ಉಪಯುಕ್ತ ನ್ಯೂಸ್‌ನಲ್ಲಿ ಶ್ರೀ ಸತ್ಯಾತ್ಮತೀರ್ಥರ ಚಾತುರ್ಮಾಸ್ಯ ಅಮೃತೋಪದೇಶ ಮಾಲಿಕೆ

Upayuktha
0

ಚಾತುರ್ಮಾಸ ಭಗವಂತನ ಉಪಾಸನೆಯನ್ನು ಮಾಡಿ ಅವನ ಪ್ರೀತಿಗೆ ಪಾತ್ರರಾಗುವ ಕಾಲ ಚಾತುರ್ಮಾಸವೆಂದು ವರಾಹ ಪುರಾಣದಲ್ಲಿ ಭಗವಂತನೇ ಧರಣಿ ದೇವಿಗೆ ಹೇಳಿರುತ್ತಾನೆ. ಅದರಂತೆ ಚಾತುರ್ಮಾಸ ವ್ರತವನ್ನು ಲೌಕಿಕರು ಯತಿಗಳು ಎಲ್ಲರೂ ಆಚರಿಸುತ್ತಾರೆ.


ಸನ್ಯಾಸಿಗಳು ಚಾತರ್ಮಾಸ ಕಾಲದಲ್ಲಿ ಒಂದೇ ಊರಿನಲ್ಲಿ ಇರುವುದು ಸಾಮಾನ್ಯ. ಅದರಂತೆಯೇ ಪ್ರತಿ ವರ್ಷ ಸನ್ಯಾಸಿಗಳು ಒಂದು ಕ್ಷೇತ್ರದಲ್ಲಿ ಚಾತುರ್ಮಾಸವನ್ನು ಆಚರಿಸುತ್ತಾರೆ. ಈ ಬಾರಿ ಶ್ರೀಮದುತ್ತರಾದಿ ಮಠಾಧೀಶರಾದ ಪರಮಪೂಜ್ಯರಾದ ಶ್ರೀ ಸತ್ಯಾತ್ಮತೀರ್ಥರು ಮುಂಬೈ ಮಹಾನಗರದಲ್ಲಿ  ತಮ್ಮ 29ನೇ ಚಾತುರ್ಮಾಸ ಸಂಕಲ್ಪವನ್ನು 30-07-2024ರಂದು ಮುಂಬೈ ಮಹಾನಗರದ ಮುಳುಂದನ ಶ್ರೀ ಸತ್ಯಧ್ಯಾನ ವಿದ್ಯಾಪೀಠದಲ್ಲಿ ಮುಂಜಾನೆ ಮಾಡಿದರು. ಶ್ರೀಗಳು ಅಮೃತೋಪದೇಶವನ್ನು ಪ್ರತಿ ನಿತ್ಯವೂ ಅನುಗ್ರಹಿಸಲಿದ್ದಾರೆ, ಅದರ ಅಕ್ಷರ ರೂಪವನ್ನು ನಮ್ಮ ಓದುಗರಿಗೆ ಉಪಯುಕ್ತ ಡಿಜಿಟಲ್ ನ್ಯೂಸ್ ನಲ್ಲಿ ಬೆಂಗಳೂರಿನ ಶ್ರೀಮತಿ ಮಾಧುರಿ ದೇಶಪಾಂಡೆಯವರು ಕೊಡಲಿದ್ದಾರೆ.


