ಬಾಗಲಕೋಟೆ: ದಣಿವರಿಯದ ಜನನಾಯಕ ಪಿ.ಎಚ್.ಪೂಜಾರ

Upayuktha
0


ವಿಧಾನ ಪರಿಷತ್ತಿನ ಸದಸ್ಯರಾದ ಪಿ.ಎಚ್. ಪೂಜಾರ ಅವರು ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವಾರು ಕಠಿಣ ಪ್ರಸಂಗಗಳನ್ನು ಎದುರಿಸಿ ಅವುಗಳ ಆಳದಲ್ಲಿ ಗಟ್ಟಿಗೊಂಡವರು, ಜುಲೈ 16 ಅವರ ಹುಟ್ಟು ಹಬ್ಬ.

ಜೀವನದ ಕಾಳಗದಲ್ಲಿ ತನ್ನ ಜನರಿಗೋಸ್ಕರ ತನ್ನ ನಾಡಿಗೋಸ್ಕರ ನಿರ್ವಂಚನೆಯಿಂದ, ನಿಸ್ವಾರ್ಥದಿಂದ ಹೋರಾಟ ಮಾಡಿದವರು ಜನಮನದಲ್ಲಿ ಚಿರಸ್ಮಣೀಯವಾಗಿ ಉಳಿಯುತ್ತಾರೆ ಎಂಬ ಮಾತೊಂದಿದೆ. ಈ ಮಾತು ವಿಧಾನ ಪರಿಷತ್ತಿನ ಸದಸ್ಯರಾದ ಪಿ.ಎಚ್. ಪೂಜಾರ ಅವರಿಗೆ ಅನ್ವಯವಾಗುತ್ತದೆ. ಅವರು 17 ವರ್ಷ ಅಧಿಕಾರದಿಂದ ವಂಚಿತರಾಗಿದ್ದರು. ಈ  ಸುಧೀರ್ಘ ಅವಧಿಯಲ್ಲಿಯೂ ಜನಸಂಪರ್ಕ ಬಿಟ್ಟವರಲ್ಲ. ಅವರು ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದುದರಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ ಸುಯೋಗ ಅವರಿಗೆ ಒದಗಿ ಬಂದಿತು. ಅವರು ದಣಿವರಿಯದ ಜನನಾಯಕರು.


ಈ ಕಾಲ ಘಟ್ಟದಲ್ಲಿ 17 ವರ್ಷದ ನಂತರ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವುದು ಸಾಮಾನ್ಯ ಮಾತಲ್ಲ. ಪೂಜಾರವರು ಪುನಃ ರಾಜಕೀಯ ಸ್ಥಾನ ಪಡೆದಿರುವುದು ಅಪರೂಪದ ಪ್ರಸಂಗ. ಒಳ್ಳೆಯತನಕ್ಕೆ ಒಳ್ಳೆಯದಾಗಿಯೇ ಆಗುತ್ತದೆ ಎನ್ನುವುದಕ್ಕೆ ಪೂಜಾರವರೆ ಸಾಕ್ಷಿ. ಇದು ಒಬ್ಬ ಸಹೃದಯಿ ಜನನಾಯಕನಿಗೆ ಜನತೆ ಕೊಟ್ಟ ಗೌರವ. ಇದರಿಂದ ಪೂಜಾರ ಅವರ ರಾಜಕೀಯ ವನವಾಸ ಕೊನೆಗೊಂಡಿತು, ಅವರ ಅಭಿಮಾನಿ ಮಹಾ ಬಳಗ ಸಂತಸ ಪಟ್ಟಿತು.


