ಭಾರತೀಯ ಚಿಂತನೆಗಳ ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಅಂಬಿಕಾ ಶಿಕ್ಷಣ ಸಂಸ್ಥೆ

Upayuktha
0

ಆತ್ಮವಿಜ್ಞಾನಗಳ ಮೂಲಕ ಪುತ್ತೂರಿನಲ್ಲಿ ಶಿಕ್ಷಣ ಕ್ರಾಂತಿ




ಪುತ್ತೂರು: ಸಾಮಾನ್ಯವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ಶಿಕ್ಷಣ ಮಂಡಳಿಗಳು, ವಿಶ್ವವಿದ್ಯಾನಿಲಯಗಳಿಂದ ಉಕ್ತವಾದ ಪಠ್ಯವಿಚಾರಗಳ ಬಗೆಗೆ ಚರ್ಚೆ ನಡೆಯುವುದಿದೆ. ಪಠ್ಯಕ್ರಮ ಆಧಾರಿತ ನಾನಾ ಬಗೆಯ ಪ್ರಬಂಧ ಮಂಡನೆಗಳು, ಚರ್ಚಾಗೋಷ್ಠಿಗಳು ನಡೆಯುತ್ತಿರುತ್ತವೆ. ಹಾಗಾಗಿ ಸ್ವಾತ್ರಂತ್ರ್ಯಾನಂತರ ತರದ ಭಾರತದಲ್ಲಿ ಶಿಕ್ಷಣ ಸಂಸ್ಥೆಯೆಂದರೆ ಹೀಗೆಯೇ ಎಂಬ ಕಲ್ಪನೆ ಆಳವಾಗಿ ಬೇರೂರಿದೆ. ಇಂತಹ ಸಂದರ್ಭದಲ್ಲಿ ಈ ಎಲ್ಲಾ ಪಾಶ್ಚಿಮಾತ್ಯ ಶಿಕ್ಷಣ ಕಲ್ಪನೆಗಳನ್ನು ತಲೆಕೆಳಗು ಮಾಡಿ, ಒಂದು ರೀತಿಯಲ್ಲಿ ಪ್ರವಾಹದ ವಿರುದ್ಧ ಈಜಿದಂತೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿ ರೂಪುಗೊಂಡಿರುವ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಶಿಕ್ಷಣ ತಜ್ಞರ ಬೆರಗಿಗೆ ಕಾರಣವಾಗಿವೆ.


ಭಾರತೀಯತೆಯ ಆಧಾರದಲ್ಲಿ ಶಿಕ್ಷಣ ಒದಗಿಸುವುದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಬಹುದೊಡ್ಡ ಹಂಬಲ. ನಾವೇಕೆ ಪಾಶ್ಚಿಮಾತ್ಯ ಶೈಲಿಯನ್ನು ಕುರುಡಾಗಿ ಅನುಸರಿಸಬೇಕೆಂಬ ಆಲೋಚನೆ ಹಾಗೂ ಭಾರತದಲ್ಲಿನ ಅಮೋಘ ವಿಚಾರಗಳನ್ನು ಮಕ್ಕಳು ಕಲಿತರೆ ಜಾಗತಿಕವಾದ ಸಾಧನೆ ಮಾಡಬಲ್ಲರೆಂಬ ಅದಮ್ಯ ವಿಶ್ವಾಸ ಈ ಸಂಸ್ಥೆಗಳದ್ದು. ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಿದರೆ, ಭಾರತೀಯತೆಯೊಂದಿಗೆ ಬೆಳೆಸಿದರೆ ನಾಳಿನ ದಿನಗಳಲ್ಲಿ ಅವರೆಲ್ಲ ಈ ಮಣ್ಣಿನ ಸಾರ್ಥಕ ಮಕ್ಕಳೆನಿಸುತ್ತಾರೆ ಹಾಗೂ ಆ ರೀತಿಯಲ್ಲಿ ಅವರನ್ನು ರೂಪಿಸುವ ಹೊಣೆ ಶಿಕ್ಷಣ ಸಂಸ್ಥೆಗಳದ್ದೆಂಬ ನಂಬಿಕೆಯೊಂದಿಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ಸ್ಪಷ್ಟ ನಿದರ್ಶನ ಇತ್ತೀಚೆಗೆ ಶಿಕ್ಷಕರಿಗಾಗಿ ನಡೆದ ‘ಬೋಧನಾ ಸಾಮರ್ಥ್ಯ ಉತ್ತೇಜನ ಶಿಬಿರ’. ಈ ಶಿಬಿರವನ್ನು ಯಾರೋ ಶಿಕ್ಷಣ ತಜ್ಞರು ಬಂದು ಆಯೋಜಿಸಿದ್ದಾರೆ ಎಂದುಕೊಂಡರೆ ಅದು ತಪ್ಪು. ಇದನ್ನು ನಡೆಸಿಕೊಟ್ಟವರು ಬೆಂಗಳೂರಿನ ಖ್ಯಾತ ಸಮ್ಮೋಹಿನಿ ತಜ್ಞ, ಕುಂಡಲಿನಿ ಯೋಗಗುರು ಡಾ. ರಾಮಚಂದ್ರ ಗುರೂಜಿ. ಭಾರತೀಯ ಆತ್ಮವಿಜ್ಞಾನದಲ್ಲಿ ಅಡಕವಾಗಿರುವ ಸಂಗತಿಗಳನ್ನು ಶಿಕ್ಷಕರಿಗೆ ತಿಳಿಸಿಕೊಟ್ಟು ತನ್ಮೂಲಕ ಶಿಕ್ಷಕರನ್ನು ಭಾರತೀಯ ಶಿಕ್ಷಣ ಪಸರಿಸುವ ಸಂಪನ್ಮೂಲಗಳನ್ನಾಗಿಸುವ ಉದ್ದೇಶ ಈ ಶಿಬಿರದ ಹಿಂದೆ ಅಡಗಿತ್ತು. 


