ತುಳುವರ ಸಂಸ್ಕೃತಿ, ಆಚಾರ ವಿಚಾರ ವೈಶಿಷ್ಟ್ಯ ಪೂರ್ಣ: ಕರುಣಾಕರ ಎಂ.ಶೆಟ್ಟಿ

Upayuktha
0

ಸುರತ್ಕಲ್ ಬಂಟರ ಸಂಘದಿಂದ "ಆಟಿದ ಪೊರ್ಲು“, ಅಭಿನಂದನಾ ಕಾರ್ಯಕ್ರಮ



ಸುರತ್ಕಲ್:
ಬಂಟರ ಸಂಘ (ರಿ) ಸುರತ್ಕಲ್ ಮತ್ತು ಮಹಿಳಾ ವೇದಿಕೆ, ಬಂಟರ ಸಂಘ ಸುರತ್ಕಲ್ ಇದರ ಸಹಯೋಗದಲ್ಲಿ "ಆಟಿದ ಪೊರ್ಲು ಮತ್ತು ಅಭಿನಂದನಾ ಸಮಾರಂಭ" ಭಾನುವಾರ ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಸುರತ್ಕಲ್ ಬಂಟರ ಸಂಘದ ಕಟ್ಟಡ ಸಮಿತಿಯ ಚೇರ್ ಮ್ಯಾನ್ ವಿಕೆ ಸಮೂಹ ಸಂಸ್ಥೆಯ ಅಧ್ಯಕ್ಷ, ಉದ್ಯಮಿ ಕರುಣಾಕರ ಎಂ.ಶೆಟ್ಟಿ ಮಧ್ಯಗುತ್ತು ಅವರು ಬಿತ್ತನೆಯಾದ ಗದ್ದೆಯ ಭತ್ತದ ಪೈರುಗಳಿಗೆ ಯಾರ ದೃಷ್ಟಿಯೂ ಬೀಳದಿರಲಿ, ಕಳೆರೋಗ ಬಾರದಿರಲಿ ಎಂದು ಗದ್ದೆಗೆ ಕಾಪು ಇಟ್ಟು  ಪಾಡ್ದನದ ಜೊತೆಗೆ ನೇಜಿಯನ್ನು ಹಾರಿಸುವ ಮೂಲಕ ಉದ್ಘಾಟಿಸಲಾಯಿತು.


ಬಳಿಕ ಮಾತಾಡಿದ ಅವರು, “ನಾವು ಸಣ್ಣವರಿದ್ದಾಗ ಆಟಿ ತಿಂಗಳಲ್ಲಿ ಹಲಸಿನ ಬೀಜ, ನೈಸರ್ಗಿಕವಾಗಿ ಸಿಗುವ ಸೊಪ್ಪು ತರಕಾರಿ ತಿಂದು ಜೀವನ ಸಾಗಿಸುತ್ತಿದ್ದೆವು. ಆಗ ಜೀವನ ನಿರ್ವಹಣೆ ಕಷ್ಟಕರವಾಗಿತ್ತು. ನಾವು ಇದನ್ನು ಮರೆಯಬಾರದು. ಆಟಿ ದಿನದ ಪರಿಕಲ್ಪನೆ ಜೀವನ ಪದ್ಧತಿ ಅಂದಿನ ದಿನಕ್ಕೆ ವಾತಾವರಣಕ್ಕೆ ಅನುಗುಣವಾಗಿ ಅಳವಡಿಸಿಕೊಂಡಿದ್ದರು. ಅರೋಗ್ಯಪೂರ್ಣ ಜೀವನಕ್ಕೆ ಮಳೆಗಾಲದ ಆಟಿ ಜೀವನ ಪೂರಕವಾಗಿತ್ತು. ನಮ್ಮ ಮುಂದಿನ ಪೀಳಿಗೆಗೆ ತುಳುವರ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ತಿಳಿಸಬೇಕಾಗಿದೆ. ತುಳುನಾಡಿನ ಆಚಾರ ವಿಚಾರ ವೈಶಿಷ್ಟ್ಯಪೂರ್ಣವಾಗಿದ್ದು ಇಂತಹ ಕಾರ್ಯಕ್ರಮ ಹೀಗೆಯೇ ನಡೆಯುತ್ತಿರಲಿ“ ಎಂದು ಶುಭ ಹಾರೈಸಿದರು. 