ರಾಜಕೀಯದಲ್ಲಿ ಇವರು ಕಳೆದುಕೊಳ್ಳುವುದೇ ಹೆಚ್ಚು, ಇನ್ನು ಮುಂದೆ ರಾಜಕೀಯ ಬೇಡ, ಎಂದು ತಿಳುವಳಿಕೆ ಹೇಳುವವರಿಗೂ ಸಹಿತ, ಪೂಜಾರ ಅವರ ಅಭೂತಪೂರ್ವ ಬೆಳವಣಿಗೆಯನ್ನು ಕಂಡು ಆಶ್ಚರ್ಯವಾಗಿದೆ. ಪೂಜಾರ ಅವರ ರಾಜಕೀಯ ಮುಗಿದೇ ಹೋಯಿತು ಅನ್ನುವವರಿಗೆ ದಿಗ್‌ಭ್ರಮೆಯಾಗಿದೆ. ಅವರ ಅಚಲವಾದ ನಂಬಿಕೆ, ಜನತೆ ಅವರಲ್ಲಿಟ್ಟ ಪ್ರೀತಿ, ಅವರನ್ನು ಕೈಬಿಡಲಿಲ್ಲ. ಅವರು ವಿಧಾನ ಪರಿಷತ್ತಿಗೆ ಆಯ್ಕೆ ಆದರು.


ಅವರು ಒಟ್ಟು ಎಂಟು ಸಲ ಚುಣಾವಣೆಗೆ ನಿಂತಿದ್ದಾರೆ. ಬಿಜೆಪಿ ಪಕ್ಷ ಏನೂ ಇಲ್ಲದಾಗ ಅವರು ಆ ಪಕ್ಷದಲ್ಲಿ ಇದ್ದರು. ಪಕ್ಷ ಸೋಲುತ್ತದೆ ಎಂದು ತಿಳಿದಾಗಲೂ ಪಕ್ಷದ ಆದೇಶಕ್ಕೆ ತಲೆಬಾಗಿ ಚುಣಾವಣೆಗೆ ನಿಂತಿದ್ದಾರೆ. ಹೀಗಾಗಿ ಅವರು ಐದು ಸಲ ಸೋತಿದ್ದಾರೆ. ಮೂರು ಸಲ ಗೆದ್ದಿದ್ದಾರೆ. ಪಿ.ಎಚ್.ಪೂಜಾರ ಅವರು. ಸೋಲು ಗೆಲವುಗಳನ್ನು ಸಮನಾಗಿ ಸ್ವೀಕರಿಸಿದ ಹೃದಯವಂತ ಜನನಾಯಕರು.


ಪಾಂಡವರಿಗೆ 12 ವರ್ಷ ವನವಾಸ ಒಂದು ವರ್ಷ ಅಜ್ಞಾತವಾಸವಿತ್ತು. ಶ್ರೀರಾಮ ಚಂದ್ರನಿಗೆ 14 ವರ್ಷ ವನವಾಸವಿತ್ತು. ಆದರೆ ಪಿ ಎಚ್ ಪೂಜಾರವರಿಗೆ 17 ವರ್ಷ ರಾಜಕೀಯ ವನವಾಸವಿತ್ತು. ಪಾಂಡವರ ಹಿಂದೆ ಶ್ರೀಕೃಷ್ಣ ಪರಮಾತ್ಮನೇ ಇದ್ದ. ಶ್ರೀರಾಮ ಚಂದ್ರ ಸ್ವತಃ ದೇವಾಂಶ ಸಂಭೂತನಾಗಿದ್ದ. ಆದರೆ ಪಿ.ಎಚ್. ಪೂಜಾರರ ಹಿಂದೆ ಅವರು ನಂಬಿದ ಆಧ್ಯಾತ್ಮಿಕ ಶಕ್ತಿ ಹಾಗೂ ಜನತಾ ಜನಾರ್ಧನನ ಆಶೀರ್ವಾದವಿತ್ತು. ಹೀಗಾಗಿ ಪುಃನ ಅಧಿಕಾರಕ್ಕೆ ಬಂದರು.


