ಇವತ್ತು ಸುದ್ದಿ, ಮಾಹಿತಿ, ವಿಚಾರ, ವಿಷಯಗಳೆಲ್ಲ ಹರಿದು ಬರುವ ಮಾಧ್ಯಮಗಳು, ವಾಹಕಗಳು ಮೊಬೈಲ್ ಟೆಲಿಫೋನ್ ಎಂಬ ಕೈಮುಷ್ಠಿಯೊಳಗೆ ಅಡಗಿಸಬಹುದಾದ ಪುಟ್ಟ ಉಪಕರಣಗಳನ್ನು ಆಧರಿಸುತ್ತಿವೆ. ನಾವು ಜಗತ್ತನ್ನು ನೋಡುವ, ಅನುಭವಿಸುವ ದೃಷ್ಟಿಕೋನವನ್ನು ಅಡಿಮೇಲಾಗಿಸುತ್ತಿವೆ.
1980-90ರ ದಶಕದಲ್ಲಿ ಅಮೆರಿಕಾ ಮತ್ತು ಆಸ್ಟ್ರೇಲಿಯಾಗಳ ಕುಟುಂಬಗಳ ಮನೆಯಲ್ಲಿ ನೇಮ್ ಬೋರ್ಡುಗಳನ್ನು ನಾನೇ ಕಂಡಿದ್ದ ನೆನಪಿದೆ. ಅದರಲ್ಲಿ ಮನೆಯ ಸದಸ್ಯರುಗಳ ಇಂಟರ್ ಪರ್ಸನಲ್ ಕಮ್ಯುನಿಕೇಶನ್ ಪ್ರದರ್ಶನವಾಗುತ್ತಲಿತ್ತು. ಮುಖ್ಯವಾಗಿ ಸಂಸಾರ ನಿರ್ವಹಣೆಯ ಹೊಣೆಗಾರಿಕೆಯ ರಿಮೈಂಡರ್, ಸಿಟ್ಟು, ಸಿಡುಕು, ಬುದ್ಧಿವಾದಗಳನ್ನು ಬರೆದೋ, ಇಲ್ಲವೇ ಕೈನಲ್ಲಿ ಚಿತ್ರ ಬಿಡಿಸಿಯೋ ಹಾಕಿ ಬಿಡುತ್ತಿದ್ದರು. ನಮ್ಮ ದೇಶದಲ್ಲಿ ಇಂತಹದೆಲ್ಲಾ ಯಾಕೆ? ದಿನಾ ಎದುರುಬದುರು ಸಿಕ್ಕಿಯೇ ಸಿಗುತ್ತೇವಲ್ಲ ಎಂದು ಅಂದುಕೊಂಡಿದ್ದವನು ನಾನು.
ನಮ್ಮ ಊರಿನಲ್ಲಿಯೂ ಈಗ ಕುಟುಂಬದೊಳಗಿನ ಸಂಪರ್ಕ ಸಂವಹನಗಳೆಲ್ಲ ಈಗ ಇಂಟರ್‍ನೆಟ್‌ನಲ್ಲಿನ ಫೇಸ್ ಬುಕ್, ಟ್ವೀಟರ್ ಗಳ ಮುಖಾಂತರ ಅಕ್ಷರ, ಶ್ರವ್ಯ, ದೃಶ್ಯಗಳಲ್ಲಿ ಹಿತವಾದ ಸಂಗೀತದೊಂದಿಗೆ ನಡೆಯತೊಡಗಿದೆ. ಎಳೆಯ ಮಕ್ಕಳು ತಾವೆಲ್ಲಿದ್ದೇವೆ, ರಾತ್ರಿ ಮನೆಗೆ ಬರುತ್ತೇವೆಯೇ ಇಲ್ಲವೇ ಎಂಬಿತ್ಯಾದಿ ಮಾಹಿತಿಗಳನ್ನು ಮುಖತಃ ಇಲ್ಲವೇ ಫೋನ್‌ನಲ್ಲಿ ಮಾತನಾಡಿ ಹೇಳುವುದಿಲ್ಲ. ಅಂತರ್ಜಾಲ ಸಂಪರ್ಕದ ಆಧಾರದಲ್ಲಿ ಮೊಬೈಲ್ ಫೋನ್ ಮುಖಾಂತರ ರವಾನಿಸುತ್ತಾರೆ. ಮೊಮ್ಮಕ್ಕಳು ಹುಟ್ಟಿದ್ದು, ಅವನೋ ಅವಳೋ ಯಾರನ್ನು ಹೋಲುತ್ತಾರೆ ಎಂಬಿತ್ಯಾದಿ ಮಾಹಿತಿಗಳೆಲ್ಲವೂ ಅದರಲ್ಲೇ ಹೊರತು, ಮುಖತಃ ಸಂವಹನವಿಲ್ಲ.
