'ಆಟಿ' ತುಳುವರ ತಿಂಗಳು, ಕನ್ನಡದಲ್ಲಿ 'ಆಷಾಢ'ವೆಂದು ಕರೆಯುವ ತಿಂಗಳಿದು ಆಟಿ ಎಂಬ ತಿಂಗಳು. ತುಳುನಾಡಿಗೆ ಅತ್ಯಂತ ಕಷ್ಟದ ತಿಂಗಳೆಂಬುದು ವಾಡಿಕೆ. ಹಿಂದೆ ಆಟಿ ತಿಂಗಳಿನಲ್ಲಿ ತುಳುನಾಡಿನ ಜನರು ತಮ್ಮ ಹೊಟ್ಟೆಪಾಡಿಗಾಗಿ ಸ್ವತಃ ತಾವೇ ತಮ್ಮ ಜಾಗಗಳಲ್ಲಿ ಬೇಸಾಯ ಮಾಡುವ ಪದ್ಧತಿಯಿತ್ತು. ಮತ್ತು ಅವುಗಳನ್ನು ಮಾರಾಟ ಮಾಡದೇ ತಮ್ಮ ನಿತ್ಯ ಜೀವನದಲ್ಲಿ ಬಳಸಿಕೊಳ್ಳುತ್ತಿದರು. ಹೀಗೆ ತಾವು ಬೆಳೆದ ಬೆಳೆಗಳನ್ನು ಮಾತ್ರವಲ್ಲದೆ, ಪ್ರಕೃತಿಯಲ್ಲಿ ಸಿಗುವ ಹಲವಾರು ತರಹದ ಔಷಧೀಯ ಅಂಶಗಳುಳ್ಳ ಕೆಲವು ಗಿಡಗಳ ಸೊಪ್ಪುಗಳು, ಕೆಲವು ತರಹದ ಅಣಬೆಯ ಪ್ರಜಾತಿಗಳನ್ನು ಹೀಗೆ ಇವುಗಳಿಂದ ಹತ್ತು-ಹಲವು ಖಾದ್ಯಗಳನ್ನು ತಯಾರಿಸುವುದು ತುಳುನಾಡಿನ ವಿಶೇಷವೇ ಸರಿ. ಇವುಗಳಲ್ಲಿ ಕೆಲವು ಸಾಮಾನ್ಯವಾಗಿ ಮಾಡುವ ತಿನಿಸುಗಳು ಈ ಕೆಳಕಂಡಂತಿವೆ.
1. ಪತ್ರೊಡೆ:
ತುಳುನಾಡಿನ ಪ್ರತಿ ಮನೆಯಲ್ಲೂ ಆಟಿಯ ಸಂದರ್ಭದಲ್ಲಿ ಮಾಡುವ ವಿಶೇಷ ರೀತಿಯ ಒಂದು ಬಗೆಯ ತಿಂಡಿ. ಪತ್ರೊಡೆ ಎಂಬ ಶಬ್ದ "ಪತ್ರ" ಮತ್ತು "ವಡೆ" ಎಂಬ ಎರಡು ಪದಗಗಳ ಮಿಶ್ರಣ. ಇದನ್ನು ಕೆಲವೆಡೆ ಒಂದು ಬಗೆಯ 'ಕೆಸು'ವಿನ ಎಲೆಯಿಂದ ಮಾಡಿದರೆ, ಕೆಲವೆಡೆ ಎರಡು ಬಗೆಯ ಕೆಸುವಿನ ಎಲೆಯಿಂದ ತಯಾರಿಸುತ್ತಾರೆ. ಸಾಮಾನ್ಯವಾಗಿ ಪತ್ರೊಡೆಯನ್ನು ಅಕ್ಕಿಯ ಮಿಶ್ರಣದೊಂದಿಗೆ ಕೇಸುವಿನ ಎಲೆಯನ್ನು ಸೇರಿಸಿ ಗಟ್ಟಿ ಮಾಡುತ್ತಾರೆ, ನಂತರದಲ್ಲಿ ಒಣ ಮೆಣಸಿನ ಮಸಾಲೆಯೊಂದಿಗೆ ಸೇರಿಸಿ ಸವಿಯಬಹುದಾಗಿದೆ.ಇದನ್ನು ಮಳೆಗಾಲದಲ್ಲಿ ಮತ್ರ ತಯಾರಿಸಲು ಸಹ ಕೆಲವು ವೈಜ್ಞಾನಿಕ ಕಾರಣಗಳಿವೆ. ಕೆಸುವಿನ ಎಲೆಯೂ ಉಷ್ಣದ ಅಂಶವನ್ನು ಹೊಂದಿರುವುದರಿಂದ ಮಳೆಗಾಲದಲ್ಲಿ ಅದು ನಮ್ಮ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿ ಮತ್ತು ಕೆಸುವಿನ ಎಲೆಯೂ ಅಧಿಕ ಮಟ್ಟದ ನಾರಿನಾಂಶವನ್ನು ಹೊಂದಿರುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. "ಪತ್ರೊಡೆ"ಯು ನಾಲಗೆಗೆ ಮಾತ್ರವಲ್ಲದೆ ಈ ಮಳೆಗಾಲದಲ್ಲಿ ದೇಹಕ್ಕೂ ರುಚಿ.