ಪೂಜಾರವರಿಗೆ ಧೈರ್ಯ ಹೇಳಲು ಯಾರೊಬ್ಬರೂ ಇರಲಿಲ್ಲ. ಆದರೆ ಅವರಲ್ಲಿ ಮೂರು ಮಹತ್ವದ ಸ್ವತ್ತುಗಳು ಇದ್ದವು. ದೇವರಿದ್ದಾನೆ ಎನ್ನುವ ಅಚಲವಾದ ನಂಬಿಕೆ, ದೃಢ ಸಂಕಲ್ಪದ ಶಕ್ತಿ ಹಾಗೂ ಅಪರಿಮಿತ ಆತ್ಮವಿಶ್ವಾಸ ಇವು ಅವರಿಗೆ ರಾಜಕೀಯ ಪುನರ್ ಜನ್ಮವನ್ನು ನೀಡಿದವು. ಪೂಜಾರ ಎನ್ನುವ ಆ ಹೆಸರಿನಲ್ಲೇ ಪೂಜೆ ಎನ್ನುವ ಆಧ್ಯಾತ್ಮದ ನಂಟಿದೆ. ಆಧ್ಯಾತ್ಮ ಎಂದೂ ನಂಬಿದವರನ್ನು ಕೈ ಬಿಡುವುದಿಲ್ಲ. ಅದು ಪೂಜಾರವರಿಗೆ ರಕ್ತಗತವಾಗಿದೆ. ರಾಜಕೀಯದಲ್ಲಿ ಹೀಗೂ ಆಗಬಹುದೇ? ಅಂದುಕೊಂಡರೆ, ಪೂಜಾರವರಿಗೆ  ನೋಡಿ ಆಗಬಹುದು ಎನ್ನಬೇಕು. ರಾಜಕೀಯದಲ್ಲಿ ಹೀಗೂ ಇರಬಹುದೇ ಎನ್ನುವಂತೆ ಪೂಜಾರ ಅವರು ಇದ್ದಾರೆ. ಅವರು ಬರೆಯುವಂತ ಜೀವನವನ್ನು ಬದುಕಿದ್ದಾರೆ. ಅವರ ಬದುಕು ಓದುವಂತ ಸುಂದರವಾದ ಕತೆಯಂತಿದೆ.


ಬದುಕಿನಲ್ಲಿ ಅವರು ಅನುಸರಿಸಿಕೊಂಡು ಬಂದ ಧರ್ಮ ನಿಷ್ಠೆ, ಸಹಾನುಭೂತಿ. ಸಹಕಾರ, ಸಹಾಯ, ತಾಳ್ಮೆ ಅವರ ಈ ವಿಶೇಷ ಗುಣಗಳು ವಿಧಾನ ಪರಿಷತ್ತಿಗೆ ಆಯ್ಕೆಯಾಗಲು ಶಕ್ತಿ ತುಂಬಿದವು. ಯಾರಾದರು ಆಗಿದ್ದರೆ ರಾಜಕೀಯ ಮರೆತು ತಮ್ಮ ಮನೆಯಲ್ಲಿ ಕೂಡುತ್ತಿದ್ದರು. ಆದರೆ ಪೂಜಾರವರು ಎಂದೂ ದೃತಿಗೆಡಲಿಲ್ಲ, ಅವರ ತಾಳ್ಮೆ ದೊಡ್ಡದು. ಅದಕ್ಕಿಂತ ಅವರ ಆತ್ಮವಿಶ್ವಾಸ ದೊಡ್ಡದು, ಅವರು ಎಂದೂ ಜನಸಂಪರ್ಕವನ್ನು ಬಿಡಲಿಲ್ಲ. ಅದೇ  ಅವರನ್ನು ರಾಜಕೀಯದಲ್ಲಿ ಫಿನಿಕ್ಸ್ ಪಕ್ಷಿಯಂತೆ ಎದ್ದು ಬರುವಂತೆ ಮಾಡಿತು. ಅವರನ್ನು ಹೇಗಾದರು ಮಾಡಿ ರಾಜಕೀಯದಿಂದ ದೂರವಿಡಬೇಕೆನ್ನುವ ಪ್ರಬಲ ಶಕ್ತಿಗೆ ವಿಧಾನ ಪರಿಷತ್ತ ಸದಸ್ಯರಾಗುದರ ಮೂಲಕ ಪೂಜಾರ ಅವರು ಉತ್ತರಿಸಿದ್ದಾರೆ. ಅದಕ್ಕೆ ಅವರ ಅಭಿಮಾನಿಗಳದ ಶ್ರಮವಿದೆ. ಅವರ ಸ್ವಾಭಿಮಾನೀ ಆತ್ಮೀಯ ಸ್ವೇಹ ಬಳಗ ದೊಡ್ಡದು. ಪೂಜಾರವರು ಅವರನ್ನು ಎಂದು ಕೈಬಿಟ್ಟಿಲ್ಲ. ಆ ಬಳಗದ ಶಕ್ತಿ ಅವರನ್ನು ಅಧಿಕಾರಕ್ಕೆ ತಂದಿತು. ಈ ದಿವ್ಯ ಗುಣ ಅವರಿಗೆ ರಾಜಕೀಯದಲ್ಲಿ ಪುನರ್ಜನ್ಮ ನೀಡಿತು.


