ಗೋಕರ್ಣ: ಅತಿ ವಿಶಿಷ್ಟ ತೀರ್ಥಹಳ್ಳಿ ಮಠದ ಜೀರ್ಣೋದ್ಧಾರದ ಕಾಲ ಸನ್ನಿಹಿತವಾಗಿದೆ. ಸಮರ್ಪಣಾ ಮನೋಭಾವದ ತಂಡ ಇದರ ಅಭಿವೃದ್ಧಿಗೆ ಟೊಂಕ ಕಟ್ಟಿದ್ದು, ಇಡೀ ಸಮಾಜ ಈ ಮಹತ್ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.
ಅಶೋಕೆಯ 'ಗುರುದೃಷ್ಟಿ'ಯಲ್ಲಿ ಅನಾವರಣ ಚಾತುರ್ಮಾಸ್ಯ ಕೈಗೊಂಡಿರುವ ಪರಮಪೂಜ್ಯರು ಏಳನೇ ದಿನದ ಪ್ರವಚನ ಅನುಗ್ರಹಿಸಿದರು.
ತೀರ್ಥಹಳ್ಳಿ ಮಠದ ಮಹತಿಯ ಅನಾವರಣಗೊಂಡಿದೆ. ಅಪೂರ್ವ ಸೇವೆಯನ್ನು ಸಲ್ಲಿಸಿದವರನ್ನು ಸಮಾಜ ಗುರುತಿಸಬೇಕು ಎನ್ನುವುದು ನಮ್ಮ ಅಪೇಕ್ಷೆ. ಇಂದು ವ್ಯಕ್ತಿ ಮತ್ತು ವಿಷಯದ ಎರಡನ್ನೂ ಅನಾವರಣ ಮಾಡಿದಂತಾಗಿದೆ. ಶ್ರೀಮಠಕ್ಕೆ ದೊಡ್ಡ ಸೇವೆ ಸಲ್ಲಿಸಿದ, ಶ್ರೀಮಠದ ಶ್ಯಾನುಭಾಗರಾಗಿ, ಶ್ರೀಮಠದ ಧ್ವನಿಯಾಗಿ ಕೆಲಸ ಮಾಡಿದ ಶಿಷ್ಯರನ್ನು ಅನಾವರಣ ಅತಿಥಿಯಾಗಿ ಆಹ್ವಾನಿಸಿರುವುದು ಅರ್ಥಪೂರ್ಣ ಎಂದರು.
ದೊಡ್ಡಗುರುಗಳು ತಮ್ಮ ಜೀವಿತಾವಧಿಯ ಬಹುಕಾಲವನ್ನು ತೀರ್ಥಹಳ್ಳಿ ಮಠದಲ್ಲಿ ಕಳೆದಿದ್ದಾರೆ. ಮೂಲಮಠ, ಪ್ರಧಾನ ಮಠವನ್ನು, ಪ್ರಾಚೀನ ಕೆಕ್ಕಾರು ಮಠ, ನಮ್ಮ ಪರಂಪರೆಯಲ್ಲಿ ವಿಲೀನವಾದ ಬಾನ್ಕುಳಿ ಮಠ, ಅವರೇ ಸ್ಥಾಪನೆ ಮಾಡಿದ ಮಾಣಿ ಮಠ ಎಲ್ಲವನ್ನೂ ಬಿಟ್ಟು ತೀರ್ಥಹಳ್ಳಿಯಲ್ಲಿ ನೆಲೆಸಿದರು. ಇಡೀ ಜೀವನವನ್ನೇ ಕಳೆದದ್ದು ಅದ್ಭುತ. ಒಂದೊಂದು ತಲೆಮಾರು ಒಂದೊಂದು ಕಡೆ ಸಾಗುತ್ತದೆ ಎನ್ನುವುದಕ್ಕೆ ಇದು ನಿದರ್ಶನ ಎಂದು ಹೇಳಿದರು.
ಮೊಟ್ಟಮೊದಲು ಗುರುದರ್ಶನವಾದದ್ದು ಕಿರೀಟಧಾರಿಗಳಾಗಿದ್ದಾಗ ಕರೂರು ಸೀಮೆಯಲ್ಲಿ. ತೀರ್ಥಹಳ್ಳಿ ಮಠದಲ್ಲಿ 36ನೇ ಪೀಠಾಧಿಪತಿಗಳ ಆಯ್ಕೆಗೆ ನಡೆದ ಸಭೆಗೆ ನಾವೂ ಸಾಕ್ಷಿಗಳಾಗಿದ್ದೆವು. ದೊಡ್ಡಗುರುಗಳ ಪರೀಕ್ಷೆಗೆ, ಆಶೀರ್ವಾದಕ್ಕೆ ಅನುಗ್ರಹಕ್ಕೆ ಪಾತ್ರರಾದ ಕ್ಷಣಗಳನ್ನು ನೆನಪಿಸಿಕೊಂಡರು. ಹೀಗೆ ಸರಣಿ ಪರೀಕ್ಷೆಗಳನ್ನು ದೊಡ್ಡಗುರುಗಳು ಮಾಡುತ್ತಿದ್ದ ಸಂದರ್ಭದಲ್ಲಿ ಅನೇಕ ಬಾರಿ ಭೇಟಿ ನೀಡಿದ್ದೆವು ಎಂದು ಸ್ಮರಿಸಿಕೊಂಡರು.
