ರಾಷ್ಟ್ರೀಯ ಏಕಾತ್ಮಕತೆ ಧ್ಯೇಯವಾಗಿರಲಿ: ವಿನಯ್ ಪತ್ರಾಲೆ

Upayuktha
0

ಭಾರತ-ಭಾರತಿಯಿಂದ ಸಂಸ್ಥಾಪನಾ ದಿನಾಚರಣೆ 


ಮಂಗಳೂರು: 'ದೇಶದ ಎಲ್ಲ ರಾಜ್ಯಗಳ, ಎಲ್ಲ ಭಾಷೆಗಳ ಜನರನ್ನು ಒಗ್ಗೂಡಿಸಿ, ರಾಷ್ಟ್ರೀಯ ಏಕತೆ ಹಾಗೂ ಹಿಂದುತ್ವದ ಪುನರುತ್ಥಾನದ ಸಂಕಲ್ಪದಲ್ಲಿ ಹುಟ್ಟಿಕೊಂಡ ಸಂಸ್ಥೆ ಭಾರತ- ಭಾರತಿ. ಈ ಸಂಸ್ಥೆಯ 60 ನೇ ಶಾಖೆಯಾಗಿ ಮಂಗಳೂರು ಶಾಖೆ ಅಸ್ತಿತ್ವಕ್ಕೆ ಬಂದಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಏಕಾತ್ಮಕತೆಯೇ ಎಲ್ಲರ ಧ್ಯೇಯವಾಗಿರಲಿ' ಎಂದು ಭಾರತ-ಭಾರತಿಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ  ವಿನಯ್ ಪತ್ರಾಳೆ ಕರೆ ನೀಡಿದರು.

ಭಾರತ-ಭಾರತಿ ಮಂಗಳೂರು ಶಾಖೆಯಲ್ಲಿ ಜರಗಿದ ಸಂಘಟನೆಯ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 


'ಭಾರತ-ಭಾರತಿ ರಾಷ್ಟ್ರ ಮಟ್ಟದಲ್ಲಿ ಸಂಸ್ಕ್ರತಿ- ಸಂಬಂಧಗಳನ್ನು ಬೆಸೆಯುವ ಸಂಸ್ಥೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ನಮ್ಮದು. ಮಂಗಳೂರಿನಲ್ಲಿ ವಾಸಿಸುತ್ತಿರುವ ವಿವಿಧ ರಾಜ್ಯದ, ವಿವಿಧ ಭಾಷೆಯ ಜನರು ಆದಷ್ಟು ಈ ಸಂಸ್ಥೆಯ ಸದಸ್ಯರಾಗಬೇಕು.ಪಾಶ್ಚಾತ್ಯ ಸಂಸ್ಕೃತಿಯಲ್ಲಿ ನಲುಗಿ ಹೋಗುತ್ತಿರುವ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಎಲ್ಲರೂ ಈ ವೇದಿಕೆಯಡಿ ಒಟ್ಟಾಗಬೇಕಾದ ಅಗತ್ಯತೆಯಿದೆ. ಆ ಮೂಲಕ ನಾವು ತಾಯಿ ಭಾರತಿಯ ಸೇವೆಯನ್ನು ಮಾಡೋಣ' ಎಂದವರು  ನುಡಿದರು.


ಭಾರತ- ಭಾರತಿಯ ಕರ್ನಾಟಕ ಪ್ರಾಂತ್ಯ ಪ್ರಭಾರಿ ಉದ್ಯಮಿ ಕೆ.ಕೆ.ಶೆಟ್ಟಿ ಹಾಗೂ ಭಾರತ- ಭಾರತಿಯ ಕರ್ನಾಟಕ ಪ್ರಾಂತ್ಯ ಸಂಯೋಜಕಿ ಅನಿತಾ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು.