ಆಟಿ ತುಳುವರಿಗೆ ವಿಶೇಷ ತಿಂಗಳು: ಐಕಳ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ,“ಸುರತ್ಕಲ್ ಬಂಟರ ಸಂಘ ಯಾವುದೇ ಕಾರ್ಯಕ್ರಮದಲ್ಲಿ ಸದಾ ಮೊದಲು. ಇವತ್ತು ಇಂತಹ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದೆ. ಆಟಿ ತುಳುವರಿಗೆ ವಿಶೇಷ ತಿಂಗಳು. ಹಿಂದಿನ ಕಾಲದಲ್ಲಿ ಆಟಿ ತಿಂಗಳೆಂದರೆ ತುಳುವರ ಕಷ್ಟಕಾಲವಾಗಿತ್ತು. ಆದರೆ ಇಂದು ನಾವು ಆಟಿ ಆಚರಣೆಯನ್ನು ಮರೆಯುತ್ತಿದ್ದೇವೆ. ಮುಂದಿನ ನಮ್ಮ ಪೀಳಿಗೆಗೂ ನೆನಪಲ್ಲಿ ಉಳಿಯುವಂತಹ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಲಿ“ ಎಂದು ಶುಭ ಹಾರೈಸಿದರು.


ದಿಕ್ಸೂಚಿ ಭಾಷಣ ಮಾಡಿದ ಅಭಿಮತ ಟಿವಿಯ ಆಡಳಿತ ನಿರ್ದೇಶಕಿ ಡಾ.ಮಮತಾ ಪಿ.ಶೆಟ್ಟಿ ಅವರು, “ಆಟಿ ತಿಂಗಳಲ್ಲಿ ಪ್ರಕೃತಿದತ್ತವಾಗಿ ಸಿಗುವ ಸೊಪ್ಪು ತರಕಾರಿಗಳಲ್ಲಿ ಅರೋಗ್ಯ ಕಾಪಾಡುವ ಶಕ್ತಿಯಿದೆ, ರೋಗ ನಿರೋಧಕ ಶಕ್ತಿಯನ್ನು ನಮ್ಮಲ್ಲಿ ಹೆಚ್ಚಿಸುವ ಔಷಧಿ ಗುಣಗಳಿವೆ, ಹೀಗಾಗಿ ನಾವೆಲ್ಲರೂ ಆಷಾಢ ಮಾಸದ ಈ ವಿಶೇಷ ಆಚರಣೆಯನ್ನು ನಮ್ಮ ಮಕ್ಕಳಿಗೂ ಕಲಿಸಿ ಕೊಡೋಣ“ ಎಂದರು.

ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಚಂದ್ರಿಕಾ ಹರೀಶ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಸಚ್ಚಿದಾನಂದ ರೈ, ಉದ್ಯಮಿ ಪ್ರಸಾದ್ ಕುಮಾರ್ ಶೆಟ್ಟಿ, ಮಹಿಳಾ ವೇದಿಕೆಯ ಅಧ್ಯೆಕ್ಷೆ ಭವ್ಯ ಎ.ಶೆಟ್ಟಿ,  ಉಪಾಧ್ಯಕ್ಷೆ ಸರೋಜ ತಾರಾನಾಥ್ ಶೆಟ್ಟಿ, ಕೋಶಾಧಿಕಾರಿ ಜ್ಯೋತಿ ಪ್ರವೀಣ್ ಶೆಟ್ಟಿ, ಸಂಘದ ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ಮಾಜಿ ಅಧ್ಯಕ್ಷ ಸುಧಾಕರ್ ಎಸ್. ಪೂಂಜಾ ಮತ್ತಿತರರು ಉಪಸ್ಥಿತರಿದ್ದರು. 


ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಶ್ವನಾಥ ಶೆಟ್ಟಿ ಕಟ್ಲ ಬಾಳಿಕೆ (ಕೃಷಿ) ಉಮೇಶ್ ದೇವಾಡಿಗ (ಸಮಾಜ ಸೇವೆ), ಅನ್ನು ಪಡ್ರೆ (ಪೌರ ಕಾರ್ಮಿಕ), ಸೇಸಮ್ಮ ಸುಭಾಷಿತ ನಗರ (ನಾಟಿ ವೈದ್ಯೆ) ಅವರನ್ನು ಸನ್ಮಾನಿಸಲಾಯಿತು. 


ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು.  ಸುಧಾ ಚಂದ್ರಶೇಖರ  ಶೆಟ್ಟಿ, ಸವಿತಾ ಭವಾನಿಶಂಕರ್ ಶೆಟ್ಟಿ, ಅನೂಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆಶಾ ಶೆಟ್ಟಿ ಶಿಬರೂರು ಪ್ರಾರ್ಥನೆಗೈದರು. ಮಹಿಳಾ ವೇದಿಕೆಯ ಕಾರ್ಯದರ್ಶಿ ಸುಜಾತ ಶೆಟ್ಟಿ ಕೃಷ್ಣಾಪುರ ಧನ್ಯವಾದ ಸಮರ್ಪಿಸಿದರು. ಬಳಿಕ ಸಂಘದ ಮಹಿಳಾ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ‌ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top