ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ
ಚಿತ್ರಗಳು: ನೀರ್ನಳ್ಳಿ ಗಣಪತಿ; ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ
ಕಣ್ಣಾಮುಚ್ಚಾಲೆ ಆಟದಂತೆ ಚಿನ್ನದ ಜಿಂಕೆ- ರಾಮರ ಬೆನ್ನಟ್ಟುವಿಕೆಯ ಆಟ ನಡೆಯಿತು. ಕಾಣಸಿಗುವುದು- ಮಾಯವಾಗುವುದು ಹೀಗೆ ಬಹಳ ಸಲ ನಡೆಯಿತು. ರಾವಣನಿಗೆ ಸೀತಾಪಹರಣಕ್ಕೆ ಅನುಕೂಲವಾಗುವಷ್ಟು ಅವಕಾಶ ಸಿಗುವಷ್ಟು ದೂರ ಹೋದ ಮೇಲೆ ಮಾರೀಚನು ತಾನು ಈ ಮೊದಲೇ ನಿರ್ಧರಿಸಿದಂತೆ ರಾಮಬಾಣಕ್ಕೆ ತುತ್ತಾದ. ಹಾ! ಸೀತೇ, ಹಾ! ಲಕ್ಷ್ಮಣಾ ಎಂದು ಸೀತೆ- ಲಕ್ಷ್ಮಣರಿಗೆ ಕೇಳಿಸುವಷ್ಟು ಗಟ್ಟಿಯಾದ ಆದರೆ ದೀನಸ್ವರದಿಂದ ಕೂಗುತ್ತಾ ಅಸುನೀಗಿದ. ಸಾವಿನ ಹೊತ್ತಿನಲ್ಲಿ ಸ್ವಾಮಿಕಾರ್ಯ- ಸ್ವಕಾರ್ಯಗಳೆರಡನ್ನೂ ಸಾಧಿಸಿ ಸಾಯುಜ್ಯವನ್ನು ಪಡೆದ (ರಾಮನಿಂದ ಹತರಾದವರಿಗೆ ರಾಮಸನ್ನಿಧಿ ತಾನೇ?).
ರಾಮನ ಆರ್ತನಾದ ಸೀತೆಗೆ ಕೇಳಿಸಿತು. ಮಾಯಾಸೀತೆಯ ಮನಸ್ಸು ಕಳವಳಿಸಿತು, ಆತಂಕಕ್ಕೊಳ ಗಾಯಿತು. ಲಕ್ಷ್ಮಣನಲ್ಲಿ ರಾಮನ ಸಹಾಯಕ್ಕೆ ಹೋಗಲು ಹೇಳಿದಳು. ಲಕ್ಷ್ಮಣನು ಇದು ಮಾರೀಚನ ಅಣಕುಧ್ವನಿ, ನನ್ನನ್ನು ನಿನ್ನಿಂದ ದೂರ ಮಾಡಲು ಮಾಡಿದ ರಾಕ್ಷಸನ ಹುನ್ನಾರವೆಂದರೂ ಸೀತೆ ಒಪ್ಪಲಿಲ್ಲ. ರಾಮನು ಅಜೇಯ, ಅವನನ್ನು ಈ ಮೂರುಲೋಕಗಳಲ್ಲಿ ಯಾರೂ ಏನೂ ಮಾಡಲಾರರು ಎಂದರೂ ಲಕ್ಷ್ಮಣನ ಮಾತನ್ನು ಸೀತೆಯು ಕೇಳಲಿಲ್ಲ. ಲಕ್ಷ್ಮಣನು ಅಣ್ಣನ ಸಹಾಯಕ್ಕೆ ಹೋಗದಿರು ವುದನ್ನು- ತನ್ನ ಮೇಲಿನ ಆಸೆಯಿಂದ, ಭರತನ ಕುಮ್ಮಕ್ಕಿನಿಂದ...