ಅನೇಕ ಪರಿಣಿತರು ಈಗ ಉಸುರುವುದೇನೆಂದರೆ ಸದಾ ಡಿಜಿಟಲ್ ತಂತ್ರಜ್ಞಾನ ಅವಲಂಬನೆಯಿಂದ ಮಕ್ಕಳು ನಡತೆ, ಸಭ್ಯತೆ, ಚುರುಕುತನದಲ್ಲಿ ಹಿಂದೆ ಬೀಳುತ್ತಿದ್ದಾರೆ ಅಂತ. ದೊಡ್ಡವರೂ ಅದನ್ನೇ ಕಲಿಯುತ್ತಿದ್ದಾರಂತೆ! ಪೋಷಕರು, ಟೀಚರ್ಸ್, ಜನ ಒಟ್ಟು ಸೇರಿದಾಗೆಲ್ಲ ಹೆಚ್ಚಿನವರೂ ಸ್ಮಾರ್ಟ್ ಫೋನ್ ಗಳಲ್ಲಿ ತಲೆ ನೆಟ್ಟಿರುವುದು ಕಂಡುಬರತೊಡಗಿದೆ. ತಡರಾತ್ರೆಯ ವರೆಗೂ ಟ್ವಿಟರ್, ಸ್ಕೈಪ್‌ಗಳಲ್ಲಿ ಮಗ್ನರಾಗಿರುವ ಮಕ್ಕಳು ಮರುದಿನ ತಾಳ್ಮೆ ಇಲ್ಲದೆ ವರ್ತಿಸುವುದು ಹೆತ್ತವರಿಗೆ ಅನುಭವ ವೇದ್ಯವಾಗುತ್ತಿದೆ.
ಇದುವೇ ಟೆಕ್ನಾಲಜಿ ಪ್ರಭಾವ ಮುಂದುವರಿದರೆ ನಮ್ಮ ಕುಟುಂಬವೆಂಬ ವಸ್ತ್ರದ ಹಾಸುಹೊಕ್ಕು ಸಡಿಲವಾಗುವುದು ಮಾತ್ರವಲ್ಲ, ಸಮುದಾಯವೆಂಬುದು ನಾವು ನಡೆಸಿಕೊಂಡು ಬಂದ ರೀತಿಯಲ್ಲಿ ಮುಂದೆ ಉಳಿಯಲಾರದೆಂಬ ಅನುಮಾನ ಮೂಡತೊಡಗಿದೆ. ಅದಕ್ಕಾಗಿ ಇಲ್ಲಿನ ಹೆತ್ತವರು, ಪೋಷಕರು, ಮಕ್ಕಳು ಮುಖಾಮುಖಿ (ಫೇಸ್ ಬುಕ್ ಅಲ್ಲ, ಫೇಸ್ ಟು ಫೇಸ್) ಸಂಬಂಧಗಳನ್ನು ಹೆಚ್ಚಿಸಲು ಉತ್ತೇಜನ ಕೊಡುತ್ತಿದ್ದಾರೆ.
ಎದುರು ಬದುರಾದಾಗ ಇಲ್ಲವೇ ಸಮಯ ಸಿಕ್ಕಾಗಲೆಲ್ಲ ಹರಟೆಗಿಳಿಯುವುದು ಮಾನವ ಸ್ವಭಾವ. ಅರಳೀಕಟ್ಟೆಗಳು, ಚಾ-ಕಾಫಿ ಕ್ಲಬ್‌ಗಳು, ಹೋಟೆಲ್‌ಗಳು, ಖಾನಾವಳಿಗಳಲ್ಲಿಯೂ ಪಟ್ಟಾಂಗ ಮನುಷ್ಯರಿಗೆ ಅಂಟಿಕೊಂಡೇ ಬಂದಿದೆ. ಈ ಸಂಸ್ಕೃತಿಯನ್ನು ಕಾಡು ಹರಟೆ, ವೇಸ್ಟಿಂಗ್ ಟೈಮ್ ಇನ್ ಗಾಸಿಪ್ ಎಂದು ವ್ಯಾಖ್ಯಾನಿಸಿದರೆ ತಪ್ಪಾದೀತು.
ಹರಟೆಯಿಂದ ದೊಡ್ಡ ಸಮುದಾಯಗಳಲ್ಲಿ ಒಂದು ನಿಕಟ ಬಾಂಧವ್ಯ ಬೆಳೆಯುತ್ತದೆಯೆಂದು ಮನೋವಿಜ್ಞಾನಿಗಳು ಗುರುತಿಸಿದ್ದಾರೆ. ಮನುಷ್ಯನ ಮಿದುಳಿನೊಳಗೆ ಕ್ರಿಯಾಶೀಲ ಚಟುವಟಿಕೆಗಳು ನಡೆಯಲು ಉತ್ತೇಜಿಸುವುದೇ ಇಂತಹ ಮುಖಾಮುಖಿಗಳು ಎಂದು ಹೇಳಲ್ಪಟ್ಟಿವೆ. ಬದುಕಿನ ಕಷ್ಟಸುಖಗಳ ಬಗ್ಗೆ ಮತ್ತು ಒತ್ತಡದಿಂದ ಸುಪ್ತ ಮನಸ್ಸಿನಲ್ಲಾಗುವ ಯೋಚನಾ ಸರಣಿ ಹೇಗೆ ಮಿದುಳಿನ ಮೇಲೆ ಪರಿಣಾಮ ಬೀರುತ್ತದೆಯೋ, ಹಾಗೆಯೇ ಕ್ರಿಯಾಶೀಲತೆಗೆ ಹರಟೆಯೂ, ಸಮುದಾಯದ ಒಳಗಣ ಸಂವಹನವು ಅನಿವಾರ್ಯ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