ವ್ಯಾಸ ಪೀಠ- 9: ತುಮಕೂರು ಜಿಲ್ಲೆಯ ಪ್ರಮುಖ ದೇವಾಲಯಗಳು

Upayuktha
0

ಸಾಂಸ್ಕೃತಿಕ ಪರಂಪರೆಗೊಂದು ಕೈಗನ್ನಡಿ 



ಡಾ. ಲಕ್ಷ್ಮೀನಾರಾಯಣಪ್ಪ ಕೆ.ಜಿ. ಅವರು ಬರೆದಿರುವ 'ತುಮಕೂರು ಜಿಲ್ಲೆಯ ಪ್ರಮುಖ ದೇವಾಲಯಗಳು' ಕೃತಿಯನ್ನು ಗಮನಿಸಿದರೆ ನಮ್ಮ ಅಧ್ಯಯನಕ್ಕೂ, ಜೀವನ ನಿರ್ವಹಣೆಗೂ, ಹವ್ಯಾಸಕ್ಕೂ ನಂಟಿರದೆ, ವೃತ್ತಿಯಿಂದ ತೆರಿಗೆ ಅಧಿಕಾರಿಯಾಗಿ ಆದರೆ ಆತ್ಮತೃಪ್ತಿಗೆ ತುಮಕೂರು ಜಿಲ್ಲೆಯ ಪ್ರಮುಖ ದೇವಾಲಯಗಳು ಒಂದು ಅಧ್ಯಯನ ಎಂಬ ಅಪೂರ್ವವಾದ ಗ್ರಂಥ ರಚನೆ ಮಾಡಿ, ತುಮಕೂರು ವಿಶ್ವವಿದ್ಯಾನಿಲಯದಿಂದ ಡಿ.ಲಿಟ್.ಗಾಗಿ ಪ್ರಬಂಧವನ್ನು ಮಂಡಿಸಿ, ಡಾಕ್ಟರೇಟ್ ಪದವಿ ಗಳಿಸಿರುತ್ತಾರೆ. ಕರ್ನಾಟಕ ರಾಜ್ಯದ 12 ಲಕ್ಷ ಪದ್ಮಶಾಲಿ ಜನಾಂಗದವರಲ್ಲಿ ಮೊಟ್ಟ ಮೊದಲನೆಯ ಸಂಶೋಧಕರಾಗಿ ಹಾಗೂ 60 ಲಕ್ಷ ನೇಕಾರ ಸಮುದಾಯಗಳಲ್ಲಿ ನಾಲ್ಕನೆಯ ಸಂಶೋಧಕರಾಗಿ, 'ಡಿ.ಲಿಟ್ ಪದವಿ'ಯಂತಹ ಗೌರವ ಪಡೆದಿರುವುದು ಜನಾಂಗದವರ ಹೆಮ್ಮೆಯೇ ಆಗಿದೆ.


ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೆಬ್ಬಾಗಿಲಿನಂತಿರುವ ತುಮಕೂರು ಜಿಲ್ಲೆ ಹತ್ತು ತಾಲ್ಲೂಕುಗಳನ್ನೊಳಗೊಂಡಿದ್ದು, ತೆಂಗಿನ ಬೇಸಾಯ ಯಥೇಚ್ಛವಾಗಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯನ್ನು "ಕಲ್ಪತರುನಾಡು" ಎಂದು ಕರೆಯಲಾಗುತ್ತಿದೆ. ತುಮಕೂರು ಪ್ರದೇಶವು ಕರ್ನಾಟಕದ ವಿವಿಧ ಅರಸು ಮನೆತನಗಳ ಆಳ್ವಿಕೆಗೆ ಒಳಪಟ್ಟಿದ್ದು ಕಂಡುಬರುತ್ತದೆ. 


ತುಮಕೂರು ಜಿಲ್ಲೆಯ ಪವಿತ್ರ ಪುಣ್ಯಕ್ಷೇತ್ರಗಳಾದ ಸಿದ್ಧಗಂಗೆ, ಮಧುಗಿರಿ, ಶಿರಾ, ದೇವರಾಯನದುರ್ಗ, ಗುಬ್ಬಿ, ಮಾಗೋಡು, ಕೆರೆಗೋಡು, ಪಾವಗಡ, ತುರುವೆಕೆರೆ, ಎಡೆಯೂರು, ಶಿಬಿ, ಕೊರಟಗೆರೆ, ತುಮಕೂರು ಮೊದಲಾದ ಪ್ರದೇಶಗಳು ಕೆಲವರಿಗೆ ಯಾತ್ರಾ ಕ್ಷೇತ್ರವಾಗಿದೆ. 


ಜಿಲ್ಲೆಯ ತಾಲೂಕುಗಳಲ್ಲಿರುವ ದೇವಾಲಯಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿರದೇ ಖ್ಯಾತ ವಾಸ್ತುಶಿಲ್ಪ ಕೇಂದ್ರಗಳಾಗಿದ್ದು, ಈ ದೇವಾಲಯಗಳಲ್ಲಿನ ಮೂರ್ತಿಗಳು, ಶಿಲ್ಪಗಳು ಮತ್ತು ಈ ಪ್ರದೇಶದಲ್ಲಿ ದೊರೆತ ಶಾಸನಗಳು ಅಧ್ಯಯನದ ದೃಷ್ಟಿಯಿಂದ ಅತಿ ಮಹತ್ವದ ಸ್ಥಾನವನ್ನು ಪಡೆದಿವೆ. 


