ಅವನಿಗೆ ಕುಟುಂಬದ ಜೊತೆಗೆ ಬಿಂದಾಸ್ ಆಗಿರುವ ಅವಕಾಶಗಳು ಸಿಗುವುದಿಲ್ಲ. ಇರುವ ಆಸೆ ಆಕಾಂಕ್ಷೆಗಳನ್ನು ಪೂರೈಸಲು ಹೊರಟರೆ ದೇಶ ಕಾಯೋದು ಯಾರು ಎಂಬ ಪ್ರಬುದ್ಧ ಪ್ರಶ್ನೆ ಕೇಳುತ್ತಾನೆ. ಅವನಿಗೆ ಖುಷಿ ತರುವುದು ಒಂದೇ ವಿಚಾರ. ವೀರಾವೇಶದಿಂದ ಹೋರಾಡಿದ ಮೇಲೆ ತಿರಂಗಾ ಬಾನಂಗಳದಲ್ಲಿ ಹಾರುತ್ತದೆಯಲ್ಲಾ.... ಆಗ ಅವನು ಜೀವನದಲ್ಲಿ ಸಾರ್ಥಕತೆಯ ಭಾವ ಕಾಣುತ್ತಾನೆ. ಖುಷಿಯಿಂದ 'ಭಾರತ್ ಮಾತಾ ಕೀ ಜೈ' ಎಂದು ಘೋಷಣೆ ಕೂಗುತ್ತಾನೆ.
ಸೇನೆಗೆ ಸೇರಿದರೆ ಹಾಗೆಯೇ! ಕಾಡುವ ಮನೆಯವರ ನೆನಪನ್ನು ಮರೆ ಮಾಡಿ, ವರ್ತಮಾನದ ಕಡೆಗೆ ಪೂರ್ಣ ಗಮನ ಹರಿಸಬೇಕು. ಮನಸ್ಸಿನಲ್ಲಿ ಕುಸಿಯುವ ಆತ್ಮವಿಶ್ವಾಸವನ್ನು ಮತ್ತೆ ಮತ್ತೆ ಗುಡ್ಡೆ ಹಾಕಬೇಕು. ಮೈ ಕೊರೆಯುವ ಚಳಿಯಲ್ಲೂ ಎದೆಯುಬ್ಬಿಸಿ ನಡೆಯಬೇಕು. ಬಂದೂಕು ಹಿಡಿದು ಗಡಿ ಕಾಯಲು ಹೊರಟವನು ದೇಶಕ್ಕಾಗಿ ತನ್ನನ್ನು ಸವೆಸಿ, ಉಸಿರು ನಿಲ್ಲುವ ಮೊದಲು ಪದಕಗಳು ತನ್ನ ಎದೆಯನ್ನು ಅಲಂಕರಿಸುವ ಕನಸು ಕಾಣುತ್ತಾನೆ.
ಹೇಳಿ ಕೇಳಿ ಅದು ಕಾರ್ಗಿಲ್! ಕಾಶ್ಮೀರದ ಶ್ರೀನಗರದಿಂದ 205 ಕಿ.ಮೀ. ದೂರದಲ್ಲಿರುವ ಹಿಮಾಲಯದ ಬೆಟ್ಟಗುಡ್ಡಗಳಿಂದ ಆವೃತವಾದ ಪ್ರದೇಶ. ವಿಶ್ವದ ಅತ್ಯಂತ ಎತ್ತರದಲ್ಲಿರುವ ಯುದ್ಧ ಭೂಮಿ ಸಿಯಾಚಿನ್‌ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 1 ಇದೇ ಕಾರ್ಗಿಲ್ ಮೂಲಕ ಹಾದು ಹೋಗುತ್ತದೆ. ಇದೇ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಇದೆ. ಚಳಿಗಾಲದಲ್ಲಿ ಮೈನಸ್ ಡಿಗ್ರಿಗೆ ಇಳಿಯುವ ತಾಪಮಾನದಿಂದಾಗಿ ಇಲ್ಲಿ ಗಡಿ ಕಾಯುವುದು ಭಾರತಕ್ಕೆ ಸವಾಲಿನ ಕೆಲಸ. ಚಳಿಗಾಲದಲ್ಲಿ ಭಾರತೀಯ ಸೈನಿಕರು ಮತ್ತು ಪಾಕ್ ಸೈನಿಕರು ಇಲ್ಲಿಂದ ಸ್ಥಳಾಂತರಗೊಳ್ಳುತ್ತಾರೆ. ಚಳಿಗಾಲ ಮುಗಿದ ಬಳಿಕ ಇಲ್ಲಿಗೆ ಮತ್ತೆ ಗಡಿ ಕಾಯುವ ಕೆಲಸ ಮುಂದುವರೆಸುತ್ತಾರೆ.
