಿಯರ್ ಸೇವೆ ಮಾಡುತ್ತಿರುವಾಗ, ಪಂಡಿತ್ ಮದನ ಮೋಹನ ಮಾಳವೀಯರ ಆಹ್ವಾನದ ಮೇರೆಗೆ, ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಬರವಣಿಗೆಯ ಹವ್ಯಾಸದಲ್ಲಿದ್ದ ಅಶ್ವತ್ಥ ಅವರು ಅತ್ಯುತ್ತಮ ಕಾದಂಬರಿಗಳನ್ನು ಬರೆದರು. ಅದರಲ್ಲಿ ಮುನಿಯನ ಮಾದರಿ, ರಂಗನಾಯಕಿ, ಮಯಾ೯ದೆ ಮಹಲು ಚಲನಚಿತ್ರಗಳಾಗಿ, ಜನಮನಸೂರೆಗೊಂಡವು! ಜೀವನ ಪತ್ರಿಕೆಯ ಮೂಲಕ ಪ್ರಕಟವಾದ ಅನೇಕ ಕಥೆಗಳು, ಸಂಕಲನಗಳಾಗಿ ಪ್ರಕಟಗೊಂಡವು. ದೂರದ ಕಾಶಿಯಲ್ಲಿ, ಬಾಳೆ ಹೊಳೆ, ಅಗ್ನಿಸಾಕ್ಷಿ, ಜಯಂತಿ, ನೋವು ನಲಿವು, ಪ್ರಸಿದ್ದ ಕಥಾಸಂಕಲನಗಳಾಗಿ, ಓದುಗರಿಗೆ ಪ್ರಕಟವಾದವು. ಮೂಗಿನ ಮೇಲೆ, ಇಂದಿನ ಪತ್ರಿಕೆ ನೋಡಿದ್ದೀರಾ? ಬನ್ನಿ ನನ್ನ ಉಪವನಕೆ, ನವ್ಯವಾಗಿ, ಬಡಮುತ್ತೈದೆ, ಹಾರ್ಮೋನಿಯಂ, ಕ್ರಿಕೆಟ್ ಓದೋಣ, ಸಮಿತಿಯ ಜಗತ್, ರೋಗಿಷ್ಟರು, ಮುಂತಾದವು ಪ್ರಸಿಧ್ಧ ಪ್ರಬಂಧಗಳು. ಅಶ್ವತ್ಥ ಅವರು, ಹದಿನೆಂಟು ನಾಟಕಗಳನ್ನು ಮತ್ತು ಮಹಾಯುದ್ಧ ಖಂಡಕಾವ್ಯ ಸಹ ರಚಿಸಿದ್ದಾರೆ. ಕಥೆಗಳನ್ನೇ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದ ಅಶ್ವತ್ಥ ಅವರು, 1963ರಲ್ಲಿ ತಮ್ಮ ಪ್ರಾಧ್ಯಾಪಕ ವೃತ್ತಿಗೆ ರಾಜಿನಾಮೆ ನೀಡಿ, ಗಾಂಧಿವಾದಿಗೆ ಮನಸೋತು, ನಂಜನಗೂಡು, ಮೈಸೂರಿನಲ್ಲಿ ಸರಳಜೀವನ ನಡೆಸಿದರು. ಪ್ರಶಸ್ತಿಗಳಿಂದ ದೂರವಿದ್ದು, ತಮಗೆ ಲಭಿಸಿದ ಕನಾ೯ಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಹ ಸ್ವೀಕರಿಸಲಿಲ್ಲ! ಮೂಢನಂಬಿಕೆಗಳಲ್ಲಿ ವಿಶ್ವಾಸವಿಲ್ಲದೆ, ಅಜ್ಞಾತರಾಗಿ, ಬರವಣಿಗೆಯಲ್ಲಿ ನಿರತರಾದ ಸಾಹಿತಿ! ಇವರ ಜೀವನ ಸರಳ ಮತ್ತು ತತ್ವಬದ್ಧವಾಗಿತ್ತು. ಪುತ್ರನೊಬ್ಬನು ಜನಿಸಿದರೂ, ಯಾವ ಆಸ್ತಿಯನ್ನು ಸಹಜವಾಗಿ ಮಕ್ಕಳಿಗೆ ನೀಡುವ ಪ್ರಾಪಂಚಿಕ ಪ್ರವೃತ್ತಿಗೆ ತೊಡಗದೆ, ತಾವು ಗಳಿಸಿದ ಸಂಪೂರ್ಣ ಹಣವನ್ನು ತಾವೇ ಸ್ಥಾಪಿಸಿದ "ಲಲಿತಾ ಅಶ್ವತ್ಥ ಟ್ರಸ್ಟ್ ಫಂಡ್" ಮೂಲಕ ಆದರಿಂದ ಬರುವ ಪ್ರತಿಫಲವನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಮತ್ತು ಮೈಸೂರಿನ ರಾಮಕೃಷ್ಣ ಆಶ್ರಮ ವಸತಿ ಶಾಲೆಗೆ ನೀಡುವ ವ್ಯವಸ್ಥೆ ಮಾಡಿದರು. ಮೈಸೂರಿನಲ್ಲಿ ಸ್ವಂತ ಮನೆ ಕಟ್ಟಿಸಿಕೊಂಡು, ಸರಳ ಬದುಕನ್ನು ನಡೆಸಿದರು. ಅಶ್ವತ್ಥ ಮತ್ತು ಇವರ ಪತ್ನಿ ಲಲಿತಗೆ ಪುತ್ರನಾದ ನರಸಿಂಹ ಮೂರ್ತಿ ಭೂ ವಿಜ್ಞಾನಿಯಾಗಿ ನಾಗಪುರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಶ್ವತ್ಥ ಅವರು ನಿಗೂಢತೆಯಲ್ಲಿ ತಮ್ಮ ಜೀವನ ಕಳೆದ ಮಹನೀಯರು.
ಪ್ರಚಾರಕ್ಕೆ ಮನಸೋಲದೆ, 179 ಕಥೆಗಳನ್ನು ಬರೆದ ಕೂದುವಳ್ಳಿ ಅಶ್ವತ್ಥನಾರಾಯಣ ರಾವ್ ಅವರು (ಅಶ್ಶತ್ಥ) ಕಾದಂಬರಿ, ಪ್ರಬಂಧ, ನಾಟಕಗಳನ್ನು ಬರೆದು ಕನ್ನಡ ನಾಡಿಗೆ ನೀಡಿ, ತಾ॥ 16-1-1994 ರಂದು ಇಹಲೋಕ ತ್ಯಜಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