ದೇವರು ಇದ್ದಾನೆಯೇ, ಇಲ್ಲವೇ ಎಂಬ ಜಿಜ್ಞಾಸೆ

Upayuktha
0


ರಡು ದಶಕಗಳ ಹಿಂದೆ ನನ್ನ ಅತ್ತೆಯವರ ಚಿಕಿತ್ಸೆಗಾಗಿ ಬೆಂಗಳೂರಿಗೆ ನಾವು ಹೋಗಿದ್ದ ಸಮಯ. ಬೆಂಗಳೂರಿನ ಆಸ್ಪತ್ರೆಯೊಂದರ ಹೊರಾವರಣದಲ್ಲಿ ರೋಗಿಗಳು ಕುಳಿತುಕೊಳ್ಳುವ ಕಡೆ ಫಲಕ ಒಂದರಲ್ಲಿ ಇಂಗ್ಲೀಷಿನ ಕವಿತೆಯೊಂದನ್ನು ಓದಿದ ನೆನಪು. ಅಂತರ್ಜಾಲದಲ್ಲಿ ಆ ಕವಿತೆಯನ್ನು ಬಹಳಷ್ಟು ಬಾರಿ ಹುಡುಕಿದ್ದೇನೆ ಆದರೆ ದೊರೆತಿಲ್ಲ.... ಮನುಷ್ಯ ಜೀವನಕ್ಕೆ ನಿನ್ನೊಂದಿಗೆ ನಾನಿದ್ದೇನೆ ಎಂಬ  ಭರವಸೆಯನ್ನು ನೀಡುವ ಆ ಕವಿತೆಯ ತಾತ್ಪರ್ಯ ಇಂತಿದೆ. 


ದೇವರನ್ನು ಬಲವಾಗಿ ನಂಬುವ ಆ ವ್ಯಕ್ತಿ ದೇವರು ಯಾವಾಗಲೂ ತನ್ನೊಂದಿಗೆ ಇರುತ್ತಾನೆ ಎಂದು ಭಾವಿಸಿದ್ದನು. ಅಂತೆಯೇ ಎಲ್ಲರಿಗೂ ದೇವರ ಇರುವಿನ ಕುರಿತು ಬಲವಾಗಿ ಪ್ರತಿಪಾದಿಸುತ್ತಿದ್ದನು.


ಅದೊಮ್ಮೆ ಆತನಿಗೆ ಕಡು ಸಂಕಟದ ಕಾಲ. ಅತ್ಯಂತ ತಾಪತ್ರಯದಿಂದ ಬದುಕನ್ನು ಸಾಗಿಸಿದ ಆತ ದೇವರಲ್ಲಿ ಮೊರೆಯಿಟ್ಟ.ದೇವರು ಆತನಿಗೆ ಪ್ರತ್ಯಕ್ಷವಾಗಿ... "ನಾನು ಯಾವಾಗಲೂ ನಿನ್ನೊಂದಿಗೆ ಇರುವೆ ನೋಡು ಮಗು" ಎಂದು ಹೇಳಿ ಆತನ ತಲೆ ಸವರಿದನು.


ಆ ವ್ಯಕ್ತಿಯ ಚಿತ್ತ ಭಿತ್ತಿಯಲ್ಲಿ ಹಿಂತಿರುಗಿ ನೋಡಿದಾಗ ಆತನ ಜೀವನದ ಎಲ್ಲಾ ಘಳಿಗೆಗಳಲ್ಲಿಯೂ ಆತನ ಹೆಜ್ಜೆಗಳಿಗೆ ಜೊತೆಯಾಗಿ ದೇವರ ಹೆಜ್ಜೆಗಳು ಮೂಡಿಬಂದಿದ್ದವು.... ಆದರೆ ಏನಾಶ್ಚರ್ಯ!!

 ಆತನ ಕಡು ಕಷ್ಟದ ದಿನಗಳಲ್ಲಿ ಒಂದೇ ಜೊತೆ ಹೆಜ್ಜೆಯ ಗುರುತು ಆತನಿಗೆ ಗೋಚರಿಸಿತು.


ಭಕ್ತನಿಗೆ ದೇವರ ಮೇಲೆ ವಿಪರೀತ ಕೋಪ ಬಂತು ಅಂತೆಯೇ ಆತ  ದೇವರನ್ನು ಕುರಿತು "ದೇವ, ನಿನ್ನನ್ನು ಅತಿಯಾಗಿ ನಂಬಿದ ನನ್ನನ್ನು, ನನ್ನ ಕಡುಕಷ್ಟದ ದಿನಗಳಲ್ಲಿ ನೀನು ಕೈಬಿಟ್ಟೆಯಲ್ಲ ಎಂದು ಆರ್ತನಾಗಿ ಕೇಳಿದನು. ಅದಕ್ಕೆ ನಸುನಕ್ಕ ದೇವರು "ಕಂದ,ನಾನೆಲ್ಲಿ ನಿನ್ನ ಕೈಬಿಟ್ಟಿದ್ದೇನೆ" ಎಂದು ಕೇಳಿದನು. 


