ಭಾರತದಿಂದ ಏನಾದರೂ ವಿದೇಶಗಳಿಗೆ ಹೋದರೆ ಮೇಡ್ ಇನ್ ಇಂಡಿಯಾ ಬ್ರಾಂಡ್ ಹೇಳಿ ಮಾರಲ್ಪಡುವ ವಸ್ತುಗಳಲ್ಲಿ ಹತ್ತಿ ಬಟ್ಟೆಯೂ ಒಂದು. ಭಾರತದ ವೈಶಿಷ್ಟ್ಯಪೂರ್ಣ ಸುಕ್ಕುಗಟ್ಟಿದ ಹತ್ತಿಬಟ್ಟೆಯಿಂದ ತಯಾರಾದ ಅಪೂರ್ವ ಎಂಬ ಹೆಗ್ಗಳಿಕೆಯೊಂದಿಗಿನ ಉಡುಪು ತೊಡುಪುಗಳು ಪ್ರಚಾರ ಪಡೆಯುತ್ತವೆ. ಈಗ ಮೋದಿ ಪ್ರಧಾನಿಯಾದ ಮೇಲೆ ಮೋದಿ ಟಿ ಶರ್ಟ್‌ಗಳು ಭಾರತದಲ್ಲಿ ಜನಪ್ರಿಯವಾದ ಹಾಗೆಯೇ, ವಿದೇಶಗಳಲ್ಲಿರುವ ಮೋದಿ ಪ್ರಿಯರಿಗೂ ಬಹಳ ಇಷ್ಟವಂತೆ. ನಮ್ಮ ಪ್ರಧಾನಿಯೇ ಈಗ ಕರೆ ಕೊಟ್ಟಿದ್ದಾರಲ್ಲಾ- ಮೇಡ್ ಇನ್ ಇಂಡಿಯಾ ಎಂದು- ಅದು ಸಂತೋಷವೇ.
ಭಾರತದಿಂದ ರಫ್ತಾಗುವ ಮೂರೂ ಮುಕ್ಕಾಲಂಶ ವಸ್ತುಗಳು ಮೂಲ ಭಾಋತೀಯ ಬ್ರಾಂಡ್ ನೇಮ್‌ಗಳಲ್ಲಿರದೆ, ಯುರೋಪ್, ಅಮೆರಿಕಾ ಇಲ್ಲವೇ ಜಪಾನಿನ ಯಾವುದಾದರೂ ಜಗತ್ಪ್ರಸಿದ್ಧ ಕಂಪೆನಿಗಳ ಲೇಬಲ್ ಲಗತ್ತಿಸಿ ಮಾರಾಟಗೊಳ್ಳುತ್ತವೆ. ಈ ಸತ್ಯದ ಹಿನ್ನೆಲೆಯಲ್ಲಿ, ಪತ್ರಿಕೆಗಳಲ್ಲಿ- ಅಂಗಡಿಗಳಲ್ಲಿ ಭಾರತೀಯ ಮೂಲದ ಎಂಬ ಇಂತಹ ಜಾಹೀರಾತು ಕಂಡಾಗ ಮೈಮರೆಯುವಂತಾಗುತ್ತದೆ. ಹತ್ತಿ ಬಟ್ಟೆ ತಯಾರಿಕೆಯಲ್ಲಿ ಭಾರತ ಅಗ್ರಗಣ್ಯ. ಪ್ರಪಂಚದ ಐದನೇ ಒಂದಂಶ ಕಾಟನ್ ಉತ್ಪಾದನೆ ನಮ್ಮ ಮಣ್ಣಿನಲ್ಲಾಗುತ್ತದೆ. ಉತ್ತಮ ಗುಣಮಟ್ಟದ ಎಳೆ ದೊರಕುವುದರಿಂದ ಇಲ್ಲಿನ ಹತ್ತಿಗೊಂದು ಮರ್ಯಾದೆ, ಬೇಡಿಕೆ ಇದೆ.
