ಅಧ್ಯಾತ್ಮ ರಾಮಾಯಣ-11: ಪಂಚವಟಿಯತ್ತ ಪಯಣ, ಜಟಾಯು ದರ್ಶನ, ಶೂರ್ಪನಖಿ ಮುಖಾಮುಖಿ

Upayuktha
0

ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ 


ಚಿತ್ರ: ನೀರ್ನಳ್ಳಿ ಗಣಪತಿ; ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ


ಪಂಚವಟಿಯತ್ತ ಹೋಗುತ್ತಿರುವಾಗ ಜಟಾಯುವಿನ ದರ್ಶನವಾಯಿತು. ಮೊದಲು ಮಾಯಾವಿ ರಾಕ್ಷಸನಿರಬಹುದೆಂದೆಣಿಸಿ ಹೊಡೆಯಲು ಬಿಲ್ಲನ್ನೆತ್ತಿದರು. ಆಗ ಜಟಾಯುವು- ನಾನು ಜಟಾಯ, ನಿನ್ನ ತಂದೆಯ ಸ್ನೇಹಿತ. ವಧಾರ್ಹನಲ್ಲ. ನಿನಗೆ ಬೇಕಾದವನು. ನಿನ್ನ ಹಿತಕ್ಕಾಗಿಯೇ ಪಂಚವಟಿಯಲ್ಲಿದ್ದೇನೆ. ನೀನೂ ಲಕ್ಷ್ಮಣನೂ ಬೇಟೆಗಾಗಿ ಹೊರಗೆ ಹೋಗಬೇಕಾಗಿ ಬಂದರೆ ಸೀತೆಯ ರಕ್ಷಣೆಗೆ ನಾನಿರುತ್ತೇನೆ- ಎಂದಿತು. ಜಟಾಯುವಿನ ಮಾತನ್ನು ನಂಬಿದ ರಾಮನು ಪಂಚವಟಿಯಲ್ಲಿ ನಮ್ಮ ಪಕ್ಕದಲ್ಲೇ ಇರು ಎಂದು ಜಟಾಯುವನ್ನು ತಬ್ಬಿಕೊಂಡು ಹೇಳಿದ. 


ಗೌತಮೀ ನದೀತೀರದಲ್ಲಿರುವ ಪಂಚವಟಿಯಲ್ಲಿ ಲಕ್ಷ್ಮಣನು ಅಣ್ಣನ ಅಪೇಕ್ಷೆಯ ಮೇರೆಗೆ ಒಂದು ವಿಶಾಲವಾದ ಪರ್ಣಕುಟಿಯನ್ನು ಕಟ್ಟಿದನು. ಅಲ್ಲಿನ ಪ್ರಶಾಂತವಾದ ವಾತಾವರಣ, ಅಲ-ಫಲಗಳಿಂದ ಕೂಡಿದ ಕಾಡು ಅವರಿಗೆ ತುಂಬ ಹಿಡಿಸಿತು. ಲಕ್ಷ್ಮಣನು ಅಣ್ಣ- ಅತ್ತಿಗೆಯರ ಬೇಕು-ಬೇಡಗಳನ್ನು ಶ್ರದ್ಧೆಯಿಂದ ಪೂರೈಸುತ್ತಿದ್ದನು. ಶಸ್ತ್ರಧಾರಿಯಾಗಿ ಇರುಳಿಡೀ ಕಾವಲಿರುತ್ತಿದ್ದನು. 