ವಿದ್ಯಾರ್ಥಿಗಳನ್ನು ತರಗತಿಯೊಳಗೆ ಲಘು ಸಮ್ಮೋಹನಕ್ಕೊಳಪಡಿಸಿದರೆ ಹೇಗೆ ಪಠ್ಯವಿಚಾರಗಳು, ದೇಸೀಯ ಚಿಂತನೆಗಳು ಅವರ ಮನಸ್ಸಿನೊಳಗೆ ಹಾಸುಹೊಕ್ಕಿ ಶಾಶ್ವತವಾಗಿಬಿಡುತ್ತವೆ ಎಂಬುದನ್ನು ಡಾ.ಗುರೂಜಿ ಪ್ರಾತ್ಯಕ್ಷಿಕೆ ಮೂಲಕ ಕಾಣಿಸಿಕೊಟ್ಟು ಶಿಕ್ಷಕರನ್ನು ಭಾರತೀಯ ಜ್ಞಾನದೆಡೆಗೆ ಹುರಿದುಂಬಿಸಿದರು. ಒಬ್ಬ ವಿದ್ಯಾರ್ಥಿಗೆ ಇರಬಹುದಾದ ಮಾನಸಿಕ ಗೊಂದಲ, ಪರೀಕ್ಷಾ ಭಯ, ಅಂತರಂಗದ ತಲ್ಲಣಗಳನ್ನು ಭಾರತೀಯ ಪ್ರಾಚೀತನ ವಿಜ್ಞಾನ ಯಾವ ರೀತಿಯಲ್ಲಿ ತೊಡೆದುಹಾಕುತ್ತದೆ ಎಂಬುದನ್ನು ತೋರಿಸಿಕೊಡುವುದೇ ಈ ಶಿಬಿರದ ಉದ್ದೇಶವಾಗಿತ್ತು. ಇಂದಿನ ದಿನಗಳಿಗೆ ಅಗತ್ಯವಾಗಿರುವ ಆಧುನಿಕ ಶಿಕ್ಷಣವನ್ನು ಬೋಧಿಸುತ್ತಲೂ ಭಾರತೀಯತೆಯನ್ನು ಉದ್ದೀಪನಗೊಳಿಸುವ ಸಿದ್ಧಿಯನ್ನು ಶಿಕ್ಷಕರು ಕರಗತಮಾಡಿಕೊಳ್ಳುವ ನೆಲೆಯಲ್ಲಿ ಈ ಶಿಬಿರ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ದೇಶಪ್ರೇಮ ಹಾಗೂ ಭಾರತೀಯತೆಯ ಜಾಗೃತಿಯ ನೆಲೆಯಲ್ಲಿ ಯಾವುದೇ ರಾಜಿಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಲದಲ್ಲಿ ಈ ವಿದ್ಯಾಸಂಸ್ಥೆಗಳಲ್ಲಿ ಏಪ್ಪತ್ತೈದು ಲಕ್ಷಕ್ಕೂ ಮೀರಿ ರಾಮತಾರಕ ಜಪ ನಡೆದಿತ್ತು. ಭಾರತೀಯ ಜ್ಞಾನ ಪ್ರಾರಕ್ಕಾಗಿ ಅಂಬಿಕಾ ಪದವಿ ಕಾಲೇಜಿನಲ್ಲಿ ಭಾರತೀಯ ತತ್ತ್ವಶಾಸ್ತ್ರವನ್ನು ಒಂದು ವಿಷಯವಾಗಿ ಬೋಧಿಸಲಾಗುತ್ತಿದೆ. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮ, ವಾರ್ಷಿಕೋತ್ಸವ ಎಲ್ಲದರಲ್ಲಿಯೂ ಭಾರತೀಯತೆಗಷ್ಟೇ ಸ್ಥಾನ ಮಾಗೂ ಮಾನ. ಇವೆಲ್ಲ ಈ ಸಂಸ್ಥೆಗಳ ಭಾರರತೀಯ ಚಿಂತನೆಗಳ ಬಗೆಗಿನ ತುಣುಕುಗಳು. ಹಾಗಾಗಿಯೆ ಈ ಸಂಸ್ಥೆಗಳಿಗೆ ಶೃಂಗೇರಿ ಜಗದ್ಗುರುಗಳಂತಹ ಧರ್ಮ ಪೀಠಾಧ್ಯಕ್ಷರಿಂದ ತೊಡಗಿ ಭಾರತೀಯ ಸೈನ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಭಾರತಮಾತೆಯ ವೀರಪುತ್ರರವರೆಗೆ ಭೇಟಿನೀಡಿ ಭಾರತೀಯ ಶಿಕ್ಷಣದ ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಅಂಬಿಕಾದ ಬಗೆಗೆ ಖುಷಿ ವ್ಯಕ್ತಪಡಿಸುತ್ತಿದ್ದಾರೆ.