ಕೈಮಗ್ಗದ ಖಾದಿಯೇ ನಮ್ಮ ಸ್ವಾತಂತ್ರ್ಯದ ಸಿಂಬಲ್ ಆಗಿದ್ದರೂ, ನಮ್ಮಲ್ಲಿ ಕಾಟನ್ ಎಂದರೆ 'ಚೀಪ್ ಕ್ವಾಲಿಟಿ' ಎಂಬ ಭಾವನೆ ಇತ್ತು. ಟೆರೀನ್, ನೈಲಾನ್ ಧರಿಸಿದರೇ ಘನತೆವೆತ್ತವರು ಎನ್ನುವುದು ಅಭ್ಯಾಸವಾಗಿತ್ತು. ಕೃತಕ ನೂಲಿನ ವಸ್ತ್ರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮವನ್ನು ಅರಿತ ಮುಂದುವರಿದ ದೇಶಗಳ ಜನರು ಪ್ರಕೃತಿದತ್ತ ನೂಲಿನ ಬಟ್ಟೆಗಳನ್ನೇ ಉಡಲು-ತೊಡಲು ಬಯಸತೊಡಗಿದ್ದಾರೆ. ಆದ್ದರಿಂದಲೇ ಹೊರದೇಶಗಳಲ್ಲಿ ಕಾಟನ್ ಎಂದರೆ ಉಳಿದ ಬಟ್ಟೆಗಳಿಗಿಂತ ದುಬಾರಿ. ಜನಸಾಮಾನ್ಯರು ತೊಡಲು ಕೈಗೆಟುಕದ ವಸ್ತು. ಭಾರತಕ್ಕೊಳ್ಳೆಯದೇ ಆಯಿತು. ಭಾರತದ ಕಾಟನ್ ಉತ್ಪಾದನೆ ರಫ್ತುದಾರರಿಗೆ ಅಪಾರ ಲಾಭ ಬರತೊಡಗಿತು. ಅದರ ಲೆಕ್ಕಾಚಾರವನ್ನು ಶೇರು ಮಾರ್ಕೆಟ್, ಎಕ್ಸ್‌ಪೋರ್ಟ್ ಮಾರ್ಕೆಟ್‌ಗಳ ನಿಕಟ ಸಂಪರ್ಕವುಳ್ಳ ಚೆನ್ನೈನ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು ಹೋದ ಶತಮಾನಾಂತ್ಯದಲ್ಲಿ ನನ್ನೊಡನೆ ಲೆಕ್ಕಾಚಾರ ಮಾಡಿದ್ದು ನೆನಪುಂಟು. ' ಒಂದು ಕಿಲೋಗ್ರಾಂ ಹತ್ತಿಬಟ್ಟೆಗೆ 80 ರೂ ಎಂದಾದರೆ, ಅದನ್ನು ಉಡುಗೆಯಾಗಿ ಹೆಣೆದು ಸಿದ್ಧಪಡಿಸುವ ಶಾಸ್ತ್ರಕ್ಕೆ ಮತ್ತೆ ಅಷ್ಟೇ ಪರಿಷ್ಕರಣ ವೆಚ್ಚವಿದೆ. ಈ 160 ರೂ.ಗಳ ವಸ್ತು ವಿದೇಶಕ್ಕೆ ತಲುಪಿದರೆ 320 ರೂ ಕೈಗೆ ಬರುತ್ತದೆ. ಅಂದರೆ ಲಾಭದ ಅಂಶ ನೂರು ಪರ್ಸೆಂಟ್ ಉಂಟೆಂದೇ ಅರ್ಥ''.