ಒಂದು ದಿನ ಏಕಾಂತದಲ್ಲಿದ್ದಾಗ ಲಕ್ಷ್ಮಣನು ರಾಮನಲ್ಲಿ- ಅಣ್ಣ, ಮೋಕ್ಷಕ್ಕೆ ನಿಶ್ಚಿತವಾಗಿ ಗೊತ್ತಾದ ಸಾಧನವು ಯಾವುದೆಂದು ವಿಶದವಾಗಿ ತಿಳಿಸು, ಮತ್ತು ಉಪದೇಶಿಸು- ಎಂದು ವಿನಂತಿಸಿದನು. ರಾಮನು- ಮಾಯೆಯ ಸ್ವರೂಪ, ಜ್ಞಾನದ ಸಾಧನೆ, ಅನುಭವದಿಂದ ಕೂಡಿದ ವಿಜ್ಞಾನ ಸಹಿತ ಜ್ಞಾನ ಮತ್ತು ಜ್ಞೇಯ(ತಿಳಿಯಬೇಕಾದ) ಪರಮಾತ್ಮ ತತ್ತ್ವವನ್ನು- ವಿವರವಾಗಿ ತಿಳಿಸಿದನು. ಮತ್ತೆ ಮುಂದುವರಿಸುತ್ತಾ-ಯಾವುದಕ್ಕೂ ಭಕ್ತಿ ಮುಖ್ಯ. ಭಕ್ತಿಯಿಲ್ಲದವನಿಗೆ ಜ್ಞಾನವು ಸಿಗದು. ನನ್ನ ಭಕ್ತಿಯುಳ್ಳವರಿಗೆ ಆತ್ಮಜ್ಞಾನ ಉಂಟಾಗುತ್ತದೆ. ಸತ್ಸಂಗ, ಭಕ್ತರ ಸೇವೆ, ವ್ರತಾಚರಣೆ, ಉತ್ಸವಾಚರಣೆ, ಕಥಾಶ್ರವಣ-ಪಾರಾಯಣ, ಪೂಜೆ, ನಾಮಸಂಕೀರ್ತನೆ ಮುಂತಾದವುಗಳನ್ನು ಮಾಡುವುದರ ಮೂಲಕ ಭಕ್ತಿಯುಂಟಾಗುವುದು. ನನ್ನ ಭಕ್ತಿಯಿಂದ ಕೂಡಿದವನಿಗೆ ಜ್ಞಾನವೂ, ವಿಜ್ಞಾನವೂ, ವೈರಾಗ್ಯವೂ ಬೇಗ ಉಂಟಾಗುತ್ತದೆ. ಅನಂತರ ಅವನು ಮೋಕ್ಷವನ್ನು ಪಡೆಯುತ್ತಾನೆ ಎನ್ನುತ್ತಾ ಲಕ್ಷ್ಮಣನಿಗೆ ಭಕ್ತಿ- ಮೋಕ್ಷಗಳ ಕುರಿತು ವಿಶದವಾಗಿ ಉಪದೇಶಿಸಿದನು.



ಒಂದು ದಿನ ಪಂಚವಟಿಯ ಮಹಾರಣ್ಯದಲ್ಲಿದ್ದ ರಾವಣನ ತಂಗಿ ಶೂರ್ಪನಖಿಗೆ ಮನುಷ್ಯರ ಇರುವಿಕೆಯು ಗೊತ್ತಾಯಿತು. ಅವಳು ಮಾಯಾವಿ,

ಇಚ್ಛಾರೂಪಿಣಿ. ಇವರ ಜಾಡನ್ನು ಹುಡುಕುತ್ತಾ ಛದ್ಮವೇಷದಿಂದ ಬಂದವಳಿಗೆ ಸುಂದರನಾದ ರಾಮನು ಕಂಡುಬಂದ. ಅವನನ್ನು ಕಂಡಕೂಡಲೇ ಅವಳಿಗೆ ಅವನನ್ನು ವರಿಸಬೇಕೆಂಬ ಆಸೆಯಾಯಿತು. ರಾಮನಲ್ಲಿಗೆ ಹೋಗಿ ತನ್ನನ್ನು ಪರಿಚಯಿಸುತ್ತಾ- ರಾವಣನ ತಂಗಿ ಶೂರ್ಪನಖಿ, ಸೋದರ ಖರನೊಂದಿಗೆ ಇಲ್ಲೇ ವಾಸಿಸುತ್ತಿದ್ದೇನೆ. ಈ ಕಾಡಿನ ಪೂರ್ಣ ಅಧಿಕಾರ ನನ್ನಲ್ಲಿದೆ. ಋಷಿಗಳನ್ನು ತಿಂದುಹಾಕುತ್ತಾ ಕಾಲಕಳೆಯುತ್ತಿದ್ದೇನೆ- ಎಂದಳು.


ಬಳಿಕ ಅವಳು ರಾಮ- ಸೀತೆ- ಲಕ್ಷ್ಮಣರ ಪರಿಚಯವನ್ನು ಕೇಳಿ ತಿಳಿದುಕೊಂಡಳು. ರಾಮನಲ್ಲಿ- ನೀನು ನನ್ನನ್ನು ಮದುವೆಯಾಗು. ನಾವು ಈ ಕಾಡಿನಲ್ಲಿ ಸುಖವಾಗಿರುವ- ಎಂದಳು. ಆಗ ರಾಮನು ನನಗೆ ಮದುವೆಯಾಗಿದೆ. ಇವಳೇ ನನ್ನ ಹೆಂಡತಿ ಎನ್ನುತ್ತ ಸೀತೆಯನ್ನು ತೋರಿಸಿದನು. ನೀನು ತಮ್ಮ ಲಕ್ಷ್ಮಣನನ್ನು ಮದುವೆಯಾಗು ಎಂದು ಲಕ್ಷ್ಮಣನನ್ನು ತೋರಿಸಿದನು. ಅವನಲ್ಲದಿದ್ದರೆ ಇವನು ಎಂಬಂತೆ ಲಕ್ಷ್ಮಣನಲ್ಲಿಗೆ ಹೋಗಿ ತನ್ನ ಬಯಕೆಯನ್ನು ತಿಳಿಸಿದಳು. ಆಗ ಲಕ್ಷ್ಮಣನು ನಾನು ಅಣ್ಣನ ದಾಸ, ನೀನು ನನ್ನನ್ನು ಮದುವೆಯಾದರೆ ನೀನೂ ದಾಸಿಯಾಗಿರಬೇಕಾಗುತ್ತದೆ. ಆದ್ದರಿಂದ ಅಣ್ಣನನ್ನೇ ಕೇಳು- ಎಂದು ಅವಳನ್ನು ರಾಮನತ್ತ ಸಾಗಹಾಕಿದನು.


