ಅಧ್ಯಾತ್ಮ ರಾಮಾಯಣ -31: ಪುಷ್ಪಕ ವಿಮಾನದಲ್ಲಿ ರಾಮ-ಸೀತಾ ಅಯೋಧ್ಯಾಗಮನ

Upayuktha
0

ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ 



ಚಿತ್ರಗಳು: ನೀರ್ನಳ್ಳಿ ಗಣಪತಿ; ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ



 ಪುಷ್ಪಕದಲ್ಲಿ ಹೋಗುತ್ತಿರುವಾಗ ರಾಮನು ಸೀತೆಗೆ -

● ತ್ರಿಕೂಟದ ತುದಿಯಲ್ಲಿರುವ ಲಂಕೆ

● ರಕ್ತ - ಮಾಂಸಗಳಿಂದ ತುಂಬಿದ ರಣಭೂಮಿ 

● ಸಮುದ್ರ ಸೇತು- ರಾಮೇಶ್ವರಲಿಂಗ

● ವಿಭೀಷಣನು ಶರಣು ಬಂದ ಸ್ಥಳ

● ಕಿಷ್ಕಿಂಧೆ- ಋಷ್ಯಮೂಕ ಪರ್ವತ- ವಾಲಿವಧೆ (ಆಗ ಅಲ್ಲಿ ತಾರೆಯೇ ಮೊದಲಾದ ವಾನರ ಸ್ತ್ರೀಯರು ಪುಷ್ಪಕವನ್ನೇರಿದುದು)

● ಪಂಚವಟಿ- ಖರ-ದೂಷಣರ ವಧೆ

● ಅಗಸ್ತ್ಯರ ಆಶ್ರಮ 

● ಚಿತ್ರಕೂಟ- ಭರತಾಗಮನ 

● ಭರದ್ವಾಜರ ಆಶ್ರಮ 

● ಗಂಗಾನದಿ-ಸರಯೂನದಿ

● ಅಯೋಧ್ಯಾ ನಗರ .....


ಇವುಗಳನ್ನೆಲ್ಲ ವಿವರಿಸಿ ಹೇಳುವ ಹೊತ್ತಿಗೆ ಭರದ್ವಾಜರ ಆಶ್ರಮ ಬಂತು. ಲಕ್ಷ್ಮಣ ಸಹಿತ ಸೀತಾ-ರಾಮರು ವಿಮಾನದಿಂದಿಳಿದು  ಭರದ್ವಾಜರನ್ನು ಕಂಡು ಅಭಿವಂದಿಸಿದರು. ರಾಮನು ಅವರಲ್ಲಿ ಭರತ- ಅಯೋಧ್ಯೆಯ ಯೋಗ- ಕ್ಷೇಮವನ್ನು ವಿಚಾರಿಸಿದನು. ಆಗ ಭರದ್ವಾಜರು ರಾಮನ ಮಹಿಮೆಯನ್ನು ಕೊಂಡಾಡುತ್ತಾ ಅವನು ಪರಬ್ರಹ್ಮನಾಗಿದ್ದುಕೊಂಡು ಸಮಸ್ತ ಪ್ರಾಣಿಗಳನ್ನು ಸೃಷ್ಟಿಸಿದ ವಿಷಯವನ್ನು ಹೇಳಿದರು. 


ರಾಮನು ಹನುಮನನ್ನು ಕರೆದು ರಾಜಗೃಹ- ಶೃಂಗಬೇರಪುರದಲ್ಲಿರುವ ಗುಹ- ನಂದಿಗ್ರಾಮದಲ್ಲಿರುವ  ಭರತ- ಇವರನ್ನು ಕಂಡು ತಾನು ಸೀತೆ- ಲಕ್ಷ್ಮಣರೊಂದಿಗೆ ಮರಳಿ ಬಂದುದನ್ನೂ, ಸೀತಾಪಹರಣದಿಂದ ತೊಡಗಿ ರಾವಣವಧೆಯ ವರೆಗಿನ ಎಲ್ಲ ಘಟನಾವಳಿಗಳನ್ನು ಕ್ರಮವಾಗಿ ಹೇಳಲು ಹೇಳಿದ.