- ಎಂದು ಮುಂತಾಗಿ ಜರೆದಾಗ, ನಿಂದಿಸಿದಾಗ ಲಕ್ಷ್ಮಣನು ಮಾತು ಮರೆತ. ಖರನೇ ಮೊದಲಾದ ರಾಕ್ಷಸರನ್ನು ಕೊಲ್ಲುವಾಗ ಇಬ್ಬರೂ ಒಂದೇ ಗುಹೆಯಲ್ಲಿದ್ದಾಗ ಬಾರದ ಸಂದೇಹ ಈಗ ಬಂದುದನ್ನು ಸಖೇದಾಶ್ಚರ್ಯ ಪಟ್ಟನು. ಅಣ್ಣನ ಆಜ್ಞೆ ಸೀತೆಯನ್ನು ಅವನು ಬರುವುದರ ತನಕ ಕಾಯುವುದು, ಅತ್ತಿಗೆಯ ಆಜ್ಞೆ ಅಣ್ಣನ ಸಹಾಯಕ್ಕೆ ಹೋಗು ಎನ್ನುವುದು! ಸೀತೆಯ 'ನಾನು ಜೀವವನ್ನಾದರೂ ಬಿಟ್ಟೇನು, ನಿನಗೆ ಸಿಕ್ಕಲಾರೆನು' ಎನ್ನುವಷ್ಟರವರೆಗಿನ ತೀಕ್ಷ್ಣವಾದ ಮಾತುಗಳು ಬಂದವು. ಲಕ್ಷ್ಮಣನು ಆಕೆಯನ್ನು ನಿಂದಿಸುತ್ತಾ,"ಎಲೈ ಹಟಮಾರಿಯೇ! ನೀನು ನನ್ನನ್ನು ಕುರಿತು ಹೀಗೆಲ್ಲ ಬೈಯುತ್ತಿರುವೆಯಲ್ಲ! ನೀನು ಹಾಳಾಗಿ ಹೋಗುವೆ. ನಿನಗೆ ಧಿಕ್ಕಾರವಿರಲಿ!" ಎಂದು ದುಸ್ಥಿತಿಯನ್ನು ಹಳಿಯುತ್ತಾ ಪರ್ಣಕುಟಿಯನ್ನು ತೊರೆದನು. ವನದೇವತೆಗಳಲ್ಲಿ ಸೀತೆಯನ್ನು ರಕ್ಷಿಸುವಂತೆ ಪ್ರಾರ್ಥಿಸಿ ರಾಮನನ್ನು ಹುಡುಕುತ್ತ ನಡೆದನು.
ರಾಮ- ಲಕ್ಷ್ಮಣರಿಬ್ಬರೂ ಇಲ್ಲದುದನ್ನು ಖಚಿತಪಡಿಸಿಕೊಂಡ ರಾವಣನು ರಾಮನ ಪರ್ಣಕುಟಿಯ ಬಾಗಿಲಿನಲ್ಲಿ ಪ್ರತ್ಯಕ್ಷವಾದನು. ಮಾಯಾಸೀತೆಯನ್ನು ಕದ್ದೊಯ್ಯಲು ಮಾಯಾವಿ ರಾವಣನ ಛದ್ಮವೇಷ! ಸಂನ್ಯಾಸಿ ರಾವಣನು ಭಿಕ್ಷೆಗಾಗಿ ಸೀತೆಯನ್ನು(ಗೃಹಿಣಿ) ಕರೆದ. ಅವಳು ಮನೆಯೊಳಗಿಂದ ಹೊರಬಂದು ಆತಿಥ್ಯವನ್ನು ಸ್ವೀಕರಿಸಲು ಹೇಳಿ ಮನೆಯೊಡೆಯ ರಾಮನು ಬರುವ ತನಕ ಕಾಯಲು ವಿನಂತಿಸಿದಳು. ಸಂನ್ಯಾಸಿಯು ಕೇಳಿದುದಕ್ಕೆ ಪುಟ್ಟದಾಗಿ ತಮ್ಮ ಪೂರ್ಣ ಪರಿಚಯ- ವನವಾಸದ ಕಾರಣವನ್ನು ತಿಳಿಸಿದಳು. ಸಂನ್ಯಾಸಿಯ ಪರಿಚಯವನ್ನು ಕೇಳಿದಳು. ಮಾಯಾವಿ ಬಾಯಿಬಿಟ್ಟಾಗ ನಾಲಗೆಯು ಕುಲವನ್ನು ಹೇಳಿತು. ಸೀತೆಯ ಸೌಂದರ್ಯವನ್ನು ಬಣ್ಣಿಸಿದ. ಕಾಡಿನಲ್ಲಿರುವ ಬದಲು ಅರಮನೆಯಲ್ಲಿ ಸುಖವಾಗಿರಬಹುದೆಂದು ಹೇಳಿದ. ತನ್ನ ನಿಜವಾದ ಪರಿಚಯವನ್ನು ಹೇಳಿ ತಾನು ತ್ರಿಲೋಕಗಳನ್ನು ಗೆದ್ದ ರಾವಣನೆಂದು ಹೆಮ್ಮೆಯಿಂದ ಹೇಳಿದ. ತನ್ನೊಡನೆ ಲಂಕೆಗೆ ಬರುವಂತೆ ಒತ್ತಾಯಿಸಿದಾಗ ಸೀತೆಯು