ಪುತ್ತೂರು: ನರಿಮೊಗರಿನ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಆರೋಗ್ಯ ಭಾರತಿ ಪುತ್ತೂರು ಜಿಲ್ಲೆ ಇವರ ಸಹಯೋಗದಲ್ಲಿ ಎರಡು ದಿನಗಳ ಮನೆ ಮದ್ದು ಶಿಬಿರವು ಜು.21-22ರಂದು ನಡೆಯಿತು.
ಕು. ಸುದೀಕ್ಷಾ ಮತ್ತು ಕು.ಸುನಿಧಿ ಇವರು ಪ್ರಾರ್ಥಿಸಿದರು. ಪ್ರಸಾದಿನೀ ಅಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ ಅರೋಗ್ಯ ಭಾರತಿ, ಪುತ್ತೂರು ಜಿಲ್ಲೆ ಇದರ ಉಪಾಧ್ಯಕ್ಷ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಇವರು ಪ್ರಾಸ್ತಾವಿಕವಾಗಿ ಮಾತಾಡಿ, ಅತಿಥಿಗಳನ್ನು ಪರಿಚಯಿಸಿದರು. ಆಸ್ಪತ್ರೆಯ ಆಡಳಿತ ಮಂಡಳಿ ಸದಸ್ಯ ಮುಖ್ಯ ಜೀವವಿಮಾ ಸುಲಹೆಗಾರ ಎಂ.ಎಸ್. ಭಟ್ ಅತಿಥಿಗಳನ್ನು ಪುಷ್ಪಗುಚ್ಛ ನೀಡಿ ಗೌರವಿಸಿದರು.
ಮುಖ್ಯ ಅತಿಥಿ ಅರೋಗ್ಯ ಭಾರತಿಯ ರಾಷ್ಟ್ರೀಯ ಸಚಿವ ಹಾಗೂ ರಾಷ್ಟೀಯ ಯೋಗ ಪ್ರಮುಖ್ ಡಾ ಟಿ. ಎನ್.ಮಂಜುನಾಥ್ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅರೋಗ್ಯ ಭಾರತಿ ಅಧ್ಯಕ್ಷ ಹಾಗೂ ಖ್ಯಾತ ನರಮಾನಸಿಕ ತಜ್ಞ ಡಾ. ಗಣೇಶ್ ಪ್ರಸಾದ್ ಮುದ್ರಜೆ ಇವರು ಅಧ್ಯಕ್ಷತೆ ವಹಿಸಿದ್ದರು. "ಡಾ. ಬಂಗಾರಡ್ಕ ಇವರ ಪ್ರಸಾದಿನೀ ಆಯುರ್ನಿಕೇತನ ಮಾಡುವ ಸಮಾಜಮುಖೀ ಕಾರ್ಯ ಎಲ್ಲರಿಗೂ ಒಂದು ಮಾದರಿ" ಎಂದು ಅಭಿನಂದಿಸಿದರು.
ಅರೋಗ್ಯ ಭಾರತಿ ಕಾರ್ಯದರ್ಶಿ ಗಣೇಶ್ ಭಟ್ ಮುವ್ವಾರು ಇವರು ವಂದಿಸಿದರು. ನಂತರ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಸಂಪನ್ಮೂಲ ವ್ಯಕ್ತಿಯಾದ, ಜಪಾನ್, ಮಾರಿಷಸ್, ಯು.ಕೆ, ಫಿಲಿಪೈನ್ಸ್, ರಷ್ಯಾ ದೇಶಗಳಲ್ಲಿ ಆಯುರ್ವೇದ ಮತ್ತು ಯೋಗದ ಕುರಿತು ಭಾರತದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ ಡಾ ಟಿ. ಎನ್.ಮಂಜುನಾಥ್ ಆರೋಗ್ಯಕ್ಕಾಗಿ ಅನುಸರಿಸಬೇಕಾದ ದಿನಚರಿಯ ಬಗ್ಗೆ ಮಾತನಾಡಿದರು. ಪ್ರಾರ್ಥನೆ, ಆಹಾರ, ವ್ಯಾಯಾಮ, ಅಭ್ಯಂಗಗಳ ನಿಯಮಗಳನ್ನು ವಿವರಿಸಿದರು. "ಮೊದಲಿನ ಕಾಲದಲ್ಲಿ ಗಡಿಯಾರ ಇರಲಿಲ್ಲ, ಆದರೆ ಅವರಿಗೆ ಸಮಯ ಇತ್ತು. ಈಗ ಗಡಿಯಾರ ಇದೆ, ಆದರೆ ಯಾರ ಬಳಿಯೂ ಸಮಯವಿಲ್ಲ" ಎಂದು ಮಾರ್ಮಿಕವಾಗಿ ನುಡಿದರು.
ಶಿಬಿರದಲ್ಲಿ ತಯಾರಿಸುವ ಮನೆಮದ್ದುಗಳ ಬಗ್ಗೆ ಸೂಚನೆಗಳನ್ನು ನೀಡಿ, ಡಾ ಟಿ.ಎನ್. ಮಂಜುನಾಥ್ ನಿರ್ದೇಶನದಲ್ಲಿ, ಶಿಬಿರಾರ್ಥಿಗಳಿಂದಲೇ ಔಷಧ ತಯಾರಿಕೆಯ ಪ್ರಾತ್ಯಕ್ಷಿಕೆ ನಡೆಸಲಾಯಿತು. ತಯಾರಿಸಿದ ಮನೆ ಮದ್ದುಗಳ ಮಾದರಿಗಳನ್ನು ಎಲ್ಲರಿಗೂ ವಿತರಿಸಲಾಯಿತು. ಕಣ್ಣಿನ ತೊಂದರೆಗಳಿಗೆ ಮಾಡುವಂತಹ ನೇತ್ರಸೇಕ, ಪಿಂಡೀ ಚಿಕಿತ್ಸಾ ವಿಧಾನಗಳ ಪ್ರಾತ್ಯಕ್ಷಿಕೆಯನ್ನು ಆಯುರ್ವೇದ ತಜ್ಞ ವೈದ್ಯ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ನೀಡಿದರು.