2. ಕಳಲೆ (ಕಣಿಲೆ):
ಕಾಡು ಪ್ರದೇಶಗಳಲ್ಲಿ ಇರುವಂತಹ ಬಿದಿರಿನ ಸಣ್ಣ ಅಂದರೆ ಆಗಷ್ಟೇ ಚಿಗುರುತ್ತಿರುವ ಬಿದಿರಿನ ಗಿಡವೆ ಕಳಲೆ ಅಥವಾ ಕಣಿಲೆ.ಇದನ್ನು ಹೆಚ್ಚಾಗಿ ಮಳೆಗಾಲದ ಸಂದರ್ಭದಲ್ಲಿ ಮಾತ್ರ ಖಾದ್ಯವಾಗಿ ಬಳಸಲಾಗುತ್ತದೆ. ತುಂಬಾ ಬಲಿತು ಹೋಗಿರದ ಹಾಗೆಯೇ ತುಂಬಾ ಸಣ್ಣದು ಆಗಿರದಂತಹ ಬಿದಿರಿನ ಮೊಗ್ಗನ್ನು ಆಹಾರಕ್ಕಾಗಿ ಬಳಸಲಾಗುತ್ತದೆ. 'ಆಟಿ' ತಿಂಗಳಲ್ಲಿ ಇದೊಂದು ತುಳುವರ ಪ್ರಮುಖ ಖಾದ್ಯವೆನ್ನಬಹುದು. ಮಳೆಗಾಲದ ಕೊರೆಯುವ ಚಳಿಗೆಇದೊಂದು ಸೂಕ್ತವಾದ ಆಹಾರವಾಗಿದೆ. ಇದರಲ್ಲಿನ ಉಷ್ಣದ ಅಂಶವು ದೇಹವನ್ನು ಬೆಚ್ಚಗಿಡುತ್ತದೆ. ಹೀಗೆ ಹಲವಾರು ಉಪಯೋಗಗಳನ್ನು ಹೊಂದಿರುವ ಕಳಲೆ ಔಷಧೀಯವಾಗಿಯೂ ಉಪಕರಿಸುತ್ತದೆ.
3. ಹಾಲೆ ಮರ (ಪಾಲೆದ ಮರ):
ತುಳುನಾಡಿನಲ್ಲಿ "ಆಟಿ-ಅಮಾವಾಸ್ಯೆ"ಯಂದು ಇದರ ತೊಗಟೆಯ ಕಷಾಯವನ್ನು ಮಾಡಿ ಮುಂಜಾನೆ ಕುಡಿಯಬೇಕೆಂಬುದು ಒಂದು ತುಳುವರ ನಿಯಮ. ಇದನ್ನು ಯಾವುದೇ ಆಯುಧಗಳನ್ನು ಬಳಸದೆ ಇದರ ಮರದ ತೊಗಟೆಯನ್ನು ಮನೆಯ ಪುರುಷ ಸದಸ್ಯ ಬೆಳಗ್ಗೆ ಬೇಗನೆ ಎದ್ದು ಕಲ್ಲಿನಿಂದಲೇ ಕೆತ್ತಿ ತರಬೇಕೆಂಬುದು ವಾಡಿಕೆ. ಇದನ್ನು ಕಷಾಯ ಮಾಡುವ ವಿಧಾನ ವಿಭಿನ್ನವೇ ಸರಿ. "ಹಾಲೆ ಮರದ" ತೊಗಟೆಯನ್ನು ಸ್ವಲ್ಪವೇ ಜೀರಿಗೆಯೊಂದಿಗೆ ರುಬ್ಬುವ ಕಲ್ಲಿನಲ್ಲಿ ರುಬ್ಬಿ ನಂತರ ಅದರ ರಸವನ್ನು ಬೆರ್ಪಡಿಸಬೇಕು. ಆ ರಸವನ್ನು ಬೆಳಗ್ಗೆ ಬೇಗನೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕೆಂಬುದು ಹಿರಿಯರ ಮಾತು. ಇದು ನಾಲಗೆಗೆ ಕಹಿ ಅನುಭವವಾದರೂ ದೇಹಕ್ಕೆ ಮಾತ್ರ ಸಿಹಿಯೇ ಆಗಿರುವುದು ಸತ್ಯ.