1972ರಲ್ಲಿ ಜನ ಸಂಘದ ಯುವ ಮೋರ್ಚಾದ ಕಾರ್ಯದರ್ಶಿಯಾಗುವುದರ ಮೂಲಕ ರಾಜಕೀಯ ಪ್ರವೇಶಿದ ಪಿ.ಎಚ್.ಪೂಜಾರವರು ಕಳೆದ ನಾಲ್ಕು ದಶಕಗಳಿಂದ ಅನ್ಯಾಯದ ವಿರುದ್ದ ಹೋರಾಟ ಮಾಡುತ್ತಾ ಬಂದಿದ್ದಾರೆ. ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ, ಕಷ್ಟಗಳನ್ನು ಅನುಭವಿಸಿದ್ದಾರೆ. ಆದರೂ ತಮ್ಮ ಸಾತ್ವಿಕತೆಯನ್ನು ಬಿಟ್ಟುಕೊಟ್ಟವರಲ್ಲ. ಒಳ್ಳೆಯದರ ಬಗ್ಗೆ ವಿಶ್ವಾಸವಿಟ್ಟು ಜನಸಾಮಾನ್ಯರ ಕೆಲಸಗಳನ್ನು ಮಾಡುತ್ತಲೇ ಬಂದ ಅಪರೂಪದ ವ್ಯಕ್ತಿ. ಅವರಲ್ಲಿ ವಿದ್ವತ್ತು ತುಂಬಿಕೊಂಡವರ ಸರಳತೆ ಹಾಗೂ ಸಂಸ್ಕೃತಿ ತುಂಬಿಕೊAಡವರ ಶ್ರೀಮಂತಿಕೆ ಎರಡೂ ಇವೆ. ಅವರು ಶ್ರೇಷ್ಠವಾದುದನ್ನು ಮಾತ್ರ ಮಾಡುತ್ತಾರೆ, ಶ್ರೇಷ್ಠವಾದುದನ್ನು ಮೆಚ್ಚುತ್ತಾರೆ.