ಪರಮ ಪೂಜ್ಯ ಶ್ರೀ ಸತ್ಯಾತ್ಮತೀರ್ಥರ ಕಿರು ಪರಿಚಯ:

ಪೂಜ್ಯರು ಗುತ್ತಲ ಮನೆತನದಲ್ಲಿ 1973ರ ಫಾಲ್ಗುಣ ಮಾಸ ಪಂಚಮಿಯಂದು ಪಂಡಿತ ಪೂಜ್ಯ ಶ್ರೀರಂಗಾಚಾರ್ಯ ಗುತ್ತಲ ಹಾಗೂ ಅವರ ಪತ್ನಿ ಸಾಧ್ವಿ ಶ್ರೀಮತಿ ರುಕ್ಮಿಣಿ ಬಾಯಿಯವರ ಜೇಷ್ಠ ಪುತ್ರರಾಗಿ ಜನಿಸಿ ಸರ್ವಜ್ಞಾಚಾರ್ಯ ಎಂಬ ಹೆಸರಿನಿಂದ ಬೆಳೆದು ಐದನೇ ವರ್ಷಕ್ಕೆ ಉಪನೀತರಾಗಿ ತಮ್ಮ ಮಾತಾಮಹ ಪಂಡಿತ ಪೂಜ್ಯ ಮಾಹುಲಿ ಗೋಪಾಲಾಚಾರ್ಯರ ವಿದ್ಯಾಪೀಠದಲ್ಲಿ ಶಾಸ್ತ್ರಾಧ್ಯಯನವನ್ನು ಮಾಡಿದರು. ತಮ್ಮ ಸುಧಾ ಮಂಗಳವನ್ನು 18ನೇ ವಯಸ್ಸಿನಲ್ಲಿಯೇ ಮಾಡಿ ನಿರಂತರ ಅಧ್ಯಯನ ನಿರತರಾಗಿ ತಮ್ಮ 24ನೇ ವಯಸ್ಸಿನಲ್ಲಿ ಗುರುಗಳಾದ ಪರಮಪೂಜ್ಯ ಶ್ರೀ ಸತ್ಯಪ್ರಮೋದ ತೀರ್ಥರ ಬಳಿ ಆಶ್ರಮವನ್ನು ಪಡೆದು ಶ್ರೀ ಸತ್ಯಾತ್ಮತೀರ್ಥರೆಂದು ನಾಮಕರಣಗೊಂಡು ಶ್ರೀಮೂಲ ರಾಮ ದಿಗ್ವಿಜಯರಾಮರ ಪೂಜೆಯನ್ನು ನಿತ್ಯ ಕೈಗೊಳ್ಳುತ್ತಾ ಅನೇಕ ಧಾರ್ಮಿಕ ಕಾರ್ಯ ಮಾಡುತ್ತ ಪರಮಾತ್ಮನ ಸೇವೆಯಲ್ಲಿ ನಿರತರಾಗಿದ್ದಾರೆ. 


ಸಮಾಜಕ್ಕೆ ಅನೇಕ ಪಂಡಿತರನ್ನು ಕೊಡುಗೆ ನೀಡುವ ಸತ್ಕಾರ್ಯವನ್ನು ಮಾಡುತ್ತಾ ಶ್ರೀ ಜಯತೀರ್ಥ ವಿದ್ಯಾಪೀಠವನ್ನು ನಡೆಸುತ್ತಾ, 14 ಬಾರಿ ಸ್ವತಃ ಪಾಠವನ್ನು ಹೇಳಿ ಸುಧಾ ಮಂಗಲವನ್ನು ಮಾಡಿ, ಮಧ್ವಸಿದ್ಧಾಂತದ ಪ್ರಸಾರ ಹಾಗೂ ಪ್ರಚಾರವನ್ನು ಮಾಡುತ್ತಾ ಬಂದಿರುತ್ತಾರೆ. ಅವರ 29 ವರ್ಷಗಳ ಚಾತುರ್ಮಾಸಲ್ಲಿ ಎರಡನೆಯ ಬಾರಿಗೆ ಮುಂಬೈ ಮಹಾನಗರದಲ್ಲಿ ಚಾತುರ್ಮಾಸವನ್ನು ಸಂಕಲ್ಪ ಮಾಡಿರುತ್ತಾರೆ.