ಆದರೆ 1999 ರ ಚಳಿಗಾಲದಲ್ಲಿ ಇದರ ಲಾಭವನ್ನು ಪಡೆಯಲು ಪಾಕ್ ಸೈನಿಕರು ಭಾರತದ ಪ್ರಮುಖ ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತು.
ಆರಂಭದಲ್ಲಿ ಪಾಕಿಸ್ತಾನೀಯರು ಭಾರತದ ಒಳಗೆ ಸುಮಾರು ದೂರ ನುಸುಳಿದ್ದು ಅದು ಭಾರತೀಯ ಸೇನೆಯ ಅರಿವಿಗೆ ಬಂದಿರಲಿಲ್ಲ. ಕಾಶ್ಮೀರದ ಕೆಲವು ಕುರಿಗಾಹಿ ಜನರು ಭಾರತೀಯ ಸೇನೆಗೆ ವಿಷಯ ಮುಟ್ಟಿಸಿದ ಕೂಡಲೇ ಸೇನಾಧಿಕಾರಿಗಳು, ಐದು ಯೋಧರನ್ನು ಗಸ್ತು ತಿರುಗಲೆಂದು ಕಳುಹಿಸಿಕೊಟ್ಟರು. ಆದರೆ ಪಾಕ್ ಸೈನಿಕರು ಅವರನ್ನು ಚಿತ್ರಹಿಂಸೆ ನೀಡಿ ಕೊಲ್ಲುತ್ತಾರೆ. ಪಾಕ್ ಸೈನಿಕರ ಈ ಅನುಚಿತ ಕೆಲಸಕ್ಕೆ ಪ್ರತ್ಯುತ್ತರ ನೀಡಲು ಭಾರತದ ಸೇನೆಯ ನೆಲ-ಜಲ- ವಾಯುಪಡೆಗಳು ಜೊತೆಯಾಗುತ್ತವೆ. 1999ರಲ್ಲಿ ಕಾರ್ಗಿಲ್ ಕದನವು ಆರಂಭವಾದದ್ದು ಹೀಗೆ !
ಮೇ 3ರಂದು ಆರಂಭವಾದ ಕಾರ್ಯಾಚರಣೆ ನಿಜಕ್ಕೂ ದೊಡ್ಡ ಸವಾಲಾಗಿತ್ತು. ಪರ್ವತ ಶ್ರೇಣಿಯ ಮೇಲಿರುವ ಪಾಕ್ ಸೈನಿಕರನ್ನು ಕೆಳಗಿನಿಂದ ಎದುರಿಸುವುದು ಸುಲಭವಾಗಿರಲಿಲ್ಲ. ತುಸು ಚಲನೆ ಕಂಡರೂ ಮೇಲಿನಿಂದ ಗುಂಡಿನ ಸುರಿಮಳೆ ಆಗುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ವಾಯುಪಡೆ ಮೇ 26ರಿಂದ ಭೂಸೇನೆಯ ಜೊತೆಗೆ ನಿಂತಿತು.
