ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ
ರಾಮ- ಲಕ್ಷ್ಮಣರು ಶಬರಿಯ ಆಶ್ರಮಕ್ಕೆ ಬಂದರು. ಅವರನ್ನು ಕಂಡೊಡನೆಯೇ ಶಬರಿಯು ಹರ್ಷಾಶ್ರುಗಳನ್ನು ಸುರಿಸಿಕೊಂಡು ಸ್ವಾಗತಿಸಿದಳು. ಸುಂದರವಾದ ಆಸನದಲ್ಲಿ ಕೂರಿಸಿ ರಾಮನ ಚರಣಾರವಿಂದಗಳಲ್ಲಿ ಹೊರಳಾಡಿದಳು. ಇಬ್ಬರ ಪಾದಗಳನ್ನು ತೊಳೆದು ಪಾದೋದಕವನ್ನು ತನ್ನ ತಲೆಗೆ ಪ್ರೋಕ್ಷಣೆ ಮಾಡಿದಳು. ಪಾದ್ಯವನ್ನಿತ್ತು, ತಿನ್ನಲು ತಾನು ಬಹಕಾಲದಿಂದ ರಾಮನಿಗಾಗಿಯೇ ಶೇಖರಿಸಿಟ್ಟಿದ್ಡ ಶುಚಿ-ರುಚಿಯಾದ ಹಣ್ಣುಗಳನ್ನು ಅರ್ಪಿಸಿದಳು. ಬಗೆಬಗೆಯ ಹೂವುಗಳಿಂದ ಪಾದಾರ್ಚನೆಯನ್ನು ಮಾಡಿದಳು. ಶಬರಿಯ ಆತಿಥ್ಯದಿಂದ ಶ್ರೀರಾಮನು ಸಂತೋಷಗೊಂಡ. ಶಬರಿಯು ಅವನಲ್ಲಿ- ನನ್ನ ಗುರುಗಳಾದ ಮತಂಗ ಮಹರ್ಷಿಗಳ ಸೇವೆಯನ್ನು ಅನೇಕ ವರ್ಷಗಳಿಂದ ಮಾಡುತ್ತಿದ್ದೆ. ಅವರು ಬ್ರಹ್ಮಲೋಕಕ್ಕೆ ಹೊರಟುಹೋದರು. ಹೋಗುವಾಗ ನನ್ನಲ್ಲಿ- ರಾವಣನ ವಧೆಗಾಗಿ, ದಶರಥನ ಮಗನಾಗಿ ಜನಿಸಿದ ಶ್ರೀರಾಮನು ಈಗ ಚಿತ್ರಕೂಟದಲ್ಲಿರುವನು. ಅವನು ಇಲ್ಲಿಗೆ ಬರಲಿರುವನು. ಅವನು ಬರಲಿರುವವರೆಗೆ ಏಕಾಗ್ರತೆಯಿಂದ ಅವನನ್ನು ಧ್ಯಾನಿಸುತ್ತಾ ಇರು. ಅವನು ಬಂದ ಬಳಿಕ ಅವನ ದರ್ಶನವಾದ ಮೇಲೆ ನಿನ್ನ ದೇಹವನ್ನು ಅಗ್ನಿಗೆ ಅರ್ಪಿಸಿ ಬ್ರಹ್ಮಪದವಿಯನ್ನು ಹೊಂದುವವಳಾಗು- ಎಂದು ಹರಸಿ ಹೋಗಿರುವರು. ಅಂದಿನಿಂದ ನಿನಗಾಗಿ ಕಾಯುತ್ತಿದ್ದೇನೆ. ನನ್ನ ಗುರುಗಳಿಗೂ ಸಿಗದಂತಹ ನಿನ್ನ ದರ್ಶನಭಾಗ್ಯವು ಇಂದು ದಾಸ-ದಾಸಿಯರ ಸಾಲಿನಲ್ಲಿ ಕಟ್ಟಕಡೆಯ ಸ್ಥಾನದಲ್ಲಿರುವ ನನಗಾಯಿತು. ಇದು ಹೇಗೆ ಸಾಧ್ಯವಾಯಿತು? ನಿನ್ನನ್ನು ಸ್ತುತಿಸಲರಿಯೆನು. ಈಗ ನಾನೇನು ಮಾಡಲಿ? ಅಪ್ಪಣೆ ಮಾಡು- ಎಂದು ಪ್ರಾರ್ಥಿಸಿದಳು.ಆಗ ರಾಮನು ಶಬರಿಗೆ ಭಕ್ತಿಯ ವಿಧಗಳನ್ನು ಮತ್ತು ಮಹತ್ತ್ವವನ್ನು ವಿವರಿಸಿದನು. -