ಇಲ್ಲಿಯ ದೇವಾಲಯಗಳು ಕೆಲವು ಕಡೆ ಸುಸ್ಥಿತಿಯಲ್ಲಿವೆ. ಇನ್ನೂ ಕೆಲವು ದೇವಾಲಯಗಳು ಕಾಲನ ತುಳಿತಕ್ಕೆ ಸಿಕ್ಕು ಅವನತಿಯ ಹಾದಿಯನ್ನು ಹಿಡಿದಿವೆ. ಇಲ್ಲಿನ ದೇವಾಲಯಗಳ ವಾಸ್ತು ಮತ್ತು ಮೂರ್ತಿಶಿಲ್ಪ ಕುರಿತಂತೆ ಹೆಚ್ಚು ಅಧ್ಯಯನ ನಡೆದಿಲ್ಲ. ಪ್ರಸ್ತುತ ಡಾ.ಕೆ.ಜಿ.ಲಕ್ಷ್ಮೀ ನಾರಾಯಣಪ್ಪನವರು ವ್ಯವಸ್ಥಿತ ಅಧ್ಯಯನ ನಡೆಸಿ ಆ ಕೊರತೆಯನ್ನು ನೀಗಿಸಿದ್ದಾರೆ ಎಂದು ಮುನ್ನುಡಿಯಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ದೇವರಕೊಂಡಾರೆಡ್ಡಿ ಸ್ಮರಿಸುತ್ತಾರೆ.

ದೇವಾಲಯಗಳು ಸಾಂಸ್ಕೃತಿಕವಾದ ಅನನ್ಯತೆಯನ್ನು ಸಾರುತ್ತವೆ. ಗತಕಾಲದ ವೈಭೋಗಗಳ ನೆನಪುಗಳನ್ನು ಕೊಡುವುದರ ಜೊತೆಗೆ ಸಮಕಾಲೀನ ಭಕ್ತರ ಆಧ್ಯಾತ್ಮಿಕ ಪ್ರಜ್ಞೆಯನ್ನು ಜನಮಾನಸದಲ್ಲಿ ದೈವಭಕ್ತಿಯು ಉಕ್ಕಿಸಿದೆ. ಈ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯ ಪ್ರಮುಖ ದೇವಾಲಯಗಳ ಕುರಿತಾಗಿ ಅಧ್ಯಯನ ಮಾಡಿ ಇಲ್ಲಿನ ದೇವಾಲಯ ಮತ್ತು ಶಾಸನಗಳ ವೈಶಿಷ್ಟ್ಯತೆ ಏನು? ಸಮಾಜೋ-ಧಾರ್ಮಿಕ ಹಾಗೂ ಆರ್ಥಿಕ-ರಾಜಕೀಯ ರಂಗದಲ್ಲಿ ಅವು ನಿರ್ವಹಿಸಿರುವ ಪಾತ್ರವೇನು? ಎಂದು ತಾರ್ಕಿಕವಾಗಿ ವಿಶ್ಲೇಷಿಸಲಾಗಿದೆ. 


ಅಧ್ಯಯನದ ಅನುಕೂಲಕ್ಕಾಗಿ ಪ್ರಸಕ್ತ ವಿಷಯವನ್ನು ಏಳು ಅಧ್ಯಾಯಗಳನ್ನಾಗಿ ವಿಭಾಗಿಸಿಕೊಂಡು ಅಧ್ಯಯನ ಮಾಡಲಾಗಿದೆ. ಒಟ್ಟಿನಲ್ಲಿ ತುಮಕೂರು ಜಿಲ್ಲೆಯ ದೇವಾಲಯ ಮತ್ತು ಶಾಸನಗಳ ಕುರಿತು ಇಲ್ಲಿಯವರೆಗೆ ನಡೆದಿರುವ ವಿರಳವಾದ ಅಧ್ಯಯನಗಳ ಹಿನ್ನೆಲೆಯಲ್ಲಿ ಈ ಜಿಲ್ಲೆಯಲ್ಲಿ ಹೊರಡಿಸಲ್ಪಟ್ಟ ಶಾಸನಗಳ ಹಾಗೂ ದೇವಾಲಯಗಳ ಮಹತ್ವದ ಕುರಿತು ಮೊದಲ ಬಾರಿಗೆ ಒಂದೆಡೆ ಸಮಗ್ರವಾಗಿ ಮಾಹಿತಿ ಲಭ್ಯವಾಗುವ ರೀತಿ ಕಟ್ಟಿಕೊಡಲಾಗಿದೆ.. ಇವೆಲ್ಲಕ್ಕಿಂತ ಸಾಮಾನ್ಯ ಓದುಗನಿಗಾಗಿ ದೇವಾಲಯದ ಭಾಗಗಳನ್ನು ಕುರಿತಂತೆ ವಿವರವಾಗಿ ಬರೆದು ಈ ಗ್ರಂಥದಲ್ಲಿ ಸೇರಿಸಿದ್ದಾರೆ. ಹೀಗಾಗಿ ಈ ಕೃತಿ ಪಂಡಿತ ಹಾಗೂ ಪಾಮರರಿಗೆ ಮಾರ್ಗದರ್ಶಕ ಕೃತಿಯಾಗುವುದರಲ್ಲಿ ಸಂಶಯವಿಲ್ಲ. 


ಕೃತಿ : ತುಮಕೂರು ಜಿಲೆಯ ಪ್ರಮುಖ ದೇವಾಲಯಗಳು ಲೇಖಕ : ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪ (ಕೆ.ಗು.ಲ) ಡಿ.ಲಿಟ್

ಪ್ರಕಾಶನ : ಉದಯ ಪ್ರಕಾಶನ, ಬೆಂಗಳೂರು ಪ್ರತಿಗಳಿಗೆ ಸಂಪರ್ಕಿಸಿ : 98457 57544

ಪುಟ: 400 ಬೆಲೆ : ರೂ 500/-


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top