ಭೂಸೇನೆಗೆ ವಾಯುಪಡೆಗೆ ಸಾಥ್ ಕೊಟ್ಟ ಬೆನ್ನಲ್ಲೇ ನೌಕಾಪಡೆ ತಾನೂ ಆಪರೇಷನ್ ವಿಜಯಕ್ಕೆ ಕೈ ಜೋಡಿಸಿತು. ‘ಆಪರೇಶನ್ ತಲವಾರ್’ ಎಂಬ ಹೆಸರಿನಲ್ಲಿ ಅರಬ್ಬೀ ಸಮುದ್ರದಲ್ಲಿ ತನ್ನ ಹಿಡಿತ ಹೆಚ್ಚಿಸಿಕೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಪೆಟ್ರೋಲಿಯಂ ಉತ್ಪನ್ನಗಳು ತಲುಪದಂತೆ ಮಾಡಿತು. ನೌಕಾಪಡೆ ಮಾಡಿದ ಅನಿರೀಕ್ಷಿತ ದಾಳಿ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ಕೊಟ್ಟಿತು.
ಇತ್ತ ವಾಯುಪಡೆಯ ಆಪರೇಷನ್ ಸಫೇದ್ ಸಾಗರ್ ಪಾಕ್ ಸೈನಿಕರನ್ನು ಘಾಸಿಗೊಳಿಸಿತ್ತು. ಭೂಸೇನೆಯ ಸತತ ಪ್ರಯತ್ನದಿಂದ ಟೋಲೋಲಿಂಗ್, ಟೈಗರ್ ಹಿಲ್ಸ್ ,ದ್ರಾಸ್ ಮತ್ತು ಇತರ ಭೂಭಾಗಗಳನ್ನು ವಶಪಡಿಸಿತು. ಎರಡು ತಿಂಗಳುಗಳ ಕಾರ್ಯಾಚರಣೆಯ ಮೂಲಕ ಬಹುತೇಕ ಭಾಗಗಳು ಭಾರತವು ಪುನಃ ತನ್ನ ತೆಕ್ಕೆಗೆ ತೆಗೆದುಕೊಂಡ ಮೇಲೆ ಅಂತಾರಾಷ್ಟ್ರೀಯ ಮಟ್ಟದ ಒತ್ತಡದಿಂದಾಗಿ ಪಾಕಿಸ್ತಾನ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿತು.
1999ರ ಕಾರ್ಗಿಲ್ ಕದನದಲ್ಲಿ ಭಾರತದ ಗೆಲುವನ್ನು ಜುಲೈ 26ರಂದು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಈ ಯುದ್ಧದಲ್ಲಿ ತಾಯಿ ಭಾರತಿ ಕಳೆದುಕೊಂಡದ್ದು 527 ಪರಾಕ್ರಮಿ ಪುತ್ರರನ್ನು! ಜಗತ್ತಿನ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ಒಂದಾದ ಕಾರ್ಗಿಲ್ ನಲ್ಲಿ ನಡೆದ ಕದನದಲ್ಲಿ ಭಾರತ ಕಂಡ ವಿಜಯವು ಐತಿಹಾಸಿಕ ಮಾತ್ರವಾಗಿರದೆ, 527 ಯೋಧರ ಬಲಿದಾನದ ಫಲವಾದ್ದರಿಂದ ಇಡೀ ದೇಶ ಭಾವನಾತ್ಮಕವಾಗಿ ಕಂಬನಿ ಮಿಡಿಯಿತು.
ಯೋಧರು ಪ್ರಾಣ ಒತ್ತೆ ಇಟ್ಟು ದೇಶಕ್ಕಾಗಿ ಹೋರಾಟ ಮಾಡಿ ಕೊನೆಗೆ ಶಿಖರದ ಮೇಲೆ ತಿರಂಗಾ ಹಾರಿಸಿ ವಿಜಯವನ್ನು ಆಚರಿಸಿಕೊಂಡ ಆ ಅಪೂರ್ವ ಕ್ಷಣಗಳನ್ನು ದೂರದರ್ಶನದ ಮೂಲಕ ಇಡೀ ದೇಶ ಬೆರಗಾಗಿ ನೋಡಿತ್ತು. “Only the best of friends and the worst of enemies visit us.” ಎಂಬ ಯೋಧನೊಬ್ಬನ ಮಾತು ಎಷ್ಟು ಸತ್ಯ ಎಂದು ಆ ಕದನ ಸಾಬೀತು ಪಡಿಸಿತ್ತು.
- ಸುಲಕ್ಷಣಾ ಶರ್ಮಾ
ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