ನದಿ ತೀರ, ಪುಣ್ಯ ಕ್ಷೇತ್ರ, ಪುಣ್ಯಭೂಮಿ, ತಪಸ್ಸಿಗೆ ಯೋಗ್ಯವಾದ ಭೂಮಿ. ಒಂದೆಡೆ ಮಾಯಾಲೋಕ, ಇನ್ನೊಂದೆಡೆ ಬ್ರಹ್ಮಲೋಕ ಎಂಬಂತಿದೆ. ತೀರ್ಥಹಳ್ಳಿ ಪಟ್ಟಣದ ಹೃದಯಭಾಗದಲ್ಲೇ ಇದ್ದರೂ ತಪಸ್ಸಿಗೆ ಅತ್ಯಂತ ಪ್ರಶಸ್ತ ತಾಣ ಎಂದು ಬಣ್ಣಿಸಿದರು.
ತೀರ್ಥಹಳ್ಳಿ ಮಠಕ್ಕೆ ಹಳೆ ಚರಿತ್ರೆಯೂ ಇದೆ. ಹೊಸ ಇತಿಹಾಸವೂ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಶಿಷ್ಯರು ಬರದೇ ಇರುವ ಕಾರಣ, ಗುರುಗಳ ಆಗಮನ ಕಡಿಮೆಯಾಗಿದ್ದರಿಂದ ಸ್ವಲ್ಪ ಗ್ರಹಣ ತಲುಗಿದಂತಾಗಿದೆ. ಇದರ ಜೀರ್ಣೋದ್ಧಾರವಾಗಬೇಕು. ಇದಕ್ಕೆ ಸೀಮಿತ ಸಂಖ್ಯೆಯ ಶಿಷ್ಯರು ಟೊಂಕ ಕಟ್ಟಿ ನಿಂತಿರುವುದು, ದೃಢಸಂಕಲ್ಪ ತಾಳಿರುವುದು ಶ್ಲಾಘನೀಯ. ಇಡೀ ಸಮಾಜ ಇದಕ್ಕೆ ಕೈಜೋಡಿಸಬೇಕು. ಮುಂದಿಟ್ಟ ಹೆಜ್ಜೆ ಗುರಿ ಸೇರಿಸುತ್ತದೆ. ಹೊಸ ರೂಪ ಪಡೆದು ಇಡೀ ಸಮಾಜದ ಮುಂದೆ ಅನಾವರಣಗೊಳ್ಳುವ ಸುದಿನದ ಪ್ರತೀಕ್ಷೆಯಲ್ಲಿದ್ದೇವೆ ಎಂದರು.
ರಾಮಚಂದ್ರಾಪುರ ಮಂಡಲದ ತೀರ್ಥರಾಜಪುರ, ಭೀಮನಕೋಣೆ, ಪುರಪ್ಪೇಮನೆ, ಶಿವಮೊಗ್ಗ ಮತ್ತು ಕಾನುಗೋಡು ವಲಯಗಳ ಶಿಷ್ಯಭಕ್ತರು ಶನಿವಾರದ ಭಿಕ್ಷಾಸೇವೆ ನೆರವೇರಿಸಿದರು. ಹಲವು ವರ್ಷಗಳ ಕಾಲ ಶ್ರೀಮಠದ ಸೇವೆ ಸಲ್ಲಿಸಿದ ಮಾಜಿ ಶ್ಯಾನುಭಾಗರಾದ ಬಾಬು ನಾರಾಯಣ ಭಟ್ಟ ತೀರ್ಥಹಳ್ಳಿ ಮಠದ ಮಹತಿಗಳ ಅನಾವರಣ ಮಾಡಿದರು.
ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಹರಿಪ್ರಸಾದ್ ಪೆರಿಯಾಪು, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ವಿನಾಯಕ ಶಾಸ್ತಿç, ರಾಘವೇಂದ್ರ ಮಧ್ಯಸ್ಥ, ಮಹಾಮಂಡಲದ ಪದಾಧಿಕಾರಿಗಳಾದ ಕೇಶವ ಪ್ರಕಾಶ್ ಎಂ, ಪ್ರಸನ್ನ ಉಡುಚೆ, ಕಾರ್ಯದರ್ಶಿ ರುಕ್ಮಾವತಿ ರಾಮಚಂದ್ರ, ರಾಮಚಂದ್ರಾಪುರ ಮಂಡಲದ ಅಧ್ಯಕ್ಷರಾದ ಪ್ರಕಾಶ್ ಬೇರಾಳ, ಕಾರ್ಯದರ್ಶಿ ರಮೇಶ್ ಕಾನುನೋಡು ಮೋಹನ ಭಟ್ ಹರಿಹರ ಮತ್ತಿತರರು ಉಪಸ್ಥಿತರಿದ್ದರು. ಗಣೇಶ ಜೋಶಿ ಸಂಕೊಳ್ಳಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