ಭಾರತದ ಮಾಲಿನ ಬಗ್ಗೆ ವಿದೇಶಗಳಲ್ಲಿ ಒಂದು ಅಸಮಾಧಾನ ಇತ್ತು. ಇದೇನೆಂದರೆ ನಮ್ಮ ಹತ್ತಿ ಬಟ್ಟೆಗಳು ನೀರಿನಲ್ಲಿ ನೆನೆಸಿದಾಗ ಸಂಕುಚಿತಗೊಳ್ಳುತ್ತದೆ ಎಂದು. ಈ ಸಂಕೋಚನೆ ಮಟ್ಟ ಪ್ರಾಥಮಿಕ ಹಂತದಲ್ಲಿ ಶೇ 20ರಷ್ಟಿದೆ. ಹೆಣಿಗೆ ಉಡುಪು ತಯಾರಕರು ಅದನ್ನು ಸಾಂಪ್ರದಾಯಿಕ ಪರಿಷ್ಕರಣದಿಂದ ಏಳೆಂಟು ಶೇಕಡಾಕ್ಕಿಳಿಸುತ್ತಾರೆ. ಆದರೆ ವಿದೇಶೀ ಗಿರಾಕಿಗಳಿಗೆ ಅದರಿಂದ ಪೂರ್ತಿ ತೃಪ್ತಿಯಾಗುವುದಿಲ್ಲ ಎನ್ನಲಾಗುತ್ತಿತ್ತು. ಸಂಕೋಚನ ಮಟ್ಟವನ್ನು ಶೇ 3ಕ್ಕೆ ಇಳಿಸುವ ಆಮದಿತ ಪರಿಷ್ಕರಣ ಯಂತ್ರಗಳು ಭಾರತದೊಳಗೆ ಬಂದು ದಶಕಗಳೇ ಕಳೆದಿವೆ. ಮದ್ರಾಸಿನ 'ವೈಟ್ ಹೌಸ್ ಇಂತಹ ಯಂತ್ರಾನುಕೂಲ ಹೊಂದಿದ ಮೊದಲ ಭಾರತೀಯ ತಯಾರಕ ಸಂಸ್ಥೆ. ಬಳಿಕ ಗುಜರಾತ್ ನರ್ಮದಾ ಅಂತಹುದೇ ಸೌಲಭ್ಯವುಳ್ಳ ನೂರಕ್ಕೆ ನೂರಂಶದ ರಫ್ತು ಘಟಕವನ್ನು ಬರೋಡಾ ಜಿಲ್ಲೆಯಲ್ಲಿ ಸ್ಥಾಪಿಸಿತು.
ಭಾರತದಿಂದ ಈಗ ಕೋಟಿ ಕೋಟಿ ರೂಪಾಯಿಗಳ ಸಿದ್ಧಪಡಿಸಿದ ಹೆಣಿಗೆ ಉಡುಗೆಗಳು ರಫ್ತಾಗುತ್ತಿವೆ. ಮದ್ರಾಸ್,, ಮುಂಬಯಿ, ಬೆಂಗಳೂರುಗಳೇ ಈ ಉಡುಪುಗಳನ್ನು ಸಿದ್ಧಪಡಿಸುವ ಪ್ರಮುಖ ಕೇಂದ್ರಗಳು. ನಮಗಿರುವ ಪ್ರಮುಖ ಮಾರುಕಟ್ಟೆ ಯುಎಸ್ಎ, ಜರ್ಮನಿ, ಫ್ರಾನ್ಸ್, ಯು.ಕೆ, ಹಾಲೆಂಡ್, ನಾರ್ವೆ, ಇಟೆಲಿ ಹಾಗೂ ಸ್ವಲ್ಪ ಮಟ್ಟಿಗೆ ರಷ್ಯಾ ಮತ್ತು ಪೂರ್ವ ಯುರೋಪ್ ದೇಶಗಳು.
ಬೇಕಾದಷ್ಟು ಹೊರಗೆ ಕಳುಹಿಸಬಹುದಿತ್ತು. ಆದರೆ ಇ.ಇ.ಸಿ,. ಯು ಎಸ್ಎ ಮತ್ತು ಸ್ವೀಡನ್ ಹೊರತುಪಡಿಸಿ ಸ್ಕಾಂಡೀನೇವಿಯನ್ ದೇಶಗಳಿಗೆ ಪ್ಯಾಂಟ್, ಶರ್ಟ್, ಬ್ಲೌಸ್, ಡ್ರೆಸ್ಸ್‌ಸ್ಸ್, ಸ್ಕರ್ಟ್ಸ್ ಇತ್ಯಾದಿಗಳನ್ನು ಎಷ್ಟು ಕಳುಹಿಸಬೇಕೆಂಬುದರ ಬಗ್ಗೆ ಜನರಲ್ ಎಗ್ರಿಮೆಂಟ್ ಫಾರ್ ಟ್ರೇಡ್ ಟ್ರಾರಿಫ್‌ನ ನಿರ್ಬಂಧವಿತ್ತು. ಅಮೆರಿಕನ್ ಸರ್ಕಾರ ನಿಟ್‌ವೇರ್ ಗಳ ಮಟ್ಟಿಗೆ ಮಾಡಿರುವ ಸಡಿಲಿಕೆಯಿಂದಾಗಿ ಹೊಸ ಅವಕಾಶ ಸೃಷ್ಟಿಯಾಯಿತು. ನೆರೆಹೊರೆಯ ಮಾಲ್ಡೀವ್ಸ್, ಬಾಂಗ್ಲಾದಂತಹ ದೇಶಗಳೂ ಇದರಿಂದಾಗಿ ಕಣಕ್ಕಿಳಿದವು. ಭಾರತಕ್ಕೆ ಈ ರಂಗದಲ್ಲಿ ಪೈಪೋಟಿ ಚೀನಾ, ಪಾಕಿಸ್ತಾನಗಳಿಂದಲೂ ಇದೆ. ಸರಳೀಕೃತ ರಫ್ತು ನಿಯಮ ಹಾಗೂ ಉದಾರೀಕೃತ ವಿದೇಶಿ ವಿನಿಮಯ ನೀತಿಯಿಂದಾಗಿ ನಮ್ಮ ದೇಶದ ರಫ್ತುದಾರರಿಗೆ ಒಳ್ಳೆಯ ಚಾನ್ಸ್ ಬಂತು.