ಎರಡು ಸಲ ಬಾಗಲಕೋಟೆಯ ಶಾಸಕರಾಗಿ ಹೋರಾಟದ ಮೂಲಕ ಜನಪರ ಕೆಲಸ ಮಾಡಿದ್ದು ಸದಾ ಸ್ಮರಣೀಯ. ಬಾಗಲಕೋಟೆಯ ಇತಿಹಾಸದಲ್ಲಿ ಮತಕ್ಷೇತ್ರದ ಹಾಗೂ ಮುಳಗಡೆಯ ಜ್ವಲಂತ ಸಮಸ್ಯೆಗಳ ಬಗ್ಗೆ ವಿಧಾನ ಸಭೆಯಲ್ಲಿ ಹೆಚ್ಚು ಗಮನ ಸೆಳೆದ ಹೆಗ್ಗಳಿಕೆ ಪಿ.ಎಚ್. ಪೂಜಾರ ಅವರಿಗೆ ಇದೆ. ಇದರಿಂದ ಅವರ ಶಾಸಕತ್ವ ಅವಧಿಯಲ್ಲಿ ಮತ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ಆಗಿರುವುದನ್ನು ಜನ ಈಗಲೂ ಸ್ಮರಿಸುತ್ತಾರೆ. ಈಗ ವಿಧಾನ ಪರಿಷತ್ತಿಗೆ  ಆಯ್ಕೆಯಾಗಿ ಜನ ಸೇವೆಯಲ್ಲಿ ಹೆಚ್ಚು ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿಧಾನ ಪರಿಷತ್ತಿನಲ್ಲಿಯೂ ಪ್ರಶ್ನೆಗಳನ್ನು ಕೇಳಿ ಮತ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಸಾಕಷ್ಟು ಗಮನ ಸೆಳೆದಿದ್ದಾರೆ. ಅವರು ಪರಿಷತ್ತಿನ ಸಭೆಯಲ್ಲಿ ಸುಮ್ಮನೆ ಕುಳಿತು ಬರುವ ವ್ಯಕ್ತಿಯಲ್ಲ. ಸಭೆಯ ಗಮನ ಸೆಳೆದು ಅಭಿವೃದ್ದಿಗೆ  ಪೂರಕವಾಗುವಂತ ಕಾರ್ಯವನ್ನು ಮಾಡುವಲ್ಲಿ ಅವರ ಶ್ರಮ ಸಾರ್ಥಕ.


ಬಾಗಲಕೋಟೆ ನಗರ ಹಾಗೂ ಹಳ್ಳಿಗಳ ಮುಳುಗಡೆ ಪ್ರದೇಶದ ಅಭಿವೃದ್ಧಿಗಾಗಿ ಸರಕಾರ ೬೩೮ ಕೋಟಿ ಪ್ಯಾಕೇಜ ಹಣ ಪ್ರಕಟಿಸಬೇಕೆಂದು ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಾ ಅವರಿಗೆ ಒತ್ತಾಯಿಸಿದ ಪ್ರತಿಫಲವಾಗಿ ೧೩೦ ಕೋಟಿ ಹಣ ಬಿಡುಗಡೆಯಾಗಿ ಅಭಿವೃದ್ಧಿ ಕಾರ್ಯ ನಡೆದಿದ್ದು ಪಿ. ಎಚ್. ಪೂಜಾರವರ ಹೋರಾಟದ ಫಲ ಎಂಬುದು ಎಲ್ಲರಿಗೂ ತಿಳಿದ ವಿಷಯ. ಸರಕಾರ ಮುಳುಗಡೆಯ ವ್ಯಾಪ್ತಿಯನ್ನು 521 ಮೀಟರಿಗೆ ಕೂನೆ ಹಾಡಿತ್ತು, ಅದನ್ನು 523 ಮೀಟರವರೆಗೆ ಮುಂದುವರೆಸಿ ಕೆಲಸ ಪ್ರಾರಂಭಿಸುವಲ್ಲಿ ಪಿ.ಎಚ್.ಪೂಜಾರರ ಪಾತ್ರ  ಪ್ರಮುಖವೆನಿಸಿದೆ.