4. ಅಣಬೆ (ಅಲಂಬು):
ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ಕಾಡುಗಳಲ್ಲಿ, ತರಗೆಲೆಗಳ ನಡುವೆ ಅಣಬೆ ಬೆಳೆಯುತ್ತದೆ. ಅಣಬೆಗಳಲಿ ಹಲವಾರು ರೀತಿಯ ಪ್ರಜಾತಿಗಳಿವೆ. ಅವುಗಳಲ್ಲಿ ಎಲ್ಲವನು ಸೇವಿಸಲು ಸೂಕ್ತವಲ್ಲ. ಮಳೆಗಾಲದ ಸಮಯದಲ್ಲಿ ತುಳುವರು ಅಣಬೆ ಹುಡುಕುವುದರಲ್ಲಿ ನಿಸ್ಸಿಮರಾಗಿರುತ್ತಾರೆ. ಆಟಿಯ ಮಳೆಯಾಗುವಾಗ "ಗುಡುಗು ಬಂದರೆ ಅಣಬೆಗಳು ಮೂಡುತ್ತವೆ" ಎಂಬ ಮಾತು ಗಮನರ್ಹ.ಮಳೆಗಾಲದ ಅಣಬೆಗಳಲಿ ಸುಳಿರ್, ಬೋಲ್ಲೆಂಜಿರ್, ಕಲ್ಲು ಅಣಬೆ ಹೀಗೆ ಕೆಲವಷ್ಟೇ ಅಣಬೆಗಳು ತಿನ್ನಲು ಸೂಕ್ತವಾದಂತವು. ಅಣಬೆ ತಿನ್ನುವುದರಿಂದ ಹೃದಯದ ಅರೋಗ್ಯ, ಪೋಷಕಾಂಶಗಳು ಜೊತೆಗೆ ಹಲವಾರು ಲಾಭಗಳು ದೊರೆಯುತ್ತವೆ.
5. ತಗತೆ ಸೊಪ್ಪು(ತಜಂಕ್):
'ತಗತೆ ಸೊಪ್ಪು' ಮಳೆಗಾಲದಲ್ಲಿ ಮಾತ್ರ ಬೆಳೆಯುವ ಒಂದು ಔಷಧಿಯುಕ್ತ ಗಿಡವಾಗಿದೆ. ಇದನ್ನು ತುಳುವಿನಲ್ಲಿ "ತಜಂಕ್" ಎಂದು ಕರೆಯುತ್ತಾರೆ. ಇದನ್ನು ಪಲ್ಯ, ಪತ್ರೊಡೆ, ದೋಸೆ, ವಡೆ ಹೀಗೆ ಹಲವಾರು ಖಾದ್ಯಗಳಿಗೆ ಬಳಸುತ್ತಾರೆ. ಇದರ ಎಲೆ ಸಣ್ಣದಾಗಿ ಕರಿಬೇವಿನ ಎಲೆಯ ಆಕಾರದಲ್ಲಿದ್ದು, ಯಾವುದೇ ಪ್ರದೇಶಲ್ಲಾದರೂ ಇದು ಹೇರಳವಾಗಿ ಯಾವುದೇ ಪ್ರದೇಶದಲ್ಲಾದರೂ ಬೆಳೆಯುತ್ತದೆ. ಇದರ ಸೊಪ್ಪನ್ನು ಮಾತ್ರವಲ್ಲದೆ, ತಗತೆ ಗಿಡ ಹೂ ಬಿಡುವಾಗ ಅದನ್ನು ಸಾಂಬಾರ್ ಮಾಡಲು ಬಳಸುತ್ತಾರೆ. ಇದನ್ನು ಆಹಾರದಲ್ಲಿ ಉಪಯೋಗ ಮಾಡುವುದರಿಂದ ದೇಹದಲ್ಲಿನ ವಾತ ಮತ್ತು ಕಫದ ದೋಷಕ್ಕೆ ಹಾಗೆಯೇ ರಕ್ತಶುದ್ಧಿಕರಣಕ್ಕೂ ಸಹಕರಿಸುತ್ತದೆ.
ಹೀಗೆ ಹಲವಾರು ತರಹದ ವಿಶಿಷ್ಟ ಖಾದ್ಯಗಳು ನಾಲಿಗೆಗೆ ಮಾತ್ರ ರುಚಿಯನ್ನು ನೀಡದೆ ದೇಹಕ್ಕೆ ಆರೋಗ್ಯವೆಂಬ ರುಚಿಯನ್ನು ಸಹ ನೀಡುತ್ತದೆ.
-ವಿನುತಾ ಕೆಯ್ಯೂರು
ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಕಾಲೇಜು ಪುತ್ತೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