"ಪುರುಷ-ಸ್ತ್ರೀ ಭೇದವಿಲ್ಲ. ಜಾತಿ, ಹೆಸರು, ಬ್ರಹ್ಮಚರ್ಯಾದಿ ಆಶ್ರಮಗಳು ನನ್ನನ್ನು ಪಡೆಯಲು ಮುಖ್ಯವಲ್ಲ. ನನ್ನನ್ನು ಪಡೆಯಲು ಭಕ್ತಿಯೇ ಮುಖ್ಯ. ಭಕ್ತಿಯ ಸಾಧನೆಗಳಲ್ಲಿ- ಸತ್ಪುರುಷರ ಸಹವಾಸ, ನನ್ನ ಲೀಲಾಕಥೆಗಳನ್ನು ಕೇಳುವುದು- ಹೇಳುವುದು, ನನ್ನ ಗುಣಗಳ ವರ್ಣನೆ, ಗೀತೆ-ಉಪನಿಷತ್ತುಗಳನ್ನು ವಿವರಿಸುವುದು, ಗುರುಸೇವನೆ, ಪವಿತ್ರವಾದ ನಡೆ-ನುಡಿಗಳುಳ್ಳ ಜೀವನ, ಸಾಂಗೋಪಾಂಗವಾಗಿ ನನ್ನ ಮಂತ್ರೋಪಾಸನೆ, ಅಹಿಂಸೆ- ಭಕ್ತರ ಸೇವೆ- ಶಮದಮಗಳಲ್ಲಿರುವುದು ಮತ್ತು ತತ್ತ್ವವಿಚಾರ - ಹೀಗೆ ಒಂಬತ್ತು ವಿಧಗಳು. ಇಷ್ಟು ವಿಧಗಳಲ್ಲಿ ಯಾವುದಾದರೂ ಒಂದನ್ನು ಪಾಲಿಸುತ್ತಿದ್ದರೆ ಪ್ರೇಮಲಕ್ಷಣಾ ಭಕ್ತಿಯು ಆವಿರ್ಭವಿಸುತ್ತದೆ. (ಭಾಗವತದಲ್ಲೂ ಇದರ ಉಲ್ಲೇಖವಿದೆ). ಇದರಿಂದ ನನ್ನ ಸ್ವರೂಪಾನುಭವವು ಉಂಟಾಗುತ್ತದೆ. ಅಂತಹ ಅನುಭವ ಹೊಂದಿದವನಿಗೆ ಈ ಜನ್ಮದಲ್ಲಿಯೇ ಮುಕ್ತಿ ಸಿಗುವುದು ಎಂದು ರಾಮನು ಹೇಳಿದನು. ಬಳಿಕ, ನೀನು ಇದಕ್ಕೆ ಅರ್ಹಳಾಗಿರುವುದರಿಂದಲೇ ನಿನ್ನನ್ನು ನೋಡಲೆಂದು ಬಂದೆ. ಈಗ ನೀನು ನನಗೆ ನನ್ನ ಪತ್ನಿ ಸೀತೆಯು ಎಲ್ಲಿರುವಳೆಂಬುದನ್ನು ಹೇಳು"- ಎಂದನು.
ಆಗ ಶಬರಿಯು ಸರ್ವಜ್ಞನಾದ ನಿನಗೆ ಲೋಕರೂಢಿಯಂತೆ ಸೀತೆಯ ಇರುವಿಕೆಯನ್ನು ಹೇಳುವೆನೆಂದು ಹೇಳಿ- ರಾವಣನು ಲಂಕೆಯಲ್ಲಿ ಸೀತೆಯನ್ನಿರಿಸಿದ ಸ್ಥಳವನ್ನು ಹೇಳಿದಳು. ಸೀತೆಯನ್ನು ಮರಳಿ ಪಡೆಯಲು ಪಂಪಾಸರೋವರದ ಪಕ್ಕದಲ್ಲಿರುವ ಸುಗ್ರೀವನ ಗೆಳೆತನವನ್ನು ಮಾಡಲು ಹೇಳಿದಳು.
