ಕವನ: ದ್ವಿಪದಿಗಳಲ್ಲ ನಿತ್ಯಸತ್ಯಪದಿಗಳು..!

Upayuktha
0


ಕಂಡ ಕಂಡದ್ದನೆಲ್ಲ ಖಂಡಿಸುವುದೇಕೆ.?

ದೃಷ್ಟಿ ಬದಲಿಸು, ಸೃಷ್ಟಿ ಬದಲಾದೀತು.!


ಕಿಡಿ ಕಡುನುಡಿಗಳಾಡಿ ಕೀಳಾಗುವುದೇಕೆ.?

ಭಾವ ಬದಲಿಸು, ಭಾಷ್ಯ ಬದಲಾದೀತು.!


ನಡೆ ನಡೆದು ವೃಥಾ ನಿಂದಿಸುವುದೇಕೆ?

ದಿಕ್ಕು ಬದಲಿಸು, ದೆಸೆ ಬದಲಾದೀತು.!


ಸುಖಾಸುಮ್ಮನೆ ಅದೃಷ್ಟ ಹಳಿಯುವುದೇಕೆ?

ಹಾದಿ ಬದಲಿಸು, ಹಣೆಬರಹ ಬದಲಾದೀತು.!


ತೆಗಳಿಕೆಯೆದುರು ತಲೆ ತಗ್ಗಿಸುವುದೇಕೆ.?

ನಡೆ ಬದಲಿಸು, ನುಡಿ ಬದಲಾದೀತು.!


ಹೀನರ ಸಂಗಡದಿ ಹಾಳು ವ್ಯವಹಾರವೇಕೆ?

ಸಂಗ ಬದಲಿಸು, ಸಂಸ್ಕಾರ ಬದಲಾದೀತು.!


ಪದೇ ಪದೇ ಪರದಾಡಿ ಪರಿತಪಿಸುವುದೇಕೆ?

ಗುರಿ ಬದಲಿಸು, ಗಮ್ಯ ಬದಲಾದೀತು.!


ಬೇಡದ ವಾದ ವಾಗ್ವಾದದಿಂದ ವಿವಾದವೇಕೆ?

ಧೋರಣೆ ಬದಲಿಸು, ದಾಟಿ ಬದಲಾದೀತು.!


ಮೌಢ್ಯ ಜಾಢ್ಯಗಳಿಂದ ಮೂಢನಾಗುವುದೇಕೆ?

ವಿಚಾರ ಬದಲಿಸು, ಆಚಾರ ಬದಲಾದೀತು.!


ಅಜ್ಞಾನ ಕಟ್ಟಳೆಗಳಿಂದ ಅಪಚಾರವೆಸಗುವುದೇಕೆ?

ಆಶಯ ಬದಲಿಸು, ಅನುಷ್ಟಾನ ಬದಲಾದೀತು.!


ಹಠ ಮೊಂಡುತನದಿಂದ ಕುರುಡಾಗುವುದೇಕೆ?

ಮನಸು ಬದಲಿಸು, ಕನಸು ಬದಲಾದೀತು.!


ಅಹಂ ಆತ್ಮರತಿಗೆ ಬಾಳ ಬರಡಾಗಿಸುವುದೇಕೆ?

ಬೆಳಕ ಆರಾಧಿಸು, ಬದುಕು ಬದಲಾದೀತು.! 


- ಎ.ಎನ್.ರಮೇಶ್.ಗುಬ್ಬಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top