ಪಿ.ಎಚ್.ಪೂಜಾರವರು ರಚನಾತ್ಮಕ ಕೆಲಸ ಮಾಡುವುದನ್ನು ಜೀವನದುದ್ದಕ್ಕೂ ರೂಢಿಸಿಕೊಂಡು ಬಂದಿದ್ದಾರೆ. ದೀನದಲಿತರ, ಅಲ್ಪಸಂಖ್ಯಾತರ, ಹಿಂದುಳಿದವರ, ರೈತರ, ಕೃಷಿ ಕಾರ್ಮಿಕರ ಏಳ್ಗೆಗಾಗಿ ದುಡಿಯುತ್ತಾ ಬಂದಿದ್ದಾರೆ. ಸರಕಾರದ ಯೋಜನೆಗಳು ಜನಸಾಮಾನ್ಯರ ಮನೆಯಬಾಗಿಲಿಗೆ ಮುಟ್ಟಬೇಕೆನ್ನುವ ಅವರ ಕಳಕಳಿ ಮೆಚ್ಚುವಂತಹದ್ದು.


ಪೂಜಾರ ಅವರು ವಯೋವೃದ್ಧ ನಿರ್ಗತಿಕರಿಗೆ ಹಸಿವು ಇಂಗಿಸಲು ಬಾಗಲಕೋಟೆಯಲ್ಲಿ ಚಾರಟೇಬಲ್ ಟ್ರಸ್ಟ ಸ್ಥಾಪಿಸಿ “ಕರುಣೆೆಯ ತುತ್ತು” ಎನ್ನುವ ವಿನೂತನ ಯೋಜನೆ ರೂಪಿಸಿದರು. ಆ ಯೋಜನೆಯ ಮೂಲಕ ಆಯ್ಕೆಯಾದ ನಿರ್ಗತಿಕರ ಮನೆ ಬಾಗಿಲಿಗೆ ಊಟ ಕಳಿಸುವುದು ಪೂಜಾರವರ ಹೃದಯ ವೈಶಾಲ್ಯತೆಗೊಂದು ಉದಾಹರಣೆಯಾಗಿದೆ. ಗುಣದ ಹಿಂದೆ ಬೆನ್ನು ಹತ್ತದೆ, ಹಣದ ಹಿಂದೆ ಬೆನ್ನು ಹತ್ತುವ ಇಂದಿನ  ಕಾಲದಲ್ಲಿ ಪಿ.ಎಚ್ ಪೂಜಾರಂಥವರು ಅಪರೂಪ. ಅವರು ಪಾಲಿಸಿಕೊಂಡು ಬಂದ ಧರ್ಮ ಹಾಗೂ ಸಾತ್ವಿಕ ಗುಣ ಪೂಜಾರವರಿಗೆ ರಕ್ಷಾಕವಚವಾಗಿ ರಕ್ಷಿಸಿ ಉನ್ನತ ಸ್ಥಾನಕ್ಕೆ ಏರುವಂತೆ ಮಾಡಿತು.


ಕೃಷಿಕ ಮನೆತನದಿಂದ ಬಂದ ಪಿ.ಎಚ್.ಪೂಜಾರವರು ಕೃಷಿಕರಂತೆ ಗಟ್ಟಿಗರು, ಎಂತಹ ಕಠಿಣ ಪ್ರಸಂಗ ಎದುರಾದರೂ ಧೈರ್ಯದಿಂದ ಎದುರಿಸುವ ಎದೆಗಾರಿಕೆ ಅವರದು. ಬಾಗಲಕೋಟೆ ತಾಲೂಕಿನ ತುಳಸಿಗೇರಿಯಲ್ಲಿ ದಿನಾಂಕ 16/07/1954 ರಂದು ಜನಿಸಿದ ಪೂಜಾರರಿಗೆ ಈಗ 70 ವರ್ಷ ವಯಸ್ಸು, ಯುವಕರ ಹುರುಪು ಹುಮ್ಮಸ್ಸನ್ನು ಅವರಲ್ಲಿ ಈಗಲೂ ಕಾಣಬಹುದಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಬಹುದೂರದ ಹಾದಿ ತುಳಿದು. ಏಳು ಬೀಳುಗಳನ್ನು ಕಂಡು ಹಲವಾರು ಚಳುವಳಿಗಳ ಮೂಲಕ ಅನುಭವದ ಆಗರವಾಗಿದ್ದಾರೆ. ಅವರು ಕಟ್ಟಿ ಬೆಳೆಸಿದ ಪಕ್ಷ ಅವರನ್ನು ಕೈ ಹಿಡಿದಿದ್ದರಿಂದ ಬಿಜೆಪಿ ಕಾರ್ಯಕರ್ತರಿಗೆ ಎಲ್ಲಿಲ್ಲದ ಸಂತಸ. ಅವರ ಕ್ರಿಯಾಶೀಲತೆ ಅವರನ್ನು ಉನ್ನತ ಸ್ಥಾನಕ್ಕೇರುವಂತೆ ಮಾಡಿತು.


ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವನವನ್ನು ತನಗೆ ಹಾಗೂ ತನ್ನ ಸುತ್ತಣ ಜನರಿಗೆ ಪ್ರಯೋಜನಕಾರಿಯಾಗುವಂತೆ ಬದುಕಬೇಕು.  ಆಗ ಚಮತ್ಕಾರವೇ ಸೃಷ್ಠಿಯಾಗುತ್ತದೆ ಎಂದು ಹೇಳುತ್ತಾರೆ. ಪಿ.ಎಚ್.ಪೂಜಾರವರು ಜನಸಾಮಾನ್ಯರಿಗೆ ಪ್ರಯೋಜನವಾಗುವಂತಹ ಬದುಕನ್ನು ರೂಪಿಸಿಕೊಂಡರು. ಅದರ ಪರಿಣಾಮವಾಗಿ ಅವರ ಬದುಕಿನಲ್ಲಿ ಚಮತ್ಕಾರವೇ ಸೃಷ್ಠಿಯಾಯಿತು. ವೈರಿಯೂ ಮೆಚ್ಚುವಂತ ಬದುಕನ್ನು ರೂಪಿಸಿಕೊಳ್ಳುವುದು ಬಹಳ ಜನರಿಗೆ ಸಾಧ್ಯವಿಲ್ಲ. ಅದು ಪಿ.ಎಚ್. ಪೂಜಾರಂಥ ನಿಷ್ಕಲ್ಮಶ ಹೃದಯವಂತರಿಗೆ ಮಾತ್ರ ಸಾಧ್ಯ.


ವಿನಮ್ರತೆ, ಸೌಜನ್ಯತೆಯಿಂದ ಸಮಾಜದ ಮನಸ್ಸನ್ನು ಗೆದ್ದ ಪಿ.ಎಚ್.ಪೂಜಾರವರಿಗೆ ಕೆಲಸ ಮಾಡುವ ಕಲೆ ಹಾಗೂ ಕೆಲಸ ಮಾಡಿಸುವ ಕಲೆ ಕರಗತವಾಗಿದೆ, ಸಮಾಜಮುಖಿ ಕೆಲಸಗಳಿಂದ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಜನರ ಪ್ರೀತಿಯೇ ರಕ್ಷಾಕವಚವಾಗಿದೆ. ಒಳ್ಳೆಯ ಮನುಷ್ಯ  ಎನ್ನುವ ಸದ್ಭಾವನೆ ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಬೆಳೆಯಲು ಇಂಬುಕೊಟ್ಟಿತು, ಶಕ್ತಿ ತುಂಬಿತು. ಅವರ ಜೀವನ ಸುಖ, ಶಾಂತಿ, ಸಂತೋಷ, ಆನಂದಗಳಿಂದ ಕೂಡಿರಲಿ ಎಂಬುದು ಅವರ ಅಭಿಮಾನಿಗಳೆಲ್ಲರ ಹಾರೈಕೆಯಾಗಿದೆ.


-ಜಗದೀಶ ಹದ್ಲಿ, ತಿಮ್ಮಾಪುರ

ಫೋ- 96117 61979


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top