ಶೂರ್ಪನಖಿಗೆ ಅತ್ತಿತ್ತ ಓಡಾಡಿ ಕೋಪಬಂತು. ಸಿಟ್ಟಿಗೆದ್ದ ಶೂರ್ಪನಖಿಯು ಸೀತೆಯನ್ನು ತಿನ್ನುತ್ತೇನೆಂದು ಮುನ್ನುಗ್ಗಿ ಸೀತೆಯತ್ತ ಬರುತ್ತಿರುವಾಗ ರಾಮನ ಸನ್ನೆಯಂತೆ ಲಕ್ಷ್ಮಣನು ಆಕೆಯನ್ನು ತಡೆದು ಕಿವಿ- ಮೂಗುಗಳನ್ನು ಕತ್ತರಿಸಿದನು. ಮೊದಲೇ ವಿಕಾರ, ಈಗ ಭೀಕರ. ಭೀಕರವಾಗಿ ಅರಚುತ್ತಾ ಖರನಲ್ಲಿಗೆ ಹೋಗಿ ದೂರಿದಳು. ಶೂರ್ಪನಖಿಯು ನಡೆದ ಸಂಗತಿಯನ್ನು(ತಾನು ಅವರನ್ನು ಮೋಹಿಸಿ ಸೀತೆಯನ್ನು ತಿನ್ನಲು ಯತ್ನಿಸಿದ್ದನ್ನು ಬಿಟ್ಟು) ಹೇಳಿದಳು. ಖರನಲ್ಲಿ ಅವರನ್ನು ವಧಿಸಲು ಹೇಳಿದಳು. ಖರನು ಹದಿನಾಲ್ಕು ಸಾವಿರ ರಕ್ಕಸರೊಂದಿಗೆ, ತ್ರಿಶಿರಸ್ಸು- ದೂಷಣರ ಜೊತೆಯಲ್ಲಿ ರಾಮನನ್ನೆದುರಿ ಸಲು ಹೋದನು. ರಾಕ್ಷಸರ ಆಗಮನದ ಸುಳಿವು ಸಿಕ್ಕಿದ ರಾಮನು ಸೀತೆ- ಲಕ್ಷ್ಮಣರನ್ನು ಸುರಕ್ಷಿತವಾದ ಗುಹೆಯಲ್ಲಿರಲು ಹೇಳಿ ತಾನೊಬ್ಬನೇ ಅವರನ್ನು ಎದುರಿಸಿದ. ಅವರೆಲ್ಲರನ್ನೂ ರಾಮನು ಸಾವಿರಾರು ಬಾಣಗಳಿಂದ ಕೊಂದು ಹಾಕಿದನು. ಬಂದವರಾರೂ ಜೀವಸಹಿತ ಮರಳಲಿಲ್ಲ. ಸೀತೆ- ಲಕ್ಷ್ಮಣರು ಗುಹೆಯಿಂದ ಹೊರಬಂದರು. ಸೀತೆ ಗಂಡನ ಸಾಹಸಕ್ಕೆ ಮಾರುಹೋಗಿ ಪ್ರೀತಿ- ಅಭಿಮಾನಗಳಿಂದ ಆಲಂಗಿಸಿದಳು. ತನ್ನವರೆಲ್ಲರೂ ಸಾವಿಗೀಡಾದುದನ್ನು ನೋಡಿದ ಶೂರ್ಪನಖಿಯು ಹೆದರಿ ಲಂಕೆಗೆ ಹಾರಿದಳು.


ಮುಂದುವರಿಯುವುದು....

- ವಿಶ್ವ ಉಂಡೆಮನೆ, ಬೆಳ್ತಂಗಡಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top