ಅಂಬಿಕಾ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾದದ್ದೇ ಗುರುತರ ಉದ್ದೇಶದೊಂದಿಗೆ. ‘ಜ್ಞಾನಂ ವಿಜ್ಞಾನ ಸಹಿತಂ’ ಎನ್ನುವ ಕಲ್ಪನೆ, ದೇಶಕ್ಕೆ ಕೇವಲ ಒಬ್ಬ ಡಾಕ್ಟರ್, ಇಂಜಿನಿಯರ್ ಕೊಟ್ಟರೆ ಸಾಲದು, ಆತ ರಾಷ್ಟ್ರ ಭಕ್ತನೂ ಆಗಿರಬೇಕು, ಸಂಸ್ಕಾರವಂತನಾಗಿಯೂ ಮೂಡಿಬರಬೇಕು ಎಂಬ ಮಹೋದ್ದೇಶ ಈ ಸಂಸ್ಥೆಯ ಹಿನ್ನಲೆಯಲ್ಲಿದೆ. ದೇಶಪ್ರೇಮ, ರಾಷ್ಟ್ರ ಜಾಗೃತಿ, ಸಂಸ್ಕಾರ, ಸನಾತನ ಸಂಸ್ಕೃತಿಗಳು ಇಲ್ಲಿ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತವೆ.


ಸಂಸ್ಕಾರದ ತಾಣವಾಗಿ ಅಂಬಿಕಾ ಹಾಸ್ಟೆಲ್ಸ್:

ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದಲ್ಲಿ ಪ್ರತಿ ದಿನ ವಿದ್ಯಾರ್ಥಿಗಳಿಗೆ ಭಗವದ್ಗೀತೆ, ವಿಷ್ಣುಸಹಸ್ರನಾಮ, ಲಲಿತಾ ಸಹಸ್ರನಾಮ ಪಠಣ ನಡೆಯುತ್ತಿರುತ್ತದೆ. ಭಜನೆ ಇಲ್ಲಿಯ ನಿತ್ಯ ಸಂಪ್ರದಾಯ. ಒಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕಾರ ಮೌಲ್ಯಗಳನ್ನು ತುಂಬುವ ನೆಲೆಯಲ್ಲಿ ಅಂಬಿಕಾ ಹಾಸ್ಟೆಲ್ ಕಾರ್ಯನಿರ್ವಹಿಸುತ್ತಿದೆ. ಹುಡುಗರ ಮತ್ತು ಹುಡುಗಿಯರ ಎರಡೂ ಹಾಸ್ಟೆಲ್‌ಗಳಲ್ಲಿ ಇಂತಹ ವ್ಯವಸ್ಥೆಗಳಿವೆ. ಇದರೊಂದಿಗೆ ದೇಶಭಕ್ತಿಯ ಧಾರೆ ನಿರಂತರವಾಗಿ ವಿದ್ಯಾರ್ಥಿಗಳನ್ನು ತೋಯಿಸುತ್ತದೆ. ದೇಶದ ನಿಜ ಇತಿಹಾಸದ ದಿಗ್ದರ್ಶನವಾಗುತ್ತದೆ. ಭಾರತ ಜಗತ್ತಿಗೆ ಉದಾರವಾಗಿ ನೀಡಿದ ‘ಯೋಗ’ ಇಲ್ಲಿ ಪಠ್ಯದ ಭಾಗವಾಗಿ ಆಚರಣೆಗೆ ಬರುತ್ತದೆ. ಇದರೊಂದಿಗೆ ಶುಚಿ ರುಚಿಯಾದ ಶುದ್ಧ ಸಸ್ಯಾಹಾರಿ ಅಡುಗೆ ವಿದ್ಯಾರ್ಥಿಗಳ ಓದಿನ ಏಕಾಗ್ರತೆ ಹೆಚ್ಚಿಸುವಲ್ಲಿ ಪರಿಣಾಮ ಬೀರುತ್ತಿದೆ.