"ಕೊಲೆಸ್ಟರಾಲ್ ಸಂಪೂರ್ಣ ಹಾಳು ಎಂಬ ತಪ್ಪು ಅಭಿಪ್ರಾಯ ಇವತ್ತು ಪ್ರಚಾರ ಪಡೆಯುತ್ತಿದೆ. ಅದಕ್ಕೆ ಅನವಶ್ಯಕ ಆಧುನಿಕ ಔಷಧಗಳ ಚಟಕ್ಕೆ ಬಲಿಯಾಗುವ ಬದಲು ಹಸಿಬೆಳ್ಳುಳ್ಳಿ, ಅರಸಿನ, ತುಳಸಿ, ಶುಂಠಿ ಇತ್ಯಾದಿಗಳನ್ನು ನಿಯಮಿತವಾಗಿ ಸೇವಿಸಿ ಹೃದಯದ ಅರೋಗ್ಯ ಕಾಪಾಡಿಕೊಳ್ಳಬಹುದು. ಹೃದಯದ ಕ್ರಿಯಾತ್ಮಕ ವಿಕೃತಿಗಳಿಗೆ, ತುರ್ತು ಸಂದರ್ಭ ಹೊರತು ಪಡಿಸಿ ಪರಿಣಾಮಕಾರಿ ಚಿಕಿತ್ಸೆಗಳಿವೆ" ಎಂದರು.
ಎರಡನೇ ದಿನದ ಶಿಬಿರವು ಕಾಂಚನಮಾಲಾ ಸಿಂದೂರಮನೆ ಇವರು ದೀಪ ಬೆಳಗಿಸುವುದರ ಮೂಲಕ ಆರಂಭಗೊಂಡಿತು. ಶಿಬಿರಾರ್ಥಿಗಳಾದ ಸದಾಶಿವ ಭಟ್ ನವಚೇತನ, ಅಶೋಕ್ ಭಟ್ ಮುಕ್ವೆ, ವಿದ್ಯಾರ್ಥಿನಿ ಮಾನಸ ಕೂಡುರಸ್ತೆ, ಆಯುರ್ವೇದ ಹಾಗೂ ಯೋಗ ತಜ್ಞೆ ಡಾ. ಚೇತನಾ ಗಣೇಶ್ ಪ್ರಸಾದ್, ವೆಂಕಟೇಶ್ವರ ಭಟ್ ಪಟ್ಟೆ, ಪ್ರಶಾಂತಿ ನವೀನ ಕೃಷ್ಣ ಶಾಸ್ತ್ರಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕಾರ್ಯದರ್ಶಿ ಗಣೇಶ್ ಮುವ್ವಾರು ಸ್ವಾಗತಿಸಿದರು. ಅರೋಗ್ಯ ಭಾರತಿ ವಿಭಾಗ ಸಂಯೋಜಕ ಪುರುಷೋತ್ತಮ ದೇವಸ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದು ರೋಗ ಬಾರದಂತೆ ತಡೆಯುವ ಬಗ್ಗೆ ಅರಿವು ಮೂಡಿಸುವ ಅರೋಗ್ಯ ಭಾರತಿಯ ಉದ್ದೇಶವನ್ನು ವಿವರಿಸಿದರು. ಡಾ. ಗಣೇಶ್ ಪ್ರಸಾದ್ ಮುದ್ರಜೆ ಅಧ್ಯಕ್ಷತೆ ವಹಿಸಿ ಮಾತಾಡುತ್ತಾ "ಇಂತಹ ಶಿಬಿರಗಳು ಜನಮಾನಸದಲ್ಲಿ ತರುವ ಪರಿವರ್ತನೆ ಮತ್ತು ಶಿಬಿರದ ಪಾಠಗಳನ್ನು ಆಚರಣೆಗೆ ತರುವ ಪ್ರಯತ್ನ ಮಾಡಬೇಕು. ಪುತ್ತೂರಿನ ನರಿಮೊಗರಿನಂತಹ ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಆಯುರ್ವೇದ ಮತ್ತು ಯೋಗದ ಮೂಲಕ ಸಾವಿರಾರು ರೋಗಿಗಳಿಗೆ ಆರೋಗ್ಯದಾನ ಮಾಡುವುದು ಒಂದು ಮಾದರಿ ಕಾರ್ಯ" ಎಂದರು.
ಡಾ ಟಿ. ಎನ್. ಮಂಜುನಾಥ್ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪ್ರಸಾದಿನೀ ಆಯುರ್ವೇದ ಆಸ್ಪತ್ರೆಯ ಆಡಳಿತ ವ್ಯವಸ್ಥಾಪಕಿ ಡಾ. ಶ್ರುತಿ ಎಂ.ಎಸ್. ಔಷಧ ತಯಾರಿಕೆಯಲ್ಲಿ ಸಹಕರಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು.
ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯು ಆಯುರ್ವೇದ ಚಿಕಿತ್ಸೆಗೆ ಪ್ರಖ್ಯಾತಿ ಹೊಂದಿದ್ದು ಪಂಚಕರ್ಮ ಚಿಕಿತ್ಸೆ ನೀಡುವ ಕೆ.ಪಿ.ಎಂ.ಇ. ನೋಂದಾಯಿತ ಇ.ಎಸ್.ಐ ಸರ್ಟಿಫಿಕೇಟ್ ಹೊಂದಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