ಶ್ರೀಮದಾಚಾರ್ಯರ ಪರಂಪರೆಯಲ್ಲಿ 42ನೇ ಯತಿಗಳಾದ ಶ್ರೀ ಸತ್ಯಾತ್ಮತೀರ್ಥರು, ಶಾಸ್ತ್ರ ಅಧ್ಯಯನ ಮಧ್ವಸಿದ್ದಾಂತದ ಪ್ರಚಾರಕರು ಮಾತ್ರವಲ್ಲದೇ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಎಲ್ಲ ಸದ್ಭಕ್ತರನ್ನು ಭಕ್ತಿ ಮಾರ್ಗದೆಡೆಗೆ ಕೊಂಡೊಯುತ್ತಲಿದ್ದಾರೆ ಮಾಡುತ್ತಲಿದ್ದಾರೆ. ಇಂದಿನ ಕಾಲದಲ್ಲಿ ಧರ್ಮವನ್ನು ಉಳಿಸಿ ಬೆಳೆಸುವ ಮಹಾನ್‌ ಕಾರ್ಯವನ್ನು ಮಾಡುತ್ತಿರುವ ಗುರುಗಳಿಗೆ ಜಾತಿ ಮತಗಳ ಬೇಧವಿಲ್ಲದೇ ಅನೇಕ ಶಿಷ್ಯವರ್ಗವಿದೆ. ಅವರ ಅಮೃತೋಪದೇಶವನ್ನು ಕೇಳಿ ತಮ್ಮ ಜೀವನವನ್ನು ಉತ್ತಮ ಮಾರ್ಗಕ್ಕೆ ಕೊಂಡೊಯ್ಯುತ್ತಿರುವ ಅನೇಕ ಯುವ ಶಿಷ್ಯರು ಇದ್ದಾರೆ.


ಈ ಬಾರಿಯ ಚಾತುರ್ಮಾಸದ ವಿಶೇಷ ಪೂಜ್ಯರು ಹುಟ್ಟಿ ಬೆಳೆದು ಅಧ್ಯಯನ ಮಾಡಿದ ಮುಂಬೈ ನಗರಿಯಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. 30-07-2024ರಿಂದ 18-09-2024ರವರೆಗೆ ಮುಂಬೈ ನಗರದಲ್ಲಿಯೇ ಇದ್ದು ದಿನ ನಿತ್ಯ ಪಾಠ ಪ್ರವಚನ ಪೂಜೆ, ಮುದ್ರಾಧಾರಣೆ ಮತ್ತು ವಿಶೇಷವಾದ ಕಾರ್ಯಕ್ರಮಗಳು ಅಂದರೆ ಪಂಡಿತರ ಪ್ರವಚನ ದಾಸವಾಣಿ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿದ್ವದ್ಗೋಷ್ಠಿಗಳು ಜ್ಞಾನ ಸತ್ರ, ವಿವಿಧ ಕಾರ್ಯಾಗಾರ, ಮಹಿಳಾ ಗೋಷ್ಠಿ ವಿಚಾರ ಸಂಕಿರಣ ಕಾರ್ಯಾಗಾರ ಆರೋಗ್ಯ ತಪಾಸಣೆ ಮೊದಲಾದ ಕಾರ್ಯಗಳು ನಡೆಯಲಿದ್ದು ಸದ್ಭಕ್ತರು ಅದರ ಪ್ರಯೋಜನವನ್ನು ಪಡೆಯಬೇಕು. ದಿನ ನಿತ್ಯದ ಪೂಜೆ ಮತ್ತು ಪ್ರವಚನಗಳು ಉತ್ತರಾದಿ ಮಠದ ಅಧಿಕೃತ ವೆಬ್ ಸೈಟ್ ಉತ್ತರಾದಿಮಠ ಅಧ್ಯಾತ್ಮವಾಣಿ ಯುಟ್ಯೂಬ್‌ ಚಾನೆಲ್ಲಿನಲ್ಲಿ ವೀಕ್ಷಿಸಬಹುದು.


-ಮಾಧುರಿ ದೇಶಪಾಂಡೆ, ಬೆಂಗಳೂರು



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top