ರಾಜ್ಯ ಸರಕಾರದಿಂದ ದಿನ ಬಿಟ್ಟು ದಿನ ಪ್ರಸಾರವಾಗುವ ದರ ಏರಿಕೆ ಎಂಬ ಬೆಚ್ಚಿ ಬೀಳಿಸುವ ನೋಡಿದರ ಶಾಕ್ ಆಗುವ, ರೋಮಾಂಚನಕಾರಿ ಧಾರವಾಹಿಯ ಮುಂದಿನ ಕಂತು ಯಾವುದು ಎಂದು ಕುತೂಹಲದಿಂದ ನಿರೀಕ್ಷಿಸುತ್ತಿರುವ ವೀಕ್ಷಕರಿಗೆ ಇಲ್ಲಿದೆ ಸುದ್ದಿ!!!
ಅದು ಪ್ರಯಾಣ ದರ ಹೆಚ್ಚಳ!?
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆಯವರು ಹೇಳುವಂತೆ "ರಾಜ್ಯ ಸರಕಾರ ಶಕ್ತಿ ಯೋಜನೆ ಆರಂಭಿಸಿ ಒಂದು ವರ್ಷವಾಗಿದ್ದು, ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಾರೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಷ್ಟದಲ್ಲಿದೆ... ಮತ್ತು ಇತರ ಕಾರಣಗಳಿಂದಾಗಿ ಪ್ರಯಾಣ ದರ ಹೆಚ್ಚಳ ಕಂತನ್ನು ಪ್ರಸಾರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ"
ವಿಶೇಷ ಅಂದರೆ, ಇವತ್ತಿನ ಪತ್ರಿಕೆಗಳಲ್ಲಿ ವರದಿಯಾಗಿರುವ ನಿಗಾಮಧ್ಯಕ್ಷ ರಾಜು ಕಾಗೆಯವರ ಮೇಲಿನ ಡೈಲಾಗ್ ಸ್ಕ್ರಿಪ್ಟ್‌ನ್ನು ಸರಕಾರದ ಸಚಿವ ಸ್ಥಾನದಲ್ಲಿರುವ ನಿರ್ಮಾಪಕ ಪಾತ್ರಧಾರಿಗಳು ಒಪ್ಪುವುದಿಲ್ಲ!
ಅಧ್ಯಕ್ಷ ರಾಜು ಕಾಗೆ ಹಾರಿಸಿರುವ ಡೈಲಾಗಿಗೆ ಸಾರಿಗೆ ನಿರ್ದೇಶಕ ಸಚಿವರು ದರ ಏರಿಕೆಯ ಎಪಿಸೋಡಿಗೂ ಸರಕಾರದ TRP ಹೆಚ್ಚಿಸಿದ ಅನ್‌ರಿಯಾಲಿಟಿ 'ಗ್ಯಾರಂಟಿ ಶೋ ಗೂ ಸಂಬಂಧ ಇಲ್ಲ ಎಂದಿದ್ದಾರೆ!.
ದರ ಏರಿಕೆಯ ಎಪಿಸೋಡಿಗೂ ಸರಕಾರದ TRP ಹೆಚ್ಚಿಸಿದ ಅನ್‌ರಿಯಾಲಿಟಿ 'ಗ್ಯಾರಂಟಿ ಶೋ ಗೂ ಸಂಬಂಧ ಇಲ್ಲ ಅನ್ನುವುದು ಬಹುತೇಕ ನಿರ್ಮಾಪಕ ಸಚಿವರುಗಳ ಎದುರು ಭಾಗದಲ್ಲಿ ಮಾಧ್ಯಮಗಳ ಮೈಕ್ ಕಂಡಾಗ ಹೇಳುವ ಟೈಟಲ್ ಸಾಂಗ್!
ವಾಸ್ತವವಾಗಿ "ಗ್ಯಾರಂಟಿಗೆ ಹಣ ಹೊಂದಿಸಲಾಗದೆ ಕ್ಷೇತ್ರದ ಅಭಿವೃದ್ದಿಗೆ ತಿಲಾಂಜಲಿ ಬಿಡುವಂತಾಗಿದೆ" ಎನ್ನುವುದು ಮೈಕ್ ಬಿಟ್ಟು, ಗ್ರೀನ್ ರೂಮ್ ಗೆ ಹೋದಾಗ, ಆಫ್ ದ ರೆಕಾರ್ಡ್ ಹೇಳುವ ಹಿನ್ನಲೆ ಸಂಗೀತದ ಹಾಡು ಎನ್ನುವುದು ಜಗಜ್ಜಾಹೀರಾದ ಸತ್ಯ ಕತೆ!!