ಮಂಗಳೂರು ವಿಭಾಗದ ಅಧ್ಯಕ್ಷ ವಸಂತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳಕುಮಾರ್ ಅವರ 'ವಂದೇ ಮಾತರಂ' ರಾಷ್ಟ್ರಭಕ್ತಿ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಬಳಿಕ ದೀಪ ಪ್ರಜ್ವಲನೆ ಮಾಡಿ, ಭಾರತ ಮಾತೆಗೆ ಪುಷ್ಪಾರ್ಚನೆಯೊಂದಿಗೆ ಆರತಿ ಬೆಳಗಿ ಮಾತೃವಂದನೆ ಸಲ್ಲಿಸಲಾಯಿತು.


ಸಮ್ಮಾನ ಗೌರವ:

ಇತ್ತೀಚೆಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಭಾಜನರಾದ ಭಾರತ-ಭಾರತಿ ಅಹಮದ್ ನಗರದ ಅಧ್ಯಕ್ಷ, ಕರ್ನಾಟಕ ಪ್ರಾಂತ್ಯ ಪ್ರಭಾರಿ ಹಾಗೂ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕುತ್ತಿಕ್ಕಾರು ಕಿಂಞಣ್ಣ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದ ಭಾರತ ಭಾರತಿಯ ಪ್ರಾದೇಶಿಕ ಉಪಾಧ್ಯಕ್ಷ  ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ತಮ್ಮ ಭಾಷಣದಲ್ಲಿ ಮಂಗಳೂರು ಶಾಖೆಯ ಮುಂದಿನ ಕಾರ್ಯ ಯೋಜನೆಗಳನ್ನು ವಿವರಿಸಿದರು. 'ಭಾರತ- ಭಾರತಿಯು  ರಾಷ್ಟ್ರಾದ್ಯಂತ ತನ್ನ ವಿವಿಧ ಶಾಖೆಗಳ ಮೂಲಕ ನಡೆಸುವ ಸಾಂಸ್ಕೃತಿಕ ವಿನಿಮಯ, ಆಹಾರೋತ್ಸವ ಹಾಗೂ ಧಾರ್ಮಿಕ - ರಾಷ್ಟ್ರೀಯ ಹಬ್ಬಗಳ ಆಚರಣೆಯನ್ನು ಸ್ಥಳೀಯ ಶಾಖೆಯ ಮೂಲಕವೂ ಹಮ್ಮಿಕೊಳ್ಳಲಾಗುವುದು' ಎಂದರು. 


ಅಭಿನಂದನೆಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಉದ್ಯಮಿ ಕೆ.ಕೆ.ಶೆಟ್ಟಿಯವರು ಭಾರತ- ಭಾರತಿಯ ಮಂಗಳೂರು ಶಾಖೆಯ ಬೆಳವಣಿಗೆ ಬಗ್ಗೆ ಹರ್ಷ ವ್ಯಕ್ತಪಡಿಸಿ, ಅದು ಅತ್ಯಂತ ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು. ಕರ್ನಾಟಕ ಪ್ರಾಂತ್ಯ ಸಂಯೋಜಕಿ  ಅನಿತಾ ಆಚಾರ್ಯ ಮಾತನಾಡಿ, 'ನಗರದಲ್ಲಿ ನೆಲೆಸಿರುವ ವಿವಿಧ ರಾಜ್ಯದ, ಭಾಷೆಯ ಜನರನ್ನು ಒಟ್ಟುಗೂಡಿಸಿ ರಾಷ್ಟ್ರೀಯ ಭಾವೈಕ್ಯತೆಯನ್ನು ಗಟ್ಟಿಗೊಳಿಸುವ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಿ ಸಂಸ್ಥೆಯನ್ನು ಬೆಳೆಸಬೇಕು' ಎಂದು ಸೂಚಿಸಿದರು.


ಭಾರತ- ಭಾರತಿ ಮಂಗಳೂರು ಶಾಖೆಯ ಜತೆ ಕಾರ್ಯದರ್ಶಿ ಆನಂದ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಉಪಾಧ್ಯಕ್ಷ ಚೇತನ್ ಸುರೇಜಾ ವಂದಿಸಿದರು. ಮಹಿಳಾ ಪ್ರತಿನಿಧಿ ಸುನೀಲಾ ಪಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top