ಆ ಕರೆಯನ್ನು ನಿರಾಕರಿಸಿದಳು, ಮಾತ್ರವಲ್ಲ ಅವನ ಜೀವಕ್ಕೆ ರಾಮನಿಂದ ಅಪಾಯವುಂಟಾಗುವುದೆಂಬ ಎಚ್ಚರಿಕೆಯನ್ನು ಕೊಟ್ಟು ಹೊರಟು ಹೋಗಲು ಹೇಳಿದಳು. ಅವನ ಕಳ್ಳತನದಂತಹ ನೀಚಪ್ರವೃತ್ತಿಯನ್ನು, ಹೇಡಿತನವನ್ನು ಖಂಡಿಸಿದಳು. ಆದರೆ 'ಕಾಮಾತುರಾಣಾಂ ನ ನೀತಿರ್ನಲಜ್ಜಾ' ಎನ್ನುವ ಮಾತಿನಂತೆ ರಾವಣನು ಸೀತೆಯನ್ನು ಎತ್ತಿಕೊಂಡು ಒಯ್ಯುವ ಸಾಹಸಕ್ಕೆ ಕೈಹಾಕಿದನು. ನಿಜರೂಪವನ್ನು ತೋರಿದನು. ಕಪ್ಪಾದ ಬೆಟ್ಟದಷ್ಟೆತ್ತರದ ದೇಹ, ಹತ್ತುತಲೆಗಳ, ಇಪ್ಪತ್ತು ಕೈಗಳ ರಾಕ್ಷಸ ಶರೀರ! ಬ್ರಹ್ಮನ ಶಾಪವು ನೆನಪಿಗೆ ಬಂದಿರಬೇಕು! ಸೀತೆಯ ಶರೀರವನ್ನು ಮುಟ್ಟದೆ, ಆಕೆ ನಿಂತಿರುವಷ್ಟು ಸ್ಥಳವನ್ನು ತನ್ನ ಕೈಯುಗುರುಗಳಿಂದಲೇ ಅಗೆದು- ಬಗೆದು ಸೀತೆಯ ಸಹಿತ ಎತ್ತಿಕೊಂಡು ರಥದಲ್ಲಿಟ್ಟನು. ಸೀತೆಯು ಹಾ ರಾಮಾ, ಹಾ ಲಕ್ಷ್ಮಣಾ ಎಂದು ಕೂಗುತ್ತಿದ್ದ ಹಾಗೆಯೇ ರಥದಲ್ಲಿ ಆಗಸಕ್ಕೆ ಹಾರಿದನು. ಲಂಕೆಯತ್ತ ಪಯಣಿಸಿದನು.
ಆಗ ರಾಮ- ಲಕ್ಷ್ಮಣರ ಅನುಪಸ್ಥಿತಿಯಲ್ಲಿ ಸೀತೆಯ ಕಾವಲಿಗಿರುತ್ತೇನೆಂದು ಮಾತು ಕೊಟ್ಟಿದ್ದ ಜಟಾಯುವು ರಾವಣನ ನೀಚತನವನ್ನು ನೋಡಿತು. ವೃದ್ಧನಾದರೂ ಕೊಟ್ಟ ಮಾತನ್ನು ಉಳಿಸಲು, ರಾವಣನೆಂದು ಗೊತ್ತಿದ್ದರೂ ತನ್ನ ಕೊಕ್ಕಿನಿಂದ, ಉಗುರುಗಳಿಂದ ದಾಳಿಮಾಡಿತು. ರಥವನ್ನು ಭೂಮಿಗೆ ಕೆಡವಿ ಹಾಕಿತು. ರಾವಣನ ಮೈಯನ್ನು ತನ್ನ ಉಗುರುಗಳಿಂದ ತರಚಿತು. ರಾವಣನು ಜಟಾಯುವಿನ ರೆಕ್ಕೆಗಳನ್ನು ಖಡ್ಗದಿಂದ ಕತ್ತರಿಸಿದನು. ಅಲ್ಲಿಗೆ ಜಟಾಯುವಿನ ಹೋರಾಟ ಕೊನೆಗೊಂಡಿತು. ರೆಕ್ಕೆಗಳೇ ಬಲವಾಗಿರುವ ಹಕ್ಕಿಯು ರೆಕ್ಕೆಗಳನ್ನು ಕಳಕೊಂಡು ಆಗಸದಿಂದ ಭೂಮಿಗೆ ಬಿದ್ದೊರಗಿತು. ಇದ್ದ ಏಕೈಕ ಅಡ್ಡಿಯು ಇಲ್ಲದಾಯಿತು. ರಾವಣನು ಮತ್ತೊಂದು ರಥವನ್ನೇರಿ ಲಂಕೆಯತ್ತ ಹಾರಿದನು.