ಪೆಟ್ರೂಲ್-ಡೀಸಲ್ ದರ ಏರಿಕೆ, ವಿದ್ಯುತ್ ದರ ಏರಿಕೆ, ಹಾಲಿನ ದರ ಏರಿಕೆ, ನೀರಿನ ದರ ಏರಿಕೆ, ಮದ್ಯದ ದರ ಏರಿಕೆ, ಸ್ಟ್ಯಾಂಪ್ ಪೇಪರ್ ದರ ಏರಿಕೆ, ನೊಂದಣಿ ದರ ಏರಿಕೆ, ಬೀಜದ ಭತ್ತದ ದರ ಏರಿಕೆ, ದಿನಸಿ ಪದಾರ್ಥಗಳ ದರ ಏರಿಕೆ, ಅಕ್ಕಿಯ ದರ ಏರಿಕೆ, ಹೋಟಲ್ ಆಹಾರಗಳ ದರ ಏರಿಕೆ, ಇವುಗಳು ಈಗಾಗಲೆ ಪ್ರಸಾರಗೊಂಡು, ಜನ ಮಾನಸದಲ್ಲಿ ಅಚ್ಛಳಿಯದಂತೆ ಉಳಿದ ಹಾಗೂ ಸರಕಾರದ ಮೈನಸ್ TRP ಹೆಚ್ಚಿಸಿದ ಎಪಿಸೋಡ್‌ಗಳು.
ಆಟೋ ದರ ಏರಿಕೆ, ಟ್ಯಾಕ್ಸಿ ದರ ಏರಿಕೆ, ಖಾಸಗಿ ಬಸ್ ದರ ಏರಿಕೆ, ಮುಂತಾದ ಕಂತುಗಳು ಪರಿಶೀಲನೆಯ ಶೂಟಿಂಗ್ ನಲ್ಲಿವೆ.
ಅನಿವಾರ್ಯವಾಗಿ, ಈಗಾಗಲೆ ಪ್ರಸಾರವಾದ ಕೆಲವು ಕಂತುಗಳನ್ನು ಮರು ಪ್ರಸಾರ ಮಾಡುವ ಯೋಚನೆಯೂ ನಿರ್ಮಾಪಕ ಮತ್ತು ನಿರ್ದೇಶಕರ ಮನಸ್ಸಿನಲ್ಲಿದೆಯಂತೆ!!?
A ಸರ್ಟಿಫೈಡ್ ಪೆನ್‌ಡ್ರೈವ್, ಶೆಡ್ ಮರ್ಡರ್ ಮಿಸ್ಟ್ರಿ, ಮೈಸೂರು ಸೈಟ್ ಸ್ಟೋರಿ, ವಾಲ್ಮೀಕಿ ಹಣದ ಹುತ್ತ, ಮುಂತಾದ ಪ್ಯಾನ್ ಇಂಡಿಯಾ ಸಿನಿಮಾಗಳ ಹಿಟ್ ಷೋಗಳ ಮಧ್ಯೆಯೂ, ದರ ಏರಿಕೆ ಧಾರವಾಹಿ ನಿರಂತರತೆಯಿಂದ ಪ್ರಸಾರವಾಗುತ್ತಿರುವುದು ರಾಜ್ಯದ ಜನರಲ್ಲಿ ಆತಂಕ, ಹೆದರಿಕೆ ಮತ್ತು ಭಯದ ಕಣ್ಣುಗಳಲ್ಲಿ ಕುತೂಹಲ ಹೆಚ್ಚಿಸಿದೆ!!!
ಆಗಾಗ ನೋಡುವ ಶಕ್ತಿ, ಸದ್ಯಕ್ಕೆ ನಿಂತು ಹೋದ ಗೃಹಲಕ್ಷ್ಮಿ, ಬಿಟ್ಟುಬಿಟ್ಟು ಬರುವ ಗೃಹಜ್ಯೋತಿ, ಬೇರೆ ಭಾಷೆಯಿಂದ ರೀಮೇಕ್ ಮಾಡಿದ್ದರೂ, ಇದು "ನಮ್ಮದೆ" ಎಂದು ಹೇಳಿ ಪ್ರಸಾರ ಮಾಡುವ ಅನ್ನಪೂರ್ಣಾ ಧಾರವಾಹಿಗಳದು ಒಂದು ರೀತಿಯ ಕತೆಗಳಾದರೆ, ದರ ಧಾರವಾಹಿ ಯ ಪ್ರತೀ ಎಪಿಸೋಡಿನದು ವಿಭಿನ್ನ ರೀತಿಯ ಕತೆಗಳು!! ಪ್ರತಿ ಸಂಚಿಕೆಯ ಕೊನೆಯೂ ಕಣ್ಣೀರ ಕಾವ್ಯಾಂಜಲಿ!!.
ದರ ಧಾರವಾಹಿಗೆ "ಸುಖಾಂತದ ಕ್ಲೈಮ್ಯಾಕ್ಸ್ ಸಿಕ್ಕಿ ಬೇಗ ಮುಗಿಯಲಪ್ಪ, ನಮ್ಮನ್ನು ಪಾರು ಮಾಡಪ್ಪ" ಎಂದು ಸಂಜೆ ಧಾರವಾಹಿ ಪ್ರೈಮ್ ಟೈಮಲ್ಲಿ ಜನರು ಜಗತ್ತಿನ ಬಿಗ್ ಬಾಸ್ ನಿರ್ದೇಶಕ ನಲ್ಲಿ ನಿತ್ಯ ಪ್ರಾರ್ಥಿಸುತ್ತಿದ್ದಾರೆ!!!
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