ತುಸು ಮುನಿಸಿನಿಂದಲೇ.... ದೇವಾ! ನೋಡು ಉಳಿದೆಲ್ಲ ದಿನಗಳಲ್ಲಿ ನನ್ನ ಜೊತೆಯಲ್ಲಿ ನಿನ್ನೆರಡು ಹೆಜ್ಜೆ ಗುರುತುಗಳು ಇದ್ದರೆ, ನನ್ನ ಕಡು ಕಷ್ಟದ ದಿನಗಳಲ್ಲಿ ಕೇವಲ ನನ್ನ ಹೆಜ್ಜೆಗಳು ಮಾತ್ರ ಇವೆ. ಇದು ನಿನಗೆ ನ್ಯಾಯವೇ ಎಂದು ಕೇಳಿದನು.


 ಇದೀಗ ದೇವರು ಮಗು ಕೋಪಿಸಿಕೊಳ್ಳಬೇಡ, ಅವು ನನ್ನ ಹೆಜ್ಜೆಗಳು.... ನಿನ್ನ ಕಡು ಕಷ್ಟದ ದಿನಗಳಲ್ಲಿ ನಾನು ನಿನ್ನನ್ನು ಎತ್ತಿಕೊಂಡಿದ್ದೇನೆ, ಅಂದರೆ ನಿನ್ನ ಎಲ್ಲಾ ಕಷ್ಟಗಳನ್ನು ಸಹಿಸಿ ನೀನು ಮುಂದುವರೆಯಲು ಸಹಾಯವಾಗುವಂತೆ ನಿನ್ನನ್ನು ಎತ್ತಿಕೊಂಡು ನಾನು ಸಾಗಿದ್ದೇನೆ " ಎಂದು ಹೇಳಿದ. 


 ನೋಡಿದಿರಾ ಸ್ನೇಹಿತರೆ, ತಾನು ನಂಬಿದ ದೇವರು ತನ್ನ ಕಷ್ಟದ ದಿನಗಳಲ್ಲಿ ತನ್ನೊಂದಿಗೆ ಇರುವುದಲ್ಲದೆ ತನ್ನೆಲ್ಲ ಕಷ್ಟದ ಭಾರವನ್ನು ತಾನೇ ಹೊತ್ತುಕೊಂಡಿದ್ದಾನೆ ಎಂಬ ಭಾವ ಮನುಷ್ಯನಿಗೆ ಕೊಡುವ ಧೈರ್ಯ, ಬದುಕಿನ ಕುರಿತಾದ ಭರವಸೆಗಳನ್ನು ಇನ್ನಾರು ಕೊಡಲಾರರು ಅಲ್ಲವೇ. ಅಂತೆಯೇ ಆ ದೇವರನ್ನು ಜಗದ್ರಕ್ಷಕ, ಜಗನ್ನಿಯಾಮಕ, ಸೃಷ್ಟಿಕರ್ತ ಎಂದು ಹೇಳುವುದು. ಭಕ್ತ ಪರಿಪಾಲಕ ಎಂದು ಪೂಜಿಸುವುದು.


ಆಸ್ತಿಕರಿಗೆ ದೇವರು ಭಕ್ತಿಯ ವ್ಯಕ್ತ ರೂಪವಾದರೆ, ದೇವರನ್ನು ನಂಬದ ಜನರು ಕೂಡ ಈ ಜಗತ್ತನ್ನು ಆಳುವ ಯಾವುದೋ ಒಂದು ಅಗೋಚರ ಶಕ್ತಿ ಇದೆ ಎಂದು  ಬಲವಾಗಿ ಒಪ್ಪಿಕೊಳ್ಳುತ್ತಾರೆ.


 ಹಣತೆ ಸೂರ್ಯನ ಬೆಳಕಿಗೆ ಸಮನಾಗಲಾರದು ನಿಜ ಆದರೆ ತಾನು ಬೆಳಗುವ ಜಾಗದಲ್ಲಿನ ಅಂಧಕಾರವನ್ನು ಹೋಗಲಾಡಿಸುತ್ತದೆ. ಹಾಗೆಯೇ ದೇವರು ನಮ್ಮೆಲ್ಲ ಕಷ್ಟಗಳನ್ನು ಪರಿಹರಿಸಲಾರನಾದರೂ ಕಷ್ಟಗಳನ್ನು ಎದುರಿಸಲು ನಮಗೆ ಬೆಂಬಲವಾಗಿ ನಿಂತು ಕಾಯುತ್ತಾನೆ ಎಂಬ ಭಾವವೇ ಸಾಕು ಕಗ್ಗತ್ತಲೆಯ ಹಾದಿಯಲ್ಲಿ ಭರವಸೆಯ  ಹೊಂಗಿರಣವೊಂದು ಮೂಡಲು. ವಿಜ್ಞಾನ ಮತ್ತು ಆಧ್ಯಾತ್ಮಗಳು ಮನುಷ್ಯ ಜೀವನದ ಎರಡು ಕಣ್ಣುಗಳಿದ್ದಂತೆ. ಅವೆರಡು ಒಂದೇ ನಾಣ್ಯದ ಎರಡು ಮುಖಗಳು..... ಏನಂತೀರಾ??


 -ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್




 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors
Mandovi Motors
To Top