ಸೀತೆಯು ರಾಮನನ್ನು- 'ಹೇ, ಜಗನ್ನಾಥ! ನನ್ನನ್ನು ಕಾಪಾಡಲಾರೆಯಾ? ಹೇ, ನಿರಪರಾಧಿ ಲಕ್ಷ್ಮಣ! ಅಪರಾಧಿಯಾದ ನನ್ನನ್ನು ಕಾಪಾಡು. ನಿನ್ನನ್ನು ನನ್ನ ಮಾತಿನ ಬಾಣಗಳಿಂದ ಚುಚ್ಚಿರುವೆನು. ಕ್ಷಮಿಸಿ ಕಾಪಾಡು"- ಎಂದು ಗೋಳಾಡಿದಳು. ಸೀತೆಯ ರೋದನ ಅಕ್ಷರಶಃ ಅರಣ್ಯರೋದನವಾಯಿತು.
ಆಕಾಶಮಾರ್ಗದಲ್ಲಿ ಹೋಗುತ್ತಿರುವಾಗ ಸೀತೆಯು ಕೆಳಗೆ ಬಗ್ಗಿ ನೋಡಿದಾಗ ಪರ್ವತದ ತುದಿಯಲ್ಲಿ ಕುಳಿತ ಐದು ಮಂದಿ ಕಪಿಗಳನ್ನು ಕಂಡಳು. ಅವರನ್ನು ನೋಡಿ ತನ್ನ ಆಭರಣಗಳನ್ನು ಕಳಚಿ, ಸೆರಗಿನ ತುಂಡೊಂದರಲ್ಲಿ ಕಟ್ಟಿ, ರಾಮನಿಗೆ ಹೇಳಲಿ ಎಂಬ ಉದ್ದೇಶದಿಂದ ಪರ್ವತದ ಮೇಲೆ ಎಸೆದಳು. ರಾವಣನ ರಥವು ಲಂಕೆಯಲ್ಲಿಳಿಯಿತು. ತನ್ನ ಅಂತಃಪುರದ ಒಂದು ಭಾಗದಲ್ಲಿರುವ ಏಕಾಂತ ಸ್ಥಳವಾದ ಅಶೋಕವನದಲ್ಲಿ ಸೀತೆಯನ್ನು ಇರಿಸಿದನು. ರಾಕ್ಷಸಿಯರನ್ನು ಕಾವಲಿಗಿರಿಸಿ ತನ್ನ ತಾಯಿಯಂತೆ ಸೀತೆಯನ್ನು ಕಾಪಾಡುತ್ತಿದ್ದನು. ಶೋಕಿತೆಯಾದ ಸೀತೆಯು ದುಃಖದಿಂದ ಬಳಲಿ ಬಡಕಲಾಗಿ, ರಾಮರಾಮ ಎಂದು ಅಳುತ್ತಾ ಇದ್ದಳು.
ರಾಮನನ್ನು ಹುಡುಕುತ್ತ ಕಾಡಿನಲ್ಲಿ ಲಕ್ಷ್ಮಣನು ಹೋಗುತ್ತಿದ್ದಾಗ ರಾಮನು ಎದುರಾದ.
ಮುಂದುವರಿಯುವುದು....
- ವಿಶ್ವ ಉಂಡೆಮನೆ, ಬೆಳ್ತಂಗಡಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