ನರರೂಪದಲ್ಲಿ ಹೋದ ಹನುಮನು ರಾಮನು ಆದೇಶಿದ ಕ್ರಮದಲ್ಲಿ ಎಲ್ಲವನ್ನು ಗುಹ- ಭರತರಿಗೆ ಹೇಳಿದ. ಭರತನು ಪರಮಾನಂದವನ್ನು ಹೊಂದಿ ಕೂಡಲೇ ರಾಮ- ಸೀತೆ- ಲಕ್ಷ್ಮಣರ ಸ್ವಾಗತಕ್ಕೆ ನಗರವನ್ನು ಸಜ್ಜುಗೊಳಿಸುವಂತೆ ಸಚಿವರಿಗೆ ಆಜ್ಞೆಮಾಡಲು ಶತ್ರುಘ್ನನಿಗೆ ಆದೇಶಿದ. ಭರತನ ಆದೇಶವು ಶೀಘ್ರವಾಗಿ ಕಾರ್ಯರೂಪಕ್ಕೆ ಬಂತು. ಶ್ರೀರಾಮನ ದರ್ಶನಕ್ಕೆ ಎಲ್ಲರೂ ನಗರದ ಹೊರವಲಯಕ್ಕೆ ಬಂದು ಸೇರಲು ಭರತನು ಕರೆಕೊಟ್ಟನು. ಅದರಂತೆ ಆನಂದ ತುಂದಿಲರಾದ ಪ್ರಜೆಗಳು ಕಾಣಿಕೆಗಳನ್ನು ಹೊತ್ತುಕೊಂಡು, ರಾಮದರ್ಶನದ ಮಹದಾಸೆಯೊಂದಿಗೆ ಹೊರವಲಯದಲ್ಲಿ ಸೇರಿದರು. 'ಶ್ರೀರಾಮ ಜಯರಾಮ ಜಯಜಯರಾಮ -ಮಂತ್ರವು ಎಲ್ಲ ಕಡೆಗಳಲ್ಲಿ ಕೇಳಬರತೊಡಗಿತು. 


ತಲೆಯ  ಮೇಲೆ ಚಿನ್ನದ ರಾಮಪಾದುಕೆಯನ್ನು ಹೊತ್ತಿಕೊಂಡ ಜಟಾಧಾರಿ ಭರತನನ್ನು,- ಶತ್ರುಘ್ನ, ತಾಯಂದಿರು- ಪತ್ನಿಯರು, ಮಂತ್ರಿ-ಸಚಿವರು,ಪುರಪ್ರಮುಖರು ಮತ್ತು ಪ್ರಜೆಗಳು ಹಿಂಬಾಲಿಸಿದರು.  ಪುಷ್ಪಕವನ್ನು- ಅದರೊಳಗಿದ್ದ ರಾಮನನ್ನು ಕಂಡದ್ದೇ ತಡ ರಾಮಾಭಿಮಾನಿಗಳು ಹುಚ್ಚೆದ್ದು ಕುಣಿದು ಘೋಷಣೆ ಕೂಗತೊಡಗಿದರು. ವಿಮಾನವು ಭೂಮಿಗಿಳಿಯಿತು. ರಾಮನು ಭರತ- ಶತ್ರುಘ್ನರನ್ನು ವಿಮಾನಕ್ಕೆ ಹತ್ತಿಸಿಕೊಂಡನು. ತನ್ನ ಕಾಲಿಗೆರಗಿ ನಮಸ್ಕರಿಸಿದ ಭರತನನ್ನು ಎಬ್ಬಿಸಿ, ಆಲಂಗಿಸಿ ತನ್ನ ತೊಡೆಯಲ್ಲಿ ಕುಳ್ಳಿರಿಸಿದ ರಾಮನು ಭರತನ ಮೇಲೆ ವಾತ್ಸಲ್ಯದ ಧಾರೆಯನ್ನು ಹರಿಸಿದನು. ಶತ್ರುಘ್ನನನ್ನೂ ಆಲಂಗಿಸಿದನು. ಭರತನು ಸೀತೆಯ ಕಾಲಿಗೆರಗಿ ಲಕ್ಷ್ಮಣನನ್ನು ತಬ್ಬಿಹಿಡಿದನು. ಶತ್ರುಘ್ನನು ಭರತನನ್ನು ಅನುಸರಿಸಿದನು. ರಾಮನು ಹನುಮ- ಸುಗ್ರೀವ- ವಿಭೀಷಣ- ಜಾಂಬವಂತ  ಮೊದಲಾದವರನ್ನು ಭರತನಿಗೆ ಪರಿಚಯಿಸಿದಾಗ ಅವನು ಅವರೆಲ್ಲರನ್ನು ಪ್ರೀತಿಯಿಂದ ಆಲಂಗಿಸಿದನು.  ಅವರ ನಿಸ್ವಾರ್ಥ ಸೇವೆಯನ್ನು ಕೊಂಡಾಡುತ್ತ ವಂದಿಸಿದನು. ವಾನರರೆಲ್ಲರೂ ನರರೂಪವನ್ನು ಧರಿಸಿ ಶೋಭಿಸಿದರು.