ಅಮರ್ ಜವಾನ್ ಜ್ಯೋತಿ ಸ್ಥಾಪನೆ : ಅಂಬಿಕಾ ಶಿಕ್ಷಣ ಸಂಸ್ಥೆಯ ಸಾಧನೆಗಳಲ್ಲಿ ‘ಪುತ್ತೂರಿನ ಅಮರ್ ಜವಾನ್ ಜ್ಯೋತಿ ಸ್ಮಾರಕದ ಸ್ಥಾಪನೆಯೂ ಒಂದು. ಭಾರತೀಯ ಯೋಧರ ಬಗೆಗೆ ಅಂಬಿಕಾ ಸಂಸ್ಥೆ ನಿರಂತರ ಅಭಿಮಾನ ತೋರುತ್ತಿದೆ. ಯೋಧರ ತ್ಯಾಗದಿಂದಾಗಿಯೇ ನಾವು ಕ್ಷೇಮದಿಂದಿದ್ದೇವೆ ಎಂಬುದನ್ನು ಇಲ್ಲಿನ ಮಕ್ಕಳಿಗೆ ತಿಳಿಹೇಳಲಾಗುತ್ತಿದೆ. ಅಂತಹ ವೀರ ಯೋಧರ ಸ್ಮರಣಾರ್ಥ ಪುತ್ತೂರಿನ ಕಿಲ್ಲೆ ಮೈದಾನದ ಬಳಿ ‘ಅಮರ್ ಜವಾನ್  ಜ್ಯೋತಿ ಸ್ಮಾರಕ’ವನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸ್ಥಾಪಿಸಲಾಗಿದೆ. ಸುಮಾರು ಆರು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸ್ಮಾರಕ ಖಾಸಗಿಯವರು ನಿರ್ಮಿಸಿದ ದೇಶದ ಏಕೈಕ ಯೋಧ ಸ್ಮಾರಕ ಎಂಬ ಅಭಿದಾನಕ್ಕೆ ಪಾತ್ರವಾಗಿದೆ.


ಭಾರತ ಹಾಗೂ ಭಾರತೀಯತೆ ನಮ್ಮ ಆದ್ಯತೆ ಎಂಬುದನ್ನು ಮಕ್ಕಳು ಮನಗಾಣಬೇಕು. ಪಾಶ್ಚಿಮಾತ್ಯ ಚಿಂತನೆಗಳಿಗೆದುರಾಗಿ ಭಾರತೀಯ ಉತ್ಕೃಷ್ಟ ಜ್ಞಾನಧಾರೆಯನ್ನು ವಿದ್ಯಾರ್ಥಿಗಳೆಡೆಗೆ ಹರಿಸಿ ಭಾರತ ಎಷ್ಟು ಶ್ರೇಷ್ಠ ಎಂಬುದನ್ನು ಸಾಧಿಸಿತೋರಿಸುವ ಪ್ರಯತ್ನ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಾಗುತ್ತಿವೆ. ದೇಶಪ್ರೇಮಿಗಳನ್ನು ರೂಪಿಸುವಲ್ಲಿ ಶಿಕ್ಷಣ ಸಂಸ್ಥೆಗಳೇ ಸೋತರೆ ನಾಳಿನ ಸಮಾಜದ ಗತಿಯೇನು? ಹಾಗಾಗಿ ನಮ್ಮತನ, ನಮ್ಮ ಸಂಸ್ಕೃತಿ, ನಮ್ಮ ಆಚಾರ ವಿಚಾರಗಳನ್ನು ಪಸರಿಸುವುದಕ್ಕಾಗಿಯೇ ಅಂಬಿಕಾ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top