ಶ್ರೀರಾಮನ ಸಂದರ್ಶನದ ಬಳಿಕ ಶಬರಿಯು ಅಗ್ನಿಪ್ರವೇಶವನ್ನು ಮಾಡಿ, ಮೋಕ್ಷವನ್ನು ಪಡೆದಳು.
ಅರಣ್ಯಕಾಂಡಕ್ಕೆ ಮಂಗಳ
==========
ಕಿಷ್ಕಿಂಧಾಕಾಂಡ
ರಾಮ- ಲಕ್ಷ್ಮಣರು ತಿಳಿನೀರಿನಿಂದ ಕಂಗೊಳಿಸುತ್ತಿರುವ ಪಂಪಾಸರೋವರದಲ್ಲಿ ಮಿಂದು, ನೀರ್ಗುಡಿದು, ದಣಿವಾರಿಸಿ, ಅದರ ದಡದಲ್ಲಿರುವ ಮರಗಳ ನೆರಳಿನಲ್ಲಿ ನಡೆದುಕೊಂಡು ಬರುತ್ತಿರುವುದನ್ನು ಋಷ್ಯಮೂಕ ಪರ್ವತದಲ್ಲಿದ್ದ ಸುಗ್ರೀವನು ಕಂಡನು. ಅಣ್ಣ ವಾಲಿಯ ಭಯವಿರುವ ಅವನು ಅವರಿಬ್ಬರ ಬಗೆಗೆ ಸಂದೇಹವನ್ನು ತಾಳಿದನು. ಹನುಮಂತನನ್ನು ಕರೆದು ಅವರ ಪರಿಚಯ, ಬಂದಿರುವ ಉದ್ದೇಶಗಳನ್ನು ತಿಳಿದುಕೊಂಡು ಬರಲು ಹೇಳಿದ. ಹನುಮಂತನು ವಟು ವೇಷದಲ್ಲಿ ರಾಮನ ಬಳಿಗೆ ಬಂದನು.
ವಟುವೇಷದ ಹನುಮನು- ಹೇ! ಪುರುಷಶ್ರೇಷ್ಠರೇ, ನೀವಿಬ್ಬರು ಯಾರು? ಸೂರ್ಯತೇಜಸ್ಸಿನಿಂದ ಕಂಗೊಳಿಸುವ ನೀವು ಎಲ್ಲಿಯವರು? ಭೂಭಾರವನ್ನಿಳಿಸಿ ಭಕ್ತರನ್ನು ರಕ್ಷಿಸಲು ಅವತರಿಸಿರುವ ಮಾನವ ರೂಪದ ದೇವರಂತಿರುವ ನೀವಿಬ್ಬರು ಇಲ್ಲಿಗೆ ಯಾಕೆ ಬಂದಿರಿ? ಭಗವಂತನೇ ಕ್ಷತ್ರಿಯ ಕುಮಾರರಾಗಿ ಅವತರಿಸಿರುವಂತೆ ಕಾಣುವ ನೀವು ಎಲ್ಲಿಂದ ಬಂದಿರಿ? ನರ- ನಾರಾಯಣರೇ ಮನುಷ್ಯರಾಗಿರುವಂತೆ ಕಾಣುವ ನಿಮ್ಮ ಪರಿಚಯವನ್ನು ಮಾಡಿಕೊಡುವಿರಾ? ಎಂದು ಕೇಳಿದನು. ಹನುಮನ ವಿನಯದಿಂದ ಕೂಡಿದ ಪ್ರಬುದ್ಧ ಭಾಷೆಯ ನುಡಿಗಳನ್ನು ಕೇಳಿ ರಾಮನಿಗೆ ಅವನ ಮೇಲೆ ಸ್ನೇಹಭಾವವು ಉಕ್ಕಿತು. ಲಕ್ಷ್ಮಣನಲ್ಲಿ ಹನುಮನ ಕುರಿತು ಮೆಚ್ಚುಗೆಯ ನುಡಿಗಳನ್ನಾಡಿದನು. ಹನುಮನು ಕೇಳಿದ ಎಲ್ಲ ಪ್ರಶ್ನೆಗಳಿಗೆ ರಾಮನು ಉತ್ತರಿಸಿ, ಅವನ ಪರಿಚಯವನ್ನು ಕೇಳಿದನು.
ಮುಂದುವರಿಯುವುದು....
- ವಿಶ್ವ ಉಂಡೆಮನೆ, ಬೆಳ್ತಂಗಡಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