ರಾಮನು ತಾಯಿ ಕೌಸಲ್ಯೆಯ ಕಣ್ಣೀರನ್ನೊರೆಸಿ, ಪಾದಗಳಿಗೆರಗಿದನು. ಲಕ್ಷ್ಮಣ - ಸೀತೆಯರು ರಾಮನನ್ನು ಅನುಸರಿಸದರು. ಹಾಗೆಯೇ ಸುಮಿತ್ರೆ-ಕೈಕೇಯಿಯರಿಗೂ ಅಭಿವಂದಿಸಿದನು. ಭರತನು ತಾನು ಹೊತ್ತು ತಂದಿದ್ದ ರಾಮಪಾದುಕೆಗಳನ್ನು ರಾಮನ ಪಾದಗಳಿಗೆ ತೊಡಿಸಿದನು. "ಹೇ ಜಗನ್ನಾಥ! ನನ್ನ ಜನ್ಮ ಪಾವನವಾಯಿತು. ನನ್ನ ಸಕಲ ಇಷ್ಟಾರ್ಥಗಳು ಪೂರ್ಣವಾದವು.  ನಿನ್ನ ಮಹಿಮೆಯಿಂದ ಅನ್ನ-ಭಂಡಾರ, ಸೇನೆ-ಕೋಶಗಳು ಮೊದಲಿಗಿಂತ ಹತ್ತುಪಟ್ಚು ಬೆಳೆದಿವೆ. ಇನ್ನು ನೀನು ನಿನ್ನ ನಗರವನ್ನು ಸ್ವತಃ ಪಾಲಿಸುವವನಾಗು."- ಎನ್ನುತ್ತ ರಾಮನಿಗೆ ವಂದಿಸಿದನು. ರಾಮನು ಭರತನ ಆಶ್ರಮಕ್ಕೆ ಹೋಗಿ, ವಿಮಾನದಿಂದ ಎಲ್ಲರೂ ಇಳಿದರು. ವಿಮಾನವನ್ನು ಗೌರವಪೂರ್ವಕವಾಗಿ ಕುಬೇರನಲ್ಲಿಗೆ ಕಳುಹಿಸಿದ ರಾಮನು ಗುರುವಸಿಷ್ಠರ ಪಾದಗಳಿಗೆ ವಂದಿಸಿದನು.  ಅವರಿಬ್ಬರೂ ಉಚಿತಾಸನಗಳಲ್ಲಿ ಕುಳಿತುಕೊಂಡರು. ಅಲ್ಲಿಯೇ ಭರತನು ರಾಮನಿಗೆ ರಾಜ್ಯಸಮರ್ಪಣೆಯನ್ನು ಮಾಡಿದನು.


ರಾಮ- ಲಕ್ಷ್ಮಣರು ಜಟೆಯನ್ನು ವಿಸರ್ಜಿಸಿ, ಮಂಗಳಸ್ನಾನವನ್ನು ಮಾಡಿ ರಾಜೋಚಿತ ಉಡುಗೆ- ತೊಡುಗೆಗಳನ್ನು ತೊಟ್ಟರು. ವಿಭೀಷಣನೂ ಸೇರಿದಂತೆ ಎಲ್ಲರೂ ರಾಮನನ್ನು ಅನುಸರಿಸಿ ನೂತನ ಉಡುಗೆ- ತೊಡುಗೆಗಳಿಂದ ಕಂಗೊಳಿಸಿದರು. ಸೀತೆಯನ್ನು ತಾಯಂದಿರು ಸಿಂಗರಿಸಿದರು. ಸುಂದರವಾದ ರಥವನ್ನೇರಿದ ಶ್ರೀರಾಮನು ತನ್ನ ಸಮಸ್ತ ಪರಿವಾರದೊಂದಿಗೆ ರಾಜವೈಭವದಲ್ಲಿ ಅಯೋಧ್ಯಾಪುರದತ್ತ ಹೊರಟನು. ಅಳು ಅಳಿಯಿತು, ಮೊಗವರಳಿತು,  ನಗು ಚೆಲ್ಲಿತು ಸಂಭ್ರಮವು ನಲಿದಾಡಿತು! ರಾಮನ ರಥದಲ್ಲಿ ಭರತನೇ ಸಾರಥಿಯಾದನು.


ಶತ್ರುಘ್ನನು ಶ್ವೇತಛತ್ರವನ್ನು ಹಿಡಿದನು. ಲಕ್ಷ್ಮಣನು ಬೀಸಣಿಗೆಯಿಂದ ಬೀಸತೊಡಗಿದನು.ಸುಗ್ರೀವ- ವಿಭೀಷಣರು ರಾಮನ ಇಕ್ಕಡೆಗಳಲ್ಲಿ ನಿಂತುಕೊಂಡು ಚಾಮರಸೇವೆಯಲ್ಲಿ ತೊಡಗಿದರು. ವೇದಘೋಷ, ಶ್ರೀರಾಮನ ಸ್ತೋತ್ರಗಳೊಂದಿಗೆ ರಾಮನು ಅಯೋಧ್ಯೆಯ ಪುರಪ್ರವೇಶವನ್ನು ಮಾಡಿದನು. ಅಯೋಧ್ಯೆಯಲ್ಲಿ ಹದಿನಾಲ್ಕು ವರ್ಷಗಳ ಬಳಿಕ ನಗುವು- ಮನೆಮನೆಗಳಲ್ಲಿ ಮನೆಮಾಡಿತು, ಮನಮನಗಳಲ್ಲಿ ನೆಲೆಯೂರಿತು. 


ಮುಂದುವರಿಯುವುದು....

- ವಿಶ್ವೇಶ್ವರ ಭಟ್ಟ ಉಂಡೆಮನೆ, ಬೆಳ್ತಂಗಡಿ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top