ವೆಸ್ಟ್ಸ್, ಬ್ರೀಫ್ಙ್, ಪ್ಯಾಂಟೀಸ್ ಎಂದು ಕಂಚಡಿ ಯುಗದಿಂದ ಆಧುನಿಕ ಯುಗಕ್ಕೆ ನಾವು ಬಂದಿರುವುದಕ್ಕೆ ಪ್ರಚಾರ ಮಾಧ್ಯಮದ ಕೊಡುಗೆ ಭಯಂಕರ. (ಕಂಚಡಿ = ಕೌಪೀನ, ಕಚ್ಚುಟ; ಕನ್ನಡ - ಕನ್ನಡ ಸುವರ್ಣ ಕೋಶ) ಮತ್ತು ಒಂದು ಸಮಾಚಾರ ಏನೆಂದರೆ, ಮನುಷ್ಯನ ವ್ಯಕ್ತಿತ್ವ ಛಾಪಿಸಲು ಮೂಲಹಂದರ ಎಂದು ವರ್ಣಿಸಲಾಗುವ ಒಳಉಡುಪು ರಂಗಕ್ಕೂ ನಮಗೆ ಬಂದಿದೆ ವಿದೇಶಿ ತಂತ್ರಜ್ಞಾನ.
"ಫಾರ್ ಕಾನ್ಷಿಯಸ್ ಲೇಡೀಸ್ ಓನ್ಲಿ, ಪ್ಯಾಂಟೀಸ್ ಆಫ್ ಎಲಿಗನ್ಸ್ ಅಂಡ್ ಚಾಯ್ಸ್, ಸೊಫಿಸ್ಟಿಕೇಟೆಡ್ ಆಫ್ ಕಲರ್ಸ್ ಅಂಡ್ ಕಲರ್ ಫುಲ್ ಪ್ರಿಂಟ್ಸ್, ಮೇಡ್ ಔಟ್ ಆಫ್ ಫೈನ್ ಕ್ವಾಲಿಟಿ ಯಾರ್ನ್, ಸೂಪರ್ ಕೂಂಬ್ಡ್, ಸೂಪರ್ ಸಾಫ್ಟ್, ಜೆನ್ವಿನ್‌ಲಿ ಅಬ್ಸಾರ್ಬೆಂಟ್ ಕಾಟನ್ ಸೆಲೆಕ್ಟೆಡ್ ಸ್ಪೆಷಲಿ ಫಾರ್ ಡೆಲಿಕೇಟ್ ಸ್ಕಿನ್ ಸ್ವಿಚ್ಡ್ ವಿಥ್ ಇಂಪೋರ್ಟೆಡ್ ರಬ್ಬರ್ ಇಲಾಸ್ಟಿಕ್ ಇನ್ ಸೊಫಿಸ್ಟಿಕೇಟೆಡ್ ಮೆಷಿನ್ಸ್, ಅಶ್ಯೂರ್ಡ್ ಪ್ಲೆಷರ್ ಆಫ್ ವೇರಿಂಗ್, ಎ ಸೆನ್ಸೇಷನಲ್ ಫೀಲಿಂಗ್" ಎಂತಹ ಸೂಕ್ಷ್ಮ ಸಂವೇದನೆಯ ಇಂಟ್ರೊಡಕ್ಷನ್! ಇದು ಜಾಹೀರಾತು ಭಾಷೆಯ ಆಕರ್ಷಣೆ.
ಪುರುಷರು ಫ್ಯಾಷನ್ ಮರುಳರೆಲ್ಲವೆಂದು ಹೇಳಿದ್ದು ಯಾರು? ಜಗತ್ತಿನ ಅತ್ಯಂತ ಹಳೆಯ ಬ್ರಾಂಡೆಡ್ ಶರ್ಟ್ ಗೆ ಎರಡು ನೂರು ವರ್ಷಗಳ ಮೇಲೆರಡು ದಶಕಗಳು ದಾಟಿದೆ. ನ್ಯೂಯಾರ್ಕ್ ನಲ್ಲಿ ಒಂದು ಕೋಣೆ ಕಾರ್ಯಾಗಾರದಲ್ಲಿ ಪ್ರಾರಂಭವಾದ ಏರೋ ಶರ್ಟ್ ಕಂಪನಿ ಇಂದು ಪ್ರಪಂಚದಲ್ಲೆಡೆ ಫ್ಯಾಷನ್ ಪ್ರಿಯರ ಮೈಮುಚ್ಚಲು ಅಂಗಿ ಹಂಚುತ್ತಿರುವುದಲ್ಲದೆ, ಭಾರತಕ್ಕೆಂದೋ ಬಂದಿದೆ. ಏರೋ ಅಂಗಿಗಳಲ್ಲಿ 400 ನಮೂನೆಯ ಕಾಲರ್ ಗಳು ದೊರಕುತ್ತಿದ್ದ ಕಾಲವಿತ್ತು ಎಂದ ಮೇಲೆ ಗಂಡಸರ ಫ್ಯಾಷನ್ ಹುಚ್ಚು ಎಂದೋ ಶುರುವಾಗಿತ್ತು ಎಂಬುದಕ್ಕೆ ಸಾಕ್ಷಿ ಬೇರೇನು ಬೇಕು?. 1876ರ ವೇಳೆಗೆ ಅಮೆರಿಕಾದ್ಯಂತ, "ಜಂಟಲ್ ಮ್ಯಾನ್" ಎನಿಸಿಕೊಳ್ಳಬೇಕಾದರೆ ಪ್ಯಾಂಟಿನ ಮೇಲೆ ಬಾಣದ ಗುರುತಿನ ಅಂಗಿ ಹಾಕಿಕೊಳ್ಳಲೇಬೇಕು ಎಂಬ ಮಟ್ಟಿಗೆ ಪ್ರಚಾರವಿತ್ತು. 19ನೇ ಶತಮಾನಾರ್ಧದಲ್ಲೇ ಸಾಮಾಜಿಕ ಆರ್ಥಿಕ ಬದಲಾವಣೆಗಳುಂಟಾಗಿ ಮಧ್ಯಮ ವರ್ಗದವರ ಫ್ಯಾಷನ್ ಪ್ರಿಯತೆ ಬೆಳೆಯಿತು. ಅಂಗಿ ಎಂದ ಮೇಲೆ ತೊಳೆದಾಗ ಮುದುಡುತ್ತದೆ ಎಂಬ ಗ್ರಾಹಕರ ದೂರನ್ನು ಪರಿಹರಿಸಲು "ಸಾನ್‌ಪೋರೈಸ್ಟ್" ಎಂಬ ಸಂಶೋಧನೆ ಆಧಾರಿತ ಶ್ರಿಂಕ್ ಆಗದ ಬಟ್ಟೆಯ ಸಂಸ್ಕರಣಾ ಕ್ರಮ ರೂಪಿಸಲಾಯಿತು. ಇವತ್ತಿಗೂ ಕಾಟನ್ ಬಟ್ಟೆಗೇ ಅದುವೇ "ಅಂತಿಮ ಸಂಸ್ಕಾರ".
ಆದರೆ ಈಗ ನನಗೆ ನೆನಪಾಗುತ್ತಿದೆ, ಹೋದ ಬೇಸಿಗೆಯಲ್ಲಿ ಊರಿಗೆ ಹೋಗಿದ್ದೆ. ಅದೇನೋ ಅಸಾಧ್ಯ ಸೆಕೆ, ಬೆವರು, ಹಸಿರಿನ ತೋಟ, ಬಯಲುಗಳ ನಡುವೆಯೂ ತಾಳಲಾರದ ಉರಿ. ಇದೆಲ್ಲ ಪರಿಸರ ನಾಶ ದುಷ್ಪರಿಣಾಮ ಎಂದು ಎಚ್ಚರಿಸುತ್ತಾರೆ ಹಲವರು. ಸೆಕೆ ಎಷ್ಟೇ ಇರಲಿ, ನೀರಾಶ್ರಯಗಳೆಲ್ಲ ಒಣಗಿ ಆರಿರಲಿ, ಮದುವೆ, ಉಪನಯನ, ಪೂಜೆ ಎಂದು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಲ್ಲಿಸಲು ಸಾಧ್ಯವೇ?
ಹಾಗೆಯೇ, ಬೆವರಳಿಸಿಕೊಂಡು, ಬೀಸಣಿಕೆ ಗಾಳಿ ಬೀಸಿಕೊಂಡು ಶಾಸ್ತ್ರ ಮುಗಿಸಲು ಹತ್ತೂ ಸಮಸ್ತರು ಕಾಯುತ್ತಿದ್ದಾಗ, ಕಾಲೇಜು ತರುಣನೊಬ್ಬ "ವಸ್ತ್ರ ಉಡುವವರ ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರ" ಎಂದು ಕುಶಾಲಿಗೆ ಆಡಿದ ಮಾತು ಪಂಚೆ ಧರಿಸೋದು ಒಳ್ಳೆಯದೊ ಅಥವಾ ಪ್ಯಾಂಟ್ ಹಾಕಿಕೊಳ್ಳುವುದು ಒಳ್ಳೆಯದೋ ಎಂಬ ಆವೇಶ ಪೂರಿತ ವಾದ-ವಿವಾದಕ್ಕೆ ಆಸ್ಪದ ನೀಡಿತು. ಮುಂಡು ನಮ್ಮ ಸಂಸ್ಕೃತಿ ಎಂದೊಬ್ಬರೆಂದರೆ ಪ್ಯಾಂಟ್ ವ್ಯಾವಹಾರಿಕ ಎಂದು ಮತ್ತೊಬ್ಬರ ಉತ್ತರ. ಅಂತಿಮವಾಗಿ ಪಂಚೆ ಪರವಾಗಿಯೇ ಬಹುಮತ ಅಭಿಪ್ರಾಯ ಬರುತ್ತದೆ ಎನ್ನುವಾಗ ಆರರ ಬಾಲಕನೊಬ್ಬ ಜೋರಾಗಿ ತಾನು ಕೂಗಿ ಹೇಳಿದ.
"ಇದೆಂಥ ಡಿಬೇಟ್ ಇವರದ್ದು! ಪಂಚ ಒಳ್ಳೇದೋ ಪ್ಯಾಂಟ್ ಒಳ್ಳೇದೊ ಹೇಳಿ ಜಗಳ. ಈ ಸೆಕೆಗಾಲದಲ್ಲಿ ಉರ್ಬಿಳಿ ಇರುವುದಕ್ಕೆ ಎಷ್ಟು ಚೆನ್ನಾಗಿರುತ್ತದೆ! ನಿಮಗ್ಯಾರಿಗಾದರೂ ಗೊತ್ತಿದೆಯೋ" ನೆರೆದವರಲ್ಲಿ ಬಹುತೇಕ ಎತ್ತಿದ ಕೈ ಮತ ಪಂಚೆಗಾದರೂ, ತಲೆಯಾಡಿಸಿದ ರೀತಿ ಉರ್ಬಿಳಿ ಪರವಾಗಿದ್ದಂತಿತ್ತು. (ಫ್ರೊ. ಎಂ ಮರಿಯಪ್ಪ ಭಟ್ಟರ ಡಿಕ್ಷನರಿಯಲ್ಲಿ ಉರ್ಬಿಳಿ ಅರ್ಥ 'ನೇಕೆಡ್' ಎಂದು ಇದೆ.)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