ಭಾವ ಪ್ರಧಾನ ಬರವಣಿಗೆಗೆ ಒತ್ತು ನೀಡಿದ್ದ ಪ್ರೊ. ಎನ್. ಜಿ. ಪಟವರ್ಧನ್
ಉಜಿರೆ: ಪ್ರೊ. ಎನ್. ಜಿ. ಪಟವರ್ಧನ್ ಅವರು ಬುದ್ಧಿ ಪ್ರಧಾನ ಸಾಹಿತ್ಯಕ್ಕಿಂತ ಹೆಚ್ಚಾಗಿ ಭಾವ ಪ್ರಧಾನ ಬರವಣಿಗೆಗೆ ಹೆಚ್ಚು ಒತ್ತು ನೀಡಿದ್ದರು. ಅವರು ತಮ್ಮ ಸಾಹಿತ್ಯಕ್ಕಿಂತಲೂ ಹೆಚ್ಚಾಗಿ ಅವರ ವ್ಯಕ್ತಿತ್ವದಿಂದಲೇ ಎಲ್ಲರ ಗಮನ ಸೆಳೆಯುತ್ತಿದ್ದರು ಎಂದು ಎನ್.ಜಿ. ಪಟವರ್ಧನ್ ಅವರ ಪುತ್ರ, ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಆಯುರ್ವೇದ ಪ್ರಾಧ್ಯಾಪಕ ಡಾ. ಕಿಶೋರ್ ಪಟವರ್ಧನ್ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ಜು.29ರಂದು ಆಯೋಜಿಸಿದ್ದ ‘ಪ್ರೊ. ಎನ್.ಜಿ. ಪಟವರ್ಧನ್ ಅವರ ಸಾಹಿತ್ಯ ಮತ್ತು ವ್ಯಕ್ತಿತ್ವ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳನ್ನು ದ್ದೇಶಿಸಿ ಮಾತನಾಡಿದರು. ಕಾಲೇಜಿನ ಕನ್ನಡ ವಿಭಾಗ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
“ಪಟವರ್ಧನ್ ಅವರು ಜನಸಾಮಾನ್ಯರ ಬದುಕಿನ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. ಅವರ ಕೃತಿಗಳಲ್ಲಿ ಭಾವನೆಗಳಿಗೆ ಪ್ರಾಧಾನ್ಯವಿದೆ. ಸವಾಲುಗಳನ್ನು ಹಸನ್ಮುಖರಾಗಿ ಎದುರಿಸಬೇಕು. ಪಟವರ್ಧನ್ ಅವರು ಬ್ರೈನ್ ಟ್ಯೂಮರ್’ನಿಂದ ಬಳಲುತ್ತಿರುವಾಗಲೂ ತನ್ನ ಮನೋಧೈರ್ಯವನ್ನು ಕಳೆದುಕೊಂಡಿರಲಿಲ್ಲ. ಅವರ ವ್ಯಕ್ತಿತ್ವವನ್ನು ನಾನು ಇಷ್ಟಪಡುತ್ತೇನೆ” ಎಂದು ಅವರು ಹೇಳಿದರು.
ಎನ್. ಜಿ. ಪಟವರ್ಧನ್ ಅವರು ಸಾಹಿತ್ಯ ಪ್ರೇಮಿ. ಅವರು ಬರೆದಿರುವ ಲೇಖನ, ಕಾದಂಬರಿ, ಕಥೆ, ಚುಟುಕು, ಕವನ ಕುರಿತು ವಿಮರ್ಶಾ ಕೃತಿ ತರಬಹುದು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., “ಉತ್ತಮ ಗಾಯಕ, ಕೃಷಿಕ, ಶಿಕ್ಷಕ, ಆಟಗಾರ, ಸಾಹಿತಿಯೂ ಆಗಿದ್ದ ವ್ಯಕ್ತಿ ಎಂದರೆ ಅದು ಪ್ರೊ. ಎನ್. ಜಿ. ಪಟವರ್ಧನ್. ಅವರ ಬಹುಮುಖ ಪ್ರತಿಭೆಯಿಂದ ವಿದ್ಯಾರ್ಥಿಗಳು ಪ್ರೇರಣೆ ಹೊಂದಬೇಕು. ಎಸ್.ಡಿ.ಎಂ. ಕಾಲೇಜಿನಲ್ಲಿ ಸುಮಾರು 30 ವರ್ಷ ಕನ್ನಡ ವಿಭಾಗದಲ್ಲಿ ಸೇವೆ ಸಲ್ಲಿಸಿದ ಅವರ ಮಾರ್ಗದರ್ಶನದಲ್ಲಿ ಸಾಗಿದ ವಿದ್ಯಾರ್ಥಿಗಳು ಉತ್ತಮ ಪ್ರಜೆಯಾಗಿ ಹೊರಹೊಮ್ಮಿದ್ದಾರೆ” ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, ಎನ್. ಜಿ. ಪಟವರ್ಧನ್ ಅವರ ಆತ್ಮವಿಶ್ವಾಸ, ಸರಳ ವ್ಯಕ್ತಿತ್ವವನ್ನು ಇಂದಿನ ಯುವಸಮೂಹ ಅಳವಡಿಸಿಕೊಳ್ಳಬೇಕು. ಎಷ್ಟೇ ಕಷ್ಟವಿದ್ದರೂ ಸಕಾರಾತ್ಮಕ ಚಿಂತನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ, ಎಸ್.ಡಿ.ಎಂ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಎಂ.ಪಿ. ಶ್ರೀನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ ಕೆ.ಎನ್. ಸ್ವಾಗತಿಸಿದರು. ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಯದುಪತಿ ಗೌಡ ವಂದಿಸಿದರು. ವಿದ್ಯಾರ್ಥಿನಿ ಹಿಮಾಲಿ ಎಂ. ಪಿ. ನಿರೂಪಿಸಿದರು.
ಬಳಿಕ, ಉಪನ್ಯಾಸ ಕಾರ್ಯಕ್ರಮ ನಡೆಯಿತು. ‘ಪ್ರೊ. ಎನ್. ಜಿ. ಪಟವರ್ಧನ್ ಅವರ ವೃತ್ತಿ ಮತ್ತು ವ್ಯಕ್ತಿತ್ವ’ ಕುರಿತು ಉಜಿರೆಯ ಶ್ರೀ ಧ. ಮಂ. ವಸತಿಯುತ ಪ.ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಟಿ. ಕೃಷ್ಣಮೂರ್ತಿ ಹಾಗೂ ‘ಪ್ರೊ. ಎನ್. ಜಿ. ಪಟವರ್ಧನ್ ಅವರ ಸಾಹಿತ್ಯ ಸಾಧನೆ’ ಕುರಿತು ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ದಿವಾಕರ ಕೆ. ವಿಚಾರ ಮಂಡಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