ಮನುಷ್ಯನು ಮಾಡುವ ಧರ್ಮಾಚರಣೆಗೆ ತಕ್ಕ ಫಲ ಸಿಗುತ್ತದೆಯೋ ಇಲ್ಲವೋ ಎಂಬ ಅನುಮಾನ ಇರುತ್ತದೆ. ಏಕೆಂದರೆ ಫಲ ಕೊಡುವ ದೇವರು ಮನುಷ್ಯನಿಗೆ ಕಾಣುವುದಿಲ್ಲ. ಫಲವು ಕೂಡ ಮಾಡಿದ ತಕ್ಷಣ ಸಿಗದ ಕಾರಣ ಯಾವಾಗ ಯಾವ ಕರ್ಮಕ್ಕೆ ಫಲ ಎಂದು ತಿಳಿಯುವುದಿಲ್ಲ ಇದರ ಚರ್ಚೆ ಪಂಡಿತವರ್ಗದಲ್ಲಿ ಬಹಳ ಕಾಲದಿಂದಲೂ ಇದೆ. ದೇವರು ಇದ್ದಾನೆಯೋ ಕರ್ಮವೇ ಫಲ ಕೊಡುತ್ತದೆಯೋ ಎಂಬ ಅನುಮಾನ ಬಹಳ ಜನರಿಗೆ ಇರುತ್ತದೆ. ಮಾಡಿದ ಕೆಲಸವನ್ನು ನೋಡಿ ಶ್ರಮಕ್ಕೆ ತಕ್ಕ ಫಲ ಕೊಡುವವನು ಒಬ್ಬ ಇರುತ್ತಾನೆ.
ಕೆಲಸಕ್ಕೆ ಪ್ರತಿಫಲ ರೂಪದಲ್ಲಿ ಶಿಕ್ಷೆ ಅಥವಾ ಬಹುಮಾನ ಕೊಡಲು ಕೂಡ ಒಬ್ಬ ವ್ಯಕ್ತಿ ಇರಬೇಕು ಹಾಗೇಯೇ ನಾವು ಮಾಡುವ ಧರ್ಮ ಹಾಗೂ ಅಧರ್ಮ, ಪಾಪ ಮತ್ತು ಪುಣ್ಯ ಇವುಗಳನ್ನು ನೋಡಿ ಫಲ ಕೊಡುವ ಒಬ್ಬ ವ್ಯಕ್ತಿ ಇದ್ದಾನೆ ಎಂಬುದು ಸತ್ಯ ಎಂದರೂ ಅನಂತ ಜೀವ ರಾಶಿಗಳ ಕರ್ಮಗಳ ಫಲವನ್ನು ಕೊಡಬೇಕಾದಾಗ ವಿಸ್ಮತಣೆ, ತಪ್ಪು ಆಗುವ ಸಾಧ್ಯತೆ ಇರುತ್ತದೆ ಎಂಬ ಅನುಮಾನ ಭಗವಂತನ ಬಗೆಗೆ ಮೂಡಿದ ವ್ಯಕ್ತಿಗೆ ಪಾಪ ಲೇಪವಾಗುತ್ತದೆ. ಅಂದರೆ ನಾವು ಮಾಡಿದ ಸಾಧನೆ ಮತ್ತು ಪುಣ್ಯ ನಶಿಸಿ ಹೋಗುತ್ತದೆ. ನಾನು ಮಾಡಿದ ಕರ್ಮಕ್ಕೆ ದೇವರು ಫಲವನ್ನು ಕೊಟ್ಟೆ ಕೊಡುತ್ತಾನೆ ಎಂಬ ವಿಶ್ವಾಸ ನಮ್ಮಲ್ಲಿರಬೇಕು.
ಒಳ್ಳೆಯ ಕೆಲಸ ಮಾಡಲು ಧೈರ್ಯ ಬೇಕು, ಮಾಡಿದ ಕೆಟ್ಟ ಕೆಲಸಕ್ಕೆ ಶಿಕ್ಷೆ ಕೊಡುವನೆಂಬ ಭಯವಿರಬೇಕು. ಒಳ್ಳೆಯದು ಮಾಡುವಾಗ ಅಧೈರ್ಯ ಆದರೆ ಕೆಟ್ಟ ಕೆಲಸ ಮಾಡುವಾಗ ತಪ್ಪಿಸಿಕೊಳ್ಳಬಹುದೆಂಬ ಭಂಡತನ ಮನುಷ್ಯರಲ್ಲಿ ಸಾಮಾನ್ಯವಾಗಿ ಬರುತ್ತದೆ ನಾವು ಮಾಡಿದ ಕರ್ಮಗಳ ದಾಖಲೆ ಎಲ್ಲಿದೆ ಎಂದರೆ ನಮ್ಮ ಬಳಿ ಪುಣ್ಯ ಪಾಪದ ದಾಖಲೆಗಳು ಇರುವುದಿಲ್ಲ. ಶ್ರೀಮನ್ ಮಹಾಭಾರತ ಹೇಳುತ್ತದೆ, ವೇದವ್ಯಾಸ ದೇವರು ಹೇಳಿದ್ದನ್ನು ಭೀಮಾಚಾರ್ಯರು ಯುಧಿಷ್ಠಿರನಿಗೆ ಹೇಳುತ್ತಾರೆ, ಎಲ್ಲ ಜೀವರಿಗೂ ಯುಧಿಷ್ಠಿರರಾಗಿ ಅಂದರೆ ಸಂಸಾರವೆಂಬ ಯುದ್ಧದಲ್ಲಿ ಸ್ಥಿರವಾಗಿ ಇರಿ, ಸಂಶಯ ಗೊಂದಲದಿಂದ ಕಂಗಾಲು ಆಗಬೇಡಿ ಎನ್ನುತ್ತಾರೆ. ಧರ್ಮದಿಂದ ರಾಜರಾಗಬೇಕು ಎಂದು ಹೇಳುತ್ತಾರೆ. ಸಾವಿರ ಸಾವಿರ ಗೋವುಗಳು ಒಟ್ಟಿಗೆ ಇದ್ದರೂ ಕರು ತನ್ನ ತಾಯಿಯನ್ನು ನೆನಪಿಟ್ಟುಕೊಂಡು ಬರುವಂತೆ ನಮ್ಮ ಕರ್ಮಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಕರುಗಳಿಗೆ ಕೊಟ್ಟಿರುವ ವಿವೇಚನೆ ಬುದ್ಧಿಯನ್ನು ಪರಮಾತ್ಮ ಕರುಗಳಿಗೆ ಕೊಟ್ಟಿದ್ದಾನೆ. ಪಶು ಪಕ್ಷಿ ಮನುಷ್ಯ ಎಲ್ಲ ಜೀವಿಗಳಿಗೂ ವಿಶೇಷವಾದ ಶಕ್ತಿಯನ್ನು ಭಗವಂತನು ಕೊಟ್ಟಿರುತ್ತಾನೆ. ಇದರಂತೆ ನಾವು ಮಾಡಿದ ಕರ್ಮಗಳ ಫಲವನ್ನು ನಾವೇ ಅನುಭವಿಸಬೇಕು ನಮಗೆ ಗೊತ್ತಿಲ್ಲ ಅದರೆ ನಮಗೆ ಅನ್ಯಾಯವಾಗುವುದಿಲ್ಲ ಎಂಬುದೂ ಕೂಡ ಅಷ್ಟೇ ಸತ್ಯ.
ನಮಗೆ ಅಜ್ಞಾನ ಇರುತ್ತದೆ ನಾವು ಮಾಡಿದ ಕರ್ಮ ಅಡೆತಡೆ ತಂದರೂ ಪುಣ್ಯಕಾರ್ಯವನ್ನು ಮುಂದುವರೆಸುವಂತೆ ದೇವರು ಮಾಡುತ್ತಾನೆ ಇದೇ ಅವನ ಕಾರುಣ್ಯ. ನಮ್ಮಲ್ಲಿ ಯಾವುದೇ ದಾಖಲೆ ಇಲ್ಲದಿದ್ದರೂ ದೇವರು ಮಾಡುವ ಕಾರುಣ್ಯಕ್ಕೆ ಸಾಟಿ ಯಾವುದೂ ಇಲ್ಲ. ಕಾರುಣ್ಯ ಸಾಗರನಾದ ಭಗವಂತ ಅವರು ಮಾಡಿದ ಕರ್ಮ ಫಲವನ್ನು ಅವರಿಗೇ ಕೊಡುತ್ತಾನೆ. ದೇವರು ಮುಖ್ಯಪ್ರಾಣ ದೇವರಿಗೆ ಎಲ್ಲರಿಗೂ ತಕ್ಕ ಫಲದಿಂಧ ಕೊಡಬೇಕು ಎಂದು ಆಜ್ಞೆಯನ್ನು ಕೊಡುತ್ತಾರೆ. ದೇವರು ಬದುಕಿಸುವ ನಿರ್ಣಯಮಾಡಿದರೆ ಹೇಗೆ ಬದುಕಿಸುತ್ತಾನೆ ಎಂಬುದು ಅವನೊಬ್ಬನಿಗೆ ಗೊತ್ತು. ನಮ್ಮ ಪೂರ್ವಕೃತ ಪುಣ್ಯ ನಮ್ಮನ್ನು ಕಾಪಾಡುತ್ತದೆ. ಅವರವರು ಮಾಡಿದ ಕರ್ಮ ಅವರಿಗೇ ಫಲ ಕೊಡುವಂತೆ ಭಗವಂತ ಮಾಡುತ್ತಾನೆ ಎಂದು ಮಹಾಭಾರತ ಭಾಗವತ ಮೊದಲಾದ ಪುರಾಣದಲ್ಲಿ ಹೇಳುತ್ತಾರೆ.
ಪರಮಾತ್ಮನ ಆಜ್ಞೆಯಂತೆ ವಾಯುದೇವರು ಕರ್ಮದ ಪರ್ವತವೇ ಇದ್ದರೂ ಕೂಡ ಅವರವರಿಗೆ ದೊರೆಯುವಂತೆ ಮಾಡುವ ಸಾಮರ್ಥ್ಯ ಉಳ್ಳವರು ಎಂದು ಹೇಳುತ್ತಾರೆ. ವಾಯುದೇವರು ಅವರವರ ಕರ್ಮಗಳ ತಕ್ಕ ಫಲ ಕೊಡುವವರು ಗೋವತ್ಸರೂಪಿಯಾದ ವಾಯುದೇವರು ನಮ್ಮ ಕರ್ಮಗಳ ಫಲವನ್ನು ಹೊತ್ತು ತರುತ್ತಾರೆ ಎಂದು ವೇದವ್ಯಾಸದೇವರೇ ಹೇಳುತ್ತಾರೆ